ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಧ್ವಜ ವಿನ್ಯಾಸ ಅಂತಿಮಗೊಳಿಸಲು ಸಿದ್ದತೆ

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಧ್ವಜ ವಿನ್ಯಾಸ ಸಮಿತಿ, ವಿನ್ಯಾಸ ಅಂತಿಮಗೊಳಿಸಿ ಸರ್ಕಾರಕ್ಕೆ ಶೀಘ್ರವೇ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ಕನ್ನಡ ಧ್ವಜ ವಿನ್ಯಾಸ ಮತ್ತು ಅದಕ್ಕೆ ಕಾನೂನಿನ ಬಲ ನೀಡುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್‌ ಅಧ್ಯಕ್ಷತೆಯಲ್ಲಿ 9 ಸದಸ್ಯರನ್ನು ಒಳಗೊಂಡ ತಜ್ಞರ ಸಮಿತಿಯನ್ನು 2017ರ ಜೂನ್‌ನಲ್ಲಿ ಸರ್ಕಾರ ರಚನೆ ಮಾಡಿದೆ.

ಈ ಸಮಿತಿ ಎರಡು ಸಭೆ ನಡೆಸಿದ್ದು, ಬುಧವಾರ( ಇದೇ 17ರಂದು) ಮೂರನೇ ಸಭೆ ನಡೆಸಲಿದೆ. ಈ ಸಭೆಯಲ್ಲಿ ಧ್ವಜ ವಿನ್ಯಾಸ ಅಂತಿಮ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಮೊದಲ ಸಭೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕೇ, ಬೇಡವೆ ಎಂಬ ಚರ್ಚೆ ನಡೆದಿತ್ತು. ಎರಡನೇ ಸಭೆಯಲ್ಲಿ ಈ ಗೊಂದಲ ನಿವಾರಣೆಯಾಗಿದೆ. ಧ್ವಜದ ಬಣ್ಣ, ವಿನ್ಯಾಸ ಅಂತಿಮಗೊಳಿಸುವ ಮತ್ತು ಕಾನೂನಿನ ಅಂಶಗಳ ಬಗ್ಗೆ ಪರಿಶೀಲಿಸುವ ಕೆಲಸ ಬಾಕಿ ಇದೆ’ ಎಂದೂ ಮೂಲಗಳು ಹೇಳಿವೆ.

ಧ್ವಜದ ನಾಲ್ಕೈದು ವಿನ್ಯಾಸಗಳನ್ನು ಸಿದ್ಧಪಡಿಸಿ ಮುಂದಿನ ಸಭೆಗೆ ತರುವ ಜವಾಬ್ದಾರಿಯನ್ನು ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ವಹಿಸಲಾಗಿದೆ. ಕಾನೂನಾತ್ಮಕ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲು ಕಾನೂನು ಇಲಾಖೆ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಹೆಚ್ಚು ಕಾಲ ಬೇಕಾಗುವುದಿಲ್ಲ ಎಂದೂ ಮೂಲಗಳು ವಿವರಿಸಿವೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗೃಹ ಇಲಾಖೆ, ಕಾನೂನು ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ, ಕನ್ನಡ– ಸಂಸ್ಕೃತಿ ಇಲಾಖೆ ನಿರ್ದೇಶಕರು ಈ ಸಮಿತಿಯಲ್ಲಿದ್ದಾರೆ.

ಕನ್ನಡಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ನಿರ್ಧಾರಕ್ಕೆ ಸಮಿತಿ ಬಂದಿದೆ. ಕಾನೂನಿನ ಅಂಶ ಪರಿಶೀಲಿಸಿ, ವಿನ್ಯಾಸ ಅಂತಿಮಗೊಳಿಸಲಾಗುವುದು
ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

ವಿನ್ಯಾಸಕ್ಕೆ ಹೆಚ್ಚು ಕಾಲ ಹಿಡಿಯುವುದಿಲ್ಲ. ಒಂದು ಅಥವಾ ಎರಡು ಸಭೆಯಲ್ಲಿ ಅಂತಿಮಗೊಳಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು</p><p>ಎಸ್.ಜಿ. -ಸಿದ್ಧರಾಮಯ್ಯ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT