ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಧ್‌ಪುರದ ಕಡಾಯಿ ಮಾರಾಟ ಜೋರು

ಭೀಷ್ಮಕೆರೆ ಸಮೀಪ ರಸ್ತೆ ಬದಿಯಲ್ಲಿ ಬೀಡು ಬಿಟ್ಟಿರುವ ರಾಜಸ್ತಾನದ ವ್ಯಾಪಾರಿಗಳು
Last Updated 15 ಜನವರಿ 2018, 10:35 IST
ಅಕ್ಷರ ಗಾತ್ರ

ಗದಗ: ವಿವಿಧ ರಾಜ್ಯ, ಜಿಲ್ಲೆಗಳಲ್ಲಿ ನಿರಂತರವಾಗಿ ಅಲೆದಾಟ, ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು. ಅಲ್ಲಿಯೇ ಊಟ, ವಸತಿ, ಬದುಕಿನ ಬಂಡಿ ಎಳೆಯಲು ವಲಸೆ ಅನಿವಾರ್ಯ. ಹೌದು. ಇದು ರಾಜಸ್ತಾನದ ಜೋಧ್‌ಪುರ ಮೂಲದ ಲೂಹಾರ ಕುಟುಂಬದ ಕಥೆ– ವ್ಯಥೆ. ಸದ್ಯ ಈ ಕುಟುಂಬ ಗದುಗಿನ ಭೀಷ್ಮಕೆರೆ ಎದುರಿನಿಂದ ಹಾದು ಹೋಗಿರುವ ಗದಗ–ಹುಬ್ಬಳ್ಳಿ ರಸ್ತೆ ಬದಿಯಲ್ಲಿ ಬೀಡು ಬಿಟ್ಟಿದೆ.

ದೋಸೆ ತವೆ, ರೊಟ್ಟಿ ಹಂಚು, ಕಡಾಯಿ, ಚಾಕು, ಕೊಡಲಿ, ಈಳಿಗೆ, ಗುದ್ದಲಿ, ಸಲಿಕೆ, ತುರಿಯುವ ಮಣೆ, ಪಡ್ಡಿನ ಹಂಚು ಸೇರಿದಂತೆ ಅಡುಗೆ ಮನೆಗೆ ಬೇಕಾಗುವ ವಿವಿಧ ಪರಿಕರಕಗಳನ್ನು ಪಾದಾಚಾರಿ ಮಾರ್ಗದಲ್ಲಿ ಜೋಡಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಈ ಸಾಮಗ್ರಿಗಳಿಗೆ ₹ 100ರಿಂದ ₹ 900 ದರ ಇದೆ. ಇದರಲ್ಲಿ ಕಡಾಯಿಗಳು ಹೆಚ್ಚು ಬಿಕರಿಯಾಗುತ್ತಿವೆ. ಜೋಧ್‌ಪುರದ ಕಡಾಯಿಗೆ ಹೆಚ್ಚಿನ ಬೇಡಿಕೆ ಇದೆ.

‘ಕಳೆದ ಒಂದು ವಾರದಲ್ಲಿ 100ಕ್ಕೂ ಹೆಚ್ಚು ಕಡಾಯಿಗಳು ಮಾರಾಟವಾಗಿವೆ. ಪ್ರತಿನಿತ್ಯ ₨200ರಿಂದ ₨1,500 ಸಾವಿರ ವ್ಯಾಪಾರ ಆಗುತ್ತಿದೆ. ಎಲ್ಲ ಖರ್ಚು ಕಳೆದು ₹ 200ರಿಂದ ₹ 300 ಉಳಿಯುತ್ತದೆ’ ಎನ್ನುತ್ತಾರೆ ವ್ಯಾಪಾರಿ ಮಕ್ಮಲ್, ತಿಕ್ಯಾ ಲೋಹಾರ.

‘ರಾಜಸ್ತಾನದ ಜೋಧಪುರದಲ್ಲಿ ದುಡಿಮೆ ಇಲ್ಲ. ತುತ್ತು ಅನ್ನಕ್ಕಾಗಿ, ನೀರಿಗಾಗಿ ಹಾಹಾಕಾರ ಇದೆ. ಹೀಗಾಗಿ, ಊರೂರು ಅಲೆದು ಗೃಹ ಬಳಕೆ ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದೇವೆ. ಬೇಡಿಕೆ ಅನ್ವಯ ಸ್ಥಳದಲ್ಲೇ ಕಬ್ಬಿಣದ ವಸ್ತುಗಳನ್ನು ತಯಾರಿಸಿ ಕೊಡುತ್ತೇವೆ. ನಮಗೆ ಓದು, ಬರಹ ಬರುವುದಿಲ್ಲ. ಈ ಉದ್ಯೋಗ ಬಿಟ್ಟರೆ ಬೇರೆ ಏನೂ ಬರುವುದಿಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದರೆ ಆಗುತ್ತಿಲ್ಲ’ ಎಂದು ಪೂಜಾ ಲೂಹಾರ ಅಳಲು ತೋಡಿಕೊಂಡರು.

‘ತಿಂಗಳಿಗೊಮ್ಮೆ ಸ್ಥಳ ಬದಲಿಸುತ್ತೇವೆ. ನಗರದಿಂದ ನಗರಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಹೀಗೆ ನಮ್ಮ ಪ್ರಯಾಣ ಮುಂದುವರಿಯುತ್ತದೆ. ಒಟ್ಟು 30 ಜನ ಇದ್ದೇವೆ. ವ್ಯಾಪಾರ ಅಷ್ಟಕಷ್ಟೇ. ಇನ್ನೊಂದು ವಾರ ಗದುಗಿನಲ್ಲಿ ಇರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT