ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡಾದ ಬೆಟ್ಟದಲಿ ಬೀಜ ಬಿತ್ತಿದವರು...

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಸರ್ಕಾರಿ ನೌಕರಿ, ಬೇಕಾಗುವಷ್ಟು ಸಂಬಳ, ಆಳು-ಕಾಳು ಇದ್ದರೆ ಅದೇ ಸ್ವರ್ಗ ಸುಖದ ಜೀವನ ಎಂದು ಭಾವಿಸುವ ಸಹಸ್ರಾರು ಜನ ನಮ್ಮೆಲ್ಲರ ನಡುವೆ ಸಿಗುತ್ತಾರೆ. ಆದರೆ ಇಲ್ಲೊಬ್ಬರಿದ್ದಾರೆ, ಹೆಸರು ಮುಕುಂದ್‌ರಾವ್‌. ಸರ್ಕಾರಿ ಅಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ಈವರೆಗಿನ ಸೇವೆಯ ಬಗ್ಗೆ ಇವರಿಗೆ ತೃಪ್ತಿ ಇದೆ. ಹಾಗಿದ್ದರೂ ಸಂತೃಪ್ತಿಗಾಗಿ ವಿಶೇಷ ಹಾಗೂ ದುಬಾರಿ ಹವ್ಯಾಸವೊಂದನ್ನು ಹಲವು ವರ್ಷಗಳಿಂದ ರೂಢಿಸಿಕೊಂಡಿದ್ದಾರೆ. ಅದೇನೆಂದರೆ ಬರಡಾದ ಬೆಟ್ಟಗಳಲ್ಲಿ ಬೀಜಗಳ ಬಿತ್ತನೆ ಮಾಡುವುದು!

ಮುಕುಂದ್‌ರಾವ್‌ ಅವರ ಈವರೆಗಿನ ಬೀಜ ಬಿತ್ತನೆಯ ಕೈಂಕರ್ಯದಿಂದ ಚನ್ನಪಟ್ಟಣದ ಚಿಕ್ಕಮಣ್ಣು ಗುಡ್ಡೆ ಪ್ರದೇಶ, ಕೆಂಗಲ್, ಮುತ್ತುರಾಯ ಬೆಟ್ಟ, ಬೆಣಚೆಕಲ್ಲು ಬೆಟ್ಟ, ಅಮ್ಮಳ್ಳಿದೊಡ್ಡಿಯ ಬರಡು ಪ್ರದೇಶದಲ್ಲಿ ಹಸಿರೆಲೆಗಳ ಟಿಸಿಲುಗಳು ಕಂಗೊಳಿಸುತ್ತಿವೆ. ಇಲ್ಲಿ ಬಿತ್ತಿರುವ ಬೇವು, ಹುಣಸೆ, ಹಿಪ್ಪೆ, ಗೋಣಿ, ಅಂಟವಾಳ, ಹಲಸು, ಮತ್ತಿ, ಸಂಪಿಗೆ, ಕಾಡುಬಾದಾಮಿ, ಅರಳಿ, ಬಾಗೆಯ ಬೀಜಗಳು ಗಿಡವಾಗುತ್ತಿರುವುದನ್ನು ಕಂಡು ಅವರ ಮೊಗದಲ್ಲೂ ಸಂತಸ ಮನೆಮಾಡಿದೆ. 2007ರಲ್ಲಿ ಇವರು ಚಿಕ್ಕಮಣ್ಣುಗುಡ್ಡೆದೊಡ್ಡಿಯಲ್ಲಿ ಬಿತ್ತಿದ ಬೀಜಗಳು ಹೂ, ಹಣ್ಣು ಮತ್ತು ನೆರಳು ನೀಡುವ ಮರಗಳಾಗಿವೆ.

2016ರ ಅಕ್ಟೋಬರ್‌ನಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹುಲಕುಂದದಲ್ಲಿ ಬಿತ್ತನೆ ಶಿಬಿರ ಹಮ್ಮಿಕೊಂಡಿದ್ದರು. ಹತ್ತಾರು ಶಾಲಾ ಮಕ್ಕಳ ಸಹಕಾರದೊಂದಿಗೆ ವಿವಿಧ ಜಾತಿಯ ಸುಮಾರು ಮೂರು ಲಕ್ಷ ಬೀಜಗಳನ್ನು ಬಿತ್ತನೆ ಮಾಡಿದರು‌. ಇದಕ್ಕೆ ಸ್ಥಳೀಯ ಪಂಚಾಯಿತಿ, ರಾಮೇಶ್ವರ ಶಿಕ್ಷಣ ಸಂಸ್ಥೆ ಕೈಜೋಡಿಸಿತ್ತು. ಗೆಳೆಯ ಗೋವಿಂದಪ್ಪ ಗೌಡಪ್ಪ ಗೌಲ್ ಅವರ ಸಹಕಾರವಿತ್ತು. ಕಳೆದ ವರ್ಷದ ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ದೊಡ್ಡಬಳ್ಳಾಪುರದ ಉಜನಿ ಹಾಗೂ ಹೊಸಕೋಟೆಯ ಬಡಿಗೇನಹಳ್ಳಿ ಪ್ರದೇಶದಲ್ಲಿ ಸುಮಾರು ಐದು ಲಕ್ಷ ಬೀಜಗಳನ್ನು ಹಾಕಿದ್ದಾರೆ. ಇಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಪಂಚಾಯಿತಿ ಮತ್ತು ಯುವಕರ ಸಂಘ ಜತೆಯಾಗಿದ್ದು ವಿಶೇಷ.

ಬೀಜಸಂಗ್ರಹ ಮತ್ತು ಬಿತ್ತನೆ: ಲಕ್ಷಾಂತರ ಸಂಖ್ಯೆಯ ಬೀಜ ಸಂಗ್ರಹಣೆಗೆ ಇವರೊಂದು ವಿಧಾನ ಕಂಡುಕೊಂಡಿದ್ದಾರೆ. ಬೀಜ ಸಂಗ್ರಹಣಾ ನಿಧಿಯೆಂಬ ರಟ್ಟಿನಪೆಟ್ಟಿಗೆಗಳನ್ನು ಶಾಲೆಗಳಲ್ಲಿ ಇಟ್ಟು ಬರುತ್ತಾರೆ. ಹಾಗೆ ಬರುವಾಗ ಸುತ್ತಮುತ್ತಲಿನ ವಾತಾವರಣದಲ್ಲಿ ಸಿಗುವ ಬೀಜಗಳನ್ನು ಆಯ್ದು ಪೆಟ್ಟಿಗೆಗೆ ತಂದು ಹಾಕುವಂತೆ ಮಕ್ಕಳಿಗೆ ಪರಿಸರಪ್ರೀತಿಯ ಪಾಠ ಹೇಳುತ್ತಾರೆ. ‘ಶಾಲಾಮಕ್ಕಳ ಪರಿಸರದ ಕಾಳಜಿಯಿಂದಾಗಿ ಬೀಜಗಳು ಯಥೇಚ್ಛವಾಗಿ ಸಂಗ್ರಹವಾಗುತ್ತಿವೆ’ ಎನ್ನುತ್ತಾರೆ ಅವರು.

ಮಕ್ಕಳು ಸಂಗ್ರಹಿಸಿದ ಬೀಜಗಳನ್ನು ಪತ್ನಿ ಲತಾ ಸಹಕಾರದೊಂದಿಗೆ ಬೀಜಾಮೃತ ದಿಂದ ಸಂಸ್ಕರಿಸುತ್ತಾರೆ. ಬಳಿಕ ಅವುಗಳನ್ನು ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಸಿದ್ಧಪಡಿಸುತ್ತಾರೆ. ಮಳೆಗಾಲದಲ್ಲಿ ನಿರ್ದಿಷ್ಟ ಬರಡು ಬೆಟ್ಟದ ಬಯಲಲ್ಲಿ, ಈ ಬೀಜಗಳ ಬಿತ್ತನೆ ಶಿಬಿರ ಆಯೋಜಿಸುತ್ತಾರೆ. ಅದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ, ಆಸಕ್ತರ ಊಟ–ತಿಂಡಿಯ ಖರ್ಚನ್ನು ಇವರೇ ಭರಿಸುತ್ತಾರೆ. ಶಾಲಾಮಕ್ಕಳ ಕೈಯಿಂದ ಊರಿಸಿದ ಬೀಜಗಳು, ಚಿಗುರೊಡೆಯುತ್ತ ಮೇಲೇಳುತ್ತವೆ. 

ಆರಂಭದ ಹಾದಿ: ‘15 ವರ್ಷಗಳ ಹಿಂದೆಯೆ ಕೆ.ಎ.ಎಸ್. ದರ್ಜೆಯ ಅಧಿಕಾರಿಯಾಗಿದ್ದೆ. ಚಿಕ್ಕಮಗಳೂರಿನಲ್ಲಿ ಕೃಷಿ ವರಮಾನ ತೆರಿಗೆ ಅಧಿಕಾರಿ ಆಗಿದ್ದಾಗ, ಬೆಳ್ಳಂಬೆಳಿಗ್ಗೆ ವಾಯುವಿಹಾರಕ್ಕೆಂದು ಹೋಗುತ್ತಿದ್ದೆ. ಹೋಗುವ ದಾರಿ ಯಲ್ಲಿ ಬೋಳೆರಾಮೇಶ್ವರ ಎಂಬ ದೇವಸ್ಥಾನವಿತ್ತು. ಅಲ್ಲಿ ತರಹೇವಾರಿ ಮರಗಳು ಇದ್ದವು. ಅಲ್ಲಿಗೆ ಬೆಳಿಗ್ಗೆ ಮತ್ತು ಸಂಜೆ ಹಲವಾರು ಬಗೆಯ ಪಕ್ಷಿಗಳು ಬರುತ್ತಿದ್ದವು. ಕಾಡಿನಲ್ಲಿ ಹುಡುಕಿ ತಿಂದ ವೈವಿಧ್ಯಮಯ ಹಣ್ಣುಗಳ ಬೀಜಗಳನ್ನು ಹಿಕ್ಕೆಗಳಲ್ಲಿ ಅಲ್ಲಿ ಉದುರಿಸಿ ಹೋಗುತ್ತಿದ್ದವು. ಆ ಬೀಜಗಳನ್ನು ಸಂಗ್ರಹಿಸಿ ನಮ್ಮೂರಲ್ಲಿ ಬೆಳೆಸುವ ಹಂಬಲ ಹುಟ್ಟಿತು. ಆಗ ಒಂದು ಯೋಚನೆ ಹೊಳೆಯಿತು. ಆವರಣದಲ್ಲಿ ಬೀಳುವ ಹಿಕ್ಕೆಗಳನ್ನು ಸಂಗ್ರಹಿಸಿ ಕೊಡಿ. ವಾರಕ್ಕೆ ನೂರು ರೂಪಾಯಿ ಕೊಡುತ್ತೇನೆ ಎಂದು ಅಲ್ಲಿದ್ದ ಭಿಕ್ಷುಕರೊಂದಿಗೆ ಒಪ್ಪಂದ ಮಾಡಿಕೊಂಡೆ. ಹಾಗೆ ಕಲೆಹಾಕಿದ ಹಿಕ್ಕೆಗಳಿಂದ ಬೀಜಗಳನ್ನು ಬೇರ್ಪಡಿಸುತ್ತಿದ್ದೆ. ಇದನ್ನು ಕಂಡ ನೆರೆಹೊರೆಯವರು ಇದೆಂಥ ಮಕ್ಕಳಾಟ ಎನ್ನುತ್ತಿದ್ದರು. ಅದಕ್ಕೆ ಹಿಕ್ಕೆಗಳ ದುರ್ವಾಸನೆಯೇ ಮುಖ್ಯ ಕಾರಣವಾಗಿತ್ತು. ಸಂಗ್ರಹಿಸಿದ ಬೀಜಗಳನ್ನು ಪಾರ್ಸೆಲ್ ಮೂಲಕ ಚನ್ನಪಟ್ಟಣದಲ್ಲಿದ್ದ ಅಮ್ಮನ ಮನೆಗೆ ಕಳುಹಿಸುತ್ತಿದ್ದೆ. ಮಳೆಗಾಲದಲ್ಲಿ ಊರಿಗೆ ಬಂದಾಗ, ಅವುಗಳ ಬಿತ್ತನೆ ಕಾರ್ಯ ಆರಂಭಿಸುತ್ತಿದ್ದೆ’ ಎಂದು ಮುಕುಂದ ಅವರು ಆರಂಭದ ಹಾದಿಯನ್ನು ಅರುಹಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮುಕುಂದರಿಗೆ ಅಮ್ಮನ ಪ್ರೀತಿಯೊಂದಿಗೆ ಪರಿಸರ ಕಾಳಜಿಯೂ ಬಳುವಳಿಯಾಗಿ ಬಂತು‌. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಬಿ.ಎ. ಹಾಗೂ ಅಂತರರಾಷ್ಟ್ರೀಯ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವೀಧರರಾದ ಮುಕುಂದರು ದೆಹಲಿಯಲ್ಲಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಕಾಲಜಿ ಆ್ಯಂಡ್‌ ಎನ್ವಿರಾನ್ಮೆಂಟ್‌ನಲ್ಲಿ ಪರಿಸರ ಕುರಿತು ಸ್ನಾತಕೋತ್ತರ ಡಿಪ್ಲೊಮಾ ಮುಗಿಸಿದ್ದಾರೆ. 1981ರಲ್ಲಿ ಸರ್ಕಾರಿ ಸೇವೆಗೆ ಸೇರಿದ ಇವರು ಸಮಾಜ ಕಲ್ಯಾಣ ಇಲಾಖೆ, ವಾಣಿಜ್ಯ
ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ 2015ರಲ್ಲಿ ನಿವೃತ್ತರಾಗಿದ್ದಾರೆ. ಪರಿಸರದ ಮೇಲಿನ ಇವರ ವಿಶೇಷ ಸೇವೆಗೆ ಅವರ ಕುಟುಂಬ ಹಾಗೂ ಸ್ನೇಹಿತರ ಬೆಂಬಲವೂ ಸಿಗುತ್ತಿದೆ.

ಮೊಲಗಳಿಗೆ ಒಪ್ಪತ್ತಿನ ಊಟ

‘ಚನ್ನಪಟ್ಟಣದ ಚಿಕ್ಕಮಣ್ಣುಗುಡ್ಡೆಯ ಪ್ರದೇಶದ ಪ್ರಾಣಿ–ಪಕ್ಷಿಗಳಿಗೆ ಅನುಕೂಲವಾಗಲು ಮಾವಿನ ಗಿಡಗಳನ್ನು ಬೆಳೆಸಬೇಕೆಂಬ ಆಸೆಯೊಂದು ಮೊಳಕೆಯೊಡೆಯಿತು. ಅದನ್ನು ಪೂರೈಸಲು ಬೆಂಗಳೂರು ನಗರದ ಬೀದಿಗಳಲ್ಲಿನ ಜ್ಯೂಸ್‌ ಅಂಗಡಿಗಳಿಗೆ ಅಲೆದಲೆದು, ಎಂಟು ಮೂಟೆಯಷ್ಟು ವಾಟೆಗಳನ್ನು ಸಂಗ್ರಹಿಸಿದೆ. ನಾಲ್ಕಾರು ಬಾರಿ ಕಾರಿನ ಟ್ರಿಪ್‌ನಲ್ಲಿ ಅವುಗಳನ್ನು ಬೆಟ್ಟದ ತಪ್ಪಲಿಗೆ ತಲುಪಿಸಿದೆ. ಸ್ನೇಹಿತರ ಶ್ರಮಸಹಕಾರದಿಂದ ಗುದ್ದಲಿಯಿಂದ ನೆಲವಗೆದು ಅವುಗಳನ್ನು ಬೆಟ್ಟದ ಬಯಲಲ್ಲಿ ಹೂಣಿದೆ.

ಈ ಮೂಲಕ ಮೃಗ–ಖಗಗಳಿಗೆ ವರ್ಷದ ಊಟ ಕೊಡುವುದು ನನ್ನ ಇರಾದೆಯಾಗಿತ್ತು. ಮರುದಿನ ಆ ಪ್ರದೇಶಕ್ಕೆ ಹೋದಾಗ, ಮೊಲಗಳು ವಾಟೆಗಳನ್ನು ತಿನ್ನುತಿದ್ದವು. ನಮ್ಮ ಶ್ರಮ ಮೊಲಗಳಿಗೆ ಒಪ್ಪತ್ತಿನ ಹರ್ಷದ ಊಟವಾಗಿತ್ತು’ ಎಂದು ಪ್ರಸಂಗವೊಂದನ್ನು ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT