ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತುಗಳೇ ದೇವರು, ಕೊಟ್ಟಿಗೆಯೇ ದೇವಾಲಯ!

Last Updated 16 ಜನವರಿ 2018, 6:45 IST
ಅಕ್ಷರ ಗಾತ್ರ

ಮಂಡ್ಯ: ‘ಅಂಬಾ’ ಎಂಬ ಶಬ್ದ ಕಿವಿಗೆ ಬಿದ್ದೊಡನೆ ಸೀನಪ್ಪ ಮುಂಜಾನೆ ಹಾಸಿಗೆಯಿಂದ ಮೇಲೇಳುತ್ತಾರೆ. ಮನೆಯ ಹಿಂದಿನ ಕೊಟ್ಟಿಗೆಯಲ್ಲಿರುವ ಎತ್ತುಗಳ ಮುಖ ದರ್ಶನ ಮಾಡಿದರಷ್ಟೇ ಅವರಿಗೆ ಸಮಾಧಾನ. ಅವರು ಎಂದೂ ದೇವರನ್ನು ಹುಡುಕಿ ದೇವಾಲಯಕ್ಕೆ ಹೋದವರಲ್ಲ. ಎತ್ತುಗಳೇ ದೇವರು, ಕೊಟ್ಟಿಗೆಯೇ ಅವರ ಪಾಲಿನ ದೇವಾಲಯ.

‘ಎತ್ತಿನ ಸೀನಪ್ಪ’ ಎಂದೇ ಪ್ರಖ್ಯಾತಿ ಪಡೆದಿರುವ ಅವರು ರಾಸುಗಳ ಸಾಕಾಣಿಕೆಯಲ್ಲಿ ರಾಜ್ಯದಾದ್ಯಂತ ಹೆಸರುವಾಸಿಯಾಗಿದ್ದಾರೆ. ಬಾದಾಮಿ, ಸುತ್ತೂರು, ಮುಡುಕುತೊರೆ, ಚುಂಚನಕಟ್ಟೆ, ಬೂಕನ ಬೆಟ್ಟ, ಬೇಬಿ ಜಾತ್ರೆಗಳಲ್ಲಿ ತಮ್ಮ ಎತ್ತುಗಳನ್ನು ಪ್ರದರ್ಶನ ಮಾಡಿರುವ ಅವರು ಹಲವು ಪ್ರಶಸ್ತಿ ಗಳಿಸಿದ್ದಾರೆ. 80 ಗ್ರಾಂ ಗೂ ಹೆಚ್ಚು ಚಿನ್ನದ ಪದಕ, ₹ 1 ಲಕ್ಷಕ್ಕೂ ಹೆಚ್ಚು ನಗದು ಬಹುಮಾನ ಗಳಿಸಿದ್ದಾರೆ. ಎತ್ತುಗಳ ಒಡನಾಟವನ್ನು ಬದುಕಿನ ಭಾಗ ಎಂದುಕೊಂಡಿರುವ ಅವರು ಸದ್ಯ ₹ 3 ಲಕ್ಷ ಮೌಲ್ಯದ ನಾಲ್ಕು ಹಲ್ಲುಗಳ ಜೋಡೆತ್ತು, ₹ 2 ಲಕ್ಷ ಮೌಲ್ಯದ ಹಾಲು ಹಲ್ಲಿನ ಎತ್ತುಗಳನ್ನು ಸಾಕುತ್ತಿದ್ದಾರೆ. ಈ ಸಂಕ್ರಾಂತಿ ಹಬ್ಬದಲ್ಲಿ ಎತ್ತುಗಳಿಗೆ ಬೆಣ್ಣೆ, ಬಣ್ಣದ ಅಲಂಕಾರ ಮಾಡಿರುವ ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಿಚ್ಚು ಹಾಯಿಸಿದ್ದಾರೆ.

ಅಖಿಲ ಭಾರತ ಸಾಕು ಪ್ರಾಣಿಗಳ ಪ್ರದರ್ಶನ–2011ರಲ್ಲಿ ಭಾಗವಹಿಸಿರುವ ಸೀನಪ್ಪ ತಮ್ಮ ಪ್ರೀತಿಯ ಎತ್ತುಗಳನ್ನು ಪ್ರದರ್ಶಿಸಿ ಬಹುಮಾನ ಪಡೆದಿದ್ದಾರೆ. ಆಗ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರನ್ನು ಸನ್ಮಾನಿಸಿದ್ದಾರೆ. ಉತ್ತಮ ರೈತನಾಗಿರುವ ಸೀನಪ್ಪ ಜಮೀನು ಉಳುಮೆ, ಎತ್ತಿನ ಗಾಡಿಗೂ ತಮ್ಮ ಎತ್ತುಗಳನ್ನು ಬಳಸಿಕೊಳ್ಳುತ್ತಾರೆ. ಮೂಲತಃ ಹಳೇ ಮಂಡ್ಯದವರಾದ ಅವರು ಸದ್ಯ ಗಾಂಧಿನಗರದ 1ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಯಲ್ಲಿ ಎತ್ತು ಸಾಕಣೆ ಜೊತೆ ಜೀವನ ಕಟ್ಟಿಕೊಂಡಿದ್ದಾರೆ. 71 ವರ್ಷ ವಯಸ್ಸಿನಲ್ಲೂ ಯುವ ಉತ್ಸಾಹದಿಂದ ಪುಟಿಯುತ್ತಿರುವ ಅವರಿಗೆ ತಮ್ಮಿಷ್ಟದ ಎತ್ತುಗಳೆಂದರೆ ಪಂಚಪ್ರಾಣ.

‘ಎತ್ತು ಇಲ್ಲದವನಿಗೆ ಎದೆ ಇಲ್ಲ ಎಂಬ ಗಾದೆ ಮಾತಿನಂತೆ ಎತ್ತುಗಳ ಜೊತೆಯಲ್ಲೇ ನಮ್ಮ ಜೀವನ ನಡೆದುಬಂದಿದೆ. ತಾತ ಹೊಸಬೋರೇಗೌಡ, ತಂದೆ ಸಿದ್ದೇಗೌಡ ಅವರೂ ಎತ್ತುಗಳ ಸಾಕಣೆಯಲ್ಲಿ ಅಪಾರ ಹೆಸರು ಗಳಿಸಿದ್ದರು. ನಾನೂ ಅದನ್ನೇ ಮುಂದುವರಿಸಿಕೊಂಡು ಬಂದಿದ್ದೇನೆ. ಮುಂದೆ ನನ್ನಿಬ್ಬರು ಪುತ್ರರು ನಮ್ಮ ಪರಂಪರೆಯನ್ನು ಮುಂದುವರಿಸುತ್ತಾರೆ’ ಎಂದು ಸೀನಪ್ಪ ಹೇಳಿದರು.

ಸೀನಪ್ಪ ಎತ್ತಗಳಿಗೆ ನಿತ್ಯ ಬೆಳಿಗ್ಗೆ 2 ಲೀಟರ್‌ ಹಾಲು, ರವೆ ಗಂಜಿ, ಬೆಣ್ಣೆ, ಹುರಳಿ, ಅಕ್ಕಿ ನುಚ್ಚು ರವೆಭೂಸ, ಗೋವಿನಜೋಳ ನೀಡುತ್ತಾರೆ. ತಾವು ಉಣ್ಣುವುದನ್ನೂ ಎತ್ತುಗಳಿಗೂ ತಿನ್ನಿಸುತ್ತಾರೆ. ನಾವು ಎಲ್ಲಿ ಇರುತ್ತೇವೋ ಅಲ್ಲಿ ಎತ್ತುಗಳೂ ಇರಬೇಕು ಎನ್ನುವ ಮನೋಭಾವ ಉಳ್ಳ ಅವರು ಎತ್ತುಗಳನ್ನು ಮಕ್ಕಳಂತೆ ಪ್ರೀತಿಸುತ್ತಾರೆ.

ಪಟೇಲ್‌ ಶಿವರಾಮೇಗೌಡ:
ಎತ್ತು ಸಾಕಾಣಿಕೆಯಲ್ಲಿ ಈ ಬಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಕಲ್ಲಹಳ್ಳಿಯ ಪಟೇಲ್‌ ಶಿವರಾಮೇಗೌಡರು ತಮ್ಮ ಎತ್ತುಗಳಿಗಾಗಿ ವಿಶೇಷ ಕೊಟ್ಟಿಗೆ ರೂಪಿಸಿದ್ದಾರೆ. ಫ್ಯಾನ್‌, ಸೊಳ್ಳೆ ಪರದೆ,  ವಾತಾವರಣ ಸೃಷ್ಟಿಸುವ ಹೊದಿಕೆ, ನೀರಿನ ಟ್ಯಾಂಕ್‌ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಮನೆಯ ಪಕ್ಕದಲ್ಲೇ ಇರುವ ದೊಡ್ಡ ನಿವೇಶನವನ್ನು ರಾಸುಗಳ ಸಾಕಣೆ ಮೀಸಲಿಟ್ಟಿದ್ದಾರೆ. ಶಿವರಾಮೇಗೌಡರ ಮೂವರು ಮಕ್ಕಳು ಕೂಡ ಎತ್ತುಗಳ ಸಾಕಾಣಿಕೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

₹ 4.3 ಲಕ್ಷದ ಹಾಲು ಹಲ್ಲಿನ ಜೋಡೆತ್ತು, ₹ 1.19 ಲಕ್ಷ ಮೌಲ್ಯದ ಎರಡು ಹೋರಿಗಳು, ₹ 1.75 ಲಕ್ಷದ ಹಸು–ಕರು, ₹ 1.5 ಲಕ್ಷದ ಹೋರಿಯನ್ನು ಸದ್ಯ ಶಿವರಾಮೇಗೌಡ ಸಾಕಣೆ ಮಾಡುತ್ತಿದ್ದಾರೆ.  ಕೃಷಿ ಕಾರ್ಯಕ್ಕೆ ಈ ಎತ್ತುಗಳನ್ನು ಬಳಸಿಕೊಳ್ಳುವ ಜೊತೆಗೆ ರಾಜ್ಯದ ವಿವಿಧ ಜಾತ್ರೆಗಳಲ್ಲಿ  ಪ್ರದರ್ಶಿಸಿ ಪದಕ, ನಗದು ಬಹುಮಾನ ಪಡೆದಿದ್ದಾರೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಎತ್ತುಗಳನ್ನು ಪ್ರದರ್ಶಿಸಿ ಬಹುಮಾನ ಗಳಿಸಿದ್ದಾರೆ. ಅರಕಲಗೂಡು ಕೃಷಿ ಕಾಲೇಜು, ಮಂಡ್ಯದ ವಿ.ಸಿ.ಫಾರಂನಲ್ಲಿ ನಡೆಯುವ ಕೃಷಿ ಮೇಳದಲ್ಲೂ ಭಾಗವಹಿಸಿ ಪ್ರದರ್ಶನ ಮಾಡಿದ್ದಾರೆ. ಮುಡುಕುತೊರೆಯ ಭ್ರಮರಾಂಬ ಮಲ್ಲಿಕಾರ್ಜುನಸ್ವಾಮಿ ಜಾತ್ರೆ, ಬನ್ನೂರಿನ ಹೇಮಾದ್ರಾಂಜ ಅಮ್ಮನ ದನಗಳ ಜಾತ್ರೆ, ಚುಂಚನಕಟ್ಟೆ ಜಾತ್ರೆ, ಮದ್ದೂರಿನ ಆತ್ಮಲಿಂಗೇಶ್ವರ ದನಗಳ ಜಾತ್ರೆಯಲ್ಲಿ ತಮ್ಮ ಎತ್ತುಗಳನ್ನು ಪ್ರದರ್ಶನ ಮಾಡಿದ್ದಾರೆ. ಮೈಸೂರು ದಸರಾ, ಶ್ರೀರಂಗಪಟ್ಟಣ ದಸರಾ, ರಾಮನಗರದ ಜಾನಪದ ಲೋಕದಲ್ಲಿ ನಡೆಯುವ ಜಾನಪದ ಉತ್ಸವದಲ್ಲೂ ಭಾಗವಹಿಸಿದ್ದಾರೆ.

‘ಎತ್ತುಗಳ ಸಾಕಾಣಿಕೆ ನಮ್ಮ ಕುಟುಂಬದ ಸಂಪ್ರದಾಯ. ನಾಲ್ಕು ತಲೆಮಾರುಗಳಿಂದ ಮನೆಯಲ್ಲಿ ಎತ್ತುಗಳು ಇವೆ. ಬಸವಣ್ಣನ ಸಾಕಣೆ ಎಂದರೆ ಅದು ಕೇವಲ ಹವ್ಯಾಸವಲ್ಲ, ಅದು ನಮ್ಮ ಬದುಕಿನ ಭಾಗ. ಹೀಗಾಗಿ ನಮಗೆ ಪ್ರತಿದಿನವೂ ಸಂಕ್ರಾಂತಿ ಹಬ್ಬ’ ಎಂದು ಶಿವರಾಮೇಗೌಡರ ಪುತ್ರ ರವಿ ಪಟೇಲ್‌ ತಿಳಿಸಿದರು.

ಹಳ್ಳಿಕಾರ್‌ ತಳಿ ಸಂರಕ್ಷಣೆಗೆ ಜಾಗೃತಿ

ಕಲ್ಲಹಳ್ಳಿ ಬಡಾವಣೆಯ ಪಟೇಲ್‌ ಶಿವರಾಮೇಗೌಡ ಅವರು ದೇಸಿ ‘ಹಳ್ಳಿಕಾರಿ ತಳಿ’ಯ ಹಸು, ಎತ್ತುಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಳಿವಿನ ಅಂಚಿನಲ್ಲಿರುವ ಹಳ್ಳಿಕಾರ್‌ ತಳಿ ಉಳಿವಿಗಾಗಿ ವಿವಿಧ ಜಾತ್ರೆ, ಕೃಷಿ ಮೇಳ, ಉತ್ಸವಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

‘ನಾಟಿ ಹಳ್ಳಿಕಾರ್‌ ಹಸುವಿನ ಹಾಲಿನಲ್ಲಿ ಹೆಚ್ಚು ಪೌಷ್ಟಿಕಾಂಶ ಇದ್ದು ವೈಜ್ಞಾನಿಕವಾಗಿ ರುಜುವಾತಾಗಿದೆ. ಹಳ್ಳಿಕಾರ್‌ ತಳಿಯನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಶಿವರಾಮೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT