ಇಲ್ಲದ ನೀರನ್ನು ಎಲ್ಲಿಂದ ಬಿಡಬೇಕು ?

7

ಇಲ್ಲದ ನೀರನ್ನು ಎಲ್ಲಿಂದ ಬಿಡಬೇಕು ?

Published:
Updated:
ಇಲ್ಲದ ನೀರನ್ನು ಎಲ್ಲಿಂದ ಬಿಡಬೇಕು ?

ಬೆಂಗಳೂರು: ‘ಇಲ್ಲದ ನೀರನ್ನು ಎಲ್ಲಿಂದ ಬಿಡಬೇಕು’ ಎಂದು ಪ್ರಶ್ನಿಸಿರುವ ಮಂಡ್ಯ ಶಾಸಕ ಎಂ.ಎಚ್‌.ಅಂಬರೀಷ್‌, ‘ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘ನ್ಯಾಯಾಧಿಕರಣದ ತೀರ್ಪಿನ ಅನ್ವಯ ನೀರು ಬಿಡುವಂತೆ ತಮಿಳುನಾಡು ಮುಖ್ಯಮಂತ್ರಿ ಪಳನಿ ಸ್ವಾಮಿ ಕೋರಿದ್ದಾರೆ ನಿಜ. ಆದರೆ, ರಾಜ್ಯದಲ್ಲಿ ಸತತ ಬರಗಾಲವಿದ್ದು, ಜಲಾಶಯಗಳಲ್ಲಿ ನಿಗದಿತ ನೀರು ಸಂಗ್ರಹವಾಗಿಲ್ಲ. ರಾಜ್ಯದ ರೈತರ ಹಿತ ಕಾಪಾಡುವ ದೃಷ್ಟಿಯಿಂದ ನೀರು ಬಿಡಬಾರದು’ ಎಂದು ಅಂಬರಿಷ್ ಮನವಿ ಮಾಡಿದ್ದಾರೆ.

‘ಈಗಿರುವ ಪ್ರಮಾಣ ಲೆಕ್ಕ ಹಾಕಿದರೆ ಕಾವೇರಿ ಕೊಳ್ಳದಲ್ಲಿರುವ ಪ್ರದೇಶಗಳ ಜನ– ಜಾನುವಾರುಗಳಿಗೆ ಕುಡಿಯಲು, ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೂ ಸಾಲದು. ಆದ್ದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ರೈತರ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅಂಬರೀಷ್ ತಿಳಿಸಿದ್ದಾರೆ.

‘ಪಳನಿ ಸ್ವಾಮಿ ಪತ್ರಕ್ಕೆ ತಾವು ಸ್ಪಂದಿಸಬಾರದು. ಸ್ಪಂದಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ. ನಾನೂ ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ರೈತ ಸಂಘಟನೆಗಳು, ಹೋರಾಟಗಾರರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದೇವೆ’ ಎಂದು ಹೇಳಿದ್ದಾರೆ.

‘ನೀರು ಬಿಡುವುದಿಲ್ಲ ಎಂದು ನೀವು ಈಗಾಗಲೇ ಸ್ಪಷ್ಟಪಡಿಸಿದ್ದೀರಿ. ಆದರೂ, ಅಗತ್ಯ ಬಿದ್ದರೆ ಜನಪ್ರತಿನಿಧಿಗಳ, ರೈತ ಸಂಘಟನೆಗಳ ಹಾಗೂ ಹೋರಾಟಗಾರರ ಸರ್ವ ಪಕ್ಷ ಮುಖಂಡರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲು ಮುಂದಾಗಿ’ ಎಂದು ಅವರು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry