ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲೊಂದು ವನ ಸಾಕ್ಷರತಾ ಆಂದೋಲನ

ಬೆಂಗಾಡಾಗಿದ್ದ ಉದ್ಯಾನಗಳಲ್ಲಿ ಹಸಿರು ವಾತಾವರಣ, ನೂರಾರು ಸಸಿ ನೆಟ್ಟು ಪೋಷಣೆ
Last Updated 15 ಜನವರಿ 2018, 12:21 IST
ಅಕ್ಷರ ಗಾತ್ರ

ಮಂಡ್ಯ: ವನ ಸಂಸ್ಕೃತಿಯ ಉಳಿವಿಗಾಗಿ ಸೃಜನಾತ್ಮಕ ಕೆಲಸ ಮಾಡುತ್ತಿರುವ ‘ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ’ ನಗರದ ಹಲವು ಉದ್ಯಾನ, ರಸ್ತೆ ಬದಿಯಲ್ಲಿ ಸಸಿ ನೆಟ್ಟು ಪೋಷಿಸುತ್ತಿದೆ. ಸಂಸ್ಥೆಯ ಸದಸ್ಯರು ನೆಟ್ಟ ಸಸಿಗಳು ಇಂದು ಗಿಡವಾಗಿ ಜನರಿಗೆ ಶುದ್ಧ ಗಾಳಿ, ನೆರಳು, ತಂಪು ವಾತಾವರಣ ನೀಡುತ್ತಿವೆ.

ನಗರದ ಹೊಸಹಳ್ಳಿ ಬಡಾವಣೆಯ ಕೆಎಚ್‌ಬಿ ಕಾಲೊನಿಯಲ್ಲಿರುವ ಸುಂದರ ಉದ್ಯಾನದಲ್ಲಿ 220ಕ್ಕೂ ಹೆಚ್ಚು ಗಿಡಗಳನ್ನು ಈ ಸಂಸ್ಥೆಯ ಸದಸ್ಯರು ಮಕ್ಕಳಂತೆ ಸಾಕಿ ಸಲುಹಿದ್ದಾರೆ. ಬೆಂಗಾಡಿನಂತಿದ್ದ ನಗರಸಭೆಯ ಜಾಗವನ್ನು ಸ್ವಚ್ಛಗೊಳಿಸಿ, ಮುಳ್ಳು ಗಿಡಗಳನ್ನು ಕತ್ತರಿಸಿ ಸಸಿ ನೆಡಲು ಮುಂದಾದ ಈ ತಂಡದ ಸದಸ್ಯರಿಗೆ ಎದುರಾದ ಸವಾಲುಗಳು ಅಷ್ಟಿಷ್ಟಲ್ಲ. ಹಸಿರು ಸಂಸ್ಕೃತಿ, ವನ ಸಾಕ್ಷರತಾ ಆಂದೋಲನದ ಬಗ್ಗೆ ಅಪಾರ ತಿಳಿವಳಿಕೆ ಹೊಂದಿದ್ದ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ಪಡೆದು ಮುಳ್ಳಿನ ತೋಟವಾಗಿದ್ದ ನಿವೇಶನದಲ್ಲಿ ಸಸಿ ನೆಟ್ಟು ಪೋಷಿಸಿದರು.

ನಾಲ್ಕು ವರ್ಷಗಳ ಹಿಂದೆ ನೆಟ್ಟಿದ್ದ ಸಸಿಗಳು ಇಂದು ಸ್ಥಳೀಯರಿಗೆ ಪುಟ್ಟ ಅರಣ್ಯದ ಅನುಭವ ಕೊಟ್ಟಿವೆ. ಉದ್ಯಾನ ಈಗ ಬೆಂಗಾಡಿನಂತಿಲ್ಲ, ಹೆಬ್ಬೇವು, ಮಹಾಘನಿ, ನೇರಳೆ, ಹೊಂಗೆ, ಅರಳಿ ಸೇರಿ ವಿವಿಧ ಹೂವಿನ ಗಿಡಗಳಿಂದ ಕಂಗೊಳಿಸುತ್ತಿದ್ದು ನಗರದ ಪ್ರಮುಖ ವಿಹಾರತಾಣವಾಗಿದೆ. ಯೋಗೀಶ್‌ ನೇತೃತ್ವದ ತಂಡ ಗಿಡಗಳನ್ನು ಬೆಳಸಿದ ನಂತರ ನಗರಸಭೆ ಉದ್ಯಾವನ್ನು ಅಭಿವೃದ್ಧಿಗೊಸಿದೆ. ಈಚೆಗೆ ಆ ಉದ್ಯಾನಕ್ಕೆ ‘ಅಂಬರೀಷ್‌ ಉದ್ಯಾನ’ ಎಂದೂ ನಾಮಕರಣ ಮಾಡಿದೆ.

‘ನಾವು ಸಸಿ ನೆಟ್ಟಾಗ ಅವುಗಳನ್ನು ಉಳಿಸುವುದು ಕಷ್ಟದ ಕೆಲಸವಾಗಿತ್ತು. ನೀರಿನ ಸಂಪರ್ಕ ಇರಲಿಲ್ಲ. ಅಕ್ಕಪಕ್ಕದ ಮನೆಯವರನ್ನು ಬೇಡಿ ನೀರು ಹಾಕಿದೆವು, ಒತ್ತುವ ಕೊಳವೆ ಬಾವಿಯಿಂದ ನೀರು ತಂದು ಸಸಿಗಳನ್ನು ಉಳಿಸಿದೆವು. ನಾವು ಪ್ರಯತ್ನವನ್ನು ಕಂಡು ನಕ್ಕವರಿಗೆ, ಸಲ್ಲದ ಪ್ರಶ್ನೆ ಕೇಳಿದವರಿಗೆ ಲೆಕ್ಕವಿಲ್ಲ. ಆದರೆ ವನ ಸಂಸ್ಕೃತಿ ಬೆಳೆಸುವ ಉದ್ದೇಶವನ್ನು ನಾವು ಬಿಟ್ಟು ಕೊಡಲಿಲ್ಲ. ಇಂದು ಉದ್ಯಾನದಲ್ಲಿ ನಮ್ಮ ಹೆಸರು ಇಲ್ಲದಿದ್ದರೂ ನಾವು ಬೆಳೆಸಿದ ಗಿಡಗಳು ಜೀವಂತವಾಗಿದೆ. ನಮ್ಮ ಉದ್ದೇಶ ಕೂಡ ಅದೇ ಆಗಿದೆ’ ಎಂದು ಮಂಗಲ ಯೋಗೀಶ್‌ ಹೇಳಿದರು.

ಉದ್ಯಾನಕ್ಕೆ ಹಸಿರು ಜೀವ: ಶ್ರಮಿಕರೇ ವಾಸಿಸುವ 16ನೇ ವಾರ್ಡ್‌ನಲ್ಲಿರುವ ಉದ್ಯಾನಕ್ಕೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹರಿಸು ಜೀವ ತುಂಬಿದೆ. ಕ್ರಿಕೆಟ್‌ ಗ್ರೌಂಡ್‌ ಆಗಿದ್ದ ಉದ್ಯಾನದ ಜಾಗದಲ್ಲಿ ಸಂಸ್ಥೆಯ ಸದಸ್ಯರು 160 ಸಸಿ ನೆಟ್ಟು ಉಳಿಸಿದ್ದಾರೆ. ಇದು ಆಟದ ಮೈದಾನವಾಗಿಯೇ ಇರಲಿ ಎಂದು ಕೆಲವರು ಸಸಿ ನೆಡಲು ವಿರೋಧಿಸಿದರು, ಸಸಿಗಳನ್ನು ಕಿತ್ತು ಹಾಕಿದರು. ಎಲ್ಲ ಸವಾಲುಗಳನ್ನು ಎದುರಿಸಿದ ಯೋಗೀಶ್‌ ತಂಡ ಸಸಿಗಳನ್ನು ಪೋಷಣೆ ಮಾಡಿದರು. ಈಗ ನಗರಸಭೆ ಅದನ್ನು ಅಭಿವೃದ್ಧಿ ಪಡಿಸಿದ್ದು ಉದ್ಯಾನದೊಳಗೆ ನೀರಿನ ಟ್ಯಾಂಕ್‌ ನಿರ್ಮಿಸಿದೆ.

ಕುವೆಂಪು ನಗರ 1ನೇ ಕ್ರಾಸ್‌ನಲ್ಲಿರುವ ಉದ್ಯಾನದಲ್ಲೂ ಸಂಸ್ಥೆಯ ಸದಸ್ಯರು ಬಿಲ್ಪಪತ್ರೆ, ಪಾರಿಜಾತ ಸೇರಿ ಔಷಧೀಯ ಗುಣವುಳ್ಳ ಅಪರೂಪದ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ನಂತರ ಅದನ್ನೂ ನಗರಸಭೆ ಅಭಿವೃದ್ಧಿಗೊಳಿಸಿದ್ದು ವಿಹಾರಿಗಳಿಗಾಗಿ ವಾಕಿಂಗ್‌ ಪಾತ್‌ ನಿರ್ಮಿಸಿದೆ. ಕಲ್ಲುಬೆಂಚುಗಳನ್ನು ಅಳವಡಿಸಿರುವ ಕಾರಣ ಅಲ್ಲಿ ನಿತ್ಯ ನೂರಾರು ಜನರು ವಿಹಾರ ಮಾಡುತ್ತಾರೆ. 2012ರಿಂದ ಪರಿಸರ ಕಾಳಜಿಯ ಕೆಲಸ ಮಾಡುತ್ತಿರುವ ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಲವು ಶಾಲೆಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿದೆ. ‘ಪರಿಸರ ಮಿತ್ರ’ ಶಾಲೆಗಳಿಗೆ ಮಾರ್ಗದರ್ಶನ ಮಾಡುತ್ತಿದೆ. ಪಿಇಎಸ್‌ ಕಾಲೇಜು ರಸ್ತೆ, ಬಂದೀಗೌಡ ಬಡಾವಣೆ, ನಾಲ್ವಡಿ ಕೃಷ್ಣರಾಜ ಬಡಾವಣೆ, ಆಲಹಳ್ಳಿ ಬಡಾವಣೆಯ ಉದ್ಯಾನ, ರಸ್ತೆ ಬದಿಯಲ್ಲಿ ಸಸಿ ನೆಟ್ಟು ಪೋಷಣೆ ಮಾಡುತ್ತಿದೆ.

‘ಯೋಗೀಶ್‌ ಅವರು ಪರಿಸರದ ಮೇಲೆ ಅಪಾರ ಕಾಳಜಿಯುಳ್ಳವರು. ಕಳೆದೆರಡು ವರ್ಷ ಭೀಕರ ಬರ ಇತ್ತು. ಕುಡಿಯುವ ನೀರಿಗೂ ಗತಿ ಇರಲಿಲ್ಲ. ಅಂತಹ ಸಂದರ್ಭದಲ್ಲೂ ದೂರದಿಂದ ನೀರು ತಂದು ಹಾಕಿ ಸಸಿಗಳನ್ನು ಪೋಷಣೆ ಮಾಡಿದ್ದಾರೆ’ ಎಂದು ಕುವೆಂಪು ನಗರದ ನಿವಾಸಿ, ತೋಟಗಾರಿಕೆ ಇಲಾಖೆಯ ಸಹಾಯ ನಿರ್ದೇಶಕ ಶಾಂತರಾಜು ಹೇಳಿದರು.
***
ಸಸಿಗಳ ಮಡಿಲಲ್ಲಿ ದೀಪೋತ್ಸವ

ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸದಸ್ಯರು ತಾವು ಸಸಿ ನೆಟ್ಟು ಬೆಳೆಸಿದ ಉದ್ಯಾನಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಸದಸ್ಯರ ಜನ್ಮದಿನ ಇದ್ದರೆ ಗಿಡಗಳ ನಡುವೆ ಜನ್ಮದಿನ ಆಚರಿಸಿ, ಅದೇ ನೆನಪಿನಲ್ಲಿ ಮತ್ತಷ್ಟು ಸಸಿ ನೆಡುತ್ತಾರೆ. ದೀಪಾವಳಿ ಬಂದಾಗ ಉದ್ಯಾನದಲ್ಲೇ ‘ಪಟ್ಟಾಕಿ ಬಿಟ್ಟಾಕಿ’ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ಕಾರ್ತೀಕ ಮಾಸದಲ್ಲಿ ‘ಸಸಿಗಳ ಮಡಿಲಲ್ಲಿ ದೀಪೋತ್ಸವ’ ಆಚರಿಸುತ್ತಾರೆ. ಪರಿಸರ ಅರಿವು ಕಾರ್ಯಕ್ರಮ ಆಯೋಜಿಸಿ ಸ್ಥಳೀಯ ನಿವಾಸಿಗಳಿಗೆ ಬಟ್ಟೆ ಬ್ಯಾಗ್‌ ವಿತರಿಸಿ ಪರಿಸರ ಜಾಗೃತಿ ಮೆರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT