2ನೇ ಟರ್ಮಿನಲ್‌: ವಿಶಾಲ ಸ್ಥಳಾವಕಾಶ

7

2ನೇ ಟರ್ಮಿನಲ್‌: ವಿಶಾಲ ಸ್ಥಳಾವಕಾಶ

Published:
Updated:
2ನೇ ಟರ್ಮಿನಲ್‌: ವಿಶಾಲ ಸ್ಥಳಾವಕಾಶ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಬಳಿ ನಿರ್ಮಾಣವಾಗುತ್ತಿರುವ ಎರಡನೇ ಟರ್ಮಿನಲ್‌ ಹಸಿರಿನಿಂದ ಕಂಗೊಳಿಸಲಿದೆ. ಗಾತ್ರದಲ್ಲೂ ಇದು ವಿಶಾಲವಾಗಿರಲಿದೆ.

ಎರಡನೇ ಟರ್ಮಿನಲ್‌ನ ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ 2.54 ಲಕ್ಷ ಚದರ ಮೀ. ನಿರ್ಮಾಣ ಪ್ರದೇಶವನ್ನು ಹೊಂದಿರುವ ಕಟ್ಟಡ ಹಾಗೂ ಎರಡನೇ ಹಂತದಲ್ಲಿ 4.41 ಲಕ್ಷ ಚದರ ಮೀ. ನಿರ್ಮಾಣ ಪ್ರದೇಶವಿರುವ ಕಟ್ಟಡ ನಿರ್ಮಾಣವಾಗಲಿದೆ.

ನಗರವು ಉದ್ಯಾನಗಳಿಗೆ ಹೆಸರುವಾಸಿಯಾಗಿರುವುದರಿಂದ ಎರಡನೇ ಟರ್ಮಿನಲ್‌ನಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಇದರ ವಿನ್ಯಾಸದ ಕರಡಿನಲ್ಲಿರುವ ಮಾಹಿತಿ ಪ್ರಕಾರ ಮೊದಲ ಹಂತದಲ್ಲಿ ನಿರ್ಮಾಣವಾಗುವ ಕಟ್ಟಡವು ವರ್ಷದಲ್ಲಿ 2.50 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಹಾಗೂ ಎರಡನೇ ಹಂತದಲ್ಲಿ ನಿರ್ಮಾಣವಾಗುವ ಕಟ್ಟಡವು 4.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ.

ವಿಮಾನನಿಲ್ದಾಣದ ಪ್ರವೇಶದ (ಚೆಕ್‌–ಇನ್‌) ಕೌಂಟರ್‌ಗಳಲ್ಲೂ ವಿಶಾಲ ಸ್ಥಳಾವಕಾಶವಿರಲಿದೆ. ನಿರ್ಗಮನ ಪ್ರದೇಶದಲ್ಲಿ ಒಟ್ಟು 213 ಕೌಂಟರ್‌

ಗಳನ್ನು ನಿರ್ಮಿಸುವ ಉದ್ದೇಶವಿದೆ. ಮೊದಲ ಹಂತದಲ್ಲಿ 90 ಕೌಂಟರ್‌ಗಳು ಹಾಗೂ ಎರಡನೇ ಹಂತದಲ್ಲಿ 123 ಕೌಂಟರ್‌ಗಳು ನಿರ್ಮಾಣವಾಗಲಿವೆ. ಈ ಪ್ರದೇಶದಲ್ಲಿ 97 ವಲಸೆ ಕೌಂಟರ್‌ಗಳು ಹಾಗೂ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲಲು 62 ಲೇನ್‌ಗಳು ಬರಲಿವೆ.

ಆಗಮನ ಪ್ರದೇಶದಲ್ಲಿ 173 ವಲಸೆ ಕೌಂಟರ್‌ಗಳು ಇರಲಿವೆ. ಈ ಪೈಕಿ 113 ಕೌಂಟರ್‌ಗಳು ನಿರ್ಮಾಣವಾಗುವುದು ಎರಡನೇ ಹಂತದಲ್ಲಿ. ಪ್ರಯಾಣಿಕರ ಹ್ಯಾಂಡ್‌ ಬ್ಯಾಗ್‌ ತಪಾಸಣೆಗಾಗಿ 23 ಲೇನ್‌ಗಳು ಇರಲಿವೆ. ಬ್ಯಾಗ್‌ಗಳನ್ನು ಸಾಗಿಸುವ 25 ಬೆಲ್ಟ್‌ಗಳನ್ನು ಎರಡು ಹಂತಗಳಲ್ಲಿ ಅಳವಡಿಸಲಾಗುತ್ತದೆ.

ಎರಡನೇ ಟರ್ಮಿನಲ್‌ ಅಂತರರಾಷ್ಟ್ರೀಯ ಹಾಗೂ ದೇಸಿ ಪ್ರಯಾಣಿಕರನ್ನು ನಿರ್ವಹಿಸಲಿದೆ. ನಿರ್ಗಮನ ಪ್ರೊಸೆಸರ್‌ಗಳು ಮೂರನೇ ಮಹಡಿಯಲ್ಲಿರಲಿವೆ (ನೆಲದಿಂದ 12 ಮೀ. ಎತ್ತರದಲ್ಲಿ). ಎರಡನೇ ಮಹಡಿಯು ನಿರ್ಗಮನ ಕಾರಿಡಾರ್‌ಗೆ ಮೀಸಲು.ವಿಮಾನದಿಂದ ಇಳಿದ ಪ್ರಯಾಣಿಕರು ನೇರವಾಗಿ ಮಧ್ಯದ ಮಹಡಿಯಲ್ಲಿರುವ ಆಗಮನ ಪ್ರದೇಶಕ್ಕೆ (ನೆಲದಿಂದ 5.25 ಮೀ ಎತ್ತರ) ಬರಬಹುದು. ಅಲ್ಲಿಂದ ಅವರು ನೆಲ ಅಂತಸ್ತಿನಲ್ಲಿರುವ ಆಗಮನ ಕೊಠಡಿಗೆ ಬರಬಹುದು.

ಟರ್ಮಿನಲ್‌ನ ವಿನ್ಯಾಸಗೊಳಿಸುವಾಗ ಸುಸ್ಥಿರತೆ ಕಾಪಾಡುವ ಅಂಶಗಳಿಗೆ ಮಹತ್ವ ನೀಡಲಾಗಿದೆ. ಕೃತಕ ಬೆಳಕಿನ ಮೇಲಿನ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ಬೆಳಕನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಗಿದೆ.  ಸಾಧ್ಯವಿರುವಲ್ಲೆಲ್ಲಾ ನೀರನ್ನು ಸಂಗ್ರಹಿಸಲು ಹಾಗೂ ಮರುಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಗರದಲ್ಲಿ ವರ್ಷಪೂರ್ತಿ ಇರುವ ತಂಪಾದ ಹವಾಮಾನವನ್ನು ಬಳಸಿಕೊಂಡು ಯಾಂತ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯ ಮೇಲಿನ ಅವಲಂಬನೆ ಕಡಿಮೆಗೊಳಿಸುವಂತೆ ಟರ್ಮಿನಲ್‌ನ ವಿನ್ಯಾಸ ರೂಪಿಸಲಾಗಿದೆ.

ಇದರ ಉದ್ಯಾನದ ವಿನ್ಯಾಸ ರೂಪಿಸುವಾಗಲೂ ನೀರಿನ ಸಂರಕ್ಷಣೆಗೆ ಮಹತ್ವ ನೀಡಲಾಗಿದೆ. ನೀರಿನ್ನು ಉಳಿಸುವ ಹಾಗೂ ಮರುಬಳಕೆ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ.  ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಎರಡನೇ ಟರ್ಮಿನಲ್‌ನ ವಿನ್ಯಾಸ ರೂಪಿಸಲು ಅಮೆರಿಕದ ಸ್ಕಿಡ್‌ಮೋರ್‌, ಓವಿಂಗ್‌ ಆ್ಯಂಡ್‌ ಮೆರಿಲ್‌ (ಎಸ್‌ಒಎಂ) ವಾಸ್ತುಶಿಲ್ಪ ಸಂಸ್ಥೆಯ ಸಹಾಯ ಪಡೆದಿದೆ.

ವರ್ಷದಲ್ಲಿ 6.5 ಕೋಟಿ ಜನ ಬಳಸುವ ನಿರೀಕ್ಷೆ

ಕೆಐಎಎಲ್‌ 2017ರಲ್ಲಿ 2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿರುವ ದಾಖಲೆ ಹೊಂದಿದೆ. ಎರಡನೇ ಟರ್ಮಿನಲ್‌ನ ಎರಡೂ ಹಂತಗಳ ಕಾಮಗಾರಿ ಪೂರ್ಣಗೊಂಡ ಬಳಿಕ ವರ್ಷದಲ್ಲಿ ಈ ವಿಮಾನ ನಿಲ್ದಾಣ ಬಳಸುವವರ ಸಂಖ್ಯೆ 6.5 ಕೋಟಿಗೆ ಹೆಚ್ಚುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry