ಇದು ದ್ವಿತೀಯಾರ್ಧ!

7

ಇದು ದ್ವಿತೀಯಾರ್ಧ!

Published:
Updated:
ಇದು ದ್ವಿತೀಯಾರ್ಧ!

ಸಿನಿಮಾದ ಮಧ್ಯಂತರದ ನಂತರದ ಭಾಗವನ್ನು ಸೆಕೆಂಡ್‌ ಹಾಫ್‌ ಎಂದು ಕರೆಯುವುದು ವಾಡಿಕೆ. ಅದನ್ನೇ ಶೀರ್ಷಿಕೆಯನ್ನಾಗಿಸಿಕೊಂಡ ಒಂದು ಸಿನಿಮಾ ಬರುತ್ತಿದೆ.

ರಿಯಲ್‌ ಪೊಲೀಸ್‌ ಮತ್ತು ರೀಲ್‌ ಪೊಲೀಸ್‌ ಇಬ್ಬರೂ ಆ ಸಂಜೆ ವೇದಿಕೆಯಲ್ಲಿದ್ದರು. ಐಪಿಎಸ್‌ ಅಧಿಕಾರಿ ರೂಪಾ ಡಿ. ಮತ್ತು ‘ಸೆಕೆಂಡ್‌ ಹಾಫ್‌’ ಸಿನಿಮಾದಲ್ಲಿ ಪೊಲೀಸ್‌ ಪೇದೆಯಾಗಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕಾ ಉಪೇಂದ್ರ ಅಕ್ಕಪಕ್ಕ ಕೂತಿದ್ದರು. ಅದಾದ ‘ಸೆಕೆಂಡ್‌ ಹಾಫ್‌’ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಾರಂಭ. ಪೊಲೀಸ್‌ ಪೇದೆಯೊಬ್ಬಳ ಬದುಕು, ಅವಳು ತನ್ನ ಕಾರ್ಯವ್ಯಾಪ್ತಿಯೊಳಗೆ ಏನೆಲ್ಲವನ್ನೂ ಮಾಡಬಹುದು ಎಂಬುದನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಯೋಗಿ ದೇವಗಂಗೆ. ಅವರ ಪ್ರಯತ್ನಕ್ಕೆ ನಾಗೇಶ್‌ ಅವರು ಹಣ ಹೂಡಿದ್ದಾರೆ.

ಟ್ರೇಲರ್ ರಿಲೀಸ್‌ ಮಾಡಿ ಮಾತನಾಡಿದ ರೂಪಾ, ‘ಒಬ್ಬ ಮಹಿಳಾ ಪೊಲೀಸ್‌ ಕಾನ್ಸ್‌ಟೆಬಲ್‌ ಅನ್ನು ಚಿತ್ರದ ನಾಯಕಿಯನ್ನಾಗಿಸಿರುವುದೇ ವಿಶೇಷ. ಸಾಮಾನ್ಯವಾಗಿ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವುದು, ಸುಳಿವು ಪತ್ತೆಹಚ್ಚುವುದು ಕಾನ್ಸ್‌ಟೆಬಲ್‌ಗಳೇ. ಆದರೆ ಆ ಸುಳಿವುಗಳ ಸಹಾಯದಿಂದ ಹಿರಿಯ ಅಧಿಕಾರಿಗಳು ಅಪರಾಧಿಗಳನ್ನು ಪತ್ತೆಹಚ್ಚುತ್ತಾರೆ. ಪೇದೆಗಳು ಎಲೆಮರೆಯ ಕಾಯಿಯಂತೆಯೇ ಕೆಲಸ ಮಾಡುತ್ತಿರುತ್ತಾರೆ. ನಮ್ಮಿಂದ ಏನು ಸಾಧ್ಯವಾಗುತ್ತದೆ ಎಂಬ ಮನೋಭಾವವೂ ಅವರಲ್ಲಿದೆ. ಇದನ್ನು ಹೋಗಲಾಡಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸಗಳೂ ನಡೆಯುತ್ತಿವೆ’ ಎಂದರು.

ಪ್ರಿಯಾಂಕಾ ಅವರಿಗೆ ಈ ಚಿತ್ರದ ಪಾತ್ರವಷ್ಟೇ ಅಲ್ಲ, ಉಪೇಂದ್ರ ಅವರ ಸಹೋದರನ ಮಗ ನಿರಂಜನ್‌ ಜತೆ ನಟಿಸುತ್ತಿರುವುದೂ ಸಾಕಷ್ಟು ಖುಷಿ ನೀಡಿದೆ. ‘ನಿರಂಜನ್‌ ನನ್ನೆದುರೇ ಬೆಳೆದ ಹುಡುಗ. ಅವನ ಮೊದಲ ಸಿನಿಮಾದಲ್ಲಿ ನಾನೂ ನಟಿಸುತ್ತಿರುವುದು ನನಗೆ ಹೆಮ್ಮೆ. ಅವನು ನಿಜಕ್ಕೂ ತುಂಬ ಒಳ್ಳೆಯ ಕಲಾವಿದ’ ಎಂದು ಶ್ಲಾಘಿಸಿದರು.

ನಿರಂಜನ್‌ ಕೂಡ ಅದೇ ಪುಳಕದಲ್ಲಿರುವಂತೆ ಕಾಣುತ್ತಿತ್ತು. ‘ಈ ಚಿತ್ರ ನನ್ನ ಮತ್ತು ಪ್ರಿಯಾಂಕಾ ಅವರ ಪಾತ್ರಗಳ ಮೇಲೆಯೇ ನಡೆಯುತ್ತದೆ. ಸಿನಿಮಾ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಆದರೆ ತುಂಬ ರಿಯಲಿಸ್ಟಿಕ್‌ ಆಗಿರುವ ಒಳ್ಳೆಯ ಸಿನಿಮಾ ಇದು’ ಎಂದರು.

‘ರೂಪಾ ಅವರು ಒಂದು ಕಡೆ ‘ಸಿನಿಮಾ ಅಲ್ಲ, ಪೊಲೀಸರ ಬದುಕು’ ಎಂದು ಹೇಳಿಕೊಂಡಿದ್ದರು. ನಾನು ಆದರೆ ನಾನು ಪೊಲೀಸರ ಬದುಕನ್ನು ಸಿನಿಮಾ ಮಾಡಿದ್ದೇನೆ. ಮಹಿಳಾ ಪಿ.ಸಿ.ಗಳ ಬದುಕನ್ನು ವಾಸ್ತವಿಕವಾಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಕಥೆಗೆ ಎಷ್ಟು ಬೇಕೋ ಅಷ್ಟೇ ಸಂಗೀತ, ತಾಂತ್ರಿಕ ಅಂಶಗಳು ಇವೆ. ಆದಷ್ಟೂ ವಾಸ್ತವಕ್ಕೆ ಹತ್ತಿರವಾಗಿರಬೇಕು ಎಂಬುದು ನಮ್ಮ ಉದ್ದೇಶ’ ಎಂದರು ನಿರ್ದೇಶಕ ಯೋಗಿ.

ಸತ್ಯಜಿತ್‌, ಶರತ್‌ ಲೋಹಿತಾಶ್ವ, ವೀಣಾಸುಂದರ್‌ ಮುಂತಾದವರು ತಾರಾಗಣದಲ್ಲಿರುವ ‘ಸೆಕೆಂಡ್‌ ಹಾಫ್‌’ ಚಿತ್ರಕ್ಕೆ, ಶಿವು ಛಾಯಾಗ್ರಹಣ ಮತ್ತು ಚೇತನ್‌ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry