ಸಚಿವರ ಕೊಠಡಿಯಲ್ಲೇ ಅಕ್ರಮ!

7

ಸಚಿವರ ಕೊಠಡಿಯಲ್ಲೇ ಅಕ್ರಮ!

Published:
Updated:

ಬೆಂಗಳೂರು: ಶಾಸಕರ ಭವನದಲ್ಲಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಕೊಠಡಿಯಲ್ಲಿ ಉಳಿದುಕೊಂಡಿದ್ದ ರಾಮಚಂದ್ರ ನಾಯಕ್‌ ಎಂಬಾತ, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಕೊಡಿಸಲು ಅಭ್ಯರ್ಥಿಯೊಬ್ಬರಿಗೆ ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ.

ಈ ಬಗ್ಗೆ ಸ್ವತಃ ರಾಯರಡ್ಡಿ ಅವರೇ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ಅವರಿಗೆ ಜ. 12ರಂದು ದೂರು ನೀಡಿದ್ದಾರೆ. ಅದರನ್ವಯ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆರೋಪಿ ರಾಮಚಂದ್ರ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಕುಷ್ಟಗಿ ತಾಲ್ಲೂಕಿನ ಅಕ್ಕಿಹಾಳತಾಂಡದ ನಿವಾಸಿಯಾದ ರಾಮಚಂದ್ರ, ಬೆಂಗಳೂರಿಗೆ ಬಂದಾಗಲೆಲ್ಲ ಶಾಸಕರ ಭವನದಲ್ಲಿರುವ ಸಚಿವರ ಹೆಸರಿನ ಕೊಠಡಿ ನಂ. 288ರಲ್ಲಿ ಉಳಿದುಕೊಳ್ಳುತ್ತಿದ್ದ. ಭವನದ ಬಳಿಯೇ ಇರುವ ಕೆಪಿಎಸ್‌ಸಿ ಕಚೇರಿಗೆ ಹೋಗುತ್ತಿದ್ದ ಆತ, ಅಲ್ಲಿಗೆ ಬರುತ್ತಿದ್ದ ಅಭ್ಯರ್ಥಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಜತೆಗೆ ಪರಿಚಯಸ್ಥರಿಂದ ಉತ್ತರ ಕರ್ನಾಟಕದ ಅಭ್ಯರ್ಥಿಗಳ ಸಂಪರ್ಕ ಸಾಧಿಸುತ್ತಿದ್ದ. ಪ್ರಶ್ನೆಪತ್ರಿಕೆ ಕೊಡಿಸುವುದಾಗಿ ಹೇಳಿ ಅವರನ್ನು ಮಾತುಕತೆಗಾಗಿ ಕೊಠಡಿಗೆ ಕರೆಸುತ್ತಿದ್ದ.

ಇತ್ತೀಚೆಗೆ ಅಭ್ಯರ್ಥಿಯೊಬ್ಬರನ್ನು ಕರೆಸಿದ್ದ ಆರೋಪಿ, ‘ಉನ್ನತ ಶಿಕ್ಷಣ ಸಚಿವರು ನನಗೆ ಆಪ್ತರು. ಯಾವಾಗಲೂ ಅವರ ಜತೆಗೆ ಇರುತ್ತೇನೆ. ಈ ಕೊಠಡಿಯನ್ನು ಅವರೇ ನನಗೆ ಬಿಟ್ಟುಕೊಟ್ಟಿದ್ದಾರೆ’ ಎಂದು ಹೇಳಿ ನಂಬಿಸಿದ್ದ.

‘ಕೆಪಿಎಸ್‌ಸಿಯಲ್ಲಿ ನನಗೆ ಸಾಕಷ್ಟು ಜನ ಪರಿಚಯವಿದ್ದಾರೆ. ನೀವು ಲಕ್ಷಾಂತರ ರೂಪಾಯಿ ಕೊಟ್ಟರೆ, ಪರೀಕ್ಷೆಗೂ ಮುನ್ನಾದಿನವೇ ನಿಮಗೆ ಪ್ರಶ್ನೆ ಪತ್ರಿಕೆ ಕೊಡಿಸುತ್ತೇನೆ’ ಎಂದು ಅಭ್ಯರ್ಥಿಗೆ ಬೇಡಿಕೆ ಇಟ್ಟಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಸಚಿವ ರಾಯರಡ್ಡಿ, ರಾಮಚಂದ್ರ ವಿರುದ್ಧ ದೂರು ನೀಡಿದ್ದಾರೆ.

ವೈಯಕ್ತಿಕ ಪರಿಚಯವಿಲ್ಲ:

‘ರಾಮಚಂದ್ರ ಎಂಬಾತನಿಗೂ ನನಗೂ ಯಾವುದೇ ವೈಯಕ್ತಿಕ ಪರಿಚಯವಿಲ್ಲ. ನನ್ನ ಕಚೇರಿಯನ್ನು ಆತ ದುರುಪಯೋಗಪಡಿಸಿಕೊಂಡಿದ್ದಾನೆ. ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಸಚಿವರು ತಿಳಿಸಿದ್ದಾರೆ.

‘ನಾನು ಕೋರಮಂಗಲದ ಸ್ವಂತ ಮನೆಯಲ್ಲಿ ವಾಸವಿದ್ದೇನೆ. ನನ್ನ ಮತಕ್ಷೇತ್ರದಿಂದ ಯಾರಾದರೂ ಬೆಂಗಳೂರಿಗೆ ಬಂದರೆ ನನ್ನ ಕೊಠಡಿಯನ್ನು ಉಪಯೋಗಿಸುತ್ತಾರೆ. ಪರಿಚಯವಿದ್ದರಷ್ಟೇ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಕುಷ್ಟಗಿ ತಾಲ್ಲೂಕಿನ ತಾಳಕೇರಿಯ ಬಸವರಾಜ ಕಳ್ಳಿ ಎಂಬುವರ ಪರಿಚಯ ಹಾಗೂ ಕೋರಿಕೆ ಮೇರೆಗೆ ಈ ರಾಮಚಂದ್ರ ಕೊಠಡಿಗೆ ಪ್ರವೇಶ ಮಾಡಿದ್ದ ಎಂಬುದು ತಿಳಿದುಬಂದಿದೆ.’

‘ಆತ ನನ್ನ ಕೊಠಡಿಯಲ್ಲೇ ಈ ಅವ್ಯವಹಾರ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ನನ್ನ ಹೆಸರು ಹಾಗೂ ಘನತೆಗೆ ಆತ ಧಕ್ಕೆಯನ್ನು ಉಂಟು ಮಾಡಿದ್ದಾನೆ. ಆತನನ್ನು ಬಂಧಿಸಿ ಸತ್ಯಾಂಶವನ್ನು ಬಯಲು ಮಾಡಬೇಕು’ ಎಂದು ರಾಯರಡ್ಡಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry