‘ಜನಸಾಮಾನ್ಯರ’ ಪಕ್ಷಕ್ಕೆ ಚಂಪಾ ಬೆಂಬಲ

7

‘ಜನಸಾಮಾನ್ಯರ’ ಪಕ್ಷಕ್ಕೆ ಚಂಪಾ ಬೆಂಬಲ

Published:
Updated:

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ಜನಸಾಮಾನ್ಯರ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದರ ಜೊತೆಗೆ ಕನ್ನಡ ಪರ ಸಂಘಟನೆಗಳನ್ನು ಈ ಪಕ್ಷಕ್ಕೆ ತರುವ ಪ್ರಯತ್ನ ಮಾಡುವುದಾಗಿ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಹೇಳಿದರು.

ಸೋಮವಾರ ಇಲ್ಲಿ ಆಯೋಜಿಸಿದ್ದ ಜನಸಾಮಾನ್ಯರ ಪಕ್ಷದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಷ್ಟ್ರೀಯ ಪಕ್ಷಗಳು ಹಾಗೂ ರಾಜ್ಯದ ಪ್ರಾದೇಶಿಕ ಪಕ್ಷ ಒಕ್ಕೂಟ ವ್ಯವಸ್ಥೆಯ ಹಿತಾಸಕ್ತಿ ಕಾಪಾಡುವ ಕಾರ್ಯವನ್ನು ಮಾಡದೇ ಇರುವುದರಿಂದ ಇನ್ನೊಂದು ಪ್ರಾದೇಶಿಕ ಪಕ್ಷದ ಅಗತ್ಯ ಇತ್ತು. ಇದು ಅವಕಾಶ ವಂಚಿತವಾಗಿ ಹುಟ್ಟದೇ ಜನ ಸಾಮಾನ್ಯರಿಂದ ಸ್ಥಾಪನೆಯಾದ ಪಕ್ಷ. ಬುದ್ಧ ಬಸವ,ಅಂಬೇಡ್ಕರ ತತ್ವ ಸಿದ್ದಾಂತದ ಅಡಿ ಸ್ಥಾಪನೆಯಾಗಿರುವುದರಿಂದ ದಾರಿ ತಪ್ಪಲು ಸಾಧ್ಯ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಪಕ್ಷದ ನೂತನ ಅಧ್ಯಕ್ಷ ಡಾ. ಅಯ್ಯಪ್ಪ ರಾಮಣ್ಣ ದೊರೆ ಅವರಿಗೆ, ಪಕ್ಷದ ಧ್ವಜ ಹಸ್ತಾಂತರಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಸತೀಶ ಟಿ.ವಿ, ‘ಬಸವ ತತ್ವ ವಿರೋಧಿಸುವ ರಾಜಕೀಯ ಪಕ್ಷವನ್ನು ಮನೆಗೆ ಕಳುಹಿಸುವ ಕೆಲಸವನ್ನು ಜನಸಾಮಾನ್ಯರು ಮಾಡಬೇಕು’ ಎಂದು ಹೇಳಿದರು.

‘ಲಿಂಗಾಯತ ಧರ್ಮಕ್ಕೆ ಮೂರೂ ಪಕ್ಷಗಳು ಅನ್ಯಾಯ ಮಾಡುತ್ತಿವೆ. ಕಾಂಗ್ರೆಸ್‌ ಪಕ್ಷಕ್ಕೆ ಲಿಂಗಾಯತರ ಬಗ್ಗೆ ಸ್ಪಷ್ಟತೆಯಿಲ್ಲ. ಜೆಡಿಎಸ್‌ನ ಕುಮಾರಸ್ವಾಮಿ, ಲಿಂಗಾಯತರನ್ನು ಕೊಲ್ಲಲು ಯಡಿಯೂರಪ್ಪ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿದರು.

ಡಾ. ಅಯ್ಯಪ್ಪ ಮಾತನಾಡಿ, ‘ರಾಜಕೀಯ ಪಕ್ಷಗಳು ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯಮಾಡುತ್ತಿವೆ. ಆರ್‌ಎಸ್‌ಎಸ್ ಒಂದು ನಿರುದ್ಯೋಗಿಗಳ ಸಂಘವಾಗಿದ್ದು, ಪ್ರಧಾನಿ ಮೋದಿ ಅದರ ಸದಸ್ಯ. ಬರಿ ಭಾಷಣ ಮಾಡುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಹರಿಹಾಯ್ದರು.

ಡಾ. ಅಯ್ಯಪ್ಪ ಅವರ ತಾಯಿ, ನಿಂಬೆವ್ವ ರಾಮಣ್ಣ ದೊರೆ ಉದ್ಘಾಟಿಸಿದರು. ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ, ರೈತ ಮುಖಂಡ ಮುತ್ತಪ್ಪ ಕೋಮಾರ, ನಾಗರಾಜ ಹೊಂಗಲ್‌, ಈರಪ್ಪ ಹಂಚಿನಾಳ, ಪ್ರಭಾವತಿ ಅರಳಿಮಟ್ಟಿ ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry