ದೇವರಾಜ ಮೊಹಲ್ಲಾದಲ್ಲಿ ಸೌಹಾರ್ದ ಸಂಕ್ರಾಂತಿ

7

ದೇವರಾಜ ಮೊಹಲ್ಲಾದಲ್ಲಿ ಸೌಹಾರ್ದ ಸಂಕ್ರಾಂತಿ

Published:
Updated:
ದೇವರಾಜ ಮೊಹಲ್ಲಾದಲ್ಲಿ ಸೌಹಾರ್ದ ಸಂಕ್ರಾಂತಿ

ಮೈಸೂರು: ಹೊಸ ಬಟ್ಟೆ ಧರಿಸಿದ ಮಕ್ಕಳ ಮುಖದಲ್ಲಿ ಸಂಕ್ರಾಂತಿಯ ಸಂಭ್ರಮ ಇಣುಕುತ್ತಿತ್ತು. ಶ್ರೀರಾಮಮಂದಿರದಿಂದ ಹೊರಬಂದು ಎಳ್ಳು–ಬೆಲ್ಲ ತುಂಬಿದ ತಟ್ಟೆಯನ್ನು ಮುಸ್ಲಿಮರತ್ತ ಹಿಡಿದು ಕಿರುನಗೆ ಬೀರಿದರು. ಪ್ರಾರ್ಥನೆಗೆ ತೆರಳಲು ಅಣಿಯಾಗಿ ಮಸೀದಿಗೆ ಸಾಗುತ್ತಿದ್ದ ಬಹುತೇಕರು ಪ್ರೀತಿಯಿಂದ ಸ್ವೀಕರಿಸಿ ಶುಭ ಕೋರಿದರು.

ದೇವರಾಜ ಮೊಹಲ್ಲಾದ ಶ್ರೀರಾಮಮಂದಿರದಲ್ಲಿ ಸೋಮವಾರ ನಡೆದ ಸಂಕ್ರಾಂತಿ ಸಮಾಜಕ್ಕೆ ಸೌಹಾರ್ದ ಸಂದೇಶ ನೀಡಿತು. ಹಿಂದೂ–ಮುಸ್ಲಿಮರು ಹೆಚ್ಚಾಗಿರುವ ಈ ಬಡಾವಣೆಯಲ್ಲಿ ಒಂದುಗೂಡಿ ಹಬ್ಬ ಆಚರಿಸಲಾಯಿತು.

ಶ್ರೀರಾಮಂದಿರದ ಬೀದಿಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಸ್ತೆಗೆ ಹಾಕಿದ ರಂಗೋಲಿ ಕಣ್ಮನ ಸೆಳೆಯಿತು. ಪೂಜೆ ಮುಗಿಸಿದ ಮಕ್ಕಳು, ಪೋಷಕರೊಂದಿಗೆ ದೇಗುಲಕ್ಕೆ ಭೇಟಿ ನೀಡಿದರು. ಎಳ್ಳು–ಬೆಲ್ಲದ ತಟ್ಟೆಯನ್ನು ಹಿಡಿದು ಎಲ್ಲರಿಗೂ ವಿತರಿಸಿ ಖುಷಿಪಟ್ಟರು.

ಸಮೀಪದ ರಹಮಾನಿಯಾ ಅರಬ್ಬಿ ಮಸೀದಿಗೆ ಬಂದಿದ್ದ ಮುಸ್ಲಿಮರಿಗೆ ಎಳ್ಳು–ಬೆಲ್ಲ, ಕಬ್ಬು–ಹೂ ನೀಡಿ ಪರಸ್ಪರ ಶುಭಾಶಯ ವಿನಿಮ ಮಾಡಿಕೊಂಡರು. ಶಾಸಕ ವಾಸು, ಪಾಲಿಕೆ ಸದಸ್ಯ ಪಿ.ಪ್ರಶಾಂತ್‌ ಇದ್ದರು.

ಹಬ್ಬಕ್ಕೆ ಒಂದಾದರು...

ಠಾಣೆ (ಪಿಟಿಐ): ಕೋಮು ಗಲಭೆಗಳಿಂದ ಕುಖ್ಯಾತವಾಗಿದ್ದ ಮಹಾರಾಷ್ಟ್ರದ ಭಿವಂಡಿ ಪಟ್ಟಣ ಈಗ ಸೌಹಾರ್ದದ ಕಾರಣಕ್ಕೆ ಸುದ್ದಿಯಾಗಿದೆ. ಈ ಬಾರಿ ಹಿಂದೂಗಳು ಮತ್ತು ಮುಸ್ಲಿಮರು ಜತೆಯಾಗಿ ಮಕರ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.

ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿ ಇರುವ ಪಟ್ಟಣ ಇದು. ಜವಳಿ ಉದ್ಯಮ ಕೇಂದ್ರವಾಗಿರುವ ಈ ಪಟ್ಟಣದಲ್ಲಿ 1970 ಮತ್ತು 1984ರಲ್ಲಿ ಘೋರ ಕೋಮು ಗಲಭೆ ನಡೆದಿತ್ತು. ಆದರೆ, ಎರಡೂ ಸಮುದಾಯಗಳ ಜನರು ಭಾನುವಾರ ಎಳ್ಳು ಬೆಲ್ಲ ಹಂಚಿದರು. ‘ಎಳ್ಳು–ಬೆಲ್ಲ ತಿಂದು ಸವಿಯಾದ ಮಾತು ಆಡಿ’ ಎಂದು ಶುಭಾಶಯ ಕೋರಿದರು.

‘ಜತೆಯಾಗಿ ಹಬ್ಬ ಆಚರಿಸೋಣ ಎಂಬುದು ಯುವ ತಲೆಮಾರಿನ ಯೋಚನೆ. ಎರಡೂ ಧರ್ಮಗಳ ಹಬ್ಬಗಳನ್ನು ಒಟ್ಟಾಗಿ ಆಚರಿಸಲು ಅವರು ಬಯಸುತ್ತಿದ್ದಾರೆ’ ಎಂದು ಭಿವಂಡಿಯ ಅಬ್ಬಾಸ್‌ ಖುರೇಷಿ (78) ಪ್ರತಿಕ್ರಿಯೆ ನೀಡಿದ್ದಾರೆ. ಈ ಪಟ್ಟಣದಲ್ಲಿ ಎರಡೂ ಧರ್ಮಗಳ ಜನರು ಜತೆಯಾಗಿ ಸಂಕ್ರಾಂತಿ ಆಚರಿಸಿದ್ದು ಇದೇ ಮೊದಲು ಎಂದೂ ಅವರು ಹೇಳಿದ್ದಾರೆ.

ಎಳ್ಳು ಬೆಲ್ಲ ಹಂಚುವುದರ ಜತೆಗೆ, ಎರಡೂ ಧರ್ಮಗಳ ಯುವಕ ಯುವತಿಯರು ಜತೆಯಾಗಿ ಗಾಳಿಪಟ ಹಾರಿಸಿ ಸಂಭ್ರಮಪಟ್ಟರು.

ಗಣೇಶೋತ್ಸವ, ಗೋಕುಲಾಷ್ಟಮಿ, ಶಿವಾಜಿ ಜಯಂತಿಯಂತಹ ಕಾರ್ಯಕ್ರಮಗಳಲ್ಲಿಯೂ ಮುಸ್ಲಿಮರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry