ಟ್ರಾಫಿಕ್‌ ಸಮಸ್ಯೆ: ವಾಹನ ಸಂಚಾರಕ್ಕೆ ಪರದಾಟ

7
ಕೆಎಸ್‌ಆರ್‌ಟಿಸಿ ಕೋರಿಕೆ ನಿಲ್ದಾಣದಲ್ಲಿ ಕ್ರೂಸರ್‌ಗಳ ದರ್ಬಾರ್‌; ಕಳೆದ ತಿಂಗಳು 11 ಪ್ರಕರಣ ದಾಖಲು

ಟ್ರಾಫಿಕ್‌ ಸಮಸ್ಯೆ: ವಾಹನ ಸಂಚಾರಕ್ಕೆ ಪರದಾಟ

Published:
Updated:
ಟ್ರಾಫಿಕ್‌ ಸಮಸ್ಯೆ: ವಾಹನ ಸಂಚಾರಕ್ಕೆ ಪರದಾಟ

ದಾವಣಗೆರೆ: ನಗರದ ಹೈಸ್ಕೂಲ್‌ ಮೈದಾನ ಬಳಿ ಅನಧಿಕೃತ ಬಸ್‌ ತಂಗುದಾಣ ನಿರ್ಮಾಣವಾಗಿದ್ದು, ಇಲ್ಲಿ ಕ್ರೂಸರ್‌ನಂತಹ ಖಾಸಗಿ ವಾಹನಗಳ ನಿಲುಗಡೆಯಿಂದಾಗಿ ಪಿ.ಬಿ ರಸ್ತೆಯಲ್ಲಿ ಟ್ರಾಫಿಕ್‌ ಕಿರಿಕಿರಿ ಹೆಚ್ಚಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಕೆ.ಎಸ್‌.ಆರ್‌.ಟಿ.ಸಿ ಬಸ್‌ ಚಾಲಕರಿಗೆ, ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ.

ಕೆ.ಎಸ್‌.ಆರ್‌.ಟಿ.ಸಿಯವರು ಹರಿಹರ ಮಾರ್ಗವಾಗಿ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ವರ್ಷಗಳಿಂದ ಹೈಸ್ಕೂಲ್‌ ಮೈದಾನದ ಬಳಿ ತಾತ್ಕಾಲಿಕ ನಿಲ್ದಾಣವನ್ನು ಮಾಡಿಕೊಂಡಿದ್ದಾರೆ. ಆದರೆ, ಇಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳ ಜತೆಗೆ ಖಾಸಗಿ ಬಸ್‌ ಹಾಗೂ ಸ್ಥಳೀಯ ಕ್ರೂಸರ್‌ ವಾಹನಗಳು ನಿಲ್ಲುತ್ತಿವೆ. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿ  ಪಾಲಿಕೆಯಿಂದ ರೇಣುಕ ಮಂದಿರದವರೆಗೂ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಅಧಿಕಾರಿಗಳಿಂದ ದೂರು: ಖಾಸಗಿ ವಾಹನಗಳ ನಿಲುಗಡೆಯನ್ನು ಆಕ್ಷೇಪಿಸಿ ಹಲವು ಬಾರಿ ಕೆ.ಎಸ್‌.ಆರ್‌.ಟಿ.ಸಿ ಅಧಿಕಾರಿಗಳು ಸಂಚಾರ ಠಾಣೆ ಮತ್ತು ಬಡಾವಣೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ‌. ಆದರೂ, ಅದಕ್ಕೆ ಕಡಿವಾಣ ಬಿದ್ದಿಲ್ಲ.

‘ಪಿ.ಬಿ ರಸ್ತೆ ಮಾರ್ಗವು ರಾಷ್ಟ್ರೀಕೃತ ಮಾರ್ಗವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ‘ಕೋರಿಕೆ ಬಸ್‌ನಿಲ್ದಾಣ’ ಮಾಡಲಾಗಿದೆ. ಇದರಿಂದ ಹರಿಹರ, ರಾಣೆಬೆನ್ನೂರು, ಹುಬ್ಬಳ್ಳಿ ಹಾಗೂ ಹೊಸಪೇಟೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಿದೆ. ಆದರೆ, ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿರುವ ಕ್ರೂಸರ್‌ ವಾಹನಗಳ ಚಾಲಕರಿಂದ ನಿಗಮಕ್ಕೂ ತೊಂದರೆಯಾಗಿದೆ’ ಎನ್ನುತ್ತಾರೆ ಕೆ.ಎಸ್‌.ಆರ್‌.ಟಿ.ಸಿ ದಾವಣಗೆರೆ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಅಬ್ದೂಲ್‌ ಖುದ್ದೂಸ್‌.

ಕ್ರೂಸರ್‌ಗಳ ಹಾವಳಿ:

ದಾವಣಗೆರೆಯಿಂದ ರಾಣೆಬೆನ್ನೂರು ಮತ್ತು ಹುಬ್ಬಳ್ಳಿಗೆ ನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಾರೆ. ಈ ಮಾರ್ಗಕ್ಕೆ ಸಾರಿಗೆ ಇಲಾಖೆಯಿಂದ ಕೆ.ಎಸ್‌.ಆರ್‌.ಟಿ.ಸಿಗೆ ಮಾತ್ರ ಪರವಾನಗಿ ದೊರೆತಿದೆ. ಆದರೆ, ಖಾಸಗಿ ವಾಹನಗಳು ಬಸ್‌ಗಳ ಟಿಕೆಟ್‌ಗಿಂತ ಕಡಿಮೆ ದರ ಪಡೆದು, ‘ನಾನ್‌ಸ್ಟಾಪ್‌’ ಎಂದು ಹೇಳಿ ಪ್ರಯಾಣಿಕರನ್ನು ಕರೆಕೊಂಡುಹೋಗುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ‘ಏನು ಮಾಡಿಕೋತ್ತೀರ ಮಾಡಿಕೊಳ್ಳಿ’ ಎಂದು ನಮಗೇ ಜೋರು ಮಾಡುತ್ತಾರೆ. ಈ ವಾಹನಗಳು ಹಳದಿ ಬೋರ್ಡ್‌ (ಬಾಡಿಗೆಗೆ ಪರವಾನಗಿ ಮಾತ್ರ) ಹೊಂದಿದ್ದು, 10 ಜನ ಸಾಮರ್ಥ್ಯದ ವಾಹನದಲ್ಲಿ 15ಕ್ಕೂ ಹೆಚ್ಚು ಜನರನ್ನು ಚಾಲಕರು ಕರೆದುಕೊಂಡು ಹೋಗುತ್ತಿದ್ದಾರೆ’ ಎಂದು ಕೆ.ಎಸ್‌.ಆರ್‌.ಟಿ.ಸಿ ವೃತ್ತ ನಿರೀಕ್ಷಕ ಗಣೇಶ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

11 ಪ್ರಕರಣ ದಾಖಲು: ಅನಧಿಕೃತವಾಗಿ ಹೈಸ್ಕೂಲ್‌ ಮೈದಾನ ಬಳಿ ನಿಲ್ಲುವ ಖಾಸಗಿ ವಾಹನಗಳಿಗೆ ಸಂಬಂಧಿಸಿದಂತೆ ಡಿಸೆಂಬರ್‌ನಲ್ಲಿಯೇ 11 ಪ್ರಕರಣಗಳು ದಾಖಲಾಗಿವೆ. ಪರವಾನಗಿ ಇಲ್ಲದಿರುವುದು, ನಿಯಮ ಮೀರಿ ಪ್ರಯಾಣಿಕರನ್ನು ಕರೆದೊಯ್ಯುವುದು, ನಿರ್ಬಂಧಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿರುವ ಕಾರಣಗಳಿಗೆ 10 ಕ್ರೂಸರ್‌ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ’ ಎಂದು ದಕ್ಷಿಣ ಸಂಚಾರ ಠಾಣೆಯ ಶಿವರುದ್ರಪ್ಪ ಮೇಟಿ ಮಾಹಿತಿ ನೀಡಿದ್ದಾರೆ.

–ಜಯಪ್ರಕಾಶ್‌ ಬಿರಾದಾರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry