ಮಕ್ಕಳಲ್ಲಿ ರಕ್ತಹೀನತೆ: ಪ್ರತಿವರ್ಷ ಕೇವಲ ಶೇ 1ರಷ್ಟು ಇಳಿಕೆ

7

ಮಕ್ಕಳಲ್ಲಿ ರಕ್ತಹೀನತೆ: ಪ್ರತಿವರ್ಷ ಕೇವಲ ಶೇ 1ರಷ್ಟು ಇಳಿಕೆ

Published:
Updated:

ಬೆಂಗಳೂರು: ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ನಿವಾರಿಸಲು ಸಲುವಾಗಿ ಸರ್ಕಾರದ ವಿವಿಧ ಇಲಾಖೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಒಂದು ದಶಕದಲ್ಲಿ ಇದರ ಪ್ರಮಾಣ ಶೇ 10ರಷ್ಟು ಮಾತ್ರ ಕಡಿಮೆ ಆಗಿದೆ. ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಕೇವಲ ಶೇ 1ರ ದರದಲ್ಲಿ ಕಡಿಮೆ ಆಗುತ್ತಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ –4ರ (ಎನ್‌ಎಫ್‌ಎಚ್‌ಎಸ್‌) ಪ್ರಕಾರ ರಾಜ್ಯದಲ್ಲಿ 5 ವರ್ಷದ ವರೆಗಿನ ಶೇ 60ರಷ್ಟು ಮಕ್ಕಳು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿವೆ. 10 ವರ್ಷಗಳ ಹಿಂದೆ ಈ ಪ್ರಮಾಣ ಶೇ 70ರಷ್ಟಿತ್ತು. ಬೆಂಗಳೂರಿನಲ್ಲೂ ಈ ವಯೋವರ್ಗದ ಶೇ 50ರಷ್ಟು ಮಕ್ಕಳಲ್ಲಿ ಈ ಸಮಸ್ಯೆ ಇದೆ.

ರಾಜ್ಯದ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಇಳಿಮುಖವಾಗುತ್ತಿದೆ. ಈ ಸಲುವಾಗಿ ಅನೇಕ ಕಾರ್ಯಕ್ರಮಗಳು ಜಾರಿಯಲ್ಲಿವೆ ಎನ್ನುತ್ತಾರೆ ತಾಯಂದಿರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ಉಪನಿರ್ದೇಶಕ ಡಾ.ಎನ್‌.ರಾಜ್‌ಕುಮಾರ್‌.

ಆದರೆ, ಇದನ್ನು ಮಕ್ಕಳ ತಜ್ಞರು ಒಪ್ಪುವುದಿಲ್ಲ. ‘ರಾಜ್ಯದಲ್ಲಿ ಎಳೆಯ ಪ್ರಾಯದ ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಇನ್ನೂ ಅಧಿಕವಾಗಿರುವ ಸಾಧ್ಯತೆ ಹೆಚ್ಚು. ಈ ಸಮಸ್ಯೆ ರಾಜ್ಯದಾದ್ಯಂತ ವ್ಯಾಪಕವಾಗಿದೆ’ ಎನ್ನುತ್ತಾರೆ ವಾಣಿವಿಲಾಸ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸಿ.ಎನ್‌.ರೆಡ್ಡಿ.

‘ನಮ್ಮ ಆಸ್ಪತ್ರೆಗೆ ಬರುವ ಶೇ 65ರಷ್ಟು ಮಕ್ಕಳಲ್ಲಿ ಮತ್ತು ಶೇ 75ರಷ್ಟು ಹದಿಹರೆಯದ ಹುಡುಗಿಯರಲ್ಲಿ ಈ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ’ ಎಂದು ಅವರು ತಿಳಿಸಿದರು.

ಈ ಸಮಸ್ಯೆ ನಿವಾರಣೆ ಮಾಡುವ ಉದ್ದೇಶದಿಂದ ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ಸೇರಿದಂತೆ ಹಲವು ಕಾರ್ಯಕ್ರಮಗಳು ಜಾರಿಯಲ್ಲಿವೆ. ಗರ್ಭ ಧರಿಸಿದ 100ನೇ ದಿನದಂದು ನುಂಗುವ ಮಾತ್ರೆಯನ್ನೂ ಗರ್ಭಿಣಿಯರಿಗೆ ವಿತರಿಸಲಾಗುತ್ತಿದೆ. ಒಂದೋ ಇಂತಹ ಔಷಧಗಳ ಕೊರತೆ ಇದೆ. ಅಥವಾ ಇಂತಹ ಕಾರ್ಯಕ್ರಮಗಳು ಜನರನ್ನು ತಲುಪುತ್ತಿಲ್ಲ ಎಂದು ಅವರು ಸಂದೇಹ ವ್ಯಕ್ತಪಡಿಸಿದರು.

ಹದಿಹರೆಯದ ಹುಡುಗಿಯರು ರಕ್ತಹೀನತೆ ಸಮಸ್ಯೆ ಹೊಂದಿದ್ದರೆ ಭವಿಷ್ಯದಲ್ಲಿ ಅವರಿಗೆ ಜನಿಸುವ ಮಕ್ಕಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಆರಂಭಿಕ ಹಂತದಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.

ರಕ್ತಹೀನತೆ ಪ್ರಮಾಣ ಕಡಿಮೆಯಾಗುತ್ತಿದ್ದರೂ, ಇದರ ಇಳಿಕೆ ದರ ತೀರಾ ಕಡಿಮೆ ಇದೆ. ಈ ಸಮಸ್ಯೆ ನಿವಾರಣೆಗೆ ಸರ್ಕಾರ ಅನೇಕ ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದರೂ ಪ್ರತಿವರ್ಷ ಶೇ 1ರ ದರದಲ್ಲಿ ಇದರ ಪ್ರಮಾಣ ಕಡಿಮೆ ಆಗುತ್ತಿದೆ ಎಂದರೆ ಒಪ್ಪಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಸರು ಬಹಿರಂಗ ಪಡಿಸಲು ಒಪ್ಪದ ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಔಷಧಗಳ ಕೊರತೆ ಇರುತ್ತದೆ. ಸೇವಿಸುವ ಆಹಾರದ ಗುಣಮಟ್ಟ ಕಳಪೆಯಾಗಿದ್ದರೂ (ವಿಟಮಿನ್‌, ಕಬ್ಬಿಣಾಂಶ, ಕ್ಯಾಲ್ಸಿಯಂ ಕೊರತೆ) ಮಕ್ಕಳಲ್ಲಿ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಅಪೌಷ್ಟಿಕತೆಯಿಂದಾಗಿ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ಮಕ್ಕಳ ಬೆಳವಣಿಗೆಗೆ ಅಡ್ಡಿ

‘ರಕ್ತಹೀನತೆ ತಡೆಗಟ್ಟಲು ಆರಂಭಿಕ ಹಂತದಲ್ಲೇ ಕ್ರಮಕೈಗೊಳ್ಳದಿದ್ದರೆ ಮಕ್ಕಳ ಬೆಳವಣಿಗೆ ಮೇಲೂ ಪರಿಣಾಮ ಉಂಟಾಗುತ್ತದೆ. ಮಕ್ಕಳು ಪದೇ ಪದೇ ಅನಾರೋಗ್ಯದಿಂದ ಬಳಲುತ್ತವೆ. ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಇದು ಪ್ರಭಾವ ಬೀರುತ್ತದೆ’ ಎನ್ನುತ್ತಾರೆ ಡಾ.ಸಿ.ಎನ್‌.ರೆಡ್ಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry