ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಿಪಳ್ಳ ದೀಪಕ್‌ ರಾವ್‌ ಎಂಬ ‘ಮೊಹಮ್ಮದ್’

Last Updated 15 ಜನವರಿ 2018, 19:48 IST
ಅಕ್ಷರ ಗಾತ್ರ

ಮಂಗಳೂರು: ಜನವರಿ 3ರಂದು ಕಾಟಿಪಳ್ಳದಲ್ಲಿ ಕೊಲೆಗೀಡಾದ ಕಾಟಿಪಳ್ಳ ನಿವಾಸಿ ದೀಪಕ್‌ ರಾವ್‌ (29) ಶಿವಾಜಿ ಕ್ಷತ್ರಿಯ ಜಾತಿಗೆ ಸೇರಿದ ಯುವಕ. ಇವರು ಚಿಕ್ಕವರಿರುವಾಗಲೇ ತಂದೆ ರಾಮಚಂದ್ರ ರಾವ್‌ ಮೃತಪಟ್ಟಿದ್ದರು. ತಾಯಿ ಪ್ರೇಮಲತಾ ಮತ್ತು ತಮ್ಮ ಸತೀಶ್‌ ರಾವ್‌ ಅವರೊಂದಿಗೆ ಚಿಕ್ಕಪ್ಪನ ಮನೆಯಲ್ಲೇ ಹೆಚ್ಚು ಕಾಲ ವಾಸವಿದ್ದರು. ಚಿಕ್ಕಪ್ಪನ ನೆರವಿನಿಂದಲೇ ಬೆಳೆದವರು. ಸದ್ಯ ದೀಪಕ್‌ ಕುಟುಂಬ ವಾಸವಿದ್ದ ಮನೆ ಎರಡು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದು. ಅಲ್ಲಿಯವರೆಗೂ ಈ ಸ್ಥಳದಲ್ಲಿ ಚಿಕ್ಕ ಮನೆಯೊಂದು ಇತ್ತು. ದೀಪಕ್‌ ಮತ್ತು ಅವರ ಚಿಕ್ಕಪ್ಪನ ಕುಟುಂಬದ ಹೊರತಾಗಿ ಆ ಪ್ರದೇಶದಲ್ಲಿ ಶಿವಾಜಿ ಕ್ಷತ್ರಿಯ ಸಮುದಾಯದ ಯಾವುದೇ ಕುಟುಂಬಗಳಿಲ್ಲ.
ಕಾಟಿಪಳ್ಳ ಮೂರನೇ ಬ್ಲಾಕ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ದೀಪಕ್‌, ಗಣೇಶಪುರದಲ್ಲಿದ್ದ ಸಿದ್ಧಿ ವಿನಾಯಕ ಪ್ರೌಢಶಾಲೆಯಲ್ಲಿ (ಈಗ ಮುಚ್ಚಿಹೋಗಿದೆ) ಪ್ರೌಢ ಶಿಕ್ಷಣ ಪೂರೈಸಿದ್ದರು. ಸುರತ್ಕಲ್‌ನ ಗೋವಿಂದದಾಸ ಕಾಲೇಜಿನಲ್ಲಿ ಪಿಯುಸಿ ಪೂರೈಸಿ, ಅಲ್ಲಿಯೇ ಬಿ.ಕಾಂ ಪದವಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. ಅರ್ಧದಲ್ಲಿಯೇ ಬಿ.ಕಾಂ ಕೋರ್ಸ್‌ ಬಿಟ್ಟು ದುಡಿಮೆಗೆ ಬಂದಿದ್ದರು. ಏಳು ವರ್ಷಗಳಿಂದ ಅಬ್ದುಲ್‌ ಮಜೀದ್‌ ಎಂಬುವವರ ಮೊಬೈಲ್‌ ಸಿಮ್‌ ಕಾರ್ಡ್‌ ಮತ್ತು ಕರೆನ್ಸಿ ಪೂರೈಕೆ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ದೀಪಕ್‌ ರಾವ್‌ಗೆ ತಿಂಗಳಿಗೆ ₹ 12,000 ವೇತನ ಇತ್ತು.
ದೀಪಕ್‌ ರಾವ್‌ ಮನೆ ಇರುವ ಕಾಟಿಪಳ್ಳ ಪ್ರದೇಶದ ಹಿಂದೂಗಳು ಮತ್ತು ಮುಸ್ಲಿಮರಲ್ಲಿ ಒಂದಷ್ಟು ಸಂಖ್ಯೆಯ ಜನರು ಧರ್ಮದ ಕಾರಣಕ್ಕೆ ಇಬ್ಭಾಗವಾಗಿದ್ದಾರೆ. ಇಲ್ಲಿ ಕ್ರೈಸ್ತ ಧರ್ಮೀಯರೂ ಇದ್ದಾರೆ. ಆದರೆ, ಅವರ ಮೇಲಾಗಲಿ, ಅವರಿಂದಾಗಲಿ ಮತೀಯ ದ್ವೇಷದ ಹಿಂಸಾಕೃತ್ಯಗಳು ನಡೆದಿರುವುದು ಕಾಣುವುದಿಲ್ಲ. ಹಿಂದೂಗಳಲ್ಲಿ ಮತ್ತು ಮುಸ್ಲಿಮರಲ್ಲಿ ಧರ್ಮದ ಕಾರಣಕ್ಕೆ ದ್ವೇಷ ಹೊಂದಿರದ ಸಾಕಷ್ಟು ಜನರೂ ಇದ್ದಾರೆ. ಇಲ್ಲಿ ಧರ್ಮದ ಕಾರಣಕ್ಕೆ ಗುಂಪು ಕಟ್ಟಿಕೊಂಡವರು ನಿರ್ದಿಷ್ಟ ಪ್ರದೇಶದಲ್ಲಿ ಅನ್ಯ ಧರ್ಮೀಯರು ಬಂದು ಚಟುವಟಿಕೆ ನಡೆಸುವುದನ್ನು ವಿರೋಧಿಸುತ್ತಿದ್ದಾರೆ. ಎರಡೂ ಕಡೆಗಳಲ್ಲಿ ಇರುವ ವೃತ್ತಿಪರ ಕ್ರಿಮಿನಲ್‌ ತಂಡಗಳು ಮತ್ತು ಮತೀಯ ಗೂಂಡಾಗಳು ಇಂತಹ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿರುವುದು ಗೋಚರಿಸುತ್ತಿದೆ.

ಮೃತ ಯುವಕನ ಮನೆಯಿಂದ ಅನತಿ ದೂರದಲ್ಲಿರುವ ಕಾಟಿಪಳ್ಳ ಮೂರನೇ ಬ್ಲಾಕ್‌ನಲ್ಲಿ ಕೋರ್ದಬ್ಬು ದೈವಸ್ಥಾನ ಇದೆ. ಅಲ್ಲಿಗೆ ಸ್ಥಳೀಯ ಹಿಂದೂಗಳಲ್ಲಿ ಬಹುತೇಕರು ನಡೆದುಕೊಳ್ಳುತ್ತಾರೆ. ದೇವಸ್ಥಾನದಲ್ಲಿ ಶ್ರೀ ಗಣೇಶ ಭಜನಾ ಮಂಡಳಿ ಇದೆ. ಈ ಇದರಲ್ಲಿ ದೀಪಕ್‌ ಸಕ್ರಿಯ ಸದಸ್ಯರಾಗಿದ್ದರು. ಕೆಲವು ವರ್ಷಗಳಿಂದ ಭಜನಾ ಮಂಡಳಿಯ ಮುಂಚೂಣಿಯಲ್ಲಿದ್ದರು. ಅಲ್ಲಿಂದ ಅವರಿಗೆ ಬಜರಂಗದಳದ ನಂಟು ಬೆಳೆದಿತ್ತು ಎಂಬ ಮಾಹಿತಿ ಇದೆ.
‘ದೀಪಕ್‌ ಮೊದಲಿನಿಂದಲೂ ಭಜನಾ ಮಂಡಳಿಯ ಎಲ್ಲ ಕೆಲಸಗಳಲ್ಲೂ ಭಾಗಿಯಾಗುತ್ತಿದ್ದ. ಇತ್ತೀಚಿನ ವರ್ಷಗಳಲ್ಲಿ ಭಜನಾ ಮಂಡಳಿಯ ಪ್ರಮುಖ ಕೆಲಸಗಳನ್ನು ಆತನೇ ನಿರ್ವಹಿಸುತ್ತಿದ್ದ. ಬಜರಂಗದಳದಲ್ಲೂ ಇದ್ದ. ಆದರೆ, ಅಲ್ಲಿ ಆತ ಮುಂಚೂಣಿಯಲ್ಲೇನೂ ಇರಲಿಲ್ಲ. ಬಜರಂಗದಳದ ಕಾರಣದಿಂದಾಗಿ ಬಿಜೆಪಿ ಕಾರ್ಯಕರ್ತ ಎಂದು ಗುರುತಿಸಿಕೊಳ್ಳುತ್ತಿದ್ದ. ಸಂಘಟನೆ ಮತ್ತು ಪಕ್ಷದ ಕಾರ್ಯಕ್ರಮಗಳು ಇದ್ದಾಗ ಗೆಳೆಯರು ಕರೆದರೆ ಅವರೊಂದಿಗೆ ಹೋಗುತ್ತಿದ್ದ. ತಾನಾಗಿಯೇ ಯಾವುದನ್ನೂ ಸಂಘಟಿಸುವಷ್ಟರ ಮಟ್ಟಿಗೇನೂ ಆತ ಅಲ್ಲಿ ಸಕ್ರಿಯನಾಗಿರಲಿಲ್ಲ’ ಎಂದು ಬಾಲ್ಯದಿಂದಲೂ ಆಪ್ತ ಸ್ನೇಹಿತನಾಗಿರುವ ಹಾಗೂ ಹತ್ತು ವರ್ಷಗಳ ಕಾಲ ಸಹಪಾಠಿಯಾಗಿದ್ದ ಕಾಟಿಪಳ್ಳದ ತಿಲಕ್‌ ರಾಜ್‌ ಹೇಳುತ್ತಾರೆ.
ಬಾಲ್ಯದಿಂದಲೂ ಆತ ಒಳ್ಳೆಯ ಕ್ರೀಡಾಪಟು. ಪ್ರೌಢಶಾಲೆಯಲ್ಲಿದ್ದಾಗ ಕೊ ಕೊ ಕ್ರೀಡೆಯಲ್ಲಿ ರಾಜ್ಯಮಟ್ಟದವರೆಗೆ ಆಯ್ಕೆಯಾಗಿದ್ದರು. ದುಡಿಯಲು ಆರಂಭಿಸಿದ ಬಳಿಕ ಬಿಡುವಿನ ಸಮಯದಲ್ಲಿ ಸ್ಥಳೀಯ ಶಾಲೆಗಳ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ಹೋಗುತ್ತಿದ್ದರು. ವಾರ್ಷಿಕೋತ್ಸವದ ಸಮಯದಲ್ಲಿ ಮಕ್ಕಳಿಗೆ ನೃತ್ಯ ತರಬೇತಿಯನ್ನೂ ಕೊಡುತ್ತಿದ್ದರು. ಸ್ಥಳೀಯವಾಗಿ ನಡೆಯುವ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಸಕ್ರಿಯನಾಗಿರುತ್ತಿದ್ದರು ಎಂದು ಮಾಹಿತಿ ನೀಡಿದರು.

ತಾಯಿಗೆ ಗೊತ್ತೇ ಇಲ್ಲ:

ತನ್ನ ಮಗ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಕುರಿತು ದೀಪಕ್‌ ತಾಯಿ ಪ್ರೇಮಲತಾ ಅವರಿಗೆ ಹೆಚ್ಚೇನೂ ಗೊತ್ತಿಲ್ಲ. ದೇವಸ್ಥಾನದ ಕೆಲಸಕ್ಕೆ ಯಾವಾಗಲೂ ಹೋಗುತ್ತಿದ್ದರು. ಬೇರೆ ಬೇರೆ ಕಾರ್ಯಕ್ರಮಗಳಿದ್ದಾಗ ಸ್ನೇಹಿತರು ಕರೆದರೆ ಅವರೊಂದಿಗೆ ಹೋಗುತ್ತಿದ್ದರು ಎಂಬ ಮಾಹಿತಿಯಷ್ಟೇ ಇದೆ. ಆದರೆ, ಯಾವ ಸಂಘಟನೆಯ ಕಾರ್ಯಕ್ರಮಗಳಲ್ಲಿ ಮಗ ಭಾಗಿಯಾಗುತ್ತಿದ್ದರು ಎಂಬ ಮಾಹಿತಿ ಅವರಿಗೆ ಇಲ್ಲ.
ದೀಪಕ್‌ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗಳ ನಂಟು ಹೊಂದಿದ್ದನ್ನು ಖಚಿತಪಡಿಸುವಂತಹ ಪ್ರಬಲ ಸಾಕ್ಷ್ಯಗಳೇನೂ ಅವರ ಮನೆಯ ಆವರಣದಲ್ಲಿ ಕಾಣಿಸಲಿಲ್ಲ. ಪಕ್ಷ ಅಥವಾ ಸಂಘಟನೆಯ ಬಾವುಟ ಹಾರಿಸಿರುವುದು, ಚಿಹ್ನೆ ಅಂಟಿಸಿರುವುದು, ನಾಯಕರ ಭಾವಚಿತ್ರಗಳನ್ನು ಮನೆಯಲ್ಲಿ ಇರಿಸಿರುವ ಯಾವ ಕುರುಹುಗಳೂ ಅಲ್ಲಿ ಕಾಣಲಿಲ್ಲ. ಮೃತ ಯುವಕ ರಾಜಕೀಯ ಪಕ್ಷ ಅಥವಾ ಸಂಘಟನೆಗಳ ಜೊತೆ ನಂಟು ಹೊಂದಿದ್ದರೂ, ಅದು ಮನೆಯ ಹೊರಗಿನ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂಬ ಅಭಿಪ್ರಾಯಕ್ಕೆ ಬರಬಹುದು. ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗಳ ಪ್ರಮುಖ ನಾಯಕರು, ಮುಖಂಡರ ಜೊತೆ ದೀಪಕ್‌ ರಾವ್‌ ಒಡನಾಟ ಹೊಂದಿದ್ದ ಕುರಿತು ಯಾರಿಗೂ ಮಾಹಿತಿ ಇಲ್ಲ.

‘ಮೊಹಮ್ಮದ್’ ಮತ್ತು ‘ನಮ್ಮವ’:

ದೀಪಕ್‌ ಬ್ಯಾರಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಬ್ಯಾರಿ ಮುಸ್ಲಿಮರು ಕೂಡ ಅಚ್ಚರಿಪಡುವಂತಹ ರೀತಿಯಲ್ಲಿ ಅವರಿಗೆ ಬ್ಯಾರಿ ಭಾಷೆಯ ಮೇಲೆ ಹಿಡಿತವಿತ್ತು. ಈ ಕಾರಣಕ್ಕಾಗಿಯೇ ಗೆಳೆಯರ ವಲಯದಲ್ಲಿ ದೀಪಕ್‌ಗೆ ‘ಮೊಹಮ್ಮದ್‌’ ಎಂದು ಕರೆಯಲಾಗುತ್ತಿತ್ತು. ಮಜೀದ್‌ ಅವರು ಸಿಮ್‌ ಮತ್ತು ಕರೆನ್ಸಿ ಪೂರೈಸುವ ಗ್ರಾಹಕರಲ್ಲಿ ಹೆಚ್ಚಿನವರು ಮುಸ್ಲಿಮರು. ಅವರೆಲ್ಲರ ಬಳಿಯೂ ದೀಪಕ್‌ ಮಾತನಾಡುತ್ತಿದ್ದುದು ಬ್ಯಾರಿ ಭಾಷೆಯಲ್ಲೇ. ದೀಪಕ್‌ ಹೆಸರು ಗೊತ್ತಾಗುವವರೆಗೂ ಬಹುತೇಕರು ಈತ ಮುಸ್ಲಿಂ ಯುವಕ ಎಂದೇ ನಂಬಿದ್ದರು.
‘ಬ್ಯಾರಿ ಭಾಷೆಯನ್ನು ನಮಗಿಂತಲೂ ಚೆನ್ನಾಗಿ ಮಾತನಾಡುತ್ತಿದ್ದ. ಕರೆನ್ಸಿ ಮತ್ತು ಸಿಮ್ ಪೂರೈಕೆಯನ್ನು ಎರಡು ವಲಯಗಳನ್ನಾಗಿ ವಿಂಗಡಿಸಿಕೊಂಡಿದ್ದೆ. ಒಂದು ಮಾರ್ಗದಲ್ಲಿ ನಾನು ಹೋಗುತ್ತಿದ್ದೆ. ಇನ್ನೊಂದು ಕಡೆಗೆ ಆತ ಹೋಗುತ್ತಿದ್ದ. ನಾನು ಬೇರೆ ಕೆಲಸದ ಮೇಲೆ ಹೋದಾಗ ಎರಡೂ ಮಾರ್ಗಗಳಲ್ಲಿ ಆತನೇ ಹೋಗುತ್ತಿದ್ದ. ಪ್ರಾರಂಭದಲ್ಲಿ ಅವನು ಮುಸ್ಲಿಮರ ಅಂಗಡಿಗಳಿಗೆ ಹೋದಾಗ ದೀಪಕ್‌ ಬಂದಿದ್ದಾನೆ ಅವನ ಬಳಿ ಹಣ ಕೊಡಿ ಎಂದು ಹೇಳುತ್ತಿದ್ದೆ. ದೀಪಕ್‌ ಅಲ್ಲ ಮಾರಾಯ ನಮ್ಮವ (ಮುಸ್ಲಿಂ) ಬಂದಿದ್ದಾನಲ್ಲ? ಅವನ ಬಳಿ ಕೊಟ್ಟು ಕಳಿಸುತ್ತೇನೆ ಎಂಬ ಉತ್ತರ ಬರುತ್ತಿತ್ತು. ನಾನು ಹೇಳಿದ ಮೇಲಷ್ಟೇ ಆತ ಹಿಂದೂ ಎಂದು ಅವರಿಗೆಲ್ಲ ಗೊತ್ತಾಗುತ್ತಿತ್ತು’ ಎಂದು ಅಬ್ದುಲ್ ಮಜೀದ್‌ ತಿಳಿಸಿದರು.
‘ಆತ ಯಾವತ್ತು ನಮ್ಮ ಬಳಿ ಒಬ್ಬ ಕೋಮುವಾದಿಯಂತೆ ನಡೆದುಕೊಂಡಿರಲಿಲ್ಲ. ಜಾತಿ ಧರ್ಮದ ವಿಚಾರಗಳ ಬಗ್ಗೆ ಮಾತನಾಡುವುದೇ ಕಡಿಮೆ. ಶುಕ್ರವಾರದ ದಿನಗಳಲ್ಲಿ ನಮ್ಮ ತಂದೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ನಡೆದುಕೊಂಡು ಹೊರಟರೆ ಅವನೇ ಮೋಟರ್‌ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದ. ಅವನೊಬ್ಬ ಕಟ್ಟಾ ಮತೀಯವಾದಿ ಆಗಿದ್ದರೆ ಮಸೀದಿಗೆ ತೆರಳುವ ಮುಸ್ಲಿಮನನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿರಲಿಲ್ಲ. ನಮ್ಮ ಕುಟುಂಬದ ಎಲ್ಲರೊಂದಿಗೂ ಆತ ಉತ್ತಮ ಒಡನಾಟ ಹೊಂದಿದ್ದ’ ಎಂದರು.
ಮಜೀದ್‌ ಬಳಿ ಮೂವರು ನೌಕರರಿದ್ದರು. ಇ–ಕೆವೈಸಿ ವ್ಯವಸ್ಥೆ ಬಂದ ಬಳಿಕ ಬ್ಯಾಕ್‌ ಎಂಡ್‌ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದರು. ದೀಪಕ್‌ ಮತ್ತು ಒಬ್ಬ ಮುಸ್ಲಿಂ ಯುವಕ ಉಳಿದಿದ್ದರು. ವಹಿವಾಟು ಕಡಿಮೆಯಾಗುತ್ತಿದ್ದಂತೆಯೇ ಮುಸ್ಲಿಂ ಯುವಕನಿಗೆ ಬೇರೆ ಕೆಲಸ ನೋಡಿಕೊಳ್ಳಲು ಹೇಳಿದರು. ಕೊನೆಯದಾಗಿ ದೀಪಕ್‌ರನ್ನು ಮಾತ್ರ ಉಳಿಸಿಕೊಂಡಿದ್ದರು. ಮೂರು ವರ್ಷದ ಹಿಂದೆ ಟಾಟಾ ಡೊಕೊಮೊ ಸೇವೆ ಸ್ಥಗಿತವಾಗುವ ಸಂದೇಶ ಅವರಿಗೆ ಬಂದಿತ್ತು. ಈ ವಿಚಾರ ತಿಳಿದಾಗ ಕಣ್ಣೀರು ಹಾಕಿದ್ದರು. ಬಳಿಕ ಒಮ್ಮೆ ಟಾಟಾ ಡೊಕೊಮೊ ಪ್ರಾದೇಶಿಕ ಕಚೇರಿಯಲ್ಲಿ ನೌಕರಿ ಸಿಕ್ಕಿತ್ತು. ಎರಡೇ ದಿನ ಕೆಲಸ ಮಾಡಿ, ಮೂರನೇ ದಿನ ಮಜೀದ್‌ ಬಳಿಗೆ ವಾಪಸಾಗಿದ್ದರು. ಇನ್ನು ಕೆಲವು ತಿಂಗಳಲ್ಲಿ ವ್ಯವಹಾರ ಸ್ಥಗಿತಗೊಳಿಸಲು ಮಜೀದ್‌ ನಿರ್ಧರಿಸಿದ್ದರು. ಬೇರೆ ಕೆಲಸ ನೋಡಿಕೊಳ್ಳುವಂತೆ ಸೂಚಿಸಿದ್ದರು. ಎಚ್‌ಪಿಸಿಎಲ್‌ನಲ್ಲಿ ನೌಕರಿಗೆ ಪ್ರಯತ್ನಿಸುತ್ತಿದ್ದ ದೀಪಕ್‌, ಏನಾದರೂ ಹೊಸ ವ್ಯವಹಾರ ಆರಂಭಿಸುವಂತೆ ಮಜೀದ್‌ ಮೇಲೆ ಒತ್ತಡ ಹಾಕುತ್ತಿದ್ದರು. ಈಗಿನಂತೆ ತಾನು ಬೆಂಬಲಕ್ಕೆ ನಿಲ್ಲುವುದಾಗಿ ಹೇಳುತ್ತಿದ್ದರು ಎಂಬ ಸಂಗತಿ ಮಜೀದ್‌ ಮತ್ತು ತಿಲಕ್‌ ರಾಜ್‌ರಿಂದ ತಿಳಿಯಿತು.
ದೀಪಕ್‌ ರಾವ್‌ಗೆ ತುಂಬಾ ಆರ್ಥಿಕ ಸಂಕಷ್ಟ ಇತ್ತು. ಇದನ್ನು ಗೆಳೆಯರ ಬಳಿ ಹೇಳಿಕೊಳ್ಳುತ್ತಿದ್ದರು. ಕೆಲವು ಸಮಯದ ಹಿಂದಿನವರೆಗೂ ಸಿಮ್‌ ಮಾರಾಟದಲ್ಲಿ ಸ್ವಲ್ಪ ಹೆಚ್ಚಿನ ಹಣ ಲಭ್ಯವಾಗುತ್ತಿತ್ತು. ಇತ್ತೀಚೆಗೆ ಸಿಮ್‌ ಬೇಡಿಕೆ ಕುಸಿದಿರುವುದರಿಂದ ಆದಾಯ ಕಡಿಮೆಯಾಗಿತ್ತು. ವ್ಯವಹಾರಕ್ಕೆ ಹೊಂದಿಸಲು ಮಜೀದ್‌ ಬಳಿ ಒಮ್ಮೊಮ್ಮೆ ಹಣ ಇರುತ್ತಿರಲಿಲ್ಲ. ಆಗ ಬೇರೆ ಕಡೆಯಿಂದ ಹಣದ ವ್ಯವಸ್ಥೆ ಮಾಡುತ್ತಿದ್ದ ದೀಪಕ್‌, ಕೆಲವು ದಿನಗಳ ಬಳಿಕ ಅದನ್ನು ಪಡೆಯುತ್ತಿದ್ದರು. ಮಜೀದ್‌ ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿದ್ದಾರೆ ಎಂಬದು ಗೊತ್ತಾದಾಗ ಸ್ವಲ್ಪ ತಡವಾಗಿ ವೇತನ ನೀಡುವಂತೆ ಹೇಳುತ್ತಿದ್ದರು.

ಬಂಟಿಂಗ್‌ ಗಲಾಟೆ:

ಪ್ರತಿ ವರ್ಷ ಡಿಸೆಂಬರ್‌ ಮೊದಲ ವಾರ ಕಾಟಿಪಳ್ಳ ಮೂರನೇ ಬ್ಲಾಕ್‌ ಕೋರ್ದಬ್ಬು ದೇವಸ್ಥಾನದಲ್ಲಿ ಕೋಲ ನಡೆಯುತ್ತದೆ. ಈ ವರ್ಷವೂ ಕೋಲಕ್ಕೆ ಸಿದ್ಧತೆ ನಡೆದಿತ್ತು. ಅದೇ ಸಮಯದಲ್ಲಿ ಮುಸ್ಲಿಮರ ಈದ್‌ ಮಿಲಾದ್ ಹಬ್ಬವೂ ಇತ್ತು. ಮೂರನೇ ಬ್ಲಾಕ್‌ ದ್ವಾರದ ಬಳಿ ಕೋರ್ದಬ್ಬು ದೇವಸ್ಥಾನದ ಕೋಲದ ನಿಮಿತ್ತ ಯಾವಾಗಲೂ ಬಂಟಿಂಗ್‌ ಕಟ್ಟುತ್ತಿದ್ದ ಸ್ಥಳದಲ್ಲಿ ಮುಸ್ಲಿಂ ಯುವಕರ ಗುಂಪು ಈದ್‌ ಮಿಲಾದ್‌ ಪ್ರಯುಕ್ತ ಹಸಿರು ಬಂಟಿಂಗ್‌ ಕಟ್ಟಲು 2017ರ ನವೆಂಬರ್‌ 28ರಂದು ಪ್ರಯತ್ನಿಸಿತ್ತು.
ಆಗ ಹಿಂದೂ ಯುವಕರ ಗುಂಪು ಆಕ್ಷೇಪ ವ್ಯಕ್ತಪಡಿಸಿ, ಬಂಟಿಂಗ್‌ ಕಟ್ಟದಂತೆ ತಡೆದಿತ್ತು. ಎರಡೂ ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿತ್ತು. ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸುತ್ತಿದ್ದರು. ಹಿಂದೂ ಮತ್ತು ಮುಸ್ಲಿಂ ರೌಡಿಗಳ ತಂಡಗಳೂ ಅಲ್ಲಿಗೆ ಬಂದಿದ್ದವು. ಬಿಜೆಪಿ, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಪಿಎಫ್‌ಐ ಮತ್ತು ಎಸ್‌ಡಿಪಿಐ ಸ್ಥಳೀಯ ಮುಖಂಡರೂ ಬಂದಿದ್ದರು. ರಾಜಿ ಪಂಚಾಯಿತಿಯ ಮೂಲಕ ವಿವಾದ ಇತ್ಯರ್ಥವಾಗಿತ್ತು.
ಮರುದಿನ ಕೆಲಸಕ್ಕೆ ಹೋದಾಗ ಮಜೀದ್ ಅವರಲ್ಲಿ ಬಂಟಿಂಗ್ ಗಲಾಟೆ ವಿಷಯ ತಿಳಿಸಿದ್ದರು. ‘ಗಲಾಟೆ ಆಗಿದ್ದು ನಿಮಗೆ ಗೊತ್ತಿಲ್ಲವೇ? ‘ನಮ್ಮವರು’ ತುಂಬಾ ಮಂದಿ ಸೇರಿದ್ದರು. ‘ನಿಮ್ಮವರೂ’ ಸೇರಿದ್ದರು’ ಎಂದು ಹೇಳಿಕೊಂಡಿದ್ದರು. ‘ನೀನು ಏಕೆ ಗಲಾಟೆಗೆ ಹೋಗಿದ್ದು? ನಿನಗೆ ಅದೆಲ್ಲಾ ಏಕೆ?’ ಎಂದು ಮಜೀದ್ ಪ್ರಶ್ನಿಸಿದ್ದರು. ‘ಈಗ ಏನೂ ಇಲ್ಲ. ಎಲ್ಲ ನಿನ್ನೆಯೇ ಮುಗಿಯಿತು’ ಎಂದು ದೀಪಕ್‌ ಉತ್ತರಿಸಿದ್ದರು.
ಬಂಟಿಂಗ್‌ ಗಲಾಟೆ ವೇಳೆ ದೀಪಕ್‌ ರಾವ್‌ ಮುಂಚೂಣಿಯಲ್ಲಿ ಇದ್ದ ಬಗ್ಗೆಯಾಗಲೀ, ಘರ್ಷಣೆಯ ವಿಡಿಯೊ ಚಿತ್ರೀಕರಣ ಮಾಡಿದ ಬಗ್ಗೆಯಾಗಲೀ ಯಾವುದೇ ಖಚಿತ ಸಾಕ್ಷ್ಯ ಲಭ್ಯವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಕೇವಲ ಮೆಸೇಜ್‌ಗಳು ಹರಿದಾಡುತ್ತಿವೆ. ಈ ಸಂಬಂಧ ಬೆದರಿಕೆ ಬಂದಿತ್ತು ಎಂಬ ವದಂತಿ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ಯಾರಲ್ಲೂ ಇಲ್ಲ. ತಾಯಿ ಮತ್ತು ಗೆಳೆಯರಲ್ಲಿ ಈ ಬಗ್ಗೆ ಏನನ್ನೂ ಹೇಳಿಕೊಂಡಿರಲಿಲ್ಲ. ಮಜೀದ್‌ ಬಳಿಯೂ ಈ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ.

ಚಕ್ರವರ್ತಿ ಸೂಲಿಬೆಲೆ ಅನುಯಾಯಿ:

ದೀಪಕ್‌ ರಾವ್‌ ಅವರು ಹಿಂದುತ್ವ ಪರ ಚಿಂತಕ, ಯುವಾ ಬ್ರಿಗೇಡ್‌ ಮುಖಂಡ ಚಕ್ರವರ್ತಿ ಸೂಲಿಬೆಲೆ ಅನುಯಾಯಿಯಾಗಿದ್ದರು. ದೀಪಕ್‌ ಅವರ ಫೇಸ್‌ ಬುಕ್‌ ಖಾತೆಯೂ ಇದನ್ನು ದೃಢಪಡಿಸುತ್ತದೆ. 2017ರ ಫೆಬ್ರುವರಿವರೆಗೂ ಅವರು ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿದ್ದರು. ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಗಳು, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳು, ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಹೆಚ್ಚು ಶೇರ್ ಮಾಡಿರುವುದು ಕಾಣುತ್ತದೆ.
‘ಬಜರಂಗದಳ ಸುರತ್ಕಲ್ ’ ಎಂಬ ಫೇಸ್‌ಬುಕ್‌ ಪೇಜ್‌ನ ಹಿಂಬಾಲಕರಾಗಿದ್ದರು. ಇವರ ಫೇಸ್‌ಬುಕ್‌ ಗೆಳೆಯರಲ್ಲಿ ಹೆಚ್ಚಿನವರು ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮತ್ತಿತರ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಎಂಬ ಅಂಶ ಮೇಲ್ನೋಟಕ್ಕೆ ಕಂಡುಬರುತ್ತದೆ.
ಮೃತ ಯುವಕ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮಾಹಿತಿ ಇಲ್ಲ. ಅವರ ವಿರುದ್ಧ ಯಾವುದೇ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿಲ್ಲ. ಕಾಟಿಪಳ್ಳದಲ್ಲಿ ಎಲ್ಲ ಸಮುದಾಯದ ಜನರ ಜೊತೆಗೂ ಅನ್ಯೋನ್ಯವಾಗಿದ್ದರು. ಕೆಲಸ ಮಾಡುವ ಸ್ಥಳದಲ್ಲಿ ಮುಸ್ಲಿಮರೊಂದಿಗೂ ಹೆಚ್ಚು ಆತ್ಮೀಯರಾಗಿಯೇ ಇದ್ದರು ಎಂಬುದು ಕಂಡುಬರುತ್ತದೆ.

ಮತೀಯ ದ್ವೇಷದ ಕೇಂದ್ರ
ಎರಡು ದಶಕದ ಅವಧಿಯಲ್ಲಿ ಕಾಟಿಪಳ್ಳದಲ್ಲಿ ಏಳು ಮಂದಿ ಮತೀಯ ದ್ವೇಷದಿಂದ ಕೊಲೆಯಾಗಿದ್ದಾರೆ. ಅವರಲ್ಲಿ ಒಬ್ಬ ಮಾತ್ರ ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದ ವ್ಯಕ್ತಿ ಉಳಿದವರೆಲ್ಲರೂ ಅಮಾಯಕರು ಎಂಬ ಮಾಹಿತಿ ಸ್ಥಳೀಯರಿಂದ ಸಿಗುತ್ತದೆ.
‘1992ರಲ್ಲಿ ಸುಲೈಮಾನ್ ಕೊಲೆಯೊಂದಿಗೆ ಈ ಸರಣಿ ಆರಂಭವಾಯಿತು. ಆ ನಂತರ ಪರಮೇಶ್ವರ, ಜಾಕೀರ್ , ಅಬ್ದುಲ್ ರವೂಫ್‌, ಉದಯ ಪೂಜಾರಿ, ತಂಜೀಮ್ ಮತ್ತು ದೀಪಕ್ ಮತೀಯ ದ್ವೇಷದಲ್ಲಿ ಕೊಲೆಯಾಗಿದ್ದಾರೆ. ಇವರಲ್ಲಿ ಉದಯ ಪೂಜಾರಿ ಮಾತ್ರ ರೌಡಿಯಾಗಿದ್ದ. ಉಳಿದ ಎಲ್ಲರೂ ಅಮಾಯಕರು’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಸ್ಥಳೀಯ ನಿವಾಸಿ ಮುನೀರ್‌ ಕಾಟಿಪಳ್ಳ ತಿಳಿಸಿದರು.

ಹೆಸರು: ದೀಪಕ್‌ ರಾವ್‌
ಜನ್ಮದಿನಾಂಕ– 02–10–1988
ತಂದೆ: ರಾಮಚಂದ್ರ ರಾವ್
ತಾಯಿ: ಪ್ರೇಮಲತಾ
ತಮ್ಮ: ಸತೀಶ್‌ ರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT