ಪೆಟ್ರೋಲ್, ಡೀಸೆಲ್‌ ತುಟ್ಟಿ

7

ಪೆಟ್ರೋಲ್, ಡೀಸೆಲ್‌ ತುಟ್ಟಿ

Published:
Updated:
ಪೆಟ್ರೋಲ್, ಡೀಸೆಲ್‌ ತುಟ್ಟಿ

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾದಿಯಲ್ಲಿ ಇರುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರ ತುಟ್ಟಿಯಾಗಿದೆ.

ಸೆಪ್ಟೆಂಬರ್‌ ತಿಂಗಳ ಮೊದಲ ವಾರದ ಬೆಲೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ ಈಗ ಪ್ರತಿ ಲೀಟರ್‌ಗೆ ₹ 62.59ಕ್ಕೆ ತಲುಪಿದೆ.

ನಾಲ್ಕು ತಿಂಗಳ ಹಿಂದಿನ ದರಕ್ಕೆ ಹೋಲಿಸಿದರೆ ₹ 5.26 ತುಟ್ಟಿಯಾಗಿದೆ. ಅದೇ ರೀತಿ ಪೆಟ್ರೋಲ್‌ ಬೆಲೆಯು ಈಗ ಪ್ರತಿ ಲೀಟರ್‌ಗೆ 72.17ಕ್ಕೆ ತಲುಪಿ ₹ 1.45 ದುಬಾರಿಯಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಈಗ ಪ್ರತಿ ದಿನ ಇಂಧನಗಳ ಬೆಲೆ ಪರಿಷ್ಕರಿಸುತ್ತಿವೆ. ಇದು ಪೈಸೆಗಳ ಲೆಕ್ಕದಲ್ಲಿ ಇರುವುದರಿಂದ ಬಳಕೆದಾರರಿಗೆ ಅದರ ನೇರ ಬಿಸಿ ತಟ್ಟುತ್ತಿಲ್ಲ.

2017ರ ಡಿಸೆಂಬರ್‌ 12 ರಿಂದ ಇಂಧನ ಬೆಲೆಗಳು ಏರುಗತಿಯಲ್ಲಿ ಇವೆ. ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ಎಕ್ಸೈಸ್‌ ಡ್ಯೂಟಿ ತಗ್ಗಿಸಬೇಕು ಎನ್ನುವ ಬೇಡಿಕೆ ಕೇಳಿ ಬರುತ್ತಿದೆ. ಬಿಜೆಪಿ ನೇತೃತ್ವದಲ್ಲಿನ ಎನ್‌ಡಿಎ ಸರ್ಕಾರ 2017ರ ಅಕ್ಟೋಬರ್‌ 4ರಂದು ಮಾತ್ರ ಒಮ್ಮೆ

ಪ್ರತಿ ಲೀಟರ್‌ಗೆ ₹ 2 ರಂತೆ ಎಕ್ಸೈಸ್‌ ಡ್ಯೂಟಿ ತಗ್ಗಿಸಿತ್ತು. ಇದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಬೆಂಗಳೂರಿನಲ್ಲಿ ಕ್ರಮವಾಗಿ ₹ 69.50 ಮತ್ತು 57ಕ್ಕೆ ಇಳಿಕೆ ಕಂಡಿದ್ದವು. ಆದರೆ, ನಂತರದ ದಿನಗಳಲ್ಲಿ ಬೆಲೆ ಮತ್ತೆ ಏರುಗತಿಯಲ್ಲಿ ಸಾಗಿದ್ದರಿಂದ ಈ ಎರಡೂ ಇಂಧನಗಳು ದುಬಾರಿಯಾಗಿ ಪರಿಣಮಿಸಿವೆ.

‘ರಾಜ್ಯ ಸರ್ಕಾರಗಳು ಮೊದಲು ಮೌಲ್ಯವರ್ಧಿತ ತೆರಿಗೆ ಕಡಿತ ಮಾಡಿದರೆ, ಕೇಂದ್ರವು ಎಕ್ಸೈಸ್‌ ಡ್ಯೂಟಿ ಕಡಿತ ಮಾಡುವುದನ್ನು ಪರಿಶೀಲಿಸಲಿದೆ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಕಳೆದ ವಾರ ಪ್ರತಿಕ್ರಿಯಿಸಿದ್ದರು.

ಎಕ್ಸೈಸ್‌ ಡ್ಯೂಟಿ ಕಡಿತ ಮಾಡಿದ್ದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ ₹ 26 ಸಾವಿರ ಕೋಟಿ ನಷ್ಟ ಉಂಟಾಗಿತ್ತು.

9 ಬಾರಿ ಹೆಚ್ಚಳ: 2014 ರಿಂದ 2016ರ ಅವಧಿಯಲ್ಲಿ ಕೇಂದ್ರ ಸರ್ಕಾರವು ಇಂಧನಗಳ ಮೇಲಿನ ಎಕ್ಸೈಸ್‌ ಡ್ಯೂಟಿಯನ್ನು 9 ಬಾರಿ ಹೆಚ್ಚಿಸಿತ್ತು. 15 ತಿಂಗಳ ಅವಧಿಯಲ್ಲಿ ಪೆಟ್ರೋಲ್‌ ಮೇಲೆ ₹ 11.77 ಮತ್ತು ಡೀಸೆಲ್‌ ಮೇಲೆ ₹ 13.47 ರಂತೆ ಎಕ್ಸೈಸ್‌ ಡ್ಯೂಟಿ ಹೆಚ್ಚಿಸಲಾಗಿತ್ತು. ಇದರಿಂದ ಬೊಕ್ಕಸಕ್ಕೆ 2016–17ನೇ ಹಣಕಾಸು ವರ್ಷದಲ್ಲಿ ₹ 2.42 ಲಕ್ಷ ಕೋಟಿ ವರಮಾನ ಹರಿದು ಬಂದಿತ್ತು. 2014–15ರಲ್ಲಿ ಇದು ಕೇವಲ ₹ 99 ಸಾವಿರ ಕೋಟಿಗಳಷ್ಟಿತ್ತು.

ಎಕ್ಸೈಸ್‌ ಡ್ಯೂಟಿ ಕಡಿತಕ್ಕೆ ಹೆಚ್ಚಿದ ಬೇಡಿಕೆ

15 ತಿಂಗಳಲ್ಲಿ 9 ಬಾರಿ ಎಕ್ಸೈಸ್‌ ಡ್ಯೂಟಿ ಹೆಚ್ಚಳ

2016–17ರಲ್ಲಿ ₹ 2.42 ಲಕ್ಷ ಕೋಟಿ ವರಮಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry