ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

7

ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

Published:
Updated:
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

ಅನಿಶ್ಚಿತ ಆದಾಯದ ಕೃಷಿಯನ್ನು ಮಾತ್ರ ನಂಬಿ ಬದುಕುವುದು ಜಾಣತನವಲ್ಲ ಎಂಬ ನಿಲುವಿನ ಗಣಪತಿ ಹೆಗಡೆಯವರು ನಿರ್ದಿಷ್ಟ, ನಿಶ್ಚಿಂತೆಯ ಆದಾಯ ಮೂಲ ಹುಡುಕಿದ್ದು ಕೃಷಿಗೆ ಪೂರಕವಾದ ಉಪಕಸುಬು ಹೈನುಗಾರಿಕೆಯಲ್ಲಿ.

ನಸುಕಿನಲ್ಲಿಯೇ ಸಗಣಿ ಬಾಚಿ ಕೊಟ್ಟಿಗೆ ಸ್ವಚ್ಛ ಮಾಡಿ ಹಸುಗಳಿಗೆ ಹುಲ್ಲು ಹಾಕುತ್ತಾ ದಿನಚರಿ ಆರಂಭಿಸುತ್ತಾರೆ ಗಣಪತಿ. ಇವರ ಊರು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಕೂಗಲಕುಳಿ. ಅವರ ಹೆಜ್ಜೆ ಸಪ್ಪಳವಾದರೆ ಸಾಕು, ಕಿವಿ ನಿಮಿರಿಸಿ ಕತ್ತು ತಿರುಗಿಸಿ ಸಪ್ಪಳ ಮಾಡುತ್ತಾ ನಿಂತುಬಿಡುವ ಚೆಂದದಲ್ಲಿ ಹಸುಗಳ ಮೂಕ ಪ್ರೇಮದ ಕಥನವಿದೆ.

ಕಾಡಿನೊಡಲಲ್ಲಿರುವ ಚೆಂದದ ಹಳ್ಳಿಯಲ್ಲಿ ವಾಸವಾಗಿ ರುವ ಗಣಪತಿಯವರದ್ದು ಮೂಲ ಕಸುಬು ಕೃಷಿ. ಬಿ.ಎ ಪದವಿ ಮುಗಿಸಿದ ನಂತರ ಅಡಿಕೆ ವ್ಯಾಪಾರದಲ್ಲಿ ಬದುಕನ್ನು ಕಟ್ಟುವ ಉತ್ಸಾಹದಲ್ಲಿದ್ದ ಅವರು ಕೌಟುಂಬಿಕ ಹೊಣೆಗಾರಿಕೆ ಹೆಗಲೇರಿ ಹಳ್ಳಿಯಲ್ಲೇ ನೆಲೆ ನಿಂತರು. ಹಿರಿಯರಿಂದ ಬಂದ ತೋಟದಲ್ಲಿ ಅಡಿಕೆ, ಬಾಳೆ, ಮೆಣಸು, ತೆಂಗಿನ ಬೆಳೆಯಿದ್ದವು.

‘ನೌಕರಿ ಇರುವವರು ಪ್ರತಿ ತಿಂಗಳೂ ಹಣ ಗಳಿಸುತ್ತಾರೆ. ನನಗೋ ವರುಷಕ್ಕೊಮ್ಮೆ ಆದಾಯ. ಅದೂ ಮಳೆಯನ್ನಾಧರಿಸಿ ಬರುವ ಬೆಳೆಗಳಲ್ಲಿ ಎಷ್ಟು ಆದಾಯ ಸಿಗುತ್ತದೆ ಎನ್ನುವ ಭರವಸೆ ಇಲ್ಲ, ಆದರೆ ನಿರಂತರವಾಗಿ ಖರ್ಚಿರುತ್ತದೆ. ಇದಕ್ಕೊಂದು ದಾರಿ ಕಂಡುಕೊಳ್ಳಲೇಬೇಕು’ ಎನ್ನುವ ವಿಚಾರ ಅವರದು. ಒಂದು ದಿನ ಮಗಳು ನೇಹಾಳನ್ನು ಶಾಲೆಗೆ ಬಿಡಲು ಸಮೀಪದ ಗೌಡಳ್ಳಿಗೆ ಹೋಗಿದ್ದರು. ‘ನೀನು ದಿನಾ ಮಗಳನ್ನು ಶಾಲೆಗೆ ಕಳಿಸಲು ಬರುತ್ತಿಯಲ್ಲಪ್ಪಾ, ನಿಮ್ಮ ಮನೆಯಲ್ಲಿದ್ದರೆ ನನಗೆ ಒಂದರ್ಧ ಲೀಟರ್ ಹಾಲನ್ನು ತಂದುಕೊಡು, ಹಣ ಕೊಡುತ್ತೇನೆ’ ಎಂದು ಗ್ರಾಹಕರೊಬ್ಬರು ಬೇಡಿಕೆ ಇಟ್ಟರು. ಅಲ್ಲಿಯವರೆಗೆ ಮನೆಬಳಕೆಗೆ ಸೀಮಿತವಾಗಿದ್ದ ಹಾಲು ಮಾರಾಟಕ್ಕೂ ಹೊರಟಿತು.

ಹೆಚ್ಚು ಹಾಲು ಉತ್ಪಾದನೆಗೆಂದು ಕೊಟ್ಟಿಗೆಯಲ್ಲಿದ್ದ ಮೂರು ಮಲೆನಾಡು ಗಿಡ್ಡಕ್ಕೆ ಇನ್ಸಾಮಿನೇಶನ್ ಮಾಡಿಸಿದರು. ಮುಂದೆ ಹುಟ್ಟಿದ ಕರುಗಳು ಜೆರ್ಸಿ ತಳಿಯದ್ದಾಗಿದ್ದವು. ಅವುಗಳನ್ನು ಚೆನ್ನಾಗಿ ಆರೈಕೆ ಮಾಡಿದ್ದರಿಂದ ಕ್ರಮೇಣ ಕೊಟ್ಟಿಗೆಯಲ್ಲಿ ದನಕರುಗಳ ಸಂಖ್ಯೆ ಹೆಚ್ಚಾಯಿತು. ಮಾರುವ ಹಾಲಿನ ಪ್ರಮಾಣ ಸಹ ಹೆಚ್ಚಾಯಿತು. ಅವರ ಕೊಟ್ಟಿಗೆಯನ್ನು ತುಂಬಿರುವ ಹಸುಗಳು ಅವರ ಕೊಟ್ಟಿಗೆಯಲ್ಲೇ ಹುಟ್ಟಿದವುಗಳು. ಕ್ರಮೇಣ ಏರುಗತಿಯಲ್ಲಿ ನಡೆಸುತ್ತಿರುವ ಹೈನೋದ್ಯಮದಲ್ಲಿ ಗಣಪತಿಯವರು ಬೆಳಿಗ್ಗೆ ಮೂವತ್ತು ಲೀಟರ್, ಸಂಜೆ ಮೂವತ್ತು ಲೀಟರ್ ಹಾಲನ್ನು ಗ್ರಾಹಕರಿಗೆ ನೇರವಾಗಿ ಮಾರಲು ಆರಂಭಿಸಿದರು.

ಮನೆಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿದ್ದ ಸ್ಕೂಲಿಗೆ ಮಗಳನ್ನು ಕರೆದೊಯ್ಯುವುದು, ಹಾಲನ್ನು ಗ್ರಾಹಕರಿಗೆ ತಲುಪಿಸುವುದು – ಎರಡೂ ಕೆಲಸವನ್ನು ಜೊತೆಯಾಗಿಯೇ ಮುಗಿಸುತ್ತಾರೆ. ಮನೆಗೆ ಸಮೀಪವಿರುವ ಬೆಟ್ಟ ಬೇಣಗಳಲ್ಲಿ ವರ್ಷದ ಎಂಟು ತಿಂಗಳು ಹಸುಗಳಿಗೆ ಸಾಕಾಗುವಷ್ಟು ಹಸಿಮೇವನ್ನು ಬೆಳೆಸಿದ್ದಾರೆ. ನಿತ್ಯ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಮೇಯಲು ಬಿಡುತ್ತಾರೆ. ಸಂಜೆ ಹಸಿ ಹುಲ್ಲು ಮೇಯ್ದು ಬಂದ ಹಸುಗಳಿಗೆ ಸುಮಾರು ಇಪ್ಪತ್ತು ಲೀಟರ್ ಬಿಸಿ ನೀರನ್ನು ಕುಡಿಯಲು ಕೊಡುತ್ತಾರೆ. ದಿನಕ್ಕೆರಡು ಬಾರಿ ಧಾರಾ ಹಿಂಡಿ, ಚಪಡಿ ಹಿಂಡಿಯನ್ನು ಮಿಶ್ರಣ ಮಾಡಿ ಹಸುಗಳಿಗೆ ನೀಡುತ್ತಾರೆ.

ಹಸುಗಳಿಗೆ ಮನೆಮದ್ದನ್ನು ಮಾಡುತ್ತಾರೆ. ವೈದ್ಯರ ಸಲಹೆ ಮೇರೆಗೆ ತುರ್ತಿಗೆ ಬೇಕಾದ ಔಷಧಗಳನ್ನು ಸದಾ ಮನೆಯಲ್ಲಿ ಇಟ್ಟಿರುತ್ತಾರೆ. ಕರು ತಾಯ ಹೊಟ್ಟೆಯಲ್ಲಿ ಅಡ್ಡ ಸಿಕ್ಕಿದರೆ ಹೆರಿಗೆ ಯನ್ನೂ ಮಾಡಿಸುವಷ್ಟು ಧೈರ್ಯ, ಅನುಭವ ಇದೆ ಎಂದು ನಗುತ್ತಾರೆ.

ದಿನದಲ್ಲಿ ಮೂರು ಸಲ ಸಗಣಿ ಬಾಚಿ ನಿತ್ಯವೂ ನೀರಿನಿಂದ ತೊಳೆಯುತ್ತಾರೆ. ಹೀಗೆ ಸ್ವಚ್ಛವಾಗಿ ಇಡುವುದರಿಂದ ಹಸುಗಳಿಗೆ ರೋಗಬಾಧೆ ಕಡಿಮೆ ಎನ್ನುತ್ತಾರೆ. ಹೆಣ್ಣು ಕರುವಾದರೆ ಸಾಕುತ್ತೇನೆ. ಗಂಡು ಕರುವಾದರೆ ಉಳುಮೆಗೆ ಬಳಸಿಕೊಳ್ಳುವ ರೈತರಿಗೆ ದಾನ ಮಾಡಿ ಬಿಡುತ್ತೇನೆ ಎನ್ನುವ ಅವರ ಕೊಟ್ಟಿಗೆಯಲ್ಲಿ ಚೆಂದದ ಹೆಣ್ಣು ಕರುಗಳಿವೆ. ಸಗಣಿಯನ್ನು ಬಳಸಿ ಗೋಬರ್ ಗ್ಯಾಸ್ ಉತ್ಪಾದಿಸುತ್ತಾರೆ. ಅಲ್ಲಿಂದ ಉಳಿದ ಸ್ಲರಿಯನ್ನು ನೇರವಾಗಿ ಗೊಬ್ಬರ ಗುಂಡಿ ಸೇರುವಂತೆ ವ್ಯವಸ್ಥೆ ಮಾಡಿದ್ದಾರೆ. ಕೊಟ್ಟಿಗೆ ಇರುವುದರಿಂದ ಎರಡೆಕರೆ ತೋಟಕ್ಕೆ ತೆಂಗಿನ ಹಿತ್ತಲಿಗೆ, ಹೂವಿನ ಗಿಡಗಳಿಗೆ ಸಾಕಾಗುವಷ್ಟು ಸಾವಯವ ಗೊಬ್ಬರವಾಗುತ್ತದೆ.

‘ನಮ್ಮ ಕುಟುಂಬದ ಮೂವರ ಅಡುಗೆಗೆ ಸಾಕಾಗುವಷ್ಟು ಗ್ಯಾಸ್ ಉತ್ಪನ್ನ ಆಗುತ್ತದೆ. ಮಸಿ ಪಾತ್ರೆ ತೊಳೆಯುವ ಅಗತ್ಯ ಎಂದೂ ಬಿದ್ದಿಲ್ಲ ಎಂದು ಕಿರುನಗು ಚೆಲ್ಲುತ್ತಾರೆ. ಚೆಂದದ ಹೂ ಗಿಡಗಳನ್ನೂ ತೋರುತ್ತಾರೆ ಅವರ ಪತ್ನಿ ಸುಮನಾ. ಗಣಪತಿಯವರ ಕೆಲಸದಲ್ಲಿ ಮಗಳು ಹಾಗೂ ಪತ್ನಿ ಕೈಗೂಡುತ್ತಾರೆ. ಮೂವರ ಒಗ್ಗಟ್ಟಿನ ಈ ಉಪಕಸುಬಿನಿಂದ ತಿಂಗಳಿಗೆ ಹದಿನೈದು ಸಾವಿರ ರೂಪಾಯಿ ಗಳಿಸುತ್ತೇನೆ ಎನ್ನುವ ಹೆಮ್ಮೆ ಅವರದ್ದು.

‘ಹಸುಗಳನ್ನು ಖರೀದಿಸಿಲ್ಲ. ನಮ್ಮ ಕೊಟ್ಟಿಗೆಯಲ್ಲಿ ಹುಟ್ಟಿದವುಗಳನ್ನೇ ಬೆಳೆಸಿದ್ದೇನೆ. ಕೆಲಸಕ್ಕಾಗಿ ಆಳುಗಳನ್ನಿಟ್ಟಿಲ್ಲ. ನನಗೆ ಎಷ್ಟು ಸಾಧ್ಯವೋ ಅಷ್ಟೇ ಹಸುಗಳನ್ನು ಸಾಕುತ್ತೇನೆ. ಯಾವುದೇ ತರಬೇತಿ ಪಡೆದಿಲ್ಲ. ಪಾರಂಪರಿಕ ಜ್ಞಾನದಾಧಾರದಿಂದಲೇ ಎಲ್ಲ ಕೆಲಸ ನಡೆದಿದೆ’ ಎಂದು ನಗುವ ಗಣಪತಿಯವರಿಗೆ ಶುಭ ಹಾರೈಸಿ ಅಲ್ಲಿಂದ ಹೊರಬರುವಾಗ ಪದ್ಮಾ, ಸಂಗೀತಾ, ಗಣಪಿ, ಕಲ್ಯಾಣಿ, ಚಿನ್ನೂ... ಹಸುಗಳು ತಲೆ ಬಾಲ ಆಡಿಸಿ ವಿದಾಯ ಹೇಳಿದವು.

ಗಣಪತಿಯವರು ಹೇಳುವ ಮನೆಮದ್ದುಗಳು

* ಹೆರಿಗೆಯ ನಂತರ ಮಾಂಸ ಬೀಳದಿದ್ದರೆ ಬಾಳೆಲೆಯನ್ನು ಸುರುಳಿ ಮಾಡಿ ಅರ್ಧ ಲೀಟರ್ ಶೇಂಗಾ ಎಣ್ಣೆ ಸೇರಿಸಿ ಹಸುವಿಗೆ ತಿನ್ನಿಸಬೇಕು.

* ಹೆರಿಗೆಯ ನಂತರ ಕರುವಿನೊಂದಿಗೆ ಬರುವ ಮಾಂಸವನ್ನು ಹಸು ತಿಂದರೆ ಒಂದು ಕುಂಬಳಕಾಯಿ ಅಥವಾ ಮಗೆಕಾಯಿಯನ್ನು ತಿನ್ನಿಸಬೇಕು. ಇಲ್ಲವಾದರೆ ಮತ್ತೊಂದು ಕರು ಹಾಕುವವರೆಗೂ ಆ ಹಸು ಕಡಿಮೆ ಹಾಲು ಕೊಡುತ್ತದೆ.

* ಹೆರಿಗೆಯ ನಂತರ ಕೋಡು ಹಾಗೂ ಬೆನ್ನಿಗೆ ಎಣ್ಣೆ ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಿಸಬೇಕು. ಬೇಗ ಆಯಾಸ ಕಳೆದು ಹಸು ಚೆನ್ನಾಗಿ ಹಾಲು ನೀಡುತ್ತದೆ.

* ಕಾಳು ಮೆಣಸು ಎರಡು ಚಮಚ, ಅರಿಸಿನ ಒಂದು ಚಮಚ ಕಾಲು ಕೇಜಿ ಬೆಲ್ಲ ಸೇರಿಸಿ ಒಂದು ಲೀಟರ್ ನೀರಿಗೆ ಹಾಕಿ ಕುದಿಸಿ ಇಪ್ಪತ್ತು ಲೀಟರ್ ನೀರಿಗೆ ಬೆರೆಸಿ ಕರು ಹಾಕಿದ ನಂತರ ಹಸುವಿಗೆ ಕುಡಿಯಲು ಕೊಡಬೇಕು.

* ಅಣಲೆ ಕಾಯಿಯನ್ನು ಜಜ್ಜಿ ಹಾಕಿ ರಾಡಿಮಣ್ಣಿಗೆ ಬೆರೆಸಿ ಅದರಲ್ಲಿ ಕಟ್ಟಿದರೆ ಕಾಲೊಡೆ ರೋಗ ನಿವಾರಣೆ ಆಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry