ನ್ಯಾಯಮೂರ್ತಿಗಳ ನೇಮಕಕ್ಕೆ ಒತ್ತಾಯ

7

ನ್ಯಾಯಮೂರ್ತಿಗಳ ನೇಮಕಕ್ಕೆ ಒತ್ತಾಯ

Published:
Updated:

ಬೆಂಗಳೂರು: ನೆನೆಗುದಿಗೆ ಬಿದ್ದಿರುವ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಬೇಕು ಎಂದು ‘ಕರ್ನಾಟಕ ರಾಜ್ಯ ವಕೀಲರ ಸಂಘ’ (ಕೆಆರ್‌ವಿಎಸ್‌) ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರನ್ನು ಒತ್ತಾಯಿಸಿದೆ.

ಈ ಕುರಿತಂತೆ ಪತ್ರ ಬರೆದಿರುವ ಸಂಘವು, ‘ರಾಜ್ಯ ಹೈಕೋರ್ಟ್‌ನಲ್ಲಿ ಸದ್ಯ 25 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಜೂರಾದ ನ್ಯಾಯಮೂರ್ತಿಗಳ ಸಂಖ್ಯೆ 62 ಇದ್ದರೂ ಖಾಲಿ ಇರುವ 37 ಸ್ಥಾನಗಳ ಭರ್ತಿ ಆಗುತ್ತಿಲ್ಲ ಮತ್ತು  2018ರಲ್ಲಿ ನಾಲ್ವರು ನ್ಯಾಯಮೂರ್ತಿಗಳು ನಿವೃತ್ತಿ ಹೊಂದುತ್ತಿದ್ದು ಕೂಡಲೇ ಹೊಸ ನ್ಯಾಯಮೂರ್ತಿಗಳ ನೇಮಕಕ್ಕೆ ಮುಂದಾಗಬೇಕು’ ಎಂದು ಕೋರಿದೆ.

‘ದೇಶದ ಬೇರೆ ಹೈಕೋರ್ಟ್‌ಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ಶೇ 59.68ರಷ್ಟು ಸ್ಥಾನಗಳು ಖಾಲಿ ಉಳಿ

ದಿವೆ. ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಶೇ 54.2, ತೆಲಂಗಾಣ ಹೈಕೋರ್ಟ್‌ನಲ್ಲಿ ಶೇ49.2, ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ 41.18

ರಷ್ಟು, ಗುಜರಾತ್‌ನಲ್ಲಿ 40.38, ದೆಹಲಿಯಲ್ಲಿ ಶೇ 38.33, ರಾಜಸ್ಥಾನದಲ್ಲಿ ಶೇ 32, ಬಾಂಬೆ ಹೈಕೋರ್ಟ್‌ನಲ್ಲಿ ಶೇ 25.5, ಕೇರಳದಲ್ಲಿ ಶೇ 21.28ರಷ್ಟು ಹಾಗೂ ಮದ್ರಾಸ್‌ ಹೈಕೋರ್ಟ್‌ನಲ್ಲಿ ಶೇ 20ರಷ್ಟು ಸ್ಥಾನಗಳು ಖಾಲಿ ಉಳಿದಿವೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

‘2017ರ ಡಿಸೆಂಬರ್ 31ಕ್ಕೆ ಕೊನೆಗೊಂಡಂತೆ ರಾಜ್ಯ ಹೈಕೋರ್ಟ್‌

ನಲ್ಲಿ 2,93,768 ಸಿವಿಲ್‌ ಹಾಗೂ 29,957 ಕ್ರಿಮಿನಲ್‌ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ’ ಎಂದೂ ಹೇಳಲಾಗಿದೆ.

ನ್ಯಾಯಮೂರ್ತಿಗಳ ನೇಮಕ ವಿಳಂಬ ಪ್ರಶ್ನಿಸಿ ಕೆಆರ್‌ವಿಎಸ್‌ ಅಧ್ಯಕ್ಷ ಪಿ.ಪಿ.ಹೆಗ್ಡೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಂದಿನ ತಿಂಗಳ ಮೊದಲ ವಾರದಲ್ಲಿ ವಿಚಾರಣೆಗೆ ಬರಲಿದೆ.

ನಾಲ್ವರ ನಿವೃತ್ತಿ: ಇದೇ ತಿಂಗಳ 26ರಂದು ನ್ಯಾಯಮೂರ್ತಿ ರತ್ನಕಲಾ ನಿವೃತ್ತಿ ಆಗಲಿದ್ದರೆ, ಇದೇ ವರ್ಷದ ಮೇ 31ರಂದು ಬಿ.ಎಸ್‌.ಪಾಟೀಲ, ಜೂನ್‌ 15ಕ್ಕೆ ಬಿ.ಶ್ರೀನಿವಾಸೇಗೌಡ ಹಾಗೂ ಸೆಪ್ಟೆಂಬರ್‌ 30ಕ್ಕೆ ಆರ್.ಬಿ.ಬೂದಿಹಾಳ ನಿರ್ಗಮಿಸಲಿದ್ದಾರೆ.

ಶಿಫಾರಸು: ಕಳೆದ ತಿಂಗಳಷ್ಟೇ ಸುಪ್ರೀಂ ಕೋರ್ಟ್‌ ಕೊಲಿಜಿಯಂ ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿಗಳ ಸ್ಥಾನಕ್ಕೆ ದೀಕ್ಷಿತ್ ಕೃಷ್ಣ ಶ್ರೀಪಾದ, ಶಂಕರ ಗಣಪತಿ ಭಟ್‌, ರಾಮಕೃಷ್ಣ ದೇವದಾಸ್, ಬಿ.ಎಂ.ಶ್ಯಾಮ್‌ ಪ್ರಸಾದ್ ಮತ್ತು ಸಿದ್ದಪ್ಪ ಸುನಿಲ್‌ ದತ್‌ ಯಾದವ್‌ ಅವರ ಹೆಸರನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry