ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಕಾಂಗ್ರೆಸ್‌ನಿಂದ ‘ಜನರ ಪ್ರಣಾಳಿಕೆ’?

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಪ್ರಣಾಳಿಕೆ ತಯಾರಿಸುವುದಕ್ಕೂ ಮುನ್ನ ಕಾಂಗ್ರೆಸ್‌, ಮತದಾರರ ಬಳಿ ತೆರಳಿ ಅಭಿಪ್ರಾಯ ಸಂಗ್ರಹಿಸಲಿದೆ.

ಮತ್ತೆ ಅಧಿಕಾರಕ್ಕೆ ಬಂದರೆ ಜನರು ಪಕ್ಷದಿಂದ ಏನು ನಿರೀಕ್ಷಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಶೀಘ್ರದಲ್ಲಿ ಜನ ಸಂಪರ್ಕ ಕಾರ್ಯಕ್ರಮ ಆರಂಭಿಸುವ ಸಾಧ್ಯತೆ ಇದೆ.

ಪ್ರಣಾಳಿಕೆ ಕರಡು ಸಿದ್ಧಪಡಿಸುವ ಹೊಣೆ ಹೊತ್ತಿರುವ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಅವರು ವಿವಿಧ ಭಾಗಗಳ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಆಯಾ ಭಾಗದ ಜನರ ಮನಸ್ಸಲ್ಲೇನಿದೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ರಾಹುಲ್‌ ಸೂಚನೆ: ಈ ಮಧ್ಯೆ, ರಾಜ್ಯದಾದ್ಯಂತ ಪ್ರವಾಸ ಮಾಡಿ ಜನರ ಅಭಿಪ್ರಾಯ ಸಂಗ್ರಹಿಸಿ ಅವುಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯದ ಮುಖಂಡರಿಗೆ ಕಳೆದ ಶನಿವಾರ ಸೂಚಿಸಿದ್ದಾರೆ.

ಎಎಪಿ ಪರಿಕಲ್ಪನೆ: ಜನರ ಬಳಿಗೆ ತೆರಳಿ ಅವರ ನಿರೀಕ್ಷೆಗೆ ತಕ್ಕಂತೆ ಪ್ರಣಾಳಿಕೆ ಸಿದ್ಧಪಡಿಸುವ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದು ಆಮ್‌ ಆದ್ಮಿ ಪಕ್ಷ (ಎಎಪಿ). 2013ರ ದೆಹಲಿ ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ ರೂಪಿಸುವುದಕ್ಕಿಂತಲೂ ಮೊದಲು ಅದು ಮತದಾರರನ್ನು ಸಂಪರ್ಕಿಸಿತ್ತು.

ಇತ್ತೀಚೆಗೆ ನಡೆದ ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌, ಈ ಪರಿಕಲ್ಪನೆಯನ್ನು ಬಳಸಿಕೊಂಡಿತ್ತು. ‘ಜನರ ಪ್ರಣಾಳಿಕೆ’ ಸಿದ್ಧಪಡಿಸುವ ಹೊಣೆಯನ್ನು ತಂತ್ರಜ್ಞ ಮತ್ತು ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಅವರಿಗೆ ವಹಿಸಿತ್ತು.

ಪಿತ್ರೋಡಾ ಅವರು ವಡೋದರಾ, ಅಹಮದಾಬಾದ್‌, ರಾಜ್‌ಕೋಟ್‌, ಜಾಮ್‌ನಗರ ಮತ್ತು ಸೂರತ್‌ ನಗರಗಳ ನಿವಾಸಿಗಳೊಂದಿಗೆ ಸಭೆ ನಡೆಸಿದ್ದರು. ಆರೋಗ್ಯ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಉದ್ಯೋಗ ಸೃಷ್ಟಿ ಹಾಗೂ ಪರಿಸರ ಸಂರಕ್ಷಣೆ ವಿಷಯಗಳ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT