‘ಅಭಿವೃದ್ಧಿ ರಾಜಕೀಯದತ್ತ ಗಮನ ಹರಿಸಿ’

7
ರಾಹುಲ್‌ಗೆ ಆದಿತ್ಯನಾಥ ಸಲಹೆ

‘ಅಭಿವೃದ್ಧಿ ರಾಜಕೀಯದತ್ತ ಗಮನ ಹರಿಸಿ’

Published:
Updated:
‘ಅಭಿವೃದ್ಧಿ ರಾಜಕೀಯದತ್ತ ಗಮನ ಹರಿಸಿ’

ಗೋರಖಪುರ/ ರಾಯ್ ಬರೇಲಿ (ಉತ್ತರ ಪ್ರದೇಶ): ‘ರಾಹುಲ್ ಗಾಂಧಿ ಅವರು ನಕಾರಾತ್ಮಕ ರಾಜಕಾರಣ  ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಸೋಮವಾರ ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ಇದೇ ಮೊದಲ ಬಾರಿ ಉತ್ತರ ‍ಪ್ರದೇಶಕ್ಕೆ ಬಂದಿದ್ದಾರೆ. ಎರಡು ದಿನ ಅವರು ರಾಜ್ಯದಲ್ಲಿ ಪ್ರವಾಸ ನಡೆಸಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಉದ್ದೇಶದಿಂದ ಅವರು ಇಲ್ಲಿ ಬಂದಿದ್ದಾರೆ.

ಗೋರಖನಾಥ ದೇವಾಲಯದಲ್ಲಿ ಸೋಮವಾರ ನಡೆದ ಮಕರಸಂಕ್ರಾಂತಿ ಆಚರಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯನಾಥ, ‘ರಾಹುಲ್ ಅವರ ಭೇಟಿಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ’ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಯೋಗಿ ಈ ದೇವಾಲಯದ ಮುಖ್ಯ ಅರ್ಚಕರೂ ಹೌದು.

‘ರಾಹುಲ್ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ಅಮೇಠಿಯ ಅವಸ್ಥೆ ನೋಡಿ. ಗಾಂಧಿ ಕುಟುಂಬವು ನಾಲ್ಕು ತಲೆಮಾರುಗಳಿಂದ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿದೆ. ಅಭಿವೃದ್ಧಿಗೆ ಕಾಂಗ್ರೆಸ್ ಮಹತ್ವ ನೀಡಿದ್ದರೆ ಆ ಕ್ಷೇತ್ರದ ಸ್ಥಿತಿ ಚೆನ್ನಾಗಿರುತ್ತಿತ್ತು’ ಎಂದರು.

ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ: ‘ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡದ ಬಿಜೆಪಿಯವರು ನಿರಂತರ

ವಾಗಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ರಾಯ್ ಬರೇಲಿ ಜಿಲ್ಲೆಯ ಸಾಲೊನ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಸೋಮವಾರ ಅವರು ಮಾತನಾಡಿದರು. ‘ಜನರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಜಮೆ ಮಾಡುವುದು, ರೈತರ ಬೆಳೆಗಳಿಗೆ ಉತ್ತಮ ಬೆಲೆ ನೀಡುವುದು, ರಸ್ತೆ ನಿರ್ಮಾಣ ಎಲ್ಲವೂ ಅವರ ಸುಳ್ಳು ಭರವಸೆಗಳಿಗೆ ಉದಾಹರಣೆ’ ಎಂದು ಟೀಕಿಸಿದ್ದಾರೆ.

‘ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಅಮೇಠಿಯಲ್ಲಿ ಆಹಾರ ಸಂಸ್ಕರಣಾ ಕೇಂದ್ರ (ಫುಡ್ ಪಾರ್ಕ್) ಸ್ಥಾಪಿಸಲಾಗುವುದು. ಆಗ ರೈತರು ತಮ್ಮ ಬೆಳೆಗಳಿಗೆ ಯೋಗ್ಯ ಬೆಲೆ ಪಡೆಯಬಹುದು’ ಎಂದು ಅವರು ಹೇಳಿದರು.

‘ಬಿಜೆಪಿಯ ಸುಳ್ಳುಗಳ ಬಗ್ಗೆ ಜನರಿಗೆ ತಿಳಿಸುವುದು ಕಾಂಗ್ರೆಸ್ ಕಾರ್ಯಕರ್ತರ ಕರ್ತವ್ಯ’ ಎಂದು ಅವರು ಹೇಳಿದ್ದಾರೆ.

ಈ ಸಭೆಯ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಭೆ ನಡೆಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

‘ರಾಹುಲ್ ಕ್ಷಮೆ ಕೇಳಲಿ’ (ಲಖನೌ ವರದಿ): ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಅಮೇಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡುವ ಪೋಸ್ಟರ್‌ಗಳು ಕಂಡುಬಂದ ಸಂಬಂಧ ದೇಶದ ಜನರಲ್ಲಿ ರಾಹುಲ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

‘ರಾಹುಲ್ ಆಜ್ಞೆಯಂತೆ ಅವರ ಭಟ್ಟಂಗಿಗಳು ಪೋಸ್ಟರ್‌ನಲ್ಲಿ ಮೋದಿ ಅವರನ್ನು ರಾವಣನಂತೆ ಚಿತ್ರಿಸಿದ್ದಾರೆ. ಮೋದಿ ಅವರ ವಿಚಾರದಲ್ಲಿ ಕಾಂಗ್ರೆಸ್ ಅಸಹಿಷ್ಣುತೆ ಪ್ರದರ್ಶಿಸುತ್ತಿದೆ’ ಎಂದು ಉತ್ತರ ಪ್ರದೇಶ ಸಚಿವ ಶ್ರೀಕಾಂತ್ ಶರ್ಮಾ ಆಗ್ರಹಿಸಿದ್ದಾರೆ.

ದೇವಾಲಯಕ್ಕೆ ರಾಹುಲ್ ಭೇಟಿ:

ರಾಯ್‌ಬರೇಲಿಗೆ ಹೋಗುವ ವೇಳೆ ಲಖನೌ ಬಳಿ ಇರುವ ಚುರ್ವಾ ಹನುಮಾನ್ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಗಾಂಧಿ ರಾಜ್ಯ ಪ್ರವಾಸವನ್ನು ಆರಂಭಿಸಿದ್ದಾರೆ.

‘ರಾಹುಲ್ ಅವರು ಉತ್ತರ ಪ್ರದೇಶದಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದರ ಪರಿಣಾಮವಾಗಿ 2022ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನ ಚೆನ್ನಾಗಿರಲಿದೆ’ ಎಂದು ಪಕ್ಷದ ರಾಜ್ಯ ಘಟಕದ ವಕ್ತಾರ ಅಶೋಕ್ ಸಿಂಗ್ ಹೇಳಿದ್ದಾರೆ.

ಕಳೆದ ತಿಂಗಳು ನಡೆದ ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಅಲ್ಲಿನ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು.

‘ಭವಿಷ್ಯ ಗೊತ್ತಿಲ್ಲ’

ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ಉತ್ತರ ಪ್ರದೇಶದಲ್ಲಿ ಪ್ರದರ್ಶನ ಕಾಣಲಿದೆಯೇ ಎಂಬ ಪ್ರಶ್ನೆಗೆ, ‘ನಾನು ಭವಿಷ್ಯ ನುಡಿಯುವವನಲ್ಲ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry