ದುಷ್ಕೃತ್ಯ ಕಂಡೊಡನೇ ಕರೆ ಮಾಡಿ

7
ನಗರಠಾಣೆ ಸಿಬ್ಬಂದಿಯಿಂದ ಮನೆ ಮನೆ ಅಭಿಯಾನ

ದುಷ್ಕೃತ್ಯ ಕಂಡೊಡನೇ ಕರೆ ಮಾಡಿ

Published:
Updated:
ದುಷ್ಕೃತ್ಯ ಕಂಡೊಡನೇ ಕರೆ ಮಾಡಿ

ಚಿತ್ರದುರ್ಗ:  ನಗರ ವ್ಯಾಪ್ತಿಯಲ್ಲಿ ಎಲ್ಲಾದರೂ ಕಳ್ಳತನ ಆಗುತ್ತಿದೆಯೇ, ದರೋಡೆಗೆ ಯತ್ನಿಸಲಾಗುತ್ತಿದೆಯೇ, ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ನೀಡಬೇಕೆ. ಗಲಭೆ ಕಂಡೊಡನೆ ಪೊಲೀಸರಿಗೆ ತಿಳಿಸಬೇಕೆ. ಹಾಗಿದ್ದರೆ  ಠಾಣೆಯ ಮೊಬೈಲ್ ಅಥವಾ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ಸರಗಳ್ಳತನ, ಖಾಸಗಿ ಬಸ್ ನಿಲ್ದಾಣದಲ್ಲಿ ಪಿಕ್ ಪಾಕೆಟ್, ದ್ವಿಚಕ್ರ ವಾಹನಗಳ ಕಳವು, ಮನೆಗಳಲ್ಲಿನ ಅಮೂಲ್ಯವಾದ ವಸ್ತು ಮತ್ತು ನಗದು ಕಳವು ಪ್ರಕರಣಗಳಿಗೆ ‌ಕಡಿವಾಣ ಹಾಕುವ ಉದ್ದೇಶದಿಂದ ನಾಗರಿಕರಲ್ಲಿ ಜಾಗೃತಿ ಮೂಡಿಸಲು ನಗರ ಪೊಲೀಸ್ ಠಾಣೆ ಸಿಬ್ಬಂದಿ ಮನೆ ಮನೆ ಅಭಿಯಾನ ಪ್ರಾರಂಭಿಸಿದ್ದಾರೆ.

ಅಭಿಯಾನದ ಸಂದರ್ಭದಲ್ಲಿ ನಗರಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಮೊಬೈಲ್ ದೂರವಾಣಿ ಸಂಖ್ಯೆ 9480803146, ಎಸ್ಐ 9480803180, ಠಾಣೆ ದೂರವಾಣಿ ಸಂಖ್ಯೆ 08194 - 222333, ಕಂಟ್ರೋಲ್ ರೂಂ 08194 - 222782 ದೂರವಾಣಿ ಸಂಖ್ಯೆ ಉಳ್ಳ ಕಾರ್ಡ್‌ವೊಂದನ್ನು ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ ಹಂಚುತ್ತಿದ್ದಾರೆ. ಒಂದು ವೇಳೆ  ತೊಂದರೆಯಾದರೆ ಸಂರ್ಪಕಿಸಬಹುದು.

ಕಾರ್ಡ್ ಮಾಡಿಸಲು ಕಾರಣವೇನು ?

‘ಇತ್ತೀಚೆಗೆ ಬೀಗ ಹಾಕಿದ್ದ ಮನೆಯೊಂದರಲ್ಲಿ ಕಳವು ನಡೆಯುತ್ತಿತ್ತು. ಕಳ್ಳರು ಒಳಗೆ ನುಗ್ಗಿದ್ದನ್ನು ಕಂಡೂ ಪಕ್ಕದ ಮನೆಯವರು ಸುಮ್ಮನಿದ್ದರು. ಭಯಬೀತರಾಗಿ  ಬಾಗಿಲು ಹಾಕಿಕೊಂಡಿದ್ದರು.ಪರಿಶೀಲನೆಗಾಗಿ ಸ್ಥಳಕ್ಕೆ ಹೋದಾಗ, ಯಾರಾದರೂ ಮಾಹಿತಿ ನೀಡಬಹುದ್ದಿತ್ತಲ್ಲ ಎಂದು ಪಕ್ಕದ ಮನೆಯವರಲ್ಲಿ ಕೇಳಿದೆ. ಆಗ ಅವರು, ‘ನಿಮ್ಮ ಮತ್ತು ಠಾಣೆಯ ದೂರವಾಣಿ ಸಂಖ್ಯೆ ನಮಗೆ ಗೊತ್ತಿಲ್ಲ ಸರ್. ಇದ್ದಿದ್ದರೆ, ಖಂಡಿತ ಮೊಬೈಲ್ ಮೂಲಕ ಸಂಪರ್ಕಿಸುತ್ತಿದ್ದೇವು’ ಎಂದರು. ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣವೇ ನಗರಠಾಣೆಯ ದೂರವಾಣಿ ಸಂಖ್ಯೆಗಳುಳ್ಳ 6 ಸಾವಿರ ಕಾರ್ಡ್ ಮುದ್ರಿಸಲು ಕ್ರಮ ಕೈಗೊಳ್ಳಲಾಯಿತು’ ಎನ್ನುತ್ತಾರೆ ಪೊಲೀಸ್ ಇನ್‌ಸ್ಪೆಕ್ಟರ್‌ ಎಸ್.ಟಿ.ಒಡೆಯರ್.

ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಇದ್ದಾಗ   ದುಷ್ಕೃತ್ಯಗಳನ್ನು ತಡೆಯಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಒಂದು ವಾರದಿಂದ ದೂರವಾಣಿ ಸಂಖ್ಯೆಗಳುಳ್ಳ ಕಾರ್ಡ್ ವಿತರಿಸಲು ಮನೆ ಮನೆ ಅಭಿಯಾನ ಪ್ರಾರಂಭಿಸಲಾಗಿದೆ ಎನ್ನುತ್ತಾರೆ ಅವರು.

ನಗರ ವ್ಯಾಪ್ತಿಯ ಹೋಟೆಲ್, ಕಿರಾಣಿ ಅಂಗಡಿ, ಬಟ್ಟೆ, ಜ್ಯುವೆಲ್ಲರಿ ಅಂಗಡಿ, ಬೀದಿ ಬದಿ, ವ್ಯಾಪಾರಿಗಳು, ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ ಸೇರಿದಂತೆ ಅನೇಕ ಬಡಾವಣೆಗಳ ಎಲ್ಲ ಮನೆಗಳಿಗೂ ಭೇಟಿ ನೀಡಿ ಪೊಲೀಸ್ ಸಿಬ್ಬಂದಿ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಕಾರ್ಡ್ ವಿತರಿಸುತ್ತಿದ್ದಾರೆ.

***

‘ಜಾಗೃತಿ ಮೂಡಿಸಲು ಹೊಸ ಪ್ರಯತ್ನ’

ಸಾರ್ವಜನಿಕರಿಗೆ ಕೆಲ ಸಂದರ್ಭಗಳಲ್ಲಿ ಅನಾನೂಕೂಲವಾದಾಗ, ತೊಂದರೆ ಉಂಟಾದಾಗ ಪೊಲೀಸ್ ಇನ್‌ಸ್ಪೆಕ್ಟರ್‌ ನಂಬರ್ ಇಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ಅವರ ಬಳಿ ದೂರವಾಣಿ ಸಂಖ್ಯೆಗಳಿದ್ದರೆ, ಕರೆ ಮಾಡಿದ ಕೂಡಲೇ ಸ್ಪಂದಿಸಲು ಅನುಕೂಲವಾಗುತ್ತದೆ ಎಂಬ ಸದುದ್ದೇಶದಿಂದ ಈ ಅಭಿಯಾನ ಪ್ರಾರಂಭವಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಷಿ.

ಇಲಾಖೆಯ ಕಂಟ್ರೋಲ್‍ ರೂಂನ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಮಾಹಿತಿ ನೀಡಲು ತಿಳಿಸಿದ್ದೇವೆ. ಈ ನಂಬರ್‌ಗೆ ಕರೆ ಮಾಡಲು ಕೆಲ ವರು ಇಚ್ಛಿಸದೇ ಇರಬಹುದು. ಅಧಿಕಾರಿಗಳಿಂದ ಸಿಬ್ಬಂದಿವರೆಗೂ ಯಾವುದೇ ಕರೆ ಬಂದರೂ ತಕ್ಷಣ ಘಟನೆ ನಡೆದ ಸ್ಥಳದಲ್ಲಿ ಇರುತ್ತಾರೆ ಎನ್ನುತ್ತಾರೆ ಅವರು.

***

2017 ರಲ್ಲಿ ನಡೆದ ಕಳವು ಪ್ರಕರಣಗಳು:

* ಒಟ್ಟು 49 ಪ್ರಕರಣ  ದಾಖಲು

* ಸರಗಳ್ಳತನ 6

* 4 ಪ್ರಕರಣದಲ್ಲಿ ಆರೋಪಿಗಳ ಸಹಿತ ವಸ್ತುಗಳ ವಶ

* 15 ಪ್ರಕರಣದಲ್ಲಿ ಕೆಲ ವಸ್ತು ಸಹಿತ ಆರೋಪಿಗಳ ವಶ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ.

* ಈವರೆಗೂ 11 ಮಂದಿ ಆರೋಪಿಗಳ ಬಂಧನ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry