ಭಕ್ತರಿಂದ ಪುಣ್ಯಸ್ನಾನ, ಸಾಮೂಹಿಕ ಭೋಜನ

7

ಭಕ್ತರಿಂದ ಪುಣ್ಯಸ್ನಾನ, ಸಾಮೂಹಿಕ ಭೋಜನ

Published:
Updated:
ಭಕ್ತರಿಂದ ಪುಣ್ಯಸ್ನಾನ, ಸಾಮೂಹಿಕ ಭೋಜನ

ಮುನಿರಾಬಾದ್‌: ಮಕರ ಸಂಕ್ರಾಂತಿ ಅಂಗವಾಗಿ ಇಲ್ಲಿನ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದ ಹತ್ತಿರ ಹರಿಯುವ ತುಂಗಭದ್ರಾ ನದಿಯಲ್ಲಿ ಸಾವಿರಾರು ಭಕ್ತರು ಭಾನುವಾರ ಪುಣ್ಯಸ್ನಾನ ಕೈಗೊಂಡು ನಂತರ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ದರ್ಶನದ ನಂತರ ಕೆಲವರು ತಾವು ಮನೆಯಿಂದ ತಂದ ಬುತ್ತಿ ಬಿಚ್ಚಿ ಊಟ ಸವಿದರೆ, ಇನ್ನೂ ಹಲವರು ದೇವಸ್ಥಾನದಲ್ಲಿ ನಡೆದ ಉಚಿತ ಅನ್ನಸಂತರ್ಪಣೆಯಲ್ಲಿ ಊಟಮಾಡಿದರು.

ಸಮೀಪದ ಶಿವಪುರ ತುಂಗಭದ್ರಾ ನದಿಯಲ್ಲಿ ಕೂಡ ಪುಣ್ಯಸ್ನಾನ ಮಾಡಿದ ನೂರಾರು ಭಕ್ತರು ಶ್ರೀಮಾರ್ಕಂಡೇಶ್ವರ ದೇವರ ದರ್ಶನ ಪಡೆದು, ಪಕ್ಕದ ತೋಟದಲ್ಲಿ ಬುತ್ತಿ ಊಟಮಾಡಿದರು.

ಬಂಡಿಹರ್ಲಾಪುರ: ಸಮೀಪದ ಬಂಡಿ ಹರ್ಲಾಪುರ ನಗರಗಡ್ಡಿ ಮಠದ ಬಳಿಯ ತುಂಗಭದ್ರಾ ನದಿಯಲ್ಲಿ ಕೂಡ ಮಕರ ಸಂಗ್ರಮಣದ ಅಂಗವಾಗಿ ನೂರಾರು ಜನರು ಪುಣ್ಯಸ್ನಾನ ಕೈಗೊಂಡು, ಪೂರ್ವ ಶ್ರೀಗಳ ಗದ್ದುಗೆ ದರ್ಶನ ಪಡೆದು, ಶ್ರೀಶಾಂತಲಿಂಗೇಶ್ವರ ಸ್ವಾಮೀಜಿಯ ಆಶೀರ್ವಾದ ಪಡೆದರು.

ಮಠದ ವತಿಯಿಂದ ನಡೆದ ಉಚಿತ ಅನ್ನದಾಸೋಹದಲ್ಲಿ ಗೋಧಿಹುಗ್ಗಿ, ರೊಟ್ಟಿ ಕಾಳಿನಪಲ್ಯ, ಅನ್ನ ಸಾಂಬಾರ ವಿಶೇಷ ಊಟವನ್ನು ಸವಿದರು. ಹರ್ಲಾಪುರ, ಶಿವಪುರ, ಹುಲಿಗಿ, ಹಿಟ್ನಾಳ, ಗಂಗಾವತಿ, ಅಗಳಕೇರಾ, ಕೂಕನಪಳ್ಳಿ ಸುತ್ತಲಿನ ಅನೇಕ ಗ್ರಾಮಗಳಿಂದ ನೂರಾರು ಭಕ್ತರು ಬಂದಿದ್ದರು. ಬೆಳಿಗ್ಗೆ 11ಗಂಟೆಯಿಂದ 4ರವರೆಗೆ ಅನ್ನದಾಸೋಹ ನಡೆದಿದ್ದು ವಿಶೇಷವಾಗಿತ್ತು.

ಸುಗ್ಗಿ ಹಬ್ಬ ಸಂಕ್ರಮಣದ ಅಂಗವಾಗಿ ರಾಜ್ಯ, ಹೊರರಾಜ್ಯದ ಹಲವು ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಜುಳು ಜುಳು ಹರಿಯುವ ನದಿಯಲ್ಲಿ ಎಳ್ಳು,ಎಣ್ಣೆ, ಅರಿಷಿಣ ಪುಡಿ ಮಿಶ್ರಣವನ್ನು ಮೈಗೆ ಹಚ್ಚಿಕೊಂಡು ವೃದ್ಧರು, ಮಕ್ಕಳು, ಮಹಿಳೆಯರು ಸೇರಿ ಅನೇಕರು ಸ್ನಾನ ಮಾಡಿದರು.

ಸೂರ್ಯ ತನ್ನ ಪಥ ಬದಲಿಸುವ ವಿದ್ಯಮಾನದ ಈ ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಮಿಂದೆದ್ದರೆ ಪಾಪ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಹಲವರ ನಂಬಿಕೆ. ಕುಟುಂಬ ಸಮೇತ ಬರುವ ಭಕ್ತಾದಿಗಳು ತಮ್ಮ ಸ್ನಾನದ ಜೊತೆ ವಾಹನಗಳನ್ನು ತೊಳೆದು ಪೂಜಿಸಿದ್ದು ಕಂಡುಬಂತು. ನಂತರ ನದಿ ದಡದಲ್ಲಿ ತಾವು ತಂದ ರೊಟ್ಟಿ, ಕಾಳಿನಪಲ್ಯ, ಕರ್ಜಿಕಾಯಿ, ಮೊಸರನ್ನ, ಪುಡಿಚಟ್ನಿ ಸಹಿತ ಊಟವನ್ನು ಸವಿದರು.

ಹಿನ್ನೆಲೆ: ತಮ್ಮ ಹೊಸ ಬೆಳೆಯಾದ ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತಂದು ಅವುಗಳನ್ನು ದಾನ ಮಾಡಿದ ನಂತರ ಸೇವಿಸುವ ಪದ್ಧತಿಯು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.

‘ಎಳ್ಳು’. ಮನೆಯಲ್ಲಿ ಎಳ್ಳನ್ನು ಬೆಲ್ಲದೊಂದಿಗೆ ಮಿಶ್ರಣ ಮಾಡಿ ಸುತ್ತ ಮುತ್ತಲಿನ ಮನೆಗೆ ಹಂಚಿ ಶುಭಾಶಯಗಳನ್ನು ಕೋರುತ್ತಾರೆ. ಈ ಸಂಪ್ರದಾಯವನ್ನು ‘ಎಳ್ಳು ಬೀರುವುದು’ ಎಂದು ಕರೆಯುತ್ತಾರೆ.

ಸುಗ್ಗಿಯ ಸಂಭ್ರಮ: ಗ್ರಾಮೀಣರು ತಮ್ಮ ಹೊಲದಲ್ಲಿ ಬೆಳೆದ ಫಸಲನ್ನು ಮನೆಗೆ ತರುವ ರೀತಿಯಲ್ಲಿ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ, ಎಳ್ಳು ತುಂಬಿದ ಬಿಂದಿಗೆ, ಕಬ್ಬು, ಬಾಳೆಯ ಚಿತ್ರವನ್ನು ಕೂಡ ರಂಗೋಲಿಯಲ್ಲಿ ಬಿಡಿಸಲಾಗಿರುತ್ತದೆ.

ಹೊರರಾಜ್ಯಗಳಲ್ಲಿ: ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಮಕರ ಸಂಕ್ರಾಂತಿಯು ‘ಪೊಂಗಲ್’ ಹಬ್ಬವೆಂದು ಮೂರು ದಿನಗಳ ಕಾಲ ಆಚರಿಸಲ್ಪಡುತ್ತದೆ. ತಮ್ಮ ಬೆಳೆಯ ಮೊದಲ ಕೊಯ್ಲನ್ನು ಮನೆಗೆ ತಂದು ಹೊಸ ಅಕ್ಕಿಯನ್ನು ಹಾಲಿನೊಂದಿಗೆ ಬೇಯಿಸಿ ಒಂದು ಬಗೆಯ ಸಿಹಿ ತಿಂಡಿಯಾದ ‘ಚಕ್ಕರಪೊಂಗಲ್’ ತಯಾರಿಸುತ್ತಾರೆ. ಈ ಖಾದ್ಯವನ್ನು ಮೊದಲು ಸೂರ್ಯನಿಗೆ ಅರ್ಪಿಸಿ, ನಂತರ ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry