ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ತಯಾರಿಸಿ: ಇಸ್ರೇಲ್‌ಗೆ ಒತ್ತಾಯ

ರಕ್ಷಣಾ ಸಹಕಾರ, ತಂತ್ರಜ್ಞಾನ ವರ್ಗಾವಣೆಗೆ ಒತ್ತು
Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಇಸ್ರೇಲ್‌ನ ಕಂಪನಿಗಳು ಭಾರತದಲ್ಲಿ ಸೇನಾ ಸಲಕರಣೆಗಳನ್ನು ತಯಾರಿಸುವ ಇನ್ನಷ್ಟು ಘಟಕಗಳನ್ನು ಆರಂಭಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಎರಡೂ ದೇಶಗಳು ಒಂಬತ್ತು ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡಿವೆ.

ಭಾರತ–ಇಸ್ರೇಲ್‌ ಮುಕ್ತ ವ್ಯಾಪಾರ ಸಂಧಾನ ಪುನರಾರಂಭಿಸುವಂತೆ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರು ಮೋದಿ ಅವರನ್ನು ಒತ್ತಾಯಿಸಿದರು. ಈ ವಿಚಾರದ ಚರ್ಚೆಗೆ ಭಾರತದ ವಾಣಿಜ್ಯ ಸಚಿವಾಲಯದ ನಿಯೋಗವೊಂದು ಮುಂದಿನ ತಿಂಗಳು ಇಸ್ರೇಲ್‌ಗೆ ಭೇಟಿ ನೀಡುವ ನಿರ್ಧಾರವನ್ನು ಇಬ್ಬರು ಪ್ರಧಾನಿಗಳು ಕೈಗೊಂಡರು.

ನವದೆಹಲಿಯ ‘ಹೈದರಾಬಾದ್‌ ಹೌಸ್‌’ನಲ್ಲಿ ಇಬ್ಬರು ಪ್ರಧಾನಿಗಳ ನಡುವಣ ಮಾತುಕತೆ ನಡೆಯಿತು. ಸೈಬರ್‌ ಸುರಕ್ಷತೆ ಮತ್ತು ಹೈಡ್ರೊಕಾರ್ಬನ್‌ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಆರಂಭಿಸುವುದು ಎರಡೂ ದೇಶಗಳು ವಿನಿಮಯ ಮಾಡಿಕೊಂಡ ಒಪ್ಪಂದಗಳಲ್ಲಿ ಸೇರಿವೆ. ದತ್ತಾಂಶ, ಸೆನ್ಸರ್‌ಗಳು ಮತ್ತು ಡ್ರೋನ್‌ಗಳನ್ನು ಬಳಸಿ ಭಾರತದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಅತ್ಯಾಧುನಿಕ ತಂತ್ರಜ್ಞಾನ ಒದಗಿಸುವುದಾಗಿ ಇಸ್ರೇಲ್‌ ಭರವಸೆ ನೀಡಿದೆ.

ಆವಿಷ್ಕಾರ, ವ್ಯಾಪಾರ, ಬಾಹ್ಯಾಕಾಶ, ಭಯೋತ್ಪಾದನೆ ತಡೆ, ಆಂತರಿಕ ಭದ್ರತೆ, ಉನ್ನತ ಶಿಕ್ಷಣ ಮತ್ತು ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಕೊಡು–ಕೊಳುವಿಕೆಗೆ ಮೋದಿ ಮತ್ತು ನೆತನ್ಯಾಹು ತೀರ್ಮಾನಿಸಿದ್ದಾರೆ.

ಪರಸ್ಪರ ಹೊಗಳಿಕೆಯ ಸುರಿಮಳೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ನಡುವಣ ಸೌಹಾರ್ದ ಸಂಬಂಧ ಸೋಮವಾರ ಜಂಟಿ ಹೇಳಿಕೆಯ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಕಟವಾಯಿತು.‌ ಮೋದಿ ಅವರು ಇಸ್ರೇಲ್‌ ಪ್ರಧಾನಿಯನ್ನು ‘ಬಿಬಿ’ ಎಂಬ ಅಡ್ಡ ಹೆಸರಿನಿಂದ ಕರೆದರೆ, ನೆತನ್ಯಾಹು ಅವರು ಮೋದಿಯವರನ್ನು ‘ನರೇಂದ್ರ’ ಎಂದು ಕರೆದರು.

‘ನನ್ನ ಆತ್ಮೀಯ ಸ್ನೇಹಿತ ನರೇಂದ್ರ ಅವರೇ, ನೀವು ಯಾವುದೇ ಸಮಯದಲ್ಲಿ ನನಗೆ ಯೋಗ ತರಬೇತಿ ನಡೆಸಲು ಬಯಸಿದರೆ, ನಾನು ಅಲ್ಲಿ ಹಾಜರಿರುತ್ತೇನೆ. ನನ್ನನ್ನು ನಂಬಿ’ ಎಂದು ನೆತನ್ಯಾಹು ಹೇಳಿದಾಗ, ಅಲ್ಲಿ ಸೇರಿದ್ದ ಪತ್ರಕರ್ತರು ಮತ್ತು ಅಧಿಕಾರಿಗಳು ಜೋರಾಗಿ ನಕ್ಕರು.

ಇದಕ್ಕೂ ಮೊದಲು ಒಪ್ಪಂದಗಳ ದಾಖಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡ ನಂತರ ಮಾತನಾಡಿದ ಮೋದಿ, ‘ನನ್ನ ಆತ್ಮೀಯ ಗೆಳೆಯ, ಭಾರತಕ್ಕೆ ಸ್ವಾಗತ!’ ಎಂದು ಹೀಬ್ರೂ ಭಾಷೆಯಲ್ಲಿ ಹೇಳಿದಾಗ ನೆತನ್ಯಾಹು ಹಾಗೂ ಅವರ ನಿಯೋಗದ ಸದಸ್ಯರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಕಳೆದ ವರ್ಷದ ಇಸ್ರೇಲ್‌ ಪ್ರವಾಸವನ್ನು ಪ್ರಸ್ತಾಪಿಸಿದ ಮೋದಿ, ‘ಇಸ್ರೇಲ್‌ಗೆ ನೀಡಿದ್ದ ಸ್ಮರಣೀಯ ಭೇಟಿಯ ಸಂದರ್ಭದಲ್ಲಿ ನಾನು 125 ಕೋಟಿ ಜನರ ಶುಭಾಶಯಗಳನ್ನು ಹೊತ್ತೊಯ್ದಿದ್ದೆ. ನನ್ನ ಸ್ನೇಹಿತ ‘ಬಿಬಿ’ ನೇತೃತ್ವದಲ್ಲಿ ಇಸ್ರೇಲ್‌ ಜನ ನೀಡಿದ ಸ್ವಾಗತ, ತೋರಿದ ಪ್ರೀತಿ ನನ್ನನ್ನು ಮೂಕನನ್ನಾಗಿಸಿತ್ತು’ ಎಂದರು.

‘ಪ್ರಧಾನಿ ಅವರೇ, ಫಲಿತಾಂಶಕ್ಕೆ ಕಾಯುವುದರಲ್ಲಿ ನನಗೆ ತಾಳ್ಮೆ ಇಲ್ಲ. ನೀವು ಕೂಡ ನನ್ನ ಹಾಗೆಯೇ ಎಂಬ ಗುಟ್ಟು ನನಗೆ ಗೊತ್ತಿದೆ’ ಎಂದು ನೆತನ್ಯಾಹು ಅವರಿಗೆ ಮೋದಿ ಹೇಳಿದರು.

ತಮ್ಮ ಸರದಿ ಬಂದಾಗ ಇದಕ್ಕೆ ಸ್ಪಂದಿಸಿದ ನೆತನ್ಯಾಹು, ‘ನೀವೊಬ್ಬ ಕ್ರಾಂತಿಕಾರಿ ನಾಯಕ. ನೀವು ಭಾರತದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದೀರಿ. ಭವ್ಯವಾದ ಈ ದೇಶವನ್ನು ಅತ್ಯುತ್ತಮ ಭವಿಷ್ಯದತ್ತ ಕೊಂಡೊಯ್ಯುತ್ತಿದ್ದೀರಿ. ಇಸ್ರೇಲ್‌ ಮತ್ತು ಭಾರತದ ನಡುವಣ ಸಂಬಂಧದಲ್ಲೂ ನೀವು ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದೀರಿ’ ಎಂದು ಮೋದಿ ಅವರನ್ನು ಹೊಗಳಿದರು.

9 ಒಪ್ಪಂದಗಳು

*ಸೈಬರ್‌ ಭದ್ರತಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ

*ತೈಲ ಮತ್ತು ಅನಿಲ ವಲಯದಲ್ಲಿ ಸಹಕಾರ

*ವಿಮಾನ ಸಂಚಾರ ಒಪ್ಪಂದ ತಿದ್ದುಪಡಿ ಶಿಷ್ಟಾಚಾರಕ್ಕೆ ಸಹಿ

*ಚಲನಚಿತ್ರ ಸಹ–ನಿರ್ಮಾಣ ಒಪ್ಪಂದ

*ಹೋಮಿಯೋಪಥಿ ವೈದ್ಯಕೀಯ ಪದ್ಧತಿಯಲ್ಲಿ ಸಹಕಾರ

*ಬಾಹ್ಯಾಕಾಶ ಕ್ಷೇತ್ರದಲ್ಲಿ ಪರಸ್ಪರ ಸಹಕಾರ

*ಭಾರತದಲ್ಲಿ ಹೂಡಿಕೆ ಮತ್ತು ಇಸ್ರೇಲ್‌ನಲ್ಲಿ ಹೂಡಿಕೆಗೆ ಆಸಕ್ತಿ ಪತ್ರಕ್ಕೆ ಸಹಿ

*ಮೆಟಲ್‌–ಏರ್‌ ಬ್ಯಾಟರಿ ಕ್ಷೇತ್ರದಲ್ಲಿ ಸಹಕಾರ ನೀಡುವ ಆಸಕ್ತಿ ಪತ್ರಕ್ಕೆ ಸಹಿ

*ಸೌರ ಉಷ್ಣ ವಿದ್ಯುತ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಆಸಕ್ತಿ ಪತ್ರಕ್ಕೆ ಸಹಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT