ಪ್ರಶ್ನೆ ಕೇಳುವವರ ಮೇಲೆ ಐಟಿ, ಇಡಿ ದಾಳಿ

7

ಪ್ರಶ್ನೆ ಕೇಳುವವರ ಮೇಲೆ ಐಟಿ, ಇಡಿ ದಾಳಿ

Published:
Updated:
ಪ್ರಶ್ನೆ ಕೇಳುವವರ ಮೇಲೆ ಐಟಿ, ಇಡಿ ದಾಳಿ

ಉಡುಪಿ: ‘ಭಿನ್ನಮತವನ್ನು ವ್ಯಕ್ತಪಡಿಸಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿದೆ. ನೀವು ಪ್ರಶ್ನೆ ಕೇಳಿದರೆ ನಿಮ್ಮ ಮೇಲೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಬಹುದು’ ಎಂದು ಅಂಕಣಕಾರ ಭಾಸ್ಕರ್ ರಾವ್ ಹೇಳಿದರು.

ಜನವರಿ 30ರಂದು ನಡೆಯಲಿರುವ 'ಸೌಹಾರ್ದತೆಗಾಗಿ ಕರ್ನಾಟಕ' ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ನಗರದ ಆದಿ ಉಡುಪಿಯಲ್ಲಿ ಸೋಮವಾರ ನಡೆದ ‘ಕರಾವಳಿ ಸೌಹಾರ್ದ ಪರಂಪರೆಯ ಸಮಾಜ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘₹ 15 ಲಕ್ಷ ಖಾತೆಗೆ ಜಮೆ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಸಂಬಂಧಿಸಿದವರಿಗೆ ನೆನಪಿಸಿದರೂ ಅದನ್ನು ಸಹಿಸದಂತಹ ಸ್ಥಿತಿ ಇದೆ. ಜನ ಬಲ, ಧನ ಬಲ ಇಲ್ಲದ ಭಿನ್ನಮತೀಯ ಇರಲೇಬಾರದು ಎಂಬ ನೆಲೆಯಲ್ಲಿ ನಾವಿದ್ದೇವೆ’ ಎಂದು ಅವರು ಹೇಳಿದರು.

ಪ್ರಶ್ನೆ ಕೇಳುವವರನ್ನು ಕೊಲ್ಲುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸರ್ಕಾರ, ಸೇನೆಯ ಬಗ್ಗೆ ಪ್ರಶ್ನೆ ಮಾಡಿದ ಸಾಕ್ರಟಿಸ್‌ನನ್ನು ವಿಷವಿಕ್ಕಿ ಕೊಂದರು. ಜಾಗತೀಕರಣದ ನಂತರ ಯುದ್ಧವನ್ನು ಮಾಡದೆಯೇ ಪ್ರಭುತ್ವವನ್ನು ಮಣಿಸುವ ಶಕ್ತಿಯನ್ನು ಪ್ರಭುತ್ವ ಕಂಡುಕೊಂಡಿದೆ. ನಿಷೇಧ ಹೇರುವ ಮೂಲಕ ಒಂದು ರಾಷ್ಟ್ರವನ್ನು ಮಣಿಸಲು ಸಾಧ್ಯವಿದೆ ಎಂದು ಉದಾಹರಣೆ ನೀಡಿದರು.

ಗಾಂಧೀಜಿಯನ್ನು ರಾಜಕೀಯ ಭಿನ್ನಮತೀಯ ಎಂದು ಗುರುತಿಸುತ್ತಾರೆ. ಗಾಂಧೀಜಿ ಇಂದಿಗೆ ಪ್ರಸ್ತುತರೇ ಎಂದು ಕೇಳುವವರೂ ಇದ್ದಾರೆ. ಆದರೆ, ಅವರು ಇಂದಿನ ಜನಜೀವನದಲ್ಲಿಯೇ ಬೆರೆತು ಹೋಗಿದ್ದಾರೆ. ಒಳ್ಳೆಯದಕ್ಕೆ ಪರ್ಯಾಯವಾಗಿ ಗಾಂಧೀಜಿ ಎಂಬ ಹೆಸರನ್ನು ಈಗಲೂ ಬಳಸಲಾಗುತ್ತಿದೆ. ಆದರ್ಶವಾದದ ಸಂಕೇತವಾಗಿಯೇ ಅವರು ಉಳಿದುಕೊಂಡಿದ್ದಾರೆ. ಧಾರ್ಮಿಕತೆ ಹೊಂದಿದ್ದರೂ ಅವರು ಮತೀಯವಾದಿ ಆಗಿರಲಿಲ್ಲ. ಎಲ್ಲ ಧರ್ಮಗಳೂ ಅಪರಿಪೂರ್ಣ ಎಂದು ಅವರು ಹೇಳಿದರು ಎಂದರು.

ನಿರುದ್ಯೋಗ ಪ್ರಸ್ತುತ ಬಹುದೊಡ್ಡ ಸಮಸ್ಯೆಯಾಗಿದೆ. ಪ್ರಪಂಚದಲ್ಲಿ ಇನ್ನು ಮೂರುವರ್ಷದಲ್ಲಿ 7 ಲಕ್ಷ ಎಂಜಿನಿಯರ್‌ಗಳು ನಿರುದ್ಯೋಗಿಗಳಾಗಲಿದ್ದಾರೆ. ಯಾಂತ್ರೀಕರಣ ಹಾಗೂ ರೋಬೋಟ್ ಬಳಕೆ ಇದಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿಯೂ ಈ ಸಮಸ್ಯೆ ಇದೆ ಎಂದು ಅವರು ಹೇಳಿದರು.

ಚಿಂತಕ ವಿಲಿಯಂ ಮಾರ್ಟಿಸ್, ಸಾಹಿತಿ ಪ್ರೊ. ಚಂದ್ರಕಲಾ ನಂದಾವರ್ ಇದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಜಿಲ್ಲಾ ಮುಸ್ಲಿಂ ಒಕ್ಕೂಟ, ವಿವಿಧ ದಲಿತ ಸಂಘಟನೆಗಳ ಸದಸ್ಯರು ಇದ್ದರು.

* * 

ಗೋಡ್ಸೆಯನ್ನು ಸಂಭ್ರಮಿಸುವ ವ್ಯಕ್ತಿಗಳು ಸಹ ರಾಜಕೀಯ ಉದ್ದೇಶಕ್ಕೆ ಗಾಂಧಿ ಮಾರ್ಗವನ್ನು ಬಳಸುತ್ತಾರೆ. ಅಷ್ಟರ ಮಟ್ಟಿಗೆ ಅವರು ಇಂದಿಗೂ ಪ್ರಸ್ತುತರಾಗಿದ್ದಾರೆ.

ಭಾಸ್ಕರ್ ರಾವ್

ಅಂಕಣಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry