ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡಿದರು

Last Updated 15 ಜನವರಿ 2018, 20:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಸೋಮವಾರ ಆಚರಿಸಲಾಯಿತು. ‍ನಗರದ ನಿವಾಸಿಗಳು ಪರಸ್ಪರ ಎಳ್ಳು ಬೆಲ್ಲ ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಚಿಣ್ಣರು, ಯುವತಿಯರು, ಮಹಿಳೆಯರು ಹೊಸ ಉಡುಗೆಗಳನ್ನು ತೊಟ್ಟು ಸಕ್ಕರೆ ಅಚ್ಚು, ಎಳ್ಳು, ಬೆಲ್ಲದ ಪೊಟ್ಟಣ, ಕಬ್ಬಿನ ಜಲ್ಲೆಗಳನ್ನು ತಮ್ಮ ಸ್ನೇಹಿತರು, ಬಂಧುಗಳಿಗೆ ಹಂಚಿ ಸಂಭ್ರಮಿಸಿದರು.

ಹಬ್ಬದ ಪ್ರಯುಕ್ತ ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಭಕ್ತರು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದರ್ಶನಕ್ಕೆ ಬಂದ ಭಕ್ತರಿಗೆ ಪೊಂಗಲ್ ಮತ್ತು ಕೋಸಂಬರಿ ಪ್ರಸಾದ ನೀಡಲಾಯಿತು.

ವಸಂತನಗರ, ಸರ್ಜಾಪುರ ರಸ್ತೆಯ ಅಗರ ಹಾಗೂ ಬನ್ನೇರುಘಟ್ಟ ರಸ್ತೆಯ ವಿಜಯಾ ಬ್ಯಾಂಕ್ ಬಡಾವಣೆ, ದೊಮ್ಮಲೂರು, ಗಿರಿನಗರ, ಕೋಣನಕುಂಟೆ, ಮಾಗಡಿ ರಸ್ತೆ ಮತ್ತು ಮಲ್ಲತ್ತಹಳ್ಳಿಯ ಅಯ್ಯಪ್ಪಸ್ವಾಮಿ ಹಾಗೂ ಶಿವ ದೇವಸ್ಥಾನಗಳಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಕೆ.ಆರ್.ಮಾರುಕಟ್ಟೆ, ಜಯನಗರ ಹಾಗೂ ಮಲ್ಲೇಶ್ವರ ಮಾರುಕಟ್ಟೆಗಳಲ್ಲಿ ಕಬ್ಬಿನ ಜಲ್ಲೆಗಳಿಗೆ ವಿಪರೀತ ಬೇಡಿಕೆಯಿತ್ತು.

ಹಬ್ಬದ ಪ್ರಯುಕ್ತ ಕೆಲ ಹೋಟೆಲ್‌ಗಳಲ್ಲಿ ವಿಶೇಷ ತಿಂಡಿ–ತಿನಿಸುಗಳನ್ನು ತಯಾರಿಸಲಾಗಿತ್ತು. ವಿವಿಧ ಖಾದ್ಯಗಳ ರುಚಿ ಸವಿಯಲು ಹೋಟೆಲ್‌ಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು.

20 ಟನ್ ಕಬ್ಬು ವಿತರಣೆ:

ಚುಂಚಘಟ್ಟ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್.ದೇವರಾಜು ಎಂಬುವರು 10 ಸಾವಿರ ಜನರಿಗೆ 20 ಟನ್‍ ಕಬ್ಬನ್ನು ಉಚಿತವಾಗಿ ವಿತರಿಸಿದರು. ಇದರ ಜತೆಗೆ ಎಳ್ಳು–ಬೆಲ್ಲವನ್ನೂ ನೀಡಿದರು.

‘ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಖರೀದಿಸಲು ಬಡವರಿಗೆ ಕಷ್ಟವಿದೆ. ಅವರೂ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಉದ್ದೇಶದಿಂದ ಕಬ್ಬು, ಎಳ್ಳು–ಬೆಲ್ಲ ನೀಡಿದ್ದೇವೆ’ ಎಂದು ದೇವರಾಜು ತಿಳಿಸಿದರು.

ದೇವರ ಮೆರವಣಿಗೆ:

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಗ್ರಾಮದ ಕೋದಂಡರಾಮಸ್ವಾಮಿ ಭಜನಾ ಮಂಡಳಿ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೀತಾ–ರಾಮ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿಯ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.

ಶ್ರೀರಾಮ ದೇವಸ್ಥಾನದಲ್ಲಿ ಬೆಳಿಗ್ಗೆ 6 ಗಂಟೆಗೆ ಪೂಜೆ ನೆರವೇರಿಸಿದ ಬಳಿಕ ಮೆರವಣಿಗೆ ಹೊರಟಿತು. ಜಕ್ಕೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಧ್ಯಾಹ್ನ 12ಕ್ಕೆ ದೇವಾಲಯಕ್ಕೆ ಹಿಂದಿರುಗಿತು.

ಭಜನಾ ಮಂಡಳಿಯ ಸದಸ್ಯರು ದೇವರ ನಾಮಗಳನ್ನು ಹಾಡುವ ಮೂಲಕ ಗಮನ ಸೆಳೆದರು. ಭಕ್ತರು ಹಣ್ಣು–ಕಾಯಿ ಅರ್ಪಿಸಿ ದೇವರ ದರ್ಶನ ಪಡೆದರು. ಅವರಿಗೆ ಪೊಂಗಲ್‌ ವಿತರಿಸಲಾಯಿತು.

20 ಜೋಡೆತ್ತುಗಳ ಮೆರವಣಿಗೆ

ಹೆಸರಘಟ್ಟದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ 20 ಜೋಡೆತ್ತುಗಳನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನಂದಿಕೋಲು ಹಾಗೂ ತಮಟೆ ವಾದ್ಯಗಳು ಗಮನ ಸೆಳೆದವು.

‘ಒಂದ್ರಲ್ಲಿ ನೂರು ಕಟ್ಟಿದ ಹೆಜ್ಜೆ, ನೆಲದಲ್ಲಿ ಉತ್ತಿ ಬಿತ್ತಿದ ಪಾದ, ಅನ್ನನಿಟ್ಟೆ ನೀ ದೇವರಾದೆ ಒಡಲಿಗೆ’ ಎಂಬ ಹಾಡನ್ನು ಹೇಳುವ ಮೂಲಕ ಮೆರವಣಿಗೆ ಮಾಡಲಾಗುತ್ತದೆ. ನಮ್ಮ ಬಾಳನ್ನು ಬೆಳಗುವ ದನಕರುಗಳಿಗೆ ವಂದನೆ ಸಲ್ಲಿಸುವ ದಿನವಿದು ಎಂದು ಗ್ರಾಮದ ನಿವಾಸಿ ಶೇಖರಯ್ಯ ಹೇಳಿದರು.

‘ಈ ಹಿಂದೆ, ಮೆರವಣಿಗೆಯಲ್ಲಿ ಸುತ್ತಲಿನ ಗ್ರಾಮಗಳಿಂದ 150ಕ್ಕೂ ಹೆಚ್ಚಿನ ಜೋಡೆತ್ತುಗಳು ಪಾಲ್ಗೊಳ್ಳುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಜೋಡೆತ್ತುಗಳ ಪ್ರಮಾಣ ಕಡಿಮೆ ಆಗಿದೆ. ಒಳ್ಳೆಯ ಜೋಡೆತ್ತಿಗೆ ಬಹುಮಾನ ನೀಡಲಾಗುತ್ತದೆ’ ಎಂದು ಗ್ರಾಮದ ಗೋವಿಂದಯ್ಯ ತಿಳಿಸಿದರು.

ಹೊರಮಾವು ಗ್ರಾಮದಲ್ಲಿ ಸಂಕ್ರಾಂತಿ

ಕೆ.ಆರ್.ಪುರ ಸಮೀಪದ ಹೊರಮಾವು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಮಾರಮ್ಮ ದೇವಾಲಯದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅವುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗಣೇಶ ದೇವಾಲಯದ ಬಳಿ ಪುನಃ ಪೂಜೆ ಸಲ್ಲಿಸಲಾಯಿತು. ಈ ವೇಳೆ ಜಾನುವಾರುಗಳನ್ನು ಕಿಚ್ಚು ಹಾಯಿಸಲಾಯಿತು. ಪೊಂಗಲನ್ನು ನೈವೇದ್ಯ ರೂಪದಲ್ಲಿ ದನಕರುಗಳಿಗೆ ತಿನ್ನಿಸಲಾಯಿತು.

ಹಸುಗಳ ಪ್ರದರ್ಶನ

ಹೊಸಕೋಟೆ: ತಾಲ್ಲೂಕಿನಾದ್ಯಂತ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಮಹಿಳೆಯರು ಎಳ್ಳು–ಬೆಲ್ಲ ಹಂಚಿ ಶುಭ ಕೋರಿದರು.

ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಹಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು 2,500 ಹಸುಗಳು ಭಾಗವಹಿಸಿದ್ದವು. ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಎಲ್ಲ ಹಸುಗಳಿಗೆ ಪಶು ಆಹಾರ ಹಾಗೂ ಕಬ್ಬಿನ ಜಲ್ಲೆ ನೀಡಲಾಯಿತು.

ಗೋ ಸಂರಕ್ಷಣೆ ಮಾಡುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ 23 ವರ್ಷಗಳಿಂದ ಹಸುಗಳ ಪ್ರದರ್ಶನ ನಡೆಸಲಾಗುತ್ತಿದೆ ಎಂದು ತಿಗಳರ ಸಂಘದ ಅಧ್ಯಕ್ಷ ಸಿ.ಜಯರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT