ಸಹಜ ಸ್ಥಿತಿಗೆ ಸುಪ್ರೀಂ ಕೋರ್ಟ್‌

7
ಬಂಡಾಯದ ಬಳಿಕ ನ್ಯಾಯಮೂರ್ತಿಗಳು ಕರ್ತವ್ಯಕ್ಕೆ ಹಾಜರು

ಸಹಜ ಸ್ಥಿತಿಗೆ ಸುಪ್ರೀಂ ಕೋರ್ಟ್‌

Published:
Updated:
ಸಹಜ ಸ್ಥಿತಿಗೆ ಸುಪ್ರೀಂ ಕೋರ್ಟ್‌

ನವದೆಹಲಿ: ಕಳೆದ ವಾರ ‘ಅಸಾಧಾರಣ ಬಿಕ್ಕಟ್ಟಿಗೆ’ ಸಾಕ್ಷಿಯಾದ ಸುಪ್ರೀಂ ಕೋರ್ಟ್‌ ಸೋಮವಾರ ಎಂದಿನಂತೆ ಕಾರ್ಯನಿರ್ವಹಿಸಿತು. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸೋಮವಾರ ಕಲಾಪಗಳಲ್ಲಿ ಭಾಗವಹಿಸಿದರು. ಹಾಗಾಗಿ ಬಿಕ್ಕಟ್ಟು ಸಂಪೂರ್ಣವಾಗಿ ಶಮನವಾಗಿದೆ ಎಂದು ಭಾರತೀಯ ವಕೀಲರ ಪರಿಷತ್‌ ಹೇಳಿದೆ.

‘ಅದೊಂದು ಕ್ಷುಲ್ಲಕ ವಿಚಾರವಾಗಿತ್ತು. ಆ ಬಿಕ್ಕಟ್ಟು ಈಗ ಮುಗಿದ ಕತೆ’ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌, ರಂಜನ್‌ ಗೊಗೋಯ್‌, ಮದನ್‌ ಬಿ. ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರು ಮುಖ್ಯ ನ್ಯಾಯಮೂರ್ತಿ ವಿರುದ್ಧ ಕಳೆದ ಶುಕ್ರವಾರ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು.

ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿದ್ದ ಈ ನಾಲ್ವರು, ಪ್ರಕರಣಗಳ ವಿಚಾರಣೆಯನ್ನು ‘ಆಯ್ದ ಪೀಠಗಳಿಗೆ ಹಂಚಿಕೆ ಮಾಡಲಾಗುತ್ತಿದೆ’ ಎಂದಿದ್ದರು. ದೀಪಕ್‌ ಮಿಶ್ರಾ ಅವರ ಕೆಲವು ಆದೇಶಗಳ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ನ್ಯಾಯಾಂಗ ಮತ್ತು ರಾಜಕಾರಣದಲ್ಲಿ ಆಘಾತ ಉಂಟು ಮಾಡಿತ್ತು.

‘ಸುಪ್ರೀಂ ಕೋರ್ಟ್‌ನ 15 ನ್ಯಾಯಮೂರ್ತಿಗಳನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಬಿಕ್ಕಟ್ಟು ಶೀಘ್ರವೇ ಪರಿಹಾರವಾಗಲಿದೆ ಎಂದು ಅವರು ಹೇಳಿದ್ದಾರೆ’ ಎಂದು ವಕೀಲರ ಪರಿಷತ್‌ ಅಧ್ಯಕ್ಷ ಮನನ್‌ ಕೆ. ಮಿಶ್ರಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry