ವಾಹನ ನಿಲುಗಡೆಗೆ ಸಮ, ಬೆಸ ಪದ್ಧತಿ

7
ಸಂಚಾರ ನಿಯಂತ್ರಣಕ್ಕಾಗಿ ನಗರದಲ್ಲಿ ಕಟ್ಟುನಿಟ್ಟಿನ ಕ್ರಮಗಳು

ವಾಹನ ನಿಲುಗಡೆಗೆ ಸಮ, ಬೆಸ ಪದ್ಧತಿ

Published:
Updated:
ವಾಹನ ನಿಲುಗಡೆಗೆ ಸಮ, ಬೆಸ ಪದ್ಧತಿ

ರಾಯಚೂರು: ನಗರದಲ್ಲಿ ವಾಹನದಟ್ಟಣೆ, ವಾಹನ ನಿಲುಗಡೆ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು ಸಂಚಾರ ಠಾಣೆ ಪೊಲೀಸರು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.

ಮೊದಲ ಹಂತವಾಗಿ, ವಾಹನ ದಟ್ಟಣೆ ಸಮಸ್ಯೆ ಏರ್ಪಡುತ್ತಿರುವ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದಕ್ಕೆ ಹೊಸ ಕ್ರಮ ಜಾರಿಗೊಳಿಸಲಾಗಿದೆ. ಬಟ್ಟೆ ಬಜಾರ್‌ ರಸ್ತೆ, ನೇತಾಜಿ ರಸ್ತೆ, ಹರಿಹರ ರಸ್ತೆ, ಚಂದ್ರ ಮೌಳೇಶ್ವರದಿಂದ ಪೂರ್ಣಿಮಾ ಟಾಕೀಜ್ ರಸ್ತೆ, ಚಂದ್ರಮೌಳೇಶ್ವರದಿಂದ ಪಟೇಲ್‌ ವೃತ್ತ, ಜೈನ್‌ ಮಂದಿರ ರಸ್ತೆಗಳಲ್ಲಿ ಸಮ, ಬೆಸ್‌ ಪದ್ಧತಿಯಲ್ಲಿ ನಿಲುಗಡೆಗೆ ಸೂಚಿಸಲಾಗಿದೆ.

ಈಗ ಗುರುತಿಸಿದ ರಸ್ತೆಗಳಲ್ಲಿ ಸಮಸಂಖ್ಯೆಗಳು 2, 4... ದಿನಾಂಕದಂದು ಒಂದು ಕಡೆ ಹಾಗೂ ಬೆಸ ಸಂಖ್ಯೆಗಳು 1, 3... ದಿನಾಂಕದಂದು ಇನ್ನೊಂದು ಕಡೆಯಲ್ಲಿ ವಾಹನ ನಿಲುಗಡೆ ಮಾಡುವುದಕ್ಕೆ ಅವಕಾಶ ಇರುತ್ತದೆ. ಈ ನಿಯಮವನ್ನು ಕಡ್ಡಾಯವಾಗಿ ಅನುಸರಿಸಬೇಕು. ಯಾರಾದರೂ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವುದು ಮತ್ತು ನಿಯಮದ ವಿರುದ್ಧ ಭಾಗದಲ್ಲಿ ವಾಹನ ನಿಲುಗಡೆ ಮಾಡಿದ ವಾಹನ ಚಾಲಕರಿಗೆ ದಂಡ ವಿಧಿಸಲಾಗುತ್ತದೆ. ಸದ್ಯಕ್ಕೆ ಹೊಸ ಪದ್ಧತಿ ಜಾರಿಯಾದ ಬಗ್ಗೆ ಪೊಲೀಸರು ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ವಾಹನ ನಿಲುಗಡೆಗೆ ಸಮ, ಬೆಸ ಪದ್ಧತಿ ಜಾರಿ ಮಾಡುತ್ತಿರುವ ರಸ್ತೆಗಳಲ್ಲಿ ಒಟ್ಟು 60 ಸೂಚನಾ ಫಲಕಗಳನ್ನು ಸಂಚಾರ ಪೊಲೀಸರು ಈಗಾಗಲೇ ಅಳವಡಿಸಿದ್ದಾರೆ. ಒಂದು ಕಡೆ ಸಮಸಂಖ್ಯೆಗಳು, ಇನ್ನೊಂದು ಕಡೆ ಬೆಸ ಸಂಖ್ಯೆಗಳು ಇರುವ ಫಲಕಗಳು ಮಾರುಕಟ್ಟೆ ರಸ್ತೆಗಳಲ್ಲಿ ಜನರ ಗಮನ ಸೆಳೆಯುತ್ತಿವೆ. ನಿಲುಗಡೆ ನಿಯಮಗಳನ್ನು ಅನುಸರಿಸುವುದಕ್ಕೆ ಪೊಲೀಸರು ಬೈಕ್‌ ಸವಾರರಿಗೆ ಸೂಕ್ತ ತಿಳಿವಳಿಕೆ ನೀಡಿ, ಅನುಸರಿಸುವಂತೆ ಹೇಳುತ್ತಿದ್ದಾರೆ.

‘ಸಂಚಾರ ನಿಯಮಗಳನ್ನು ಪಾಲಿಸುವಂತೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ವಾಹನ ನಿಲುಗಡೆ ಮಾಡುವುದು, ಹೆಲ್ಮೆಟ್‌ ಧರಿಸಬೇಕು ಎನ್ನುವ ಬಗ್ಗೆ ಕರಪತ್ರಗಳನ್ನು ಹಂಚುತ್ತಿದ್ದೇವೆ. ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಮೂಹಕ್ಕೆ ತಿಳಿವಳಿಕೆ ನೀಡುವ ಜೊತೆಗೆ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳೊಂದಿಗೆ ಶನಿವಾರ ಸೈಕಲ್‌ ಜಾಥಾ ಕೂಡಾ ಮಾಡಲಾಯಿತು’ ಎಂದು ಸಂಚಾರ ಠಾಣೆಯ ಪಿಎಸ್‌ಐ ಸಿದ್ದರಾಮೇಶ್ವರ ಗಡೇದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆಗಳು ಚೆನ್ನಾಗಿರುವ ಕಡೆಗಳಲ್ಲಿ ಸಂಚಾರ ನಿಯಮ ಪಾಲಿಸುವುದಕ್ಕೆ ಒತ್ತಾಯಿಸಿದರೆ ಮಾತ್ರ ಜನರು ಕೇಳುತ್ತಾರೆ. ವಾಹನ ನಿಲುಗಡೆ ಮಾಡುವುದಕ್ಕೆ ಒಂದು ಪದ್ಧತಿ ಜಾರಿಗೊಳಿಸಿದರೆ ಎಲ್ಲರಿಗೂ ಅನುಕೂಲ. ಅಂಗಡಿಗಳ ಎದುರಲ್ಲೆ ಜನರು ಬೈಕ್‌ ನಿಲ್ಲಿಸಿ ಹೋಗಿ ಬಿಡುತ್ತಾರೆ; ವ್ಯಾಪಾರಕ್ಕೆ ಬರುವ ಗಿರಾಕಿಗಳಿಗೆ ದಾರಿ ಇರುವುದಿಲ್ಲ. ಈಗ ದಿನಬಿಟ್ಟು ದಿನಕ್ಕೆ ವಾಹನ ನಿಲ್ಲಿಸಿದರೆ ತೊಂದರೆ ಇಲ್ಲ. ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ಎನ್ನುತ್ತಾರೆ ಬಟ್ಟೆ ವ್ಯಾಪಾರಿ ಮಹೇಶ್‌.

**

ಎಚ್ಚರಿಕೆ ಅಗತ್ಯ

ಮಾರುಕಟ್ಟೆಗೆ ಬೈಕ್‌ ಹಾಗೂ ಕಾರು ತೆಗೆದುಕೊಂಡು ಹೋಗುವವರು ಇನ್ನು ಮುಂದೆ ನಿಲುಗಡೆ ಮಾಡುವ ಪೂರ್ವ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಮ ಹಾಗೂ ಬೆಸ ಸಂಖ್ಯೆಯನ್ನು ಗಮನಿಸಿಕೊಂಡು ವಾಹನ ನಿಲುಗಡೆ ಮಾಡಬೇಕು.

**

ಸಂಚಾರಿ ನಿಯಮಗಳ ಪಾಲನೆ ಮಾಡುವಂತೆ ಆರಂಭದಲ್ಲಿ ವಿವಿಧ ಬಗೆಯಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.

ಸಿದ್ದರಾಮೇಶ್ವರ ಗಡೇದ್‌, ಸಂಚಾರಿ ಠಾಣೆ ಪಿಎಸ್‌ಐ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry