ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಿಸೈಡ್‌ಗೆ ಬಂದ ‘ಯುದ್ಧ ಟ್ಯಾಂಕ್‌’

ಮತ್ತೆ ₹ 2.30 ಕೋಟಿ ಅನುದಾನ ಬಿಡುಗಡೆ, ಕಾಮಗಾರಿಗೆ ಮರು ಚಾಲನೆ
Last Updated 15 ಜನವರಿ 2018, 11:25 IST
ಅಕ್ಷರ ಗಾತ್ರ

ಮಡಿಕೇರಿ: ವೀರಸೇನಾನಿ ಜನರಲ್‌ ಕೆ.ಎಸ್‌.ತಿಮ್ಮಯ್ಯ ಅವರ ನಗರದಲ್ಲಿರುವ ‘ಸನ್ನಿಸೈಡ್‌ ನಿವಾಸ’ವನ್ನು ಸ್ಮಾರಕ ಭವನವಾಗಿ ಪರಿವರ್ತಿಸುವ ಕಾಮಗಾರಿಗೆ ಮರು ಚಾಲನೆ ಸಿಕ್ಕಿದೆ. ಅನುದಾನದ ಕೊರತೆಯಿಂದ ಕೆಲ ಕಾಲ ಸ್ಥಗಿತಗೊಂಡಿತ್ತು. ಕಳೆದ ವಾರ ಮತ್ತೆ ₹ 2.30 ಕೋಟಿ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರ್ಕಾರವು ಬಿಡುಗಡೆ ಮಾಡಿದೆ.

ಬಹುದಿನಗಳ ಬೇಡಿಕೆಯಾದ ಯುದ್ಧ ಟ್ಯಾಂಕ್‌ ಸನ್ನಿಸೈಡ್‌ಗೆ ಸಹ ಈಗ ಬಂದಿರುವುದು.

ಅದೂ ಸಹ ಶುಕ್ರವಾರ ನಿರ್ಮಾಣ ಹಂತದ ಸ್ಮಾರಕ ಭವನ ಸೇರಿದ್ದು, ಕೆಲವೇ ತಿಂಗಳಲ್ಲಿ ಸ್ಮಾರಕ ಭವನ ಕಾಮಗಾರಿ ಪೂರ್ಣಗೊಳ್ಳುವ ಆಶಾಭಾವನೆ ಮೂಡಿದೆ.

ಜನರಲ್‌ ತಿಮ್ಮಯ್ಯ ವಾಸವಿದ್ದ ನಿವಾಸವನ್ನು ಸಂಗ್ರಹಾಲಯವಾಗಿ ಪರಿವರ್ತಿಸಲು ಸರ್ಕಾರ ಅಸ್ತು ಎಂದಿತ್ತು. ಆದರೆ, ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವು ಬಾರಿ ಮನವಿ ಸಲ್ಲಿಸಿದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಇದೀಗ ಅನುದಾನ ಬಿಡುಗಡೆ ಮಾಡಿದೆ.

ಸನ್ನಿಸೈಡ್‌ನಲ್ಲಿಡಲು ಸೇನಾ ಟ್ಯಾಂಕ್‌ ನೀಡಬೇಕು ಎಂಬುದು ಜಿಲ್ಲೆಯ ನಿವೃತ್ತ ಸೇನಾಧಿಕಾರಿಗಳ ಬೇಡಿಕೆಯಾಗಿತ್ತು. ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಿದ್ದ ಫೀಲ್ಡ್ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಸಮಾರಂಭಕ್ಕೆ ಬಂದಿದ್ದ ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರಲ್ಲಿ ಯುದ್ಧ ಟ್ಯಾಂಕ್‌ ನೀಡುವಂತೆ ಕೋರಲಾಗಿತ್ತು. ಅದಕ್ಕೆ ರಾವತ್‌ ಸಕಾರಾತ್ಮವಾಗಿ ಸ್ಪಂದಿಸಿದ್ದರು. ಅದರ ಫಲವಾಗಿ ಟ್ಯಾಂಕ್‌ ಮಡಿಕೇರಿಗೆ ಬಂದಿದೆ.

ಮಹಾರಾಷ್ಟ್ರದ ಪುಣೆಯ ಕೀರ್ಕಿ ಸೇನಾ ಕೇಂದ್ರದಿಂದ ತರಲಾಗಿದೆ.
ಈ ಟ್ಯಾಂಕ್‌ನ ವಿಶೇಷವೆಂದರೆ 1971ರಲ್ಲಿ ಭಾರತ ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ‘ಹಿಮತ್‌’ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಟ್ಯಾಂಕ್‌ ಅನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು. ಇಲ್ಲಿ ಸ್ಮಾರಕ ಪೂರ್ಣಗೊಂಡ ಬಳಿಕ ಟ್ಯಾಂಕ್‌ನ ದರ್ಶನ ಭಾಗ್ಯ ಸಿಗಲಿದೆ.

ಮನೆಯ ಮೂಲಮಾದರಿಯನ್ನೇ ಉಳಿಸಿಕೊಂಡು ನಿರ್ಮಿತಿ ಕೇಂದ್ರ ಕಾಮಗಾರಿ ಕೈಗೊಂಡಿದೆ.

ಸೇನೆಯ ಯುದ್ಧ ಟ್ಯಾಂಕ್‌, ಯುದ್ಧ ವಿಮಾನದ ಮಾದರಿ ಹಾಗೂ ತಿಮ್ಮಯ್ಯ ಸೇನೆಯಲ್ಲಿದ್ದಾಗ ಬಳಸುತ್ತಿದ್ದ ವಸ್ತುಗಳನ್ನು ಸ್ಮಾರಕದಲ್ಲಿ ಇಡಲು ಯೋಜನೆ ರೂಪಿಸಲಾಗಿದೆ.

ಅನುದಾನ ಬಿಡುಗಡೆ: ಸರ್ಕಾರವು ಸ್ಮಾರಕ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ ಬಳಿಕ ಜಿಲ್ಲಾಡಳಿತ ₹ 5.5 ಕೋಟಿ ಅನುದಾನ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಿತ್ತು.

2013–14ನೇ ಸಾಲಿನ ಬಜೆಟ್‌ನಲ್ಲಿ ಮೊದಲ ಕಂತಾಗಿ ₹ 45 ಲಕ್ಷ ಬಿಡುಗಡೆ ಮಾಡಲಾಗಿತ್ತು. ಬಳಿಕ ‘ಇಷ್ಟೊಂದು ಅನುದಾನದ ಅಗತ್ಯವಿಲ್ಲ’ ಎಂದು ಜಿಲ್ಲಾಡಳಿತ ₹ 3.70 ಕೋಟಿಯ ಪರಿಷ್ಕೃತ ಪ್ರಸ್ತಾವ ಸಲ್ಲಿಸಿತ್ತು.

‘ಈವರೆಗೆ ₹1.45 ಕೋಟಿ ಬಿಡುಗಡೆಯಾಗಿತ್ತು. ಈಗ ₹ 2.30 ಕೋಟಿ ಅನುದಾನ ಬಿಡುಗಡೆ ಆಗಿರುವುದರಿಂದ ಕಾಮಗಾರಿ ಬಹುಬೇಗ ಪೂರ್ಣಗೊಳಿಸುತ್ತೇವೆ’ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸುತ್ತಾರೆ.

ವಿಕಾಸ್‌ ಬಿ. ಪೂಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT