ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕಪ್ರಾಣಿಗಳ ದಾಹ ನೀಗಿಸಲು ನೀರಿನ ತೊಟ್ಟಿ

Last Updated 15 ಜನವರಿ 2018, 20:26 IST
ಅಕ್ಷರ ಗಾತ್ರ

ಬೆಂಗಳೂರು: ಹಳ್ಳಿಗಾಡಿನ ಮೂಕಜೀವಿಗಳ ನೀರಿನ ದಾಹ ನೀಗಿಸಲು ಬೆಂಗಳೂರು ಉತ್ತರ ತಾಲ್ಲೂಕಿನ ಮಲ್ಲಸಂದ್ರದ ‘ಕಾಮಧೇನು ಹಂಸ ಸೇವಾ ಟ್ರಸ್ಟ್‌’ ವಿಶೇಷ ಕಾಳಜಿ ವಹಿಸುತ್ತಿದೆ. ಬೆಂಗಳೂರು ಸುತ್ತಮುತ್ತಲ 13 ಹಳ್ಳಿಗಳಲ್ಲಿ ಜಾನುವಾರುಗಳಿಗೆ ನೀರುಣಿಸುವ ಸಲುವಾಗಿ 25 ಕಡೆ ಸಿಮೆಂಟ್‌ ತೊಟ್ಟಿಗಳನ್ನು ಉಚಿತವಾಗಿ ನಿರ್ಮಿಸಿದೆ.

‘ನಮ್ಮದು ಐವರು ಸದಸ್ಯರನ್ನು ಹೊಂದಿರುವ ಪುಟ್ಟ ಟ್ರಸ್ಟ್. ಪಕ್ಷಿಗಳು, ಕುರಿಗಳು, ಮೇಕೆಗಳು, ದನ ಕರುಗಳಂತಹ ಮೂಕ ಜೀವಿಗಳಿಗೆ ಸಹಾಯ ಮಾಡಬೇಕೆಂಬುದೇ ನಮ್ಮ ಉದ್ದೇಶ. ಹಾಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸುತ್ತಿದ್ದೇವೆ. ಈ ಕಾರ್ಯಕ್ಕೆ ದಾನಿಗಳ ಸಹಾಯ ಪಡೆದಿಲ್ಲ’ ಎಂದು ಟ್ರಸ್ಟ್‌ನ ಅಧ್ಯಕ್ಷ ಜಿ.ಜಯರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಮೆಂಟ್‌ ಇಟ್ಟಿಗೆ ಬಳಸಿ ತೊಟ್ಟಿಗಳನ್ನು ಕಟ್ಟಿದ್ದೇವೆ. ಪ್ರತಿ ತೊಟ್ಟಿಯೂ ದಶಕಗಳ ಕಾಲ ಬಾಳಿಕೆ ಬರುತ್ತದೆ. 3 ಅಡಿ ಅಗಲ ಹಾಗೂ 5 ಅಡಿ ಉದ್ದವಿದೆ. 25 ತೊಟ್ಟಿಗಳ ನಿರ್ಮಾಣಕ್ಕೆ ಇದುವರೆಗೆ 4 ಲಕ್ಷ ಖರ್ಚಾಗಿದೆ. ಅಷ್ಟೂ ಹಣವನ್ನು ಟ್ರಸ್ಟ್‌ ಭರಿಸಿದೆ’ ಎಂದರು.

‘ರಾಜ್ಯದ ಎಲ್ಲ ಗ್ರಾಮಗಳಲ್ಲಿಯೂ ಇದೇ ಮಾದರಿಯ ತೊಟ್ಟಿಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದೇವೆ. ಇದನ್ನು ಕಾರ್ಯಗತಗೊಳಿಸಲು ನಮ್ಮ ಒಂದು ಟ್ರಸ್ಟ್‌ನಿಂದ ಸಾಧ್ಯವಾಗದು. ಸ್ಥಳೀಯರು, ದಾನಿಗಳೂ ಕೈಜೋಡಿಸಬೇಕಾಗುತ್ತದೆ’ ಎಂದು ಹೇಳಿದರು.

ಜಮೀನು ಸಿಕ್ಕರೆ ಗೋಶಾಲೆ ನಿರ್ಮಾಣ:

‘ಗಾಯಗೊಂಡ ಪಶುಗಳ ಚಿಕಿತ್ಸೆಗೆ ಆಸ್ಪತ್ರೆ ನಿರ್ಮಿಸುವ, ಮೇವು ಬೆಳೆಸುವ ಹಾಗೂ ಗೋಶಾಲೆ ನಡೆಸುವ ಯೋಜನೆಯನ್ನೂ ಟ್ರಸ್ಟ್‌ ಹೊಂದಿದೆ. ಮಲ್ಲಸಂದ್ರ ಗ್ರಾಮದ ಸರ್ವೆ ನಂಬ್ರ 35ರಲ್ಲಿರುವ 60 ಎಕರೆ 30 ಗುಂಟೆ ಗೋಮಾಳ ಜಮೀನಿನಲ್ಲಿ 15 ಎಕರೆಯನ್ನು ಇದಕ್ಕಾಗಿ ನೀಡುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದೆ. ಆದರೆ, ಅವರು ನಿರಾಕರಿಸಿದ್ದಾರೆ. ಜಮೀನು ಸಿಕ್ಕರೆ ಈ ಯೋಜನೆ ತಕ್ಷಣ ಕಾರ್ಯಗತಗೊಳಿಸುತ್ತೇವೆ’ ಎಂದು ಹೇಳಿದರು.

‘ಅನಾಥ ಗೋವುಗಳಿಗೆ ಆಶ್ರಯ ಕಲ್ಪಿಸಲು ಹುಟ್ಟೂರು ಮಲ್ಲಸಂದ್ರದಲ್ಲಿನ 1.5 ಎಕರೆ ಸ್ವಂತ ಜಮೀನಿನಲ್ಲಿ ಚಿಕ್ಕ ಗೋಶಾಲೆ ನಿರ್ಮಿಸುತ್ತಿದ್ದೇನೆ’ ಎಂದರು.

‘ಜನಸಂದಣಿ ಇಲ್ಲದ ಜಾಗದಲ್ಲಿ ತೊಟ್ಟಿ ನಿರ್ಮಾಣ ಮಾಡಿರುವುದರಿಂದ ಅಲ್ಲಿ ಸದಾ ಹಕ್ಕಿಗಳ ಹಿಂಡೆ ತುಂಬಿರುತ್ತದೆ. ಮಂಗ, ಮೊಲ, ಮುಂಗುಸಿ ಸಹ ಈ ತೊಟ್ಟಿಗಳಲ್ಲಿ ನೀರು ಕುಡಿಯುತ್ತವೆ’ ಎಂದು ಗಂಗೇನಹಳ್ಳಿಗ್ರಾಮದ ಚಂದ್ರಪ್ಪ ತಿಳಿಸಿದರು.

‘ಇತ್ತೀಚೆಗೆ ಮೂಕಪ್ರಾಣಿಗಳ ಬಗ್ಗೆ ಕಾಳಜಿ ವಹಿಸುವವರು ಕಡಿಮೆ ಆಗಿದ್ದಾರೆ. ಅವುಗಳಿಗೂ ನೀರಿನ ತೊಟ್ಟಿ ನಿರ್ಮಿಸಲು ಹೊರಟಿರುವುದು ಇತರರಿಗೂ ಮಾದರಿ’ ಎನ್ನುತ್ತಾರೆ ಬೆಂಗಳೂರು ಉತ್ತರ ತಾಲ್ಲೂಕಿನ ಬಸವೇಶ್ವರನಗರ ಗ್ರಾಮದ ಚಿಕ್ಕಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT