ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿ ನೀರು ಹಂಚಿಕೆ ಸೌಹಾರ್ದ ಪರಿಹಾರ ಕಾಣಲಿ

Last Updated 15 ಜನವರಿ 2018, 19:24 IST
ಅಕ್ಷರ ಗಾತ್ರ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ತೀರ್ಪನ್ನು ನಾಲ್ಕು ವಾರಗಳೊಳಗೆ ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಕಳೆದ ವಾರ ಹೇಳಿರುವುದು ಆಶಾದಾಯಕ ಬೆಳವಣಿಗೆ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ ಎಂಬುದನ್ನು  ಕೋರ್ಟ್ ಪ್ರಸ್ತಾಪಿಸಿದೆ. 2007ರಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿರುವ ಐತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಸಲ್ಲಿಸಿರುವ ವಿಶೇಷ ಮೇಲ್ಮನವಿಯ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಪೀಠ,  ಕಳೆದ ವರ್ಷ ಸೆಪ್ಟೆಂಬರ್ 20ರಂದು ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಮಂಡಳಿ ನೀಡಿರುವ ಐತೀರ್ಪಿನ ಪ್ರಕಾರ ಪ್ರತಿವರ್ಷ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರನ್ನು ಕರ್ನಾಟಕ ನೀಡಬೇಕಿದೆ. ಆದರೆ ಅನೇಕ ಬಾರಿ ಮಳೆ ಕೈಕೊಟ್ಟು ಲೆಕ್ಕಾಚಾರ ತಪ್ಪಿದಾಗ ಉಭಯ ರಾಜ್ಯಗಳ ನಡುವೆ ಸಂಘರ್ಷ ಉಂಟಾಗುತ್ತಿದೆ.

ಅನೇಕ ಸಂದರ್ಭಗಳಲ್ಲಿ ಹಿಂಸಾಚಾರಗಳಿಗೂ ಕಾರಣವಾಗಿದೆ ಎಂಬುದನ್ನು ಸ್ಮರಿಸಬಹುದು. ’ಕಾವೇರಿ ನದಿ ನೀರಿನಲ್ಲಿ ಈ ವರ್ಷ (2017–18ನೇ ಸಾಲು) ಎಷ್ಟು ನೀರು ಬರಬೇಕಿತ್ತೋ ಅಷ್ಟು ನೀರು ಬಂದಿಲ್ಲ. ಹಾಗಾಗಿ 15 ಟಿಎಂಸಿ ಅಡಿ ನೀರನ್ನು ತಕ್ಷಣವೇ ತಮಿಳುನಾಡಿಗೆ ಹರಿಸಬೇಕು' ಎಂದು ಮೊನ್ನೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತೆ ಪತ್ರ ಬರೆದಿದ್ದಾರೆ. ಆದರೆ, ’ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ’ ಎಂದು ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸನಿಹದಲ್ಲಿರುವಾಗ ಇಂತಹ ನಿಲುವು ಪ್ರಕಟಿಸುವುದು ಸಿದ್ದರಾಮಯ್ಯ ಅವರಿಗೆ ಅನಿವಾರ್ಯವೂ ಹೌದು. ಕಾವೇರಿ ಜಲಾನಯನ ಪ್ರದೇಶದ ರೈತರ ವಿಶ್ವಾಸ ಗಳಿಸಿಕೊಳ್ಳುವುದು ಅವರಿಗೆ ಈಗ ರಾಜಕೀಯವಾಗಿಯೂ ಮುಖ್ಯವಾಗಿದೆ. ಇಂತಹ ಸನ್ನಿವೇಶದಲ್ಲಿ ಮುಂದಿನ ತಿಂಗಳು ಹೊರಬೀಳಲಿರುವ ನ್ಯಾಯಾಲಯದ ತೀರ್ಪಿನ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವುದನ್ನೂ ಮುಖ್ಯಮಂತ್ರಿ ಧ್ವನಿಸಿದ್ದಾರೆ. ಹೀಗಾಗಿ ಚುನಾವಣೆ ಹೊತ್ತಿನಲ್ಲಿ ಹೊರಬೀಳಲಿರುವ ತೀರ್ಪು ರಾಜಕೀಯ ವಾಗ್ವಾದಗಳ ಕೇಂದ್ರ ಬಿಂದುವಾಗಲಿರುವುದು ಗೋಚರವಾಗುತ್ತಿದೆ.

ಇಂತಹ ನದಿ ನೀರು ವಿವಾದ ಕಾವೇರಿಗಷ್ಟೇ ಸೀಮಿತವಲ್ಲ. ಮಹದಾಯಿ ಜಲ ವಿವಾದವಂತೂ ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಮಧ್ಯೆ ಸುಮಾರು 30 ವರ್ಷಗಳಿಂದ ಕುದಿಯುತ್ತಿದೆ. ಮಹದಾಯಿ ನೀರಿಗಾಗಿ ಕಳೆದ ತಿಂಗಳು  27ರಂದು ಉತ್ತರ ಕರ್ನಾಟಕ ಬಂದ್ ಮಾಡಲಾಗಿತ್ತು. ರಾಷ್ಟ್ರದಲ್ಲಿ ಇಂತಹ ಅನೇಕ ನದಿ ನೀರು ವಿವಾದಗಳು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತವೆ. ಮಹಾನದಿ ನೀರಿನ ಹಕ್ಕಿನ ವಿಚಾರದಲ್ಲಿ ಒಡಿಶಾ ಮತ್ತು ಛತ್ತೀಸಗಡ ರಾಜ್ಯಗಳ ಮಧ್ಯೆ ವಿವಾದ ಜೀವಂತವಾಗಿದೆ. ಕೃಷ್ಣಾ ಮತ್ತು ಗೋದಾವರಿ ನದಿ ನೀರಿನ ಬಗ್ಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ, ಸಟ್ಲೆಜ್- ಯಮುನಾ ಜೋಡಣೆ ವಿಚಾರದ ಬಗ್ಗೆ ಪಂಜಾಬ್ ಹಾಗೂ ಹರಿಯಾಣ ಮಧ್ಯದ ಭಿನ್ನಾಭಿಪ್ರಾಯಗಳು ಬಗೆಹರಿದಿಲ್ಲ.

ಈ ಬೆಳವಣಿಗೆಗಳನ್ನು ಗಮನಿಸಿದಲ್ಲಿ ನಿಗದಿತ ಗಡುವಿನಲ್ಲಿ ರಾಜ್ಯಗಳ ಮಧ್ಯದ ಜಲ ವಿವಾದಗಳು ಇತ್ಯರ್ಥವಾಗುವುದು ಅಗತ್ಯ. ಇದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವಂತಹ ಅಂತರರಾಜ್ಯ ನದಿ ನೀರು ವಿವಾದ ( ತಿದ್ದುಪಡಿ) ಮಸೂದೆ–2017 ಸಂಸತ್‍ನಲ್ಲಿ ಮಂಡನೆಯಾಗಿದೆ ಎಂಬುದು ಸಮಾಧಾನಕರ. ಇದರ ಸಾಧಕ- ಬಾಧಕಗಳು ಚರ್ಚೆಯಾಗಬೇಕು. ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆ ಕಾರಣ, ನೀರಿಗೆ ಸಂಬಂಧಿಸಿದ ಒತ್ತಡಗಳು ಮತ್ತಷ್ಟು ಹೆಚ್ಚಲಿವೆ. ಸರಿಯಾದ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, ಅಸಮಾನ ನೀರು ಹಂಚಿಕೆ ಹೆಚ್ಚಾಗಲಿದ್ದು ನೀರು ಸಂಘರ್ಷ ಸಾಧ್ಯತೆಗಳು ಹೆಚ್ಚಾಗಲಿವೆ. ಇದು ರಾಷ್ಟ್ರದ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದು. ಹೀಗಾಗಿ ಸಂವಾದಗಳ ಮೂಲಕ ಜಲ ವಿವಾದಗಳು ಬಗೆಹರಿಯಬೇಕಾದುದು ಮುಖ್ಯ. ರಾಜಕೀಯ ಅವಕಾಶವಾದಗಳಿಗೆ ಇವು ಕಾರಣವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT