‘ಮಹದಾಯಿ: ಗೋವಾ ಸರ್ಕಾರದಿಂದ ಮಹಾನಾಟಕ’

7
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿರುಗೇಟು

‘ಮಹದಾಯಿ: ಗೋವಾ ಸರ್ಕಾರದಿಂದ ಮಹಾನಾಟಕ’

Published:
Updated:
‘ಮಹದಾಯಿ: ಗೋವಾ ಸರ್ಕಾರದಿಂದ ಮಹಾನಾಟಕ’

ಬೆಳಗಾವಿ: ‘ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಗೋವಾ ಸರ್ಕಾರ ಮಾಡುತ್ತಿರುವ ಮಹಾನಾಟಕವನ್ನು ನ್ಯಾಯಮಂಡಳಿ ಎದುರು ಸಮರ್ಥವಾಗಿ ಬಯಲಿಗೆಳೆಯುತ್ತೇವೆ. ನಮ್ಮ ಪಾಲಿನ ನೀರು ಪಡೆದುಕೊಳ್ಳಲು ಸನ್ನದ್ಧರಾಗಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸೋಮವಾರ ತಿಳಿಸಿದರು.

ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಮಹದಾಯಿ ಉಪನದಿಯ ಕಾಲುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವುದನ್ನು ಪತ್ರಕರ್ತರಿಗೆ ತೋರಿಸಿ, ಅವರು ಮಾತನಾಡಿದರು.

‘ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಬಿಜೆಪಿಯವರು ಮಹಾನಾಟಕ ಆಡುತ್ತಿದ್ದಾರೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಗೋವಾ ಮುಖ್ಯಮಂತ್ರಿ ಮನೋಹರ ಪರ್ರೀಕರ್ ಹಾಗೂ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೂತ್ರಧಾರಿಗಳಾಗಿದ್ದಾರೆ. ಪರ್ರೀಕರ್‌ಗೆ ಪತ್ರ ಬರೆಯುವ ನಾಟಕವನ್ನಾಡಿ, ಯಡಿಯೂರಪ್ಪ ರಾದ್ಧಾಂತ ಮಾಡದೇ ಇದ್ದಿದ್ದರೆ ಅಲ್ಲಿನ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ಇಲ್ಲಿಗೆ ಬರುತ್ತಿರಲಿಲ್ಲ. ನಮ್ಮ ನೆಲದಲ್ಲಿಯೇ ನಿಂತು ಕನ್ನಡಿಗರ ಬಗ್ಗೆ ಅವಮಾನಕಾರಿ ಹೇಳಿಕೆ ಕೊಡುತ್ತಿರಲಿಲ್ಲ’ ಎಂದು ತಿರುಗೇಟು ನೀಡಿದರು.

‘ಸುಪ್ರೀಂ’ ನಿರ್ದೇಶನ ಉಲ್ಲಂಘಿಸಿಲ್ಲ:

‘ಗೋವಾ ಸರ್ಕಾರ ಆರೋಪಿಸಿರುವಂತೆ, ಕಣಕುಂಬಿಯಲ್ಲಿ ಈಗ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಸುಪ್ರಿಂ ಕೋರ್ಟ್‌ ನಿರ್ದೇಶನದಂತೆ 2017ರ ಆಗಸ್ಟ್‌ನಲ್ಲೇ ಕಾಲುವೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಗೋವಾ ಸಚಿವರ ಆರೋಪದಲ್ಲಿ ಹುರುಳಿಲ್ಲ. ಅವರು ಪರಿಶೀಲಿಸಿರುವುದು ಹಳೆಯ ಕಾಮಗಾರಿ. ಬೇಕಿದ್ದರೆ, ಕೇಂದ್ರ ಜಲ ಆಯೋಗದಿಂದ ಅಥವಾ ತಜ್ಞರ ತಂಡದಿಂದ ಪರಿಶೀಲನಾ ವರದಿ ಪಡೆದು ಖಾತ್ರಿಪಡಿಸಿಕೊಳ್ಳಲಿ’ ಎಂದು ಸವಾಲು ಹಾಕಿದರು.

‘ಕಾನೂನು ಪ್ರಕಾರ ನಾವು ಮುಂದುವರಿಯುತ್ತಿದ್ದೇವೆ. ಆದರೆ, ನ್ಯಾಯಾಂಗ ನಿಂದನೆ ಮಾಡಿದ್ದಾಗಿ ಗೋವಾ ಮುಖ್ಯಮಂತ್ರಿ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ವಿಷಯವನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಮಂಡಿಸಿದರೆ, ತಕ್ಕ ಉತ್ತರ ಕೊಡಲು ಗೊತ್ತಿದೆ’ ಎಂದರು.

‘ಗೋವಾ ಸರ್ಕಾರ, ಆ ರಾಜ್ಯದಲ್ಲಿ ಆಗಿರುವ ಹಿನ್ನಡೆ ಮುಚ್ಚಿಕೊಳ್ಳಲು ರಾಜಕೀಯ ಗಿಮಿಕ್‌ ಮಾಡುತ್ತಿದೆ. ಜನರ ದಾರಿ ತಪ್ಪಿಸುತ್ತಿದೆ. ನ್ಯಾಯಮಂಡಳಿಯ ಅನುಕಂಪ ಗಿಟ್ಟಿಸಲು ಹವಣಿಸುತ್ತಿದೆ’ ಎಂದು ಟೀಕಿಸಿದರು.

ಗೋವಾ ಸಚಿವರಿಂದ ಶಿಷ್ಟಾಚಾರ ಉಲ್ಲಂಘನೆ:

‘ಗೋವಾ ಜಲಸಂಪನ್ಮೂಲ ಸಚಿವರು ಶಿಷ್ಟಾಚಾರ ಉಲ್ಲಂಘಿಸಿ ಕಣಕುಂಬಿಗೆ ಬಂದಿದ್ದಾರೆ. ಅವರ ಭೇಟಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇರಲಿಲ್ಲ. ಕಾಲುವೆಯಲ್ಲಿ ಗೋವಾ ಕಡೆಗೆ ಇಳಿಜಾರಿದೆ. ಹೀಗಿರುವಾಗ, ನಮ್ಮ ಕಡೆಗೆ ನೀರು ಬರುತ್ತದೆಯೇ? ನಾವು ಜಲಾಶಯವನ್ನೇ ನಿರ್ಮಿಸಿಲ್ಲ. ಅಲ್ಲದೇ, ಕಾಲುವೆಯೊಳಗೆ ಎರಡು ದೊಡ್ಡ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಹೀಗಿರುವಾಗ ನೀರು ನಮ್ಮ ಕಡೆ ಹರಿಯಲು ಸಾಧ್ಯವಿಲ್ಲ. ನೀರು ಬಳಸಲು ಪಂಪ್ ಮಾಡಬೇಕಾಗುತ್ತದೆ. ಜಲಾಶಯ ಕಟ್ಟಿ, ತಡೆಗೋಡೆ ತೆಗೆದಾಗ ಮಾತ್ರ ನೀರು ನಮ್ಮ ಕಡೆ ಹರಿಯಲು ಹಾಗೂ ನಾವು ಬಳಸುವುದಕ್ಕೆ ಸಾಧ್ಯವಾಗುತ್ತದೆ. ಇದನ್ನು ಅಲ್ಲಿನ ಸಚಿವರು ಅರಿಯಬೇಕು’ ಎಂದು ತಿಳಿಸಿದರು.

ಪರ್ರೀಕರ್‌ ಕ್ಷಮೆ ಯಾಚಿಸಲಿ

‘ಗೋವಾ ಸಚಿವರು ಕೆಟ್ಟ ಶಬ್ದವನ್ನು ಬಳಸಿ, ರಾಜ್ಯದ ಜನರ ಸ್ವಾಭಿಮಾನ ಕೆಣಕುವಂತಹ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಎರಡೂ ರಾಜ್ಯಗಳ ಸಾಮರಸ್ಯ ಹಾಳು ಮಾಡಲು ಯತ್ನಿಸಿದ್ದಾರೆ. ಇದನ್ನು ಖಂಡಿಸುತ್ತೇನೆ. ಗೋವಾ ಮುಖ್ಯಮಂತ್ರಿ ರಾಜ್ಯದ ಜನ ಕ್ಷಮೆ ಯಾಚಿಸಬೇಕು. ಕರ್ನಾಟಕದಿಂದ ಹಾಲು, ತರಕಾರಿ ಹಾಗೂ ವಿದ್ಯುತ್‌ ಪೂರೈಕೆಯಾಗುತ್ತಿದೆ ಎನ್ನುವುದನ್ನು ಅಲ್ಲಿನ ಸರ್ಕಾರ ಮರೆಯಬಾರದು’ ಎಂದರು.

ಸುಳ್ಳುಗಳಿಗೆ ತಕ್ಕ ಉತ್ತರ:

‘ಒಂದು ಜಲಾನಯನ ಪ್ರದೇಶದಿಂದ ಇನ್ನೊಂದು ಜಲಾನಯನ ಪ್ರದೇಶಕ್ಕೆ ನೀರು ನೀಡಿರುವ ಹಲವು ಉದಾಹರಣೆಗಳಿವೆ. ಇದನ್ನು ನ್ಯಾಯಮಂಡಳಿ ಎದುರು ಮಂಡಿಸುತ್ತೇವೆ. ಮಹದಾಯಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇದೆ ಎಂದು ಗೋವಾ ಮುಖ್ಯಮಂತ್ರಿ ಹೇಳಿರುವುದು ಸುಳ್ಳು. ಫೆ.6ರಿಂದ 22ರವರೆಗೆ ವಿಚಾರಣೆ ಇದ್ದು, ಸಮರ್ಪಕ ದಾಖಲೆಗಳನ್ನು ಒದಗಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಮುಖ್ಯಸಚೇತಕ ಅಶೋಕ ಪಟ್ಟಣ, ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ವಿಧಾನಪರಿಷತ್‌ ಸದಸ್ಯ ವಿವೇಕರಾವ ಪಾಟೀಲ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry