ಕಮಲ ಬಿಟ್ಟು ತೆನೆ ಹೊತ್ತ ಅಸ್ನೋಟಿಕರ್

7

ಕಮಲ ಬಿಟ್ಟು ತೆನೆ ಹೊತ್ತ ಅಸ್ನೋಟಿಕರ್

Published:
Updated:
ಕಮಲ ಬಿಟ್ಟು ತೆನೆ ಹೊತ್ತ ಅಸ್ನೋಟಿಕರ್

ಬೆಂಗಳೂರು: ‘ನಾಯಕತ್ವ ಇಲ್ಲದ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬಿಟ್ಟು ಬೇರೆ ಗತಿಯೇ ಇಲ್ಲ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಲೇವಡಿ ಮಾಡಿದರೆ, ‘ಕಾಂಗ್ರೆಸ್‌ ಬಿಟ್ಟು ಹೊರ ಬಂದು ಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದು ಬನ್ನಿ’ ಎಂದು ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಇಬ್ಬರೂ ನಾಯಕರೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸೋಮವಾರ ಮುಗಿ ಬಿದ್ದು ಟೀಕಾ ಪ್ರಹಾರ ನಡೆಸಿದರು. ‘ಕುಮಾರಸ್ವಾಮಿ ಅಧಿಕಾರಕ್ಕಾಗಿ ಹೊಂಚು ಹಾಕಿರುವ ಸಮಯ ಸಾಧಕ’ ಎಂದು ಸಿದ್ದರಾಮಯ್ಯ ಹೇಳಿರುವುದು ಇಬ್ಬರನ್ನೂ ಕೆರಳಿಸಿತ್ತು. ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಸೇರ್ಪಡೆ ಕಾರ್ಯಕ್ರಮದ ಬಳಿಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ನಾಯಕತ್ವ ಇಲ್ಲದ ಪಕ್ಷ:

‘ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ನಾಯಕತ್ವವೇ ಇಲ್ಲ. ಹೀಗಾಗಿ ಆ ಪಕ್ಷಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲದೆ ಬೇರೆ ನಾಯಕರೇ ಇಲ್ಲ’ ಎಂದು ದೇವೇಗೌಡ ವ್ಯಂಗ್ಯವಾಡಿದರು.

‘ಈ ಕಾರಣಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಸಿದ್ದರಾಮಯ್ಯ ಆಡಳಿತದ ಮಾದರಿಯನ್ನು ದೇಶಾದ್ಯಂತ ಬಿಂಬಿಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಇವರ ಅಭಿವೃದ್ಧಿ ಮಾದರಿ ಏನು ಎಂಬುದು ಚೆನ್ನಾಗಿ ಗೊತ್ತಿದೆ. ಇತ್ತೀಚಿಗೆ ಸಿದ್ದರಾಮಯ್ಯ ಸರ್ಕಾರದ  ಹಗರಣವನ್ನು ಕುಮಾರಸ್ವಾಮಿ ಬಯಲು ಮಾಡಿದ್ದಾರೆ. ಹಗರಣಗಳೇ ಸಿದ್ದರಾಮಯ್ಯ ಆಡಳಿತದ ಮಾದರಿ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರನ್ನು ಕಳೆದುಕೊಂಡರೆ ಕಷ್ಟ ಆಗಬಹುದು. ಎಲ್ಲ ಕಡೆಗಳಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಕರ್ನಾಟಕ ಬಿಟ್ಟರೆ ದೊಡ್ಡ ರಾಜ್ಯವಿಲ್ಲ’ ಎಂದರು.

‘ಜೆಡಿಎಸ್‌ ಕಥೆ ಮುಗಿದೇ ಹೋಯಿತು ಎಂದು ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಿದ್ದಾರೆ. ಸ್ವಲ್ಪ ತಾಳ್ಮೆ ಇರಲಿ ನಮ್ಮ ಪಕ್ಷದ ಶಕ್ತಿ ಏನು ಎಂಬುದು ಮುಂದೆ ಗೊತ್ತಾಗುತ್ತದೆ. ಪಕ್ಷದ ಕಚೇರಿ ಕಿತ್ತುಕೊಂಡರು, ನಾವು ಬೀದಿಗೆ ಬರಬೇಕಾಯಿತು. ಎಲ್ಲವೂ ನೆನಪಿದೆ. ಸಿದ್ದರಾಮಯ್ಯ ಜೆಡಿಎಸ್‌ನಿಂದ ಬೆಳೆದವರು. ಕಾಂಗ್ರೆಸ್‌ಗೆ ಅವರು ಅನಿವಾರ್ಯ ಇರಬಹುದು. ನಮಗೆ ನಮ್ಮದೇ ಶಕ್ತಿ ಇದೆ’ ಎಂದು ದೇವೇಗೌಡ ಹೇಳಿದರು.

ಸಿದ್ದರಾಮಯ್ಯಗೆ ವೈಯಕ್ತಿಕ ಶಕ್ತಿ ಇಲ್ಲ:

‘ಅಪಾರ ಶಕ್ತಿ ಇದೆ ಎಂದು ಸಿದ್ದರಾಮಯ್ಯ ಅವರಿಗೆ ಭ್ರಮೆ ಇದೆ. ಕಾಂಗ್ರೆಸ್‌ ಬಿಟ್ಟು ಹೊರ ಬಂದು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರಲಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

‘ಸಿದ್ದರಾಮಯ್ಯ ದೇವೇಗೌಡರಿಂದ ಶಕ್ತಿ ಪಡೆದು ರಾಜಕೀಯದಲ್ಲಿ ಮುಂದೆ ಬಂದವರು. ಈಗ ಕಾಂಗ್ರೆಸ್‌ ಶಕ್ತಿ ಪಡೆದು ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಸ್ವಂತ ಶಕ್ತಿ ಎಂಬುದಿಲ್ಲ’ ಎಂದರು.

‘ಅಧಿಕಾರಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ನಮ್ಮ ಮನೆ ಬಾಗಿಲಿಗೆ ಬಂದಿವೆಯೇ ಹೊರತು ನಾವು ಯಾವುದೇ ರಾಜಕೀಯ ಪಕ್ಷಗಳ ಮನೆಗೆ ಹೋಗಿಲ್ಲ. ನಾನು ಸಮಯ ಸಾಧಕನಲ್ಲ. ನೀವು ಸಮಯ ಸಾಧಕ. ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದೀರಿ’ ಎಂದು ಕುಮಾರಸ್ವಾಮಿ ಹರಿಹಾಯ್ದರು.

‘ಮಾರ್ಚ್‌ ಒಳಗೆ ಸಾಕಷ್ಟು ಬೆಳವಣಿಗೆಗಳು ಆಗುತ್ತವೆ. ಆಗ ಜೆಡಿಎಸ್‌ನ ಶಕ್ತಿ ಏನೆಂಬುದನ್ನು ನೀವೇ ನೋಡುತ್ತೀರಿ. ರಾಜ್ಯದ ಬೆಳವಣಿಗೆಯ ಬಗ್ಗೆ ಕಳಕಳಿ ಇರುವ ಸಾಕಷ್ಟು ಜನ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ನಮ್ಮ ಪಕ್ಷಕ್ಕೆ ಬರುತ್ತಾರೆ’ ಎಂದು ಅವರು ಹೇಳಿದರು.

‘ನಾವೂ ಆಂತರಿಕ ಸಮೀಕ್ಷೆ ಮಾಡಿದ್ದೇವೆ. ನಮ್ಮ ಪಕ್ಷ 113 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಅಧಿಕಾರ ಹಿಡಿಯುತ್ತದೆ. ಆದ್ದರಿಂದ ಅಧಿಕಾರಕ್ಕಾಗಿ ಬೇರೆಯವರ ಮನೆಗೆ ಹೋಗಬೇಕಾಗಿಲ್ಲ’ ಎಂದರು.

ಗೌಡರ ಭೇಟಿ ಮಾಡಿದ ಇಬ್ರಾಹಿಂ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂದೇ ಗುರುತಿಸಿಕೊಂಡಿರುವ ಸಿ.ಎಂ.ಇಬ್ರಾಹಿಂ ಸೋಮವಾರ ಬೆಳಿಗ್ಗೆ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಸಂಕ್ರಾಂತಿ ಹಬ್ಬದ ಕಾರಣ ಶುಭ ಕೋರಲು ಬಂದಿರುವುದಾಗಿ ಅವರು ಹೇಳಿದರೂ ಜೆಡಿಎಸ್‌ ಸೇರುವ ಬಗ್ಗೆ ಒಲವು ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry