ನುಸುಳಲು ಯತ್ನ: ಜೈಷ್ ಉಗ್ರರ ಹತ್ಯೆ

7

ನುಸುಳಲು ಯತ್ನ: ಜೈಷ್ ಉಗ್ರರ ಹತ್ಯೆ

Published:
Updated:

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಯತ್ನಿಸಿದ ಜೈಷ್‌ ಇ ಮೊಹಮ್ಮದ್ ಉಗ್ರ ಸಂಘಟನೆಯ ಐವರನ್ನು ಭಾರತದ ಯೋಧರು ಸೋಮವಾರ ಹತ್ಯೆ ಮಾಡಿದ್ದಾರೆ.

ದುಲುಂಜಾ ಎಂಬಲ್ಲಿ ಸೇನೆ, ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಉಗ್ರರನ್ನು ಸಾಯಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಸ್‌.ಪಿ. ವೈದ್ ತಿಳಿಸಿದ್ದಾರೆ.

ಉರಿ ವಲಯದ ಸುತ್ತಮುತ್ತ ಹಲವು ಉಗ್ರರು ಅಡಗಿರುವ ಶಂಕೆಯಿದೆ. ಈಗಾಗಲೇ ಐದು ಮೃತದೇಹ ಪತ್ತೆಯಾಗಿದೆ. ಆರನೇ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಜೈಷೆ ಉಗ್ರರ ವಿರುದ್ಧ ಹೊಸ ವರ್ಷದಲ್ಲಿ ಸೇನಾ ದಿನಾಚರಣೆ ನಡೆಸಿದ ದೊಡ್ಡ ಹಾಗೂ ಮಹತ್ವದ ಕಾರ್ಯಾಚರಣೆ ಇದಾಗಿತ್ತು ಎಂದು ಬ್ರಿಗೇಡಿಯರ್‌ ವೈ.ಎಸ್. ಅಹ್ಲವಾಟ್‌ ಅವರು ಹೇಳಿದ್ದಾರೆ.

ಭಾರತದಿಂದ ಪಾಕಿಸ್ತಾನದ ಕಡೆ ಹರಿಯುವ ಝೇಲಂ ನದಿಯುದ್ದಕ್ಕೂ  ಉಗ್ರರು ನುಸುಳಲು ಮುಂದಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ಮೃತ ಉಗ್ರರಿಂದ ಎಕೆ–47 ಬಂದೂಕು ಸೇರಿದಂತೆ ಮದ್ದುಗುಂಡು, ಗ್ರೆನೇಡ್‌ ಲಾಂಚರ್‌ಗಳು, 23 ಹ್ಯಾಂಡ್‌ ಗ್ರೆನೇಡ್‌ಗಳು, ಒಂಬತ್ತು ಸುಧಾರಿತ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

2016 ರ ಸೆಪ್ಟೆಂಬರ್‌ನಲ್ಲಿ ಭಾರಿ ಮದ್ದುಗುಂಡು ಮತ್ತು ಶಸ್ತ್ರಾಸ್ತ್ರ ಹೊಂದಿದ್ದ ಉಗ್ರರು ಉರಿ ಸೇನಾ ನೆಲೆ ಮೇಲೆ ನಡೆಸಿದ್ದ ದಾಳಿಯಲ್ಲಿ ಭಾರತದ 18 ಯೋಧರು ಮೃತಪಟ್ಟಿದ್ದರು. ಇದಾಗಿ 10 ದಿನಗಳ ನಂತರ ಭಾರತದ ಯೋಧರು ನಿರ್ದಿಷ್ಟ ದಾಳಿ ನಡೆಸಿ ಪಾಕ್‌ಗೆ ತಕ್ಕ ಪ್ರತ್ಯುತ್ತರ ನೀಡಿದ್ದರು.

ಭಾರತ–ಪಾಕ್‌ ಸಂಘರ್ಷದ ಅಪಾಯ

ಇಸ್ಲಾಮಾಬಾದ್‌ (ಪಿಟಿಐ): ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುವ ಅಪಾಯ ಹೆಚ್ಚಾಗುತ್ತಿದೆ ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್‌’ ಹೇಳಿದೆ. ಸರ್ಕಾರ ಆದೇಶಿಸಿದರೆ, ಪಾಕಿಸ್ತಾನದ ಅಣ್ವಸ್ತ್ರದ ಒಣ ಬೆದರಿಕೆಯನ್ನು ನಿರ್ಲಕ್ಷಿಸಿ ಆ ದೇಶದ ಗಡಿ ದಾಟಿ ಹೋಗಿ ಯಾವುದೇ ಕಾರ್ಯಾಚರಣೆ ನಡೆಸಲು ಸೇನೆ ಸಿದ್ಧವಾಗಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್‌ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ‘ಡಾನ್‌’ ಉಲ್ಲೇಖಿಸಿದೆ.

‘ಪಾಕಿಸ್ತಾನವನ್ನು ನಾವು ಎದುರಿಸಲೇಬೇಕಿದ್ದರೆ, ಆ ಹೊಣೆಯನ್ನು ನಮಗೆ ವಹಿಸಿದರೆ ಆ ದೇಶದ ಬಳಿ ಅಣ್ವಸ್ತ್ರ ಇದೆ. ಹಾಗಾಗಿ ಗಡಿ ದಾಟಲು ಸಾಧ್ಯವಿಲ್ಲ ಎಂದು ನಾವು ಹೇಳಲಾಗದು. ಅಣ್ವಸ್ತ್ರ ಇದೆ ಎಂಬುದು ಪಾಕಿಸ್ತಾನದ ಒಣ ಬೆದರಿಕೆ ಅಷ್ಟೇ ನಾವು ಪರಿಗಣಿಸುತ್ತೇವೆ’ ಎಂದು ರಾವತ್‌ ಹೇಳಿದ್ದರು.

ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧದ ಶೋಚನೀಯ ಸ್ಥಿತಿಯನ್ನು ಈ ಹೇಳಿಕೆ ತೋರಿಸುತ್ತದೆ ಎಂದು ‘ಡಾನ್‌’ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry