‘ರಾಕೆಟ್‌’ಗೆ ಬಲಿಯಾದ ‘ಧನುಷ್‌’

7

‘ರಾಕೆಟ್‌’ಗೆ ಬಲಿಯಾದ ‘ಧನುಷ್‌’

Published:
Updated:
‘ರಾಕೆಟ್‌’ಗೆ ಬಲಿಯಾದ ‘ಧನುಷ್‌’

ಬೆಂಗಳೂರು: ಹಲಸೂರು ಕೇಂಬ್ರಿಡ್ಜ್‌ ಲೇಔಟ್‌ನ ಲೂರ್ದ್‌ ಚರ್ಚ್‌ ಆವರಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ‘ಪಟಾಕಿ ಪ್ರದರ್ಶನ’ ವೇಳೆ 12 ವರ್ಷದ ಧನುಷ್ ಎಂಬಾತ ದುರ್ಮರಣಕ್ಕಿಡಾಗಿದ್ದಾನೆ.

ಹೊಸ ವರ್ಷದ ಎರಡನೇ ಭಾನುವಾರ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರದರ್ಶನದಲ್ಲಿ ಆಯೋಜಕರು, ಒಂದೇ ಬಾರಿಗೆ 30ಕ್ಕೂ ಹೆಚ್ಚು ರಾಕೆಟ್‌ಗಳಿಗೆ ಬೆಂಕಿ ಹಚ್ಚಿದ್ದರು. ಒಂದೊಂದೇ ರಾಕೆಟ್‌ ಮೇಲಕ್ಕೆ ಹಾರಿದ್ದವು. ಕೊನೆಯಲ್ಲಿ ಹಾರಿದ ಒಂದು ರಾಕೆಟ್‌ ಮೇಲಕ್ಕೆ ಹೋಗಿ ಸ್ಫೋಟವಾಗದೆ, ಕೆಳಗೆ ಬಂದು ಧನುಷ್‌ ತಲೆ ಮೇಲೆ ಬಿದ್ದಿತ್ತು. ತಲೆ ಎರಡು ಹೋಳಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತ್ಯಾಗರಾಜನಗರದ ನಿವಾಸಿ ಸುರೇಶ್‌ಕುಮಾರ್ ದಂಪತಿಯ ಮಗನಾದ ಧನುಷ್, ಡೆಲ್ಲಿ ಪಬ್ಲಿಕ್‌ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸಂಬಂಧಿ ಅನಿಲ್‌ಕುಮಾರ್‌ ಹಾಗೂ ತಂಗಿ ಜತೆಯಲ್ಲಿ ಪ್ರದರ್ಶನ ವೀಕ್ಷಣೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.

‘ಅಣ್ಣ (ಧನುಷ್‌) ಹಾಗೂ ತಂಗಿ ಇಬ್ಬರೂ ನನ್ನ ಎಡಬಲದಲ್ಲಿದ್ದರು. ನಾವು ನಿಂತಿದ್ದ ಜಾಗದಿಂದ 100 ಮೀಟರ್‌ ದೂರದಲ್ಲಿ ಆಯೋಜಕರು ಪಟಾಕಿ ಹಚ್ಚುತ್ತಿದ್ದರು. ಆ ಸ್ಥಳಕ್ಕೆ ಯಾರನ್ನೂ ಬಿಟ್ಟಿರಲಿಲ್ಲ. ರಾಕೆಟ್‌ ಹಾರಿಸಿದ್ದ ವೇಳೆ 2 ಸಾವಿರಕ್ಕೂ ಹೆಚ್ಚು ಮಂದಿ ಆಕಾಶದತ್ತ ನೋಡುತ್ತಿದ್ದರು. ಕೆಲ ನಿಮಿಷದಲ್ಲೇ ಪಕ್ಕದಲ್ಲಿದ್ದ ಧನುಷ್‌ ಕೆಳಗೆ ಬಿದ್ದಿದ್ದ. ಏನಾಯಿತು ಎಂದು ನೋಡುವಷ್ಟರಲ್ಲಿ ಆತನ ತಲೆ ಒಡೆದು ರಕ್ತ ಸೋರುತ್ತಿತ್ತು. ಪಕ್ಕದಲ್ಲೇ ರಾಕೆಟ್‌ ಬಿದ್ದಿತ್ತು’ ಎಂದು ಚಿಕ್ಕಪ್ಪ ಅನಿಲ್‌ಕುಮಾರ್‌ ತಿಳಿಸಿದರು.

‘ಆಸ್ಪತ್ರೆಗೆ ಕರೆದೊಯ್ಯಲೆಂದು ಆತನನ್ನು ಎತ್ತಿಕೊಂಡಾಗ ಮೆದುಳಿನ ತುಣುಕುಗಳೆಲ್ಲ ಶರ್ಟ್‌ ಮೇಲೆ ಬಿದ್ದವು. ಅದೇ ಸ್ಥಿತಿಯಲ್ಲಿ ಆತನನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದೆ. ತಪಾಸಣೆ ನಡೆಸಿದ ವೈದ್ಯರು, ಆತ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಹೇಳಿದರು’ ಎಂದು ವಿವರಿಸಿದರು.

‘ಆ ರಾಕೆಟ್‌ ಎರಡು ಕೆ.ಜಿ ತೂಕವಿತ್ತು. ಧನುಷ್‌ ತಲೆ ಮೇಲೆ ಬಿದ್ದಿದೆ ಹೊರತು, ಸ್ಫೋಟ ಆಗಿಲ್ಲ. ಆ ರೀತಿಯಾಗಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು’ ಎಂದು ಅನಿಲ್‌ಕುಮಾರ್‌ ತಿಳಿಸಿದರು.

ಸಂಘಟಕರ ನಿರ್ಲಕ್ಷ್ಯ:

‘7 ವರ್ಷದಿಂದ ನಿರಂತರವಾಗಿ ಪಟಾಕಿ ಪ್ರದರ್ಶನ ವೀಕ್ಷಿಸಲು ಬರುತ್ತಿದ್ದೇವೆ. ಯಾವ ವರ್ಷವೂ ಆಯೋಜಕರು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಅಗ್ನಿಶಾಮಕ ದಳದ ವಾಹನ ಹಾಗೂ ಆಂಬುಲೆನ್ಸ್‌ ಸ್ಥಳದಲ್ಲಿ ಇರಲಿಲ್ಲ. ಒಬ್ಬ ಪೊಲೀಸ್‌ ಸಹ ಕಂಡುಬರಲಿಲ್ಲ. ಧನುಷ್‌ ಸಾವಿಗೆ ಸಂಘಟಕರ ನಿರ್ಲಕ್ಷ್ಯವೇ ಕಾರಣ’ ಎಂದು ಅನಿಲ್‌ಕುಮಾರ್‌ ದೂರಿದರು.

‘ಪಟಾಕಿ ಹಚ್ಚುವವರು ಸೇರಿ ಕೇಂಬ್ರಿಡ್ಜ್‌ ಲೇಔಟ್‌ನ ಕೆಲ ನಿವಾಸಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪ್ರದರ್ಶನದಲ್ಲಿ ಜನರಿಗೆ ರಕ್ಷಣೆಯೇ ಇರಲಿಲ್ಲ. ಈ ಪ್ರದರ್ಶನ ಬಂದ್‌ ಮಾಡುವಂತೆ ಸ್ಥಳೀಯರು ಪ್ರತಿವರ್ಷವೂ ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಸಂಘಟಕರು ಕ್ಯಾರೆ ಎನ್ನುತ್ತಿಲ್ಲ’ ಎಂದರು.

ಬಾಲಕನ ಸಂಬಂಧಿ ಮಹದೇವ, ‘ಧನುಷ್‌ ಅಕ್ಕ–ಪಕ್ಕದಲ್ಲೂ ಜನರಿದ್ದರು. ಅದೃಷ್ಟವಶಾತ್‌ ಅವರಿಗೆ ಏನು ಆಗಿಲ್ಲ. ಈ ಪ್ರದರ್ಶನವನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ಸಂಘಟಕರ ವಿರುದ್ಧ ಎಫ್‌ಐಆರ್‌:

ಪಟಾಕಿ ಪ್ರದರ್ಶನ ಸಂಘಟಕರ ವಿರುದ್ಧ ಹಲಸೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಅತ್ತ ಚರ್ಚ್‌ ಬಾಗಿಲಿಗೆ ಬೀಗ ಹಾಕಿ ಫಾದರ್‌ ಸಮೇತ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

‘ಬಾಲಕನ ಪೋಷಕರಿಗೆ ಸಂಘಟಕರ ನಿಖರ ಹೆಸರು ಗೊತ್ತಿಲ್ಲ. ಸಂಘಟಕರು ನಿರ್ಲಕ್ಷ್ಯವೆಂದಷ್ಟೇ ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆಸಿ ಆರೋಪಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸುತ್ತೇವೆ’ ಎಂದು ಪೊಲೀಸರು ತಿಳಿಸಿದರು.

ತಂಗಿಯ ಜಾಗದಲ್ಲಿ ಬಂದು ನಿಂತಿದ್ದ!

‘ರಾತ್ರಿ 8 ಗಂಟೆಗೆ ಧನುಷ್‌ ಪ್ರದರ್ಶನ ಸ್ಥಳಕ್ಕೆ ಬಂದಿದ್ದ. 9 ಗಂಟೆಗೆ ಆಕಾಶದತ್ತ ಮುಖ ಮಾಡಿ ಪಟಾಕಿ ಸಿಡಿಯುವುದನ್ನು ನೋಡುತ್ತಿದ್ದ ಧನುಷ್‌, ಸರಿಯಾಗಿ ಕಾಣುತ್ತಿಲ್ಲವೆಂದು ಪಕ್ಕದಲ್ಲಿದ್ದ ತಂಗಿಯನ್ನು ತನ್ನ ಜಾಗಕ್ಕೆ ಕರೆಸಿಕೊಂಡಿದ್ದ. ಆಕೆಯಿದ್ದ ಜಾಗಕ್ಕೆ ಹೋಗಿ ನಿಂತುಕೊಂಡಿದ್ದ. ಅದೇ ಜಾಗದಲ್ಲೇ ಆತನ ತಲೆಗೆ ರಾಕೆಟ್‌ ಬಡಿದಿದೆ. ಆತ ಜಾಗ ಬದಲಿಸದಿದ್ದರೆ, ತಂಗಿಯೇ ಮೃತಪಡುತ್ತಿದ್ದಳು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸರಿಗೆ ಮುಖ್ಯಮಂತ್ರಿ ಭದ್ರತೆ ಚಿಂತೆ

ಧನುಷ್ ಸಾವಿನ ಬಗ್ಗೆ ಪೋಷಕರು ನೀಡಿದ್ದ ದೂರನ್ನಷ್ಟೇ ಪೊಲೀಸರು ಸ್ವೀಕರಿಸಿದ್ದಾರೆ. ಆದರೆ, ಸೋಮವಾರ ಘಟನಾ ಸ್ಥಳಕ್ಕೆ ಹೋಗಿ ಯಾರನ್ನೂ ವಿಚಾರಣೆ ಮಾಡಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಪಡೆದಿಲ್ಲ.

ಈ ಬಗ್ಗೆ ಸುದ್ದಿಗಾರರು ಠಾಣೆಯ ಅಧಿಕಾರಿಯನ್ನು ಪ್ರಶ್ನಿಸಿದಾಗ, ‘ಮುಖ್ಯಮಂತ್ರಿ ನಮ್ಮ ಹಲಸೂರಿಗೆ ಬರುತ್ತಿದ್ದಾರೆ. ಅವರ ಭದ್ರತೆ ಕೆಲಸವೇ ಹೆಚ್ಚಿದೆ. ಮೊದಲು ಇದು ಮುಗಿಯಲಿ. ನಿಧಾನವಾಗಿ ಸ್ಥಳಕ್ಕೆ ಹೋಗಿ ಬರುತ್ತೇವೆ’ ಎಂದು ‍ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry