ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಕಾಟ

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಶತಶತಮಾನಗಳ ಮಾನವ ಚರಿತ್ರೆಯನ್ನು ತನ್ನನ್ನು ಸೃಷ್ಟಿಸಿದ ದೇವರಿಗಾಗಿ ಮಾನವನ ಹುಡುಕಾಟ ಎಂಬುದಾಗಿ ವ್ಯಾಖ್ಯಾನಿಸಬಹುದು. ಇದನ್ನು ಸಮರ್ಥಿಸಿಕೊಳ್ಳಲು ಅಸಂಖ್ಯಾತ ಉದಾಹರಣೆಗಳನ್ನೂ ನೀಡಬಹುದು. ಮಾನವ ತನ್ನ ಸೃಷ್ಟಿಕರ್ತನಾದ ದೇವರ ಹುಡುಕಾಟದಲ್ಲಿ ಬೆಟ್ಟಗುಡ್ಡ ಪರ್ವತಗಳಲ್ಲಿ, ಕಣಿವೆ ಕಂದರಗಳಲ್ಲಿ ಅಲೆದಾಡಿದ, ಧ್ಯಾನ-ತಪಸ್ಸುಗಳನ್ನು ಮಾಡಿದ. ಹಲವು ಜ್ಞಾನಿಗಳು ತತ್ವಶಾಸ್ತ್ರ, ದೈವಶಾಸ್ತ್ರ, ಇನ್ನಿತರ ಆಧ್ಯಾತ್ಮಿಕ ವಿಜ್ಞಾನಗಳ ಆಸರೆಯಲ್ಲಿ ದೇವನಿಗಾಗಿ ಹುಡುಕಾಡಿದರು. ಅವರಲ್ಲಿ ಹಲವರು ತಮಗೆ ದೇವರ ಸಾಕ್ಷಾತ್ಕಾರವಾಯಿತು ಎಂದುಕೊಂಡರೆ, ಹಲವರು ನಿರಾಶೆಗೊಂಡು ನಾಸ್ತಿಕರಾದರು. ಆದರೂ ಮಾನವನ ಹುಡುಕಾಟ ಕೊನೆಗೊಳ್ಳದೆ ನಿರಂತರವಾಗಿ ನಡೆಯುತ್ತಾ ಇದೆ.


ಆಧ್ಯಾತ್ಮಿಕತೆಯೆಂದರೆ ದೇವರಿಗಾಗಿ ಮಾನವನ ಹುಡುಕಾಟವಲ್ಲ, ಬದಲಾಗಿ ಮಾನವನಿಗಾಗಿ ದೇವರ ಹುಡುಕಾಟ ಎಂದರೆ ಆಶ್ಚರ್ಯವಾಗಬಹುದಲ್ಲವೇ? ಮಾನವನು ತನ್ನ ಸೃಷ್ಟಿಕರ್ತ ದೇವರನ್ನು ಹುಡುಕಲು ಶಕ್ತನಲ್ಲ. ಆದರೆ ದೇವರೇ ತಾನು ಸೃಷ್ಟಿಸಿದ ಮನುಷ್ಯನ ಹುಡುಕಾಟದಲ್ಲಿರುವುದು ಸತ್ಯ.
ಬೈಬಲ್ ಶ್ರೀಗ್ರಂಥದಲ್ಲಿ ದೇವರ ಹುಡುಕಾಟವನ್ನು ಪುಷ್ಟೀಕರಿಸುವ ಅನೇಕ ಉದಾಹರಣೆಗಳಿವೆ. ಏದೆನ್ ಉದ್ಯಾನವನದಲ್ಲಿ ದೇವರಿಗೆ ಅವಿಧೇಯತೆಯನ್ನು ತೋರಿ ಪಾಪಮಾಡಿದ ಆದಾಮನು ದೇವರ ಸನ್ನಿಧಿಯಿಂದ ಬಚ್ಚಿಟ್ಟುಕೊಂಡಿದ್ದಾಗ, ದೇವರು, ‘ಎಲ್ಲಿದ್ದೀಯಾ ನೀನು? ಎಂದು ಆದಾಮನನ್ನು ಕೂಗಿ ಕರೆದರು. ಈಜಿಪ್ಟಿನ ಗುಲಾಮಗಿರಿಯಲ್ಲಿ ತೊಳಲಾಡುತ್ತಿದ್ದ ತನ್ನ ಜನರ ಕಷ್ಟಗಳನ್ನು ಕಂಡು, ನಾನು ನನ್ನ ಜನತೆಯ ಕಷ್ಟಗಳನ್ನು ಕಂಡಿದ್ದೇನೆ, ನನಗೆ ಅವರ ದುಃಖದ ಅರಿವಿದೆ ಎಂದು ಅವರ ಸಹಾಯಕ್ಕೆ ಮಹಾನಾಯಕ ಮೋಶೆಯನ್ನು ಕಳುಹಿಸಿದರು.

ಕಾಲ ಕೂಡಿ ಬಂದಾಗ, ತಾನೇ ಮನುಷ್ಯನಾಗಿ ಅವತರಿಸಿ, ನಜರೇತಿನ ಯೇಸು ಕ್ರಿಸ್ತರಾಗಿ ಮಾನವನನ್ನು ಹುಡುಕಿ ಈ ಧರೆಗಿಳಿದ ಘಟನೆಯೇ ಈಗ ತಾನೇ ಆಚರಿಸಿದ ಕ್ರಿಸ್‌ಮಸ್ ರಹಸ್ಯ. ತನ್ನ ಹೆಗಲ ಮೇಲೆ ಕುರಿಮರಿಯನ್ನು ಹೊತ್ತು ನಡೆಯುವ ಒಳ್ಳೆಯ ಮೇಷಪಾಲಕ ಯೇಸುಸ್ವಾಮಿ ದೇವರ ಹುಡುಕಾಟಕ್ಕೆ ಅತ್ಯಂತ ಅರ್ಥಪೂರ್ಣವಾದ ವಿವರಣೆಯಾಗಿದ್ದಾರೆ. ಮಂದೆಯಿಂದ ಕಳೆದುಹೋದ ಕುರಿಮರಿಯನ್ನು ಹುಡುಕಿ ತರುವುದನ್ನೇ ತನ್ನ ಆದ್ಯತೆಯಾಗಿಸಿರುವ ಒಳ್ಳೆಯ ಮೇಷಪಾಲಕನ ಸಾಮತಿ ಆಲಿಸಲು ಆಪ್ಯಾಯಮಾನ. ಕ್ರೈಸ್ತ ಆಧ್ಯಾತ್ಮಿಕತೆಯು ಮನುಷ್ಯ ತನ್ನೆಲ್ಲಾ ಶಕ್ತಿ-ಸಾಮರ್ಥ್ಯದ ನೆರವಿನಿಂದ ದೇವರ ಅರಸುವಿಕೆಯಲ್ಲಿ ಅಡಕವಾಗಿಲ್ಲ, ಬದಲಾಗಿ ತಾಯಿ ತನ್ನ ಮಗುವನ್ನು ಹುಡುಕಾಡುವಂತೆ, ಮಾನವನನ್ನು ಅರಸುವ ದೇವರಿಗೆ ಸಿಗುವುದರಲ್ಲಿ ಅಡಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT