‘ಜೀವನ ಪರ್ಯಂತ ಕಲಿಕೆ, ಗಳಿಕೆ’

7

‘ಜೀವನ ಪರ್ಯಂತ ಕಲಿಕೆ, ಗಳಿಕೆ’

Published:
Updated:
‘ಜೀವನ ಪರ್ಯಂತ ಕಲಿಕೆ, ಗಳಿಕೆ’

ಬೆಂಗಳೂರು: ಕಲಿಕೆ ಎನ್ನುವುದು ಈ ಹಿಂದೆ ಪ್ಯಾಕೇಜ್‌ ಆಗಿತ್ತು. ಓದಿ ಕೆಲಸಕ್ಕೆ ಸೇರಿ ಬಳಿಕ ನಿವೃತ್ತಿಯಾಗುವುದು ಪ್ಯಾಕೇಜ್‌ನ ಭಾಗವಾಗಿತ್ತು. ಈಗ ಜೀವನವಿಡೀ ಕಲಿಯಬಹುದು ಹಾಗೂ ಹಣ ಗಳಿಸಬಹುದು ಎಂದು ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ತಿಳಿಸಿದರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ವತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕಂಪ್ಯೂಟರೀಕೃತ ಜಗತ್ತಿನಲ್ಲಿ ಶಿಕ್ಷಣಶಾಸ್ತ್ರ, ನೀತಿ ಮತ್ತು ತಂತ್ರಜ್ಞಾನ’ ಕುರಿತ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಆಧುನಿಕ ಯುಗದಲ್ಲಿ ಕಲಿಕೆ ಎನ್ನುವುದು ಅತಿಮುಖ್ಯ. ತಂತ್ರಜ್ಞಾನ ಬೆಳವಣಿಗೆಯಿಂದಾಗಿ ನಿರಂತರ ಕಲಿಕೆ ಸಾಧ್ಯವಾಗಿದೆ. ಹೊಸ ವಿಷಯಗಳನ್ನು ಕಲಿಯುವುದರಿಂದ ಜೀವನದ ಬದಲಾವಣೆಯೂ ಸಾಧ್ಯವಾಗಿದೆ. ಜಗತ್ತಿನಲ್ಲಿ ಪ್ರತಿದಿನ 70 ಲಕ್ಷ ಜನರು ಹೊಸ ವಿಷಯಗಳ ಬಗ್ಗೆ ತಿಳಿಯುತ್ತಿರುತ್ತಾರೆ ಎಂದರು.

ಜಾಗತೀಕರಣದ ಪರಿಣಾಮದಿಂದ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕ ಸೇವೆಗಳು ಹೆಚ್ಚಾಗಿವೆ. ಕಲಿಕೆಗೆ ಹೆಚ್ಚಿನ ಪ್ರಾಧಾನ್ಯ ಸಿಕ್ಕಿದೆ. ಉಚಿತ ವೈ–ಫೈ ಸೇವೆಯಿಂದಾಗಿ ಡಿಜಿಟಲ್‌ ಕಲಿಕೆಗೂ ಅನುಕೂಲವಾಗುತ್ತಿದೆ ಎಂದು ಹೇಳಿದರು.

500 ವರ್ಷಗಳ ಹಿಂದೆ ಮಾಹಿತಿ ತಂತ್ರಜ್ಞಾನ ಇರಲಿಲ್ಲ. ಆದರೆ, ಈಗ ಸುದ್ದಿಯ ಪ್ರವಾಹ ಹೆಚ್ಚಿದೆ. ಮಾಹಿತಿಗಳು ಸೃಷ್ಟಿಯಾದಂತೆ ಬಳಕೆದಾರರ ಪ್ರಮಾಣವೂ ಹೆಚ್ಚುತ್ತಿದೆ. ಸೂಕ್ಷ್ಮ ವಹಿವಾಟಿನಿಂದಾಗಿ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ಉಂಟಾಗುತ್ತಿದೆ ಎಂದರು.

ಇ–ಕಾಮರ್ಸ್‌, ಗೂಗಲ್‌ ಸಂಶೋಧನೆಯಿಂದ ಹಾಗೂ ಅಮೆಜಾನ್‌, ಫೇಸ್‌ಬುಕ್‌ನಂತಹ ಸಂಸ್ಥೆಗಳಿಂದ 10 ಕೋಟಿ ಜನರಿಗೆ ಉಪಯೋಗವಾಗಿದೆ. ಉಬರ್‌, ಒಲಾದಂತಹ ಸಾರಿಗೆ ಹಾಗೂ ಹೋಟೆಲ್‌ ಬುಕ್ಕಿಂಗ್‌ನಂತಹ ವೆಬ್‌ಸೈಟ್‌ಗಳ ಮೂಲಕ ನಗರ ಸೇವೆಗಳು ಹೆಚ್ಚಾಗಿವೆ ಎಂದು ಹೇಳಿದರು.

ದೇಶದಲ್ಲಿ ನೋಟು ರದ್ದತಿ ಬಳಿಕ ಡಿಜಿಟಲ್‌ ವಹಿವಾಟು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದರು.

ಅಮೆರಿಕದಲ್ಲಿ 2005ರಿಂದ 2015ರ ಅವಧಿಯಲ್ಲಿ ಶೇ 24ರಷ್ಟು ಅರೆಕಾಲಿಕ ಉದ್ಯೋಗಗಳು ಹಾಗೂ ಪರ್ಯಾಯ ಉದ್ಯೋಗಗಳು ಸೃಷ್ಟಿಯಾಗಿವೆ. ಇವರು ಯಾವುದೇ ಕಂಪನಿಗಳ ನೌಕರರಲ್ಲ. ಸೂಕ್ಷ್ಮ ವಹಿವಾಟು ಹಾಗೂ ಡಿಜಿಟಲ್‌ ಸೇವಾ ಕ್ಷೇತ್ರದಲ್ಲಿ ಇವರಿಗೆ ಕೆಲಸಗಳು ಸಿಕ್ಕಿವೆ ಎಂದು ವಿವರಿಸಿದರು.

‘ಸರ್ಕಾರಿ ಶಾಲೆಗೆ ಅಸ್ತಿತ್ವದ ಬಿಕ್ಕಟ್ಟು’

ಸರ್ಕಾರಿ ಶಾಲೆಗಳಿಗೆ ಅಸ್ತಿತ್ವದ ಬಿಕ್ಕಟ್ಟು ಎದುರಾಗಿದೆ. ನಗರವಲ್ಲದೆ ಗ್ರಾಮೀಣ ಭಾಗದ ಜನರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ಕೊಡಿಸಬೇಕು, ಇಂಗ್ಲಿಷ್‌ ಕಲಿಸಬೇಕು ಎಂಬ ಹಂಬಲ ಪೋಷಕರದ್ದು. ಇದರಿಂದ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಪ್ರಮಾಣ ಕಡಿಮೆ ಆಗುತ್ತಿದೆ ಎಂದು ನಂದನ್‌ ನಿಲೇಕಣಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry