ಹುಲಿಕೆರೆ ಉದ್ಯಾನ ಈಗ ಅನಾಥ

7
ನಗರಸಭೆ ನಿರ್ಲಕ್ಷ್ಯಕ್ಕೆ ₹ 1.50 ಕೋಟಿ ವ್ಯರ್ಥ, ಉದ್ಯಾನ ಅಭಿವೃದ್ಧಿಗೆ ಸ್ಥಳೀಯರ ಆಗ್ರಹ

ಹುಲಿಕೆರೆ ಉದ್ಯಾನ ಈಗ ಅನಾಥ

Published:
Updated:
ಹುಲಿಕೆರೆ ಉದ್ಯಾನ ಈಗ ಅನಾಥ

ಕೊಪ್ಪಳ: ಕಳೆದ ಎರಡು ವರ್ಷಗಳ ಹಿಂದೆ ನಗರಸಭೆಯಿಂದ ಅಭಿವೃದ್ಧಿಪ ಡಿಸಲಾಗಿದ್ದ ನಗರದ ಕೋಟೆ ಹಿಂಭಾಗದಲ್ಲಿರುವ ಹುಲಿಕೆರೆ ಉದ್ಯಾನ ಹಾಳು ಕೊಂಪೆಯಂತಾಗಿದೆ. ನಿರ್ವಹಣೆಯ ಕೊರತೆ, ನಿರ್ಲಕ್ಷ್ಯ ದಿಂದಾಗಿ ಕೋಟ್ಯಂತರ ರೂಪಾಯಿ ವ್ಯರ್ಥವಾಗಿದೆ. 

2012-13ರಲ್ಲಿ ಹುಲಿಕೆರೆ ಅಭಿವೃದ್ಧಿಗೆ ನಗರಸಭೆಯಿಂದ ₹ 3 ಕೋಟಿ ಅನುದಾನ ಮೀಸಲಿಡಲಾಗಿತ್ತು. ಅದರಲ್ಲಿ ನಗರಸಭೆ ₹ 1.41 ಕೋಟಿ ಮೊತ್ತಕ್ಕೆ ನಿರ್ಮಿತಿ ಕೇಂದ್ರಕ್ಕೆ ಹುಲಿಕೆರೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ನಗರದ ಪ್ರಶಾಂತ ನಗರ, ಹುಡ್ಕೋ ಕಾಲೋನಿ ಹಾಗೂ ಸರ್ವೇ ನಂ.31ರಲ್ಲಿ ಬರುವ ಬೇಂದ್ರೆ ನಗರದ ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಗುತ್ತಿಗೆ ನೀಡಿತ್ತು. ನಿರ್ಮಿತಿ ಕೇಂದ್ರ ಒಂದೂವರೆ ವರ್ಷ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರಿಸಿತ್ತು.

ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‍) ಉಲ್ಲೇಖಿಸಿದಂತೆ ಕಾಮ ಗಾರಿ ಕೈಗೊಳ್ಳಲಾದ ಹುಲಿಕೆರೆ ಪ್ರದೇಶ ದಲ್ಲಿ ನಿರ್ಮಿತಿ ಕೇಂದ್ರದಿಂದ ಪುರುಷ ಮತ್ತು ಮಹಿಳೆಯರ 2 ಶೌಚಾಲಯ, ಕ್ಯಾಂಟೀನ್‍, ಉಪಕರಣಗಳ ಕೊಠಡಿ, ಪಾದಚಾರಿ ದಾರಿ ಹಾಗೂ ಅದಕ್ಕೆ ವಿದ್ಯುತ್‍ದೀಪಗಳ ವ್ಯವಸ್ಥೆ, ಉದ್ಯಾನಕ್ಕೆ ಫೆನ್ಸಿಂಗ್‍ ವ್ಯವಸ್ಥೆ, ಹೈಮಾಸ್ಟ್ ವಿದ್ಯುತ್‍ದೀಪ ಹಾಗೂ ನಿರ್ದಿಷ್ಟ ಸ್ಥಳದಲ್ಲಿ ಮಕ್ಕಳ ಆಟೋಪಕರಣಗಳು ಸೇರಿದಂತೆ ಒಟ್ಟು 17 ಕೆಲಸಗಳನ್ನು ಕೈಗೊಳ್ಳಲಾಗಿತ್ತು. ಅಂದಿನ ಜಿಲ್ಲಾಧಿಕಾರಿ, ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಗುಣಮಟ್ಟ ಪರಿಶೀಲಿಸಿದ್ದರು. ಆ ಬಳಿಕ ಕಾಮಗಾರಿಯನ್ನು ನಗರಸಭೆಗೆ ಹಸ್ತಾಂತರಿಸಲಾಗಿತ್ತು.

ಉಳಿದ ₹ 1.50 ಕೋಟಿ ಮೊತ್ತದಲ್ಲಿ ಹುಲಿಕೆರೆ ಈದ್ಗಾ ಮೈದಾನದ ಪಕ್ಕದಲ್ಲಿ ಜಮೀನು ಖರೀದಿಸಿ, ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಜಮೀನು ಖರೀದಿ ವಿಚಾರದಲ್ಲಿ ಸಮಸ್ಯೆ ಉಂಟಾದ ಕಾರಣ ಅದನ್ನು ಕೈಬಿಡಲಾಯಿತು. ಹಸ್ತಾಂತರದ ಬಳಿಕ ನಗರಸಭೆ ಈ ಪ್ರದೇಶದ ರಕ್ಷಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಇಂದು ತನ್ನ ಸೌಂದರ್ಯ ಕಳೆದುಕೊಂಡಿದೆ. ದಿನವಿಡೀ ಕುಡುಕರು, ಮಟ್ಕಾ ಆಟಗಾರರು, ದನಗಾಹಿಗಳು, ಪುಂಡ ಪೋಕರಿಗಳಿಗೆ ಅಡ್ಡೆಯಾಗಿ ರೂಪಗೊಂಡಿದೆ. ನಿರ್ವಹಣೆ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೆ ಸಾರ್ವಜನಿಕರು ಇತ್ತ ಸುಳಿಯಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಥ್‌ವೇನಲ್ಲಿ ಹಾಕಲಾಗಿದ್ದ ಇಂಟರ್‍ ಲಾಕ್‍ಗಳನ್ನು ಕಿತ್ತೆಸೆಯಲಾಗಿದೆ. ಅಲಂಕಾರಿಕ ವಿದ್ಯುತ್‍ ದೀಪ ಹಾಗೂ ಹೈಮಾಸ್ಟ್ ದೀಪಗಳನ್ನು ಒಡೆಯಲಾಗಿದೆ. ಕೂಡಲು ಕಲ್ಪಿಸಲಾಗಿದ್ದ ಬೆಂಚ್‍ಗಳನ್ನು ಮುರಿದು ಎಸೆಯಲಾಗಿದೆ. ತಂತಿಬೇಲಿ ಕಿತ್ತೆಸೆಯಲಾಗಿದೆ. ಕುಟೀರದ ಮಾದರಿಯ ವೀಕ್ಷಣಾ ಸ್ಥಳಗಳನ್ನು ಬೆಂಕಿ ಹಚ್ಚಿ ವಿಕಾರಗೊಳಿಸಲಾಗಿದೆ.

ತಗಡುಗಳನ್ನು ಕಿತ್ತೆಸೆದು ವಿದ್ಯುತ್‍ ಲೈನ್‍ಗಳನ್ನು ತುಂಡರಿಸಲಾಗಿದೆ. ಕ್ಯಾಂಟೀನ್‍ ಕಟ್ಟಡದ ಬೀಗ ಮುರಿದು ಪೀಠೋಪಕರಣಗಳನ್ನು ದೋಚಲಾಗಿದೆ. ಮಕ್ಕಳ ಆಟದ ಸಾಮಗ್ರಿಗಳನ್ನು ಮುರಿದುಹಾಕಲಾಗಿದೆ. ಪ್ರದೇಶದ ಎಲ್ಲೆಂದರಲ್ಲಿ ಗುಟ್ಕಾ, ಮಟ್ಕಾ ಚೀಟಿಗಳು,ಮದ್ಯದ ಬಾಟಲಿಗಳು, ಇಸ್ಪೀಟು ಎಲೆಗಳನ್ನು ಕಾಣಬಹುದು.

ಹುಲಿಕೆರೆ ಉದ್ಯಾನದ ಕುರಿತು ಹಲವು ಬಾರಿ ನಗರಸಭೆಯಲ್ಲಿ ಚರ್ಚಿಸಲಾಗಿದೆ. ಬಾಕಿ ಉಳಿದಿರುವ ₹ 1.50 ಕೋಟಿ ಹಣದಲ್ಲಿ ತುಂಗ ಭದ್ರಾ ಜಲಾಶಯದಿಂದ ಹುಲಿಕೆರೆಗೆ ವರ್ಷಪೂರ್ತಿ ನೀರು ಹರಿಸುವ ಪೈಪ್‍ಲೈನ್‍ ಕಾಮಗಾರಿಗೆ ಕೆಲ ದಿನಗಳ ಹಿಂದೆ ಚಾಲನೆ ನೀಡಲಾಗಿದೆ. ಒಂದುವರೆ ತಿಂಗಳಲ್ಲಿ ಪೈಪ್‍ಲೈನ್‍ ಕಾಮಗಾರಿ ಮುಕ್ತಾಯವಾಗಲಿದೆ. ಬಳಿಕ ನಗರಸಭೆ ಅನುದಾನದಲ್ಲಿ ಉದ್ಯಾನ ಅಭಿವೃದ್ಧಿಪಡಿಸಿ, ಅದನ್ನು ಖಾಸಗಿ ಏಜೆನ್ಸಿಗೆ ಉಚಿತವಾಗಿ ನಿರ್ವಹಣೆಗೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ತಿಳಿಸಿದ್ದಾರೆ.

ಹುಲಿಕೆರೆಯನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸುವುದು ಹಾಗೂ ನಗರದ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಉದ್ಯಾನ ನಿರ್ಮಿಸಲಾಗಿತ್ತು. ಹಸ್ತಾಂತರದ ಬಳಿಕ ನಗರಸಭೆ ಈ ಪ್ರದೇಶಕ್ಕೆ ಸೂಕ್ತ ರಕ್ಷಣೆ ನೀಡಿ, ಸುಸ್ಥಿತಿಯಲ್ಲಿಡಬೇಕಿತ್ತು ಎಂದು ಸಾರ್ವಜನಿಕರು ಹೇಳುತ್ತಾರೆ.

***

ಹೂಳೆತ್ತುವ ನಾಟಕ?

ನಗರಸಭೆಯಿಂದ ಮಳೆಗಾಲ ಸಮೀಪ ಇರುವಾಗ ಹುಲಿಕೆರೆಯ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಒಂದು ವಾರ ಕಾಲ ಕಾಮಗಾರಿಯೇನೋ ನಡೆಯಿತು. ಆದರೆ ಬಳಿಕ ಕೆಲ ದಿನಗಳ ಅಂತರದಲ್ಲಿ ಸುರಿದ  ಮಳೆಯ ಕಾರಣಕ್ಕೆ ಕಾಮಗಾರಿಯನ್ನು ಬಂದ್‍ ಮಾಡಲಾಯಿತು. ಹೂಳೆತ್ತುವ ಕಾಮಗಾರಿಯನ್ನು ಬೇಸಿಗೆಯಲ್ಲಿ ಆರಂಭಿಸುವುದನ್ನು ಬಿಟ್ಟು ಮಳೆಗಾಲ ಮುಂದಿಟ್ಟುಕೊಂಡು ಆರಂಭಿಸಿದ್ದು ಯಾಕೆ? ಎಂಬುದು ಸಾರ್ವಜನಿಕರ ಪ್ರಶ್ನೆ

***

ಹಿಂದಿನ ಅಧ್ಯಕ್ಷರು ಮತ್ತು ಆಯುಕ್ತರು ಉದ್ಯಾನದ ನಿರ್ವಹಣೆಖಾಸಗಿ ಏಜೆನ್ಸಿಗೆ ವಹಿಸಬೇಕಿತ್ತು. ನಿರ್ಲಕ್ಷ್ಯದಿಂದ ಉದ್ಯಾನ ಹಾಳಾಗಿದೆ.

ಮಹೇಂದ್ರ ಛೋಪ್ರಾ, ಅಧ್ಯಕ್ಷ, ನಗರಸಭೆ

    ***

ಭರತ್‌ ಕಂದಕೂರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry