ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಾಲ್‌, ವೋಜ್ನಿಯಾಕಿ ಗೆಲುವಿನ ಆರಂಭ

ಅಮೆರಿಕದ ವೀನಸ್‌ ವಿಲಿಯಮ್ಸ್‌, ಯೂಕಿ ಭಾಂಬ್ರಿ ಸವಾಲು ಅಂತ್ಯ
Last Updated 15 ಜನವರಿ 2018, 19:46 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಎಎಫ್‌ಪಿ): ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತು ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ, ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ ಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.

ರಾಡ್‌ ಲೇವರ್‌ ಅರೆನಾದಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ ನಡಾಲ್‌ 6–1, 6–1, 6–1ರಲ್ಲಿ ವಿಕ್ಟರ್‌ ಎಸ್ಟ್ರೆಲ್ಲಾ ಬರ್ಗೊಸ್‌ ವಿರುದ್ಧ ಗೆದ್ದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನಡಾಲ್‌ ಹೋದ ವರ್ಷ ರನ್ನರ್‌ ಅಪ್‌ ಆಗಿದ್ದರು. ಫೈನಲ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ವಿರುದ್ಧ ಸೋತಿದ್ದರು.

ಗಾಯದಿಂದ ಗುಣಮುಖರಾದ ನಂತರ ಪ್ರದರ್ಶನ ಪಂದ್ಯವೊಂದರಲ್ಲಿ ಆಡಿ ಸೋತಿದ್ದ ನಡಾಲ್‌, 81ನೇ ಶ್ರೇಯಾಂಕಿತ ಆಟಗಾರ ವಿಕ್ಟರ್‌ ವಿರುದ್ಧ ಮೂರೂ ಸೆಟ್‌ಗಳಲ್ಲೂ ಪ್ರಾಬಲ್ಯ ಮೆರೆದರು.

ಎದುರಾಳಿಯ ಎಂಟು ಸರ್ವ್‌ಗಳನ್ನು ಮುರಿದ ಅವರು 28 ವಿನ್ನರ್‌ಗಳನ್ನು ಸಿಡಿಸಿ ಅಂಗಳದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು. ನಡಾಲ್‌ ರ‍್ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಶರವೇಗದ ಸರ್ವ್‌ಗಳು ಮತ್ತು ಬಲಿಷ್ಠ ರಿಟರ್ನ್‌ಗಳಿಗೆ ನಿರುತ್ತರರಾದ ವಿಕ್ಟರ್‌ ಸುಲಭವಾಗಿ ಸೋಲೊಪ್ಪಿಕೊಂಡರು.

ಗ್ರ್ಯಾನ್‌ ಸ್ಲಾಮ್‌ನಲ್ಲಿ 17 ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್‌ ಮುಂದಿನ ಸುತ್ತಿನಲ್ಲಿ ಅರ್ಜೆಂಟೀನಾದ ಲಿಯೊನಾರ್ಡೊ ಮೇಯರ್‌ ಸವಾಲು ಎದುರಿಸಲಿದ್ದಾರೆ.

ದಿನದ ಇನ್ನೊಂದು ಪಂದ್ಯದಲ್ಲಿ ಲಿಯೊನಾರ್ಡೊ 6–2, 7–6, 6–3ರಲ್ಲಿ ನಿಕೊಲಸ್‌ ಜೆರಿ ವಿರುದ್ಧ ಗೆದ್ದರು.

(ಪಂದ್ಯ ಗೆದ್ದ ನಂತರ ಸ್ಪೇನ್‌ನ ರ‍ಫೆಲ್‌ ನಡಾಲ್‌ ಸಂಭ್ರಮಿಸಿದರು ಎಎಫ್‌ಪಿ ಚಿತ್ರ)

ಈ ವಿಭಾಗದ ಇತರ ಪಂದ್ಯಗಳಲ್ಲಿ ಮರಿನ್‌ ಸಿಲಿಕ್‌ 6–2, 6–2, 4–6, 7–6ರಲ್ಲಿ ವಾಸೆಕ್‌ ಪೊಸ್ಪಿಸಿಲ್‌ ಎದುರೂ, ಅಲೆಕ್ಸಾಂಡರ್‌ ಡೊಗೊಪೊಲೊವ್‌ 7–6, 6–3, 6–4ರಲ್ಲಿ ಆ್ಯಂಡ್ರೆಸ್‌ ಹೈದರ್‌ ಮೌರೆರ್‌ ಮೇಲೂ, ಪ್ಯಾಬ್ಲೊ ಕರೆನೊ ಬುಸ್ತಾ 7–5, 4–6, 7–5, 6–1ರಲ್ಲಿ ಜೇಸನ್‌ ಕುಬ್ಲರ್‌ ವಿರುದ್ಧವೂ, ಪ್ಯಾಬ್ಲೊ ಕ್ಯುವಾಸ್‌ 7–6, 6–3, 7–5ರಲ್ಲಿ ಮಿಖಾಯಿಲ್‌ ಯೂಜ್ನಿ ಎದುರೂ, ಗಿಲ್ಲೆಸ್‌ ಮುಲ್ಲರ್‌ 7–5, 6–4, 6–3ರಲ್ಲಿ ಫೆಡೆರಿಕೊ ಡೆಲ್‌ ಬೊನಿಸ್‌ ವಿರುದ್ಧವೂ, ರ‍್ಯಾನ್‌ ಹ್ಯಾರಿಸನ್‌ 6–3, 5–7, 3–6, 7–5, 6–2ರಲ್ಲಿ ದುದಿ ಸೆಲಾ ಮೇಲೂ, ಡೆನಿಸ್‌ ಇಸ್ತೋಮಿನ್‌ 6–2, 6–1, 5–7, 7–6ರಲ್ಲಿ ಪಿಯೆರೆ ಹ್ಯೂಸ್‌ ಹರ್ಬರ್ಟ್‌ ಎದುರೂ, ಮ್ಯಾಥ್ಯೂ ಎಬ್ಡೆನ್‌ 6–4, 3–6, 6–3, 6–3ರಲ್ಲಿ ಜಾನ್‌ ಇಸ್ನರ್‌ ವಿರುದ್ಧವೂ, ಗ್ರಿಗೊರ್‌ ಡಿಮಿಟ್ರೊವ್‌ 6–3, 6–2, 6–1ರಲ್ಲಿ ಡೆನಿಸ್‌ ನೊವಾಕ್‌ ಎದುರೂ, ಡೆನಿಸ್‌ ಶಪೊಲೊವ್‌ 6–1, 6–3, 7–6ರಲ್ಲಿ ಸ್ಟೆಫಾನೊಸ್‌ ಸಿಟ್ಸಿಪಸ್‌ ಮೇಲೂ, ಆ್ಯಂಡ್ರೆಸ್‌ ಸೆಪ್ಪಿ 3–6, 6–4, 6–2, 6–2ರಲ್ಲಿ ಕೊರೆಂಟಿನ್‌ ಮೌಟೆಟ್‌ ವಿರುದ್ಧವೂ, ಜಾನ್ ಮಿಲ್‌ಮ್ಯಾನ್‌ 7–5, 6–4, 6–1ರಲ್ಲಿ ಬೊರ್ನಾ ಕೊರಿಕ್‌ ಎದುರೂ, ಗಿಲ್ಲೆಸ್‌ ಸಿಮನ್‌ 7–5, 6–4, 6–3ರಲ್ಲಿ ಮರಿಯಸ್‌ ಕೊಪಿಲ್‌ ವಿರುದ್ಧವೂ, ನಿಕ್‌ ಕಿರ್ಗಿಯೊಸ್‌ 6–1, 6–2, 6–4ರಲ್ಲಿ ರೊಜೆರಿಯೊ ಡುಟ್ರಾ ಸಿಲ್ವ ಮೇಲೂ ಗೆದ್ದರು.

ವೋಜ್ನಿಯಾಕಿ ಶುಭಾರಂಭ: ಮಾರ್ಗರೇಟ್‌ ಕೋರ್ಟ್‌ ಅರೆನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ವೋಜ್ನಿಯಾಕಿ 6–2, 6–3ರಲ್ಲಿ ರುಮೇ ನಿಯಾದ ಮಿಹಾಯೆಲಾ ಬುಜಾರ್‌ನೆಸ್ಕು ಅವರನ್ನು ಪರಾಭವಗೊಳಿಸಿದರು.

ವೀನಸ್‌ಗೆ ಆಘಾತ: ಅಮೆರಿಕದ ವೀನಸ್‌ ವಿಲಿಯಮ್ಸ್‌ ಮೊದಲ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದರು. ಸ್ವಿಟ್ಜರ್‌ಲೆಂಡ್‌ನ ಬೆಲಿಂದಾ ಬೆನ್‌ಸಿಕ್‌ 6–3, 7–5ರಲ್ಲಿ ಐದನೇ ಶ್ರೇಯಾಂಕಿತೆ ವೀನಸ್‌ಗೆ ಆಘಾತ ನೀಡಿದರು.

(ಸರ್ಬಿಯಾದ ಇವಾನ ಜೊರೊವಿಚ್‌ ಎದುರಿನ ಪಂದ್ಯದಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಚೆಂಡನ್ನು ಹಿಂತಿರುಗಿಸಲು ಮುಂದಾದರು ಎಎಫ್‌ಪಿ ಚಿತ್ರ)

ಈ ವಿಭಾಗದ ಇತರ ಪಂದ್ಯಗಳಲ್ಲಿ ಅಲೈಜ್‌ ಕಾರ್ನೆಟ್‌ 6–4, 6–2ರಲ್ಲಿ ವಾಂಗ್‌ ಕ್ಸಿನ್ಯು ಎದುರೂ, ಜೆಲೆನಾ ಒಸ್ಟಾಪೆಂಕೊ 6–1, 6–4ರಲ್ಲಿ ಫ್ರಾನ್ಸೆಸ್ಕಾ ಶಿಯಾವೊನ್ ಮೇಲೂ, ದುವಾನ್‌ ಯಿಂಗ್‌ ಯಿಂಗ್‌ 6–0, 6–1ರಲ್ಲಿ ಮರಿಯಾನ ಡುಕ್ವಾ ಮರಿನೊ ವಿರುದ್ಧವೂ, ಮಗ್ದಾಲೆನಾ ರೈಬಾರಿಕೊವಾ 6–0, 7–5ರಲ್ಲಿ ಟೇಲರ್‌ ಟೌನ್‌ಸೆಂಡ್‌ ಮೇಲೂ, ಜೂಲಿಯಾ ಜಾರ್ಜೆಸ್‌ 6–4, 6–4ರಲ್ಲಿ ಸೋಫಿಯಾ ಕೆನಿನ್‌ ಎದುರೂ, ಪೆಟ್ರಾ ಮ್ಯಾಟ್ರಿಕ್‌ 7–6, 6–3ರಲ್ಲಿ ಅಲಿಸನ್‌ ವ್ಯಾನ್‌ ಉಯೆತ್ವಾಂಕ್‌ ಮೇಲೂ, ಜಾಂಗ್‌ ಶೂಯಿ 2–6, 7–6, 6–2ರಲ್ಲಿ ಸ್ಲೊವಾನೆ ಸ್ಟೀಫನ್ಸ್‌ ವಿರುದ್ಧವೂ, ಇರಿನಾ ಬೆಗು 3–6, 6–4, 8–6ರಲ್ಲಿ ಏಕ್ತರಿನಾ ಮಕರೋವಾ ಎದುರೂ, ಟೈಮಿ ಬಾಬೊಸ್‌ 7–6, 6–2ರಲ್ಲಿ ಡಾಮಿನಿಕಾ ಸಿಬುಲ್ಕೋವಾ ವಿರುದ್ಧವೂ, ಕರ್ಸ್ಟನ್‌ ಫ್ಲಿಪ್‌ಕೆನ್ಸ್‌ 2–6, 7–6, 6–3ರಲ್ಲಿ ಅಲಿಸನ್‌ ರಿಸ್ಕೆ ವಿರುದ್ಧವೂ, ಕಿಕಿ ಬರ್ಟೆನ್ಸ್‌ 6–7, 6–4, 6–2ರಲ್ಲಿ ಕ್ಯಾಥರಿನಾ ಬೆಲ್ಲಿಸ್‌ ಎದುರೂ, ಮಗ್ದಾ ಲಿನೆಟ್ಟೆ 2–6, 6–4, 6–3ರಲ್ಲಿ ಜೆನಿಫರ್‌ ಬ್ರಾಡಿ ಮೇಲೂ ಗೆದ್ದರು.

ವೋಜ್ನಿಯಾಕಿ–ಬುಜಾರ್‌ನೆಸ್ಕು ಹೋರಾಟ 1 ಗಂಟೆ 11 ನಿಮಿಷ ನಡೆಯಿತು

ವಿಶ್ವ ರ‍್ಯಾಂಕಿಂಗ್‌ನಲ್ಲಿ 122ನೇ ಸ್ಥಾನ ಹೊಂದಿರುವ ಯೂಕಿ

ಎರಡನೇ ಸುತ್ತಿನಲ್ಲಿ ನಡಾಲ್‌–ಲಿಯೊನಾರ್ಡೊ ಮೇಯರ್‌ ಪೈಪೋಟಿ

ಯೂಕಿಗೆ ನಿರಾಸೆ

ಸಿಂಗಲ್ಸ್‌ನಲ್ಲಿ ಭಾರತದ ಯೂಕಿ ಬಾಂಭ್ರಿ ಸವಾಲು ಅಂತ್ಯಕಂಡಿದೆ.

ಮೊದಲ ಸುತ್ತಿನ ಹಣಾಹಣಿಯಲ್ಲಿ ಮಾರ್ಕಸ್‌ ಬಗ್ದಾತಿಸ್‌ 7–6, 6–4, 6–3ರಲ್ಲಿ  ಯೂಕಿ ಸವಾಲು ಮೀರಿದರು.

ಅರ್ಹತಾ ಸುತ್ತಿನಲ್ಲಿ ಮೂರು ಪಂದ್ಯಗಳನ್ನು ಗೆದ್ದು ಪ್ರಧಾನ ಘಟ್ಟಕ್ಕೆ ಲಗ್ಗೆ ಇಟ್ಟಿದ್ದ ಯೂಕಿ, ಹಲವು ತಪ್ಪುಗಳನ್ನು ಮಾಡಿ ಪಂದ್ಯ ಕೈಚೆಲ್ಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT