‘ಗೋವಾದವರಂತೆ ಕೀಳುಮಟ್ಟಕ್ಕೆ ಇಳಿಯುವುದಿಲ್ಲ’

7

‘ಗೋವಾದವರಂತೆ ಕೀಳುಮಟ್ಟಕ್ಕೆ ಇಳಿಯುವುದಿಲ್ಲ’

Published:
Updated:
‘ಗೋವಾದವರಂತೆ ಕೀಳುಮಟ್ಟಕ್ಕೆ ಇಳಿಯುವುದಿಲ್ಲ’

ಬೆಳಗಾವಿ: ಕನ್ನಡಿಗರ ಬಗ್ಗೆ ಗೋವಾ ಜಲಸಂಪನ್ಮೂಲ ಸಚಿವ ಪಾಲ್ಯೇಕರ್‌ ಹೇಳಿಕೆ ಖಂಡಿಸಿರುವ ಸಚಿವ ರಮೇಶ ಜಾರಕಿಹೊಳಿ, ‘ನಾವು ಮೊದಲು ಭಾರತೀಯರು. ನೀರಿನ ಹೆಸರಿನಲ್ಲಿ ರಾಜಕೀಯ ಮಾಡುವಂತಹ ಮೂರ್ಖತನ ನಮಗೆ ಬಂದಿಲ್ಲ. ಅವರಂತೆ ನಾವು ಕೀಳುಮಟ್ಟಕ್ಕೆ ಇಳಿಯುವುದಿಲ್ಲ’ ಎಂದು ತಿರುಗೇಟು ನೀಡಿದರು.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹತಾಶಗೊಂಡಿದ್ದಾರೆ. ಹೀಗಾಗಿ, ಮಹದಾಯಿ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಗೋವಾದ ಸಚಿವರಿಗೆ ಸಚಿವ ಹಾಗೂ ಶಾಸಕ ಸ್ಥಾನದ ಅರಿವಿಲ್ಲ. ಮಾತುಗಳು ಅವರ ಸಂಸ್ಕೃತಿಯನ್ನು  ಬಿಂಬಿಸುತ್ತವೆ. ಅವರು ಮಾತನಾಡಿದರೆಂದು ನಾವು ಗೋವಾದವರನ್ನು ಟೀಕಿಸುವುದಿಲ್ಲ. ಕನ್ನಡಿಗರು ಯಾರಿಗೂ ದ್ರೋಹ ಬಗೆಯುವುದಿಲ್ಲ. ವಿವಾದವನ್ನು ಕಾನೂನು ಪ್ರಕಾರವೇ ಬಗೆಹರಿಸಿಕೊಳ್ಳಲು ಶ್ರಮಿಸುತ್ತಿದ್ದೇವೆ. ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

ಹೇಳಿಕೆ ನೀಡಿದವರೇ ಹರಾಮಿ ಇರಬೇಕು:

‘ಕರ್ನಾಟಕದವರು ಹರಾಮಿಗಳು ಎಂದಿರುವ ಗೋವಾ ಸಚಿವರೇ ಹರಾಮಿ ಇರಬೇಕು. ಇಲ್ಲದಿದ್ದರೆ ಅಂತಹ ಹೇಳಿಕೆ ಕೊಡುತ್ತಿರಲಿಲ್ಲ’ ಎಂದು ಮುಖ್ಯ ಸಚೇತಕ ಅಶೋಕ ಪಟ್ಟಣ ಟೀಕಿಸಿದರು.

‘ಅನುಮತಿ ಇಲ್ಲದೇ, ನಮ್ಮ ನೆಲದಲ್ಲಿನ ಕಾಮಗಾರಿ ವೀಕ್ಷಿಸಲು ಅವರು ಬಂದಿರುವುದೇ ತಪ್ಪು. ಅಂಥದ್ದರಲ್ಲಿ ಇಂಥ ಮಾತಿನ ಮೂಲಕ ಶಾಂತಿ ಕದಡುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.

ವಿವಾದ ನ್ಯಾಯಮಂಡಳಿಯಲ್ಲಿ ಇದೆ. ಹೀಗಾಗಿ, ಕಣಕುಂಬಿಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಸ್ಥಳಕ್ಕೆ ಗೋವಾದ ಯಾವ ಸಚಿವರೂ ಬಾರದಂತೆ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಣಕುಂಬಿಯಲ್ಲಿ ರಸ್ತೆತಡೆ,  ಪಾಲ್ಯೇಕರ್‌ ಪ್ರತಿಕೃತಿ ದಹನ:

ಗೋವಾ ಸಚಿವ ಪಾಲ್ಯೇಕರ್‌ ಹೇಳಿಕೆ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಗೋವಾ ಜಲಸಂಪನ್ಮೂಲ ಸಚಿವರ ಪ್ರತಿಕೃತಿ ಹಾಗೂ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಪ್ರವಾಸಿಮಂದಿರದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಪದಾಧಿಕಾರಿಗಳು, ಗೋವಾಕ್ಕೆ ಕರ್ನಾಟಕದಿಂದ ಹಾಲು ಹಾಗೂ ತರಕಾರಿ ಪೂರೈಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿದರು. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.

ಗೋವಾ ಬಸ್ಸಿಗೆ ಕಪ್ಪು ಬಾವುಟ

ಗೋವಾ ಸಚಿವ ವಿನೋದ ಪಾಲ್ಯೇಕರ ಪ್ರತಿಕೃತಿಯನ್ನು ದಹಿಸಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ ಬಸ್‌ ನಿಲ್ದಾಣದಲ್ಲಿ, ಗೋವಾ ಬಸ್ಸೊಂದಕ್ಕೆ ಕಪ್ಪು ಬಾವುಟ ಕಟ್ಟಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಮಹಾದಾಯಿ ಕಳಸಾ ಬಂಡೂರಿ ಕೇಂದ್ರ ಸಮನ್ವಯ ಸಮಿತಿ ಕಾರ್ಯಕರ್ತರು ಧಾರವಾಡದ ಆಲೂರು ವೆಂಕಟರಾವ್ ವೃತ್ತದಲ್ಲಿ ಪಾಲ್ಯೇಕರ ಪ್ರತಿಕೃತಿಯನ್ನು ದಹಿಸಿದರು.

ಸರ್ವಪಕ್ಷ ಸಭೆ ಕರೆಯಲು ಆಗ್ರಹ:

ಹುಬ್ಬಳ್ಳಿ: ‘ಗೋವಾದ ಸಚಿವ ಕರ್ನಾಟಕದ ಜನರನ್ನು ಅವಮಾನಿಸಿದರೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮತ್ತು ಸಂಸದ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸುತ್ತಿಲ್ಲ’ ಎಂದು ಟೀಕಿಸಿದ ನವಲಗುಂದ ಶಾಸಕ ಎನ್‌.ಎಚ್‌. ಕೋನರಡ್ಡಿ, ಮಹದಾಯಿ ನದಿನೀರು ಹಂಚಿಕೆ ವಿವಾದ ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು ಒತ್ತಾಯಿಸಿದರು.

‘ಚುನಾವಣೆ: ಮಹದಾಯಿ ಹೆಸರು ಬಳಸಬೇಡಿ’

ನರಗುಂದ (ಗದಗ ಜಿಲ್ಲೆ): ’ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಹದಾಯಿ ವಿಷಯವನ್ನು ಬಳಸಿಕೊಳ್ಳಬಾರದು. ಮಹದಾಯಿ ಹೆಸರು ಬಳಸದೇ ಚುನಾವಣೆ ಎದುರಿಸಬೇಕು’ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

‘ಕೂಡಲಸಂಗಮದಲ್ಲಿ  ‘ಜನಸಾಮಾನ್ಯರ ಪಕ್ಷ’  ಅಸ್ತಿತ್ವಕ್ಕೆ ಬಂದಿದ್ದು ಸ್ವಾಗತಾರ್ಹ. ಇದರಿಂದ ಉತ್ತರ ಕರ್ನಾಟಕ ಅಭಿವೃದ್ಧಿಯಾದರೆ ಸಂತೋಷ’ ಎಂದರು.

ಸರ್ವಪಕ್ಷ ಸಭೆ ಬಳಿಕ ಮಹದಾಯಿ ಹೋರಾಟದ ನಡೆಯನ್ನು ನಿರ್ಧರಿಸಲಾಗುವುದು ಎಂದ ಅವರು, ಗೋವಾ ಸಚಿವ ವಿನೋದ ಪಾಲ್ಯೇಕರ್‌ ಕನ್ನಡಿಗರ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry