ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಭಜನಕಾರಿ ಶಕ್ತಿಗಳನ್ನು ದೂರವಿಡಿ’

ಸಿಪಿಐ ತಾಲ್ಲೂಕು ಸಮಾವೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
Last Updated 15 ಜನವರಿ 2018, 9:22 IST
ಅಕ್ಷರ ಗಾತ್ರ

ಕಳಸ: ಪಟ್ಟಣದಲ್ಲಿ ಭಾನುವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಸಮಾವೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತವಾಯಿತು.

ಸಮಾವೇಶದಲ್ಲಿ ಮಾತನಾಡಿದ ಬಹುತೇಕ ಎಲ್ಲ ಮುಖಂಡರೂ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ತಮ್ಮ ಟೀಕಾಸ್ತ್ರ ಪ್ರಯೋಗಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಮಾತನಾಡಿ, ‘ಯಾರು ದೇಶದ ಚುಕ್ಕಾಣಿ ಹಿಡಿಯಬಾರದಿತ್ತೋ ಅವರು ಚುಕ್ಕಾಣಿ ಹಿಡಿದಿದ್ದಾರೆ. ಇದರ ಫಲವಾಗಿ ಇಡೀ ದೇಶದ ಬಡವರು, ಕಾರ್ಮಿಕರು ಮತ್ತು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನೇ ಜನಪರ ಎಂಬಂತೆ ಬಿಂಬಿಸಿ ನಂಬಿಸುವ ಕೆಲಸವೂ ನಡೆಯುತ್ತಿದೆ’ ಎಂದರು.

‘ನಾವು ಚುನಾವಣಾ ರಾಜಕಾರ ಣಕ್ಕಿಂತ ಜನರ ಹಿತ ಕಾಯುವ ರಾಜಕಾರ ಣಕ್ಕೆ ಒತ್ತು ನೀಡುತ್ತೇವೆ. ವಿಭಜನಾಕಾರಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಲು ರಾಜಕೀಯ ನಿಲುವು ತೆಗೆದು ಕೊಳ್ಳಲು ಈ ಸಮಾವೇಶ ವೇದಿಕೆ ಆಗಲಿದೆ’ ಎಂದು ರೇಣುಕಾರಾಧ್ಯ ಹೇಳಿದರು.

ಅತ್ಯಂತ ಆವೇಶದಿಂದ ಮಾತನಾಡಿದ ಸಿಪಿಐ ಜಿಲ್ಲಾ ಘಟಕದ ಸದಸ್ಯ ಬಿ.ಅಮ್ಜದ್, ‘ಪ್ರಜಾಪೀಡಕ ಸರ್ವಾಧಿಕಾರಿ ಪ್ರಭುತ್ವ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದು, ಮೋದಿ ಆಡಳಿತದ ಅವಧಿಯಲ್ಲಿ ದೇಶದ 16 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕೇಂದ್ರದ ರೈತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲೂ ಹಿಂಸಾವಾದಿ ಕೋಮುವಾದಿ ರಾಜಕೀಯ ಪಕ್ಷವು ಆಡಳಿತ ಹಿಡಿಯಲು ಜನರನ್ನು ಧರ್ಮದ ಹೆಸರಲ್ಲಿ ಒಡೆಯುತ್ತಿದೆ’ ಎಂದು ರಾಜ್ಯದ ಇತ್ತೀಚಿನ ವಿದ್ಯಮಾನಗಳನ್ನು ನೆನಪಿಸಿದರು.

ಕಾರ್ಮಿಕ ಮುಖಂಡ ಗುಣಶೇಖರ್ ಮಾತನಾಡಿ, ‘ಮೂಡಿಗೆರೆ ಕ್ಷೇತ್ರದಲ್ಲಿ ಯಾವ ರಾಜಕೀಯ ಪಕ್ಷವೂ ವಸತಿ ರಹಿತ ಕಾರ್ಮಿಕರು ಮತ್ತು ಬಡವರಿಗೆ ನಿವೇಶನ ಹಂಚಲು ಅಥವಾ ಭೂಮಿ ಮಂಜೂರು ಮಾಡಲು ಕ್ರಮ ತೆಗೆದುಕೊಂಡಿಲ್ಲ’ ಎಂದು ಟೀಕಿಸಿದರು.

ಸಿಪಿಐ ತಾಲ್ಲೂಕು ಸಮಿತಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಮಾತನಾಡಿ, ‘ಫಾರಂ ನಂಬರ್ 50 ಮತ್ತು 53ರಲ್ಲಿ ಪಕ್ಕದ ತಾಲ್ಲೂಕಿನಲ್ಲಿ ಶಾಸಕರು ಮತ್ತು ಅಧಿಕಾರಿಗಳು ಸಭೆ ನಡೆಸಿ ಅರ್ಜಿ ವಿಲೇವಾರಿ ಮಾಡುತ್ತಿದ್ದು, ನಮ್ಮ ತಾಲ್ಲೂಕಿನಲ್ಲಿ ಶಾಸಕರ ಮತ್ತು ಅಧಿಕಾರಿಗಳ ಜೇಜವಾಬ್ದಾರಿತನ ಮತ್ತು ಇಚ್ಛಾಶಕ್ತಿಯ ಕೊರತೆ ಕಾರಣಕ್ಕೆ ನೂರಾರು ಜನರು ಹಕ್ಕುಪತ್ರದಿಂದ ವಂಚಿತರಾಗಿದ್ದಾರೆ’ ಎಂದು ಆರೋಪಿಸಿದರು.

ಪಕ್ಷದ ಮುಖಂಡರಾದ ಬಿ.ಕೆ. ಲಕ್ಷ್ಮಣಕುಮಾರ್, ರವಿ ಕುಮಾರ್, ಹರೀಶ್, ರಮೇಶ್ ಬಾಳೂರು,ಲಕ್ಷ್ಮಣಾಚಾರ್, ಸುಂಕಸಾಲೆ ರವಿ ಭಾಗವಹಿಸಿದ್ದರು. ಮೋನಪ್ಪ ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT