ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹಿ ಯುವಕನ ಉದಾತ್ತ ಕನಸು

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಹೊಸವರ್ಷದ ಸಂದರ್ಭ ಸ್ನೇಹಿತರ ಬಳಗದ ಮಾತುಕತೆಯಲ್ಲಿ ‘ಸಮಾಜಕ್ಕೆ ಏನಾದರೂ ಮಾಡಬೇಕು’ ಎನ್ನುವ ವಿಷಯವೂ ಪ್ರಸ್ತಾಪವಾಗುವುದು ವಾಡಿಕೆ. ಹೊಸವರ್ಷದ ಬಹುತೇಕ ನಿರ್ಣಯಗಳಂತೆ ಈ ವಿಚಾರವೂ ಕ್ರಮೇಣ ಹಿನ್ನೆಲೆಗೆ ಸರಿದುಬಿಡುತ್ತದೆ. ಆದರೆ ಸಿದ್ಧಾರ್ಥ ಲಡ್ಸಾರಿಯಾ ಇಂಥವರ ಪಟ್ಟಿಗೆ ಸೇರಲಿಲ್ಲ.

ವಿದೇಶದಲ್ಲಿ ಎಂಬಿಎ ಮುಗಿಸಿದ ಸಿದ್ಧಾರ್ಥರವರಿಗೆ ಕೈತುಂಬ ಸಂಬಳ ಕೊಡಲು ಅನೇಕ ಪ್ರತಿಷ್ಠಿತ ಕಂಪೆನಿಗಳು ತಯಾರಿದ್ದವು. ಅದನ್ನು ಬದಿಗೊತ್ತಿ ತಮ್ಮ ವ್ಯಾಸಂಗದ ಸಮಯದಲ್ಲಿ ಕಂಡ ಸುಸ್ಥಿರ ಭಾರತದ ಕನಸನ್ನು ನನಸುಮಾಡಲು ನವ್ಯೋದ್ಯಮಗಳ (ಏಂಜಲ್) ಹೂಡಿಕೆದಾರರಾದರು. ತಮ್ಮ ಯೋಚನೆಗಳಿಗೆ ಇಂಬು ಕೊಡುತ್ತ ಹೋದ ಸಿದ್ಧಾರ್ಥ 2015ರಲ್ಲಿ ಸಮಾನ ಮನಸ್ಕರ ವೇದಿಕೆಯೊಂದನ್ನು ಆರಂಭಿಸಿದರು. ಅದು ನಂತರ ‘ಯಂಗ್ ವಾಲಂಟಿಯರ್ ಆರ್ಗನೈಸೇಷನ್’ (ಯುವ ಸ್ವಯಂಸೇವಕರ ಸಂಸ್ಥೆ) ಎಂದಾಯಿತು.

ನಮ್ಮ ಯುವಜನರಿಗೆ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ತುಡಿತವಿದೆ. ಆದರೆ ಅದನ್ನು ಸಾಧ್ಯವಾಗಿಸುವುದು ಹೇಗೆ ಎನ್ನುವುದು ಮಾತ್ರ ಅವರಿಗೆ ತಿಳಿಯುತ್ತಿಲ್ಲ. ಪ್ರಸ್ತುತ ಸಾವಿರಾರು ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒಗಳು) ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ದೇಣಿಗೆಯಾಗಿ ಕೊಟ್ಟ ಹಣ ಸರಿಯಾಗಿ ವಿನಿಯೋಗವಾಗುವುದೇ ಎನ್ನುವುದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಎಂಬಂತೆ ‘ಯಂಗ್ ವಾಲಂಟಿಯರ್ ಆರ್ಗನೈಸೇಷನ್’ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯು ದಾನಿಗಳು ಮತ್ತು ಎನ್‌ಜಿಒಗಳ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಸಮಾಜದ ವಿವಿಧ ಸ್ಥರಗಳ ಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಎನ್‌ಜಿಒಗಳಿಗೆ ನೀಡುತ್ತದೆ.

ವರ್ಷಕ್ಕೆ 12 ಕಾರ್ಯಕ್ರಮಗಳನ್ನು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತದೆ. ಹೊಲಿಗೆ ತರಬೇತಿ, ಅಡುಗೆ ತರಬೇತಿ ... ಹೀಗೆ ಹಲವು ಬಗೆಯ ತರಬೇತಿಗಳ ಮೂಲಕ ದುಡಿಮೆಯ ಕೌಶಲ ಬೆಳೆಸಿ ಸ್ವಾವಲಂಬಿಗಳಾಗಿಸಲು ಶ್ರಮಿಸುತ್ತಿದೆ.

ಅಂದಹಾಗೆ ನಿಮಗೂ ದಾನ ಮಾಡುವ ಇಚ್ಛೆಯಿದ್ದಲ್ಲಿ www.yvorg.in ವೆಬ್‌ಸೈಟ್‌ನಲ್ಲಿ ನೊಂದಾಯಿಸಿಕೊಳ್ಳಬಹುದು. ತಿಂಗಳಿಗೆ ಕನಿಷ್ಠ ದೇಣಿಗೆ ₹306. ಇಲ್ಲಿ ನಡೆಯುವ ಎಲ್ಲ ಪ್ರಕ್ರಿಯೆಗಳು ಪಾರದರ್ಶಕ. ದಾನಿಗಳು ಮಾಡುವ ದಾನದ ಮೊತ್ತದಿಂದ ಅವರ ಹಣ ವಿನಿಯೋಗವಾಗುವ ಕೊನೆಯ ಹಂತದವರೆಗಿನ ಎಲ್ಲ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ಆಜೀವ ದಾನಿಗಳು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಟ್ರಸ್ಟಿಶಿಪ್ ಸಿದ್ಧಾಂತವನ್ನು ಸಿದ್ಧಾರ್ಥ ಅವರು ನಂಬಿಕೊಂಡಿದ್ದಾರೆ.

‘ನಾವು ಜೀವನದಲ್ಲಿ ಏನೆಲ್ಲಾ ಪಡೆದಿದ್ದೇವೆಯೋ ಅದಕ್ಕೆ ಈ ಸಮಾಜವೇ ಕಾರಣ. ಹಾಗಾಗಿ ಸಮಾಜಕ್ಕೆ ಕೈಲಾದಷ್ಟು ಸಹಾಯ ಮಾಡುವುದನ್ನು ಕರ್ತವ್ಯ ಎಂದುಕೊಳ್ಳಬೇಕು. ಆಗ ಮಾತ್ರವೇ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ‌’ ಎನ್ನುವುದು ಸಿದ್ಧಾರ್ಥ ಅವರ ನಂಬಿಕೆ

ಮಾಹಿತಿಗೆ www.yvorg.in ವೆಬ್‌ಸೈಟ್‌ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT