ರೈತರಿಗೆ ವರದಾನ ಸಮಗ್ರ ಕೃಷಿ ಪದ್ಧತಿ

7

ರೈತರಿಗೆ ವರದಾನ ಸಮಗ್ರ ಕೃಷಿ ಪದ್ಧತಿ

Published:
Updated:
ರೈತರಿಗೆ ವರದಾನ ಸಮಗ್ರ ಕೃಷಿ ಪದ್ಧತಿ

ಶಹಾಪುರ: ತಾಲ್ಲೂಕಿನ ಗೋಗಿ ಹೋಬಳಿ ವ್ಯಾಪ್ತಿಯು ರಾಜ್ಯದಲ್ಲಿಯೇ ಅತ್ಯಧಿಕ 42ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಅಪಖ್ಯಾತಿ ಹೊಂದಿದೆ. ಈ ಸಂದರ್ಭದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿ ತಾಲ್ಲೂಕಿನ ವನದುರ್ಗ ಗ್ರಾಮದ ಕೃಷಿ ಪದವೀಧರ ಮಲ್ಲಿಕಾರ್ಜುನ ಪಡದಳ್ಳಿ ರೈತರ ಪಾಲಿಗೆ ಭರವಸೆಯನ್ನು ಮೂಡಿಸಿದ್ದಾರೆ.

ನಿಂಬೆ ಗಿಡದ ಮಧ್ಯ ಖಾಲಿ ಇರುವ ಜಾಗದಲ್ಲಿ ಶೇಂಗಾ, ಹತ್ತಿ, ತೊಗರಿ ಬಿತ್ತನೆ ಮಾಡಿದ್ದಾರೆ. ಅಲ್ಲದೆ ಜಮೀನಿನ ಬದುವಿನಲ್ಲಿ 100 ಸಾಗುವಾನಿ, 98 ಸಿಲ್ವರ್ ಟಿಂಪರ್, 10 ಬೇವು, 8 ಬಿದಿರು, 15 ಗಜನಿಂಬೆ, 20 ಸಪೋಟ, 20 ಕರಿಬೇವು, 30 ನುಗ್ಗೆ ಗಿಡ ಇವೆ. ಜತೆಗೆ 10 ಗುಂಟೆಯಲ್ಲಿ ಚೆಂಡು ಹೂವನ್ನು ಹಾಕಿ ಮಾರಾಟ ಮಾಡಿದ್ದಾರೆ. ತೋಟಗಾರಿಕೆ ಬೆಳೆಯಾದ ಬದನೆ, ಬೆಂಡೆಕಾಯಿ, ಟೊಮೆಟೊ, ಈರೇಕಾಯಿ ಬೆಳೆಯುತ್ತಾರೆ. ಜೊತೆಗೆ 20 ಕುರಿ, 18 ನಾಟಿ ಕೋಳಿ ಸಾಕಿ ಲಾಭ ಪಡೆಯುತ್ತಿದ್ದಾರೆ.

‘ನಮ್ಮದು ಕೃಷಿಕ ಸಮಾಜ. ತಂದೆ ದ್ಯಾವಣ್ಣ ಪಡದಳ್ಳಿ ಸಾಂಪ್ರ ದಾಯಿಕ ಕೃಷಿಯನ್ನು ಅವಲಂಬಿಸಿ ಬದುಕು ಸವೆಸುತ್ತಿದ್ದರು. ಕಷ್ಟಪಟ್ಟು ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲದಲ್ಲಿ 2012ರಲ್ಲಿ ಪದವಿ ಪಡೆದೆ. ಖಾಸಗಿ ಕಂಪನಿಯಿಂದ ಒಂದಿಷ್ಟು ಕೆಲಸದ ಅವಕಾಶ ಬಂದರೂ ತಲೆಕೆಡಿಸಿಕೊಳ್ಳಲಿಲ್ಲ. 3 ಎಕರೆ 20 ಗುಂಟೆ ಒಣ ಭೂಮಿ ಇದ್ದು, ನೀರಿನ ವ್ಯವಸ್ಥೆಗಾಗಿ ಪರಿಶಿಷ್ಟ ಪಂಗಡದ (ಗಿರಿಜನ ಉಪಯೋಜನೆ) ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೊರ್‌ವೆಲ್ ಕೊರೆಸಿದೆ. ಚೆನ್ನಾಗಿ ನೀರು ಲಭಿಸಿತು. ಆಗ ಕೃಷಿಯಲ್ಲಿ ಏನಾದರು ಸಾಧಿಸಲು ಸಾಧ್ಯ ಎಂಬ ಭರವಸೆಯೂ ಚಿಗುರೊಡೆಯಿತು’ ಎನ್ನುತ್ತಾರೆ ಮಲ್ಲಿಕಾರ್ಜುನ.

‘ಮಣ್ಣು ಪರೀಕ್ಷೆ ಮಾಡಿಸಿ ತೋಟಗಾರಿಕೆ ಇಲಾಖೆಯಿಂದ ನಿಂಬೆ ಸಸಿಯನ್ನು ಹಾಗೂ ಇನ್ನಿತರ ನೆರವು ಪಡೆದು 600 ನಿಂಬೆ ಗಿಡ ಹಾಕಿದೆ. ಈಗ ಸಮೃದ್ಧಿಯಾಗಿ ಬೆಳೆದು 4 ವರ್ಷದ ಗಿಡ ಇವೆ’ ಎಂದು ತಿಳಿಸುತ್ತಾರೆ ಅವರು.

‘ನಿಂಬೆಯಿಂದ ಪ್ರತಿವರ್ಷ ನಿವ್ವಳ ಲಾಭ ₹1.50 ಲಕ್ಷ ಬಂದರೆ ಇನ್ನಿತರ ಉತ್ಪನ್ನ ಬೆಳೆಯಿಂದ ಲಾಭ ಹೆಚ್ಚುತ್ತದೆ. ನಾಟಿ ಕೋಳಿಯ ಒಂದು ಮೊಟ್ಟೆಯಿಂದ ₹10 ಬರುತ್ತದೆ. ಮೊಟ್ಟೆಯಿಂದಲೂ ಸಂಪಾದಿಸಬಹುದು ಎಂಬ ಸಣ್ಣ ಕಲ್ಪನೆ ರೈತರಲ್ಲಿ ಮೂಡಬೇಕು. ವೈಜ್ಞಾನಿಕವಾಗಿ ದುಡಿದರೆ ರೈತರಿಗೆ ನಷ್ಟ ಎಂಬುವುದು ಸುಳಿಯುವುದಿಲ್ಲ. ಇದಕ್ಕೆ ಕುಟುಂಬದ ಸದಸ್ಯರ ಸಹ ಕಾರವೂ ಅಗತ್ಯವಾಗಿದೆ. ನಮ್ಮ ತಂದೆ ಜಮೀನಿನಲ್ಲಿ ಉಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಮತ್ತು ಅಗತ್ಯ ಸಲಹೆಗಳನ್ನು ಪಾಲಿಸಿದ್ದ ರಿಂದ ಸಮಗ್ರ ಕೃಷಿ ಯಶಸ್ವಿಯಾಗಿದೆ’ ಎಂದು ಕೃಷಿ ಅನುಭವ ಬಿಚ್ಚಿಟ್ಟರು.

ಸಮಗ್ರ ಕೃಷಿ ಪದ್ಧತಿ ಯಶಸ್ವಿ ಜಾರಿಯಿಂದ 2017ರಲ್ಲಿ ರಾಯ ಚೂರು ಕೃಷಿ ಮಹಾ ವಿದ್ಯಾಲಯದಿಂದ ‘ಅತ್ಯುತ್ತಮ ಯುವ ಕೃಷಿಕ’ ಪ್ರಶಸ್ತಿ ಹಾಗೂ ರಾಜಸ್ಥಾನದ ಉದಯಪುರ ದಲ್ಲಿ ನಡೆದ ಪ್ರದರ್ಶನದಲ್ಲಿ ಸಮಗ್ರ ಕೃಷಿ ಪದ್ಧತಿಗೆ ‘ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿ’ಯೂ ಬಂದಿದೆ.

‘ಕೃಷಿ ಪದವೀಧರನಾಗಿ ಕಲಿತ ಕೃಷಿಯ ಜ್ಞಾನವನ್ನು ತನ್ನ ಜಮೀನಿನಲ್ಲಿ ಪ್ರಯೋಗಿಸುವುದರ ಮೂಲಕ ಇತರ ಕೃಷಿ ಪದವೀಧರರಿಗೆ ಮಾದರಿಯಾಗಿದ್ದಾರೆ. ಕೃಷಿ ಪದವಿ ಪಡೆದ ತಕ್ಷಣ ಖಾಸಗಿ ಕಂಪನಿಯ ಕಡೆ ಮುಖ ಮಾಡುವ ಯುವಕರು ಗ್ರಾಮೀಣ ಪ್ರದೇಶದಲ್ಲಿ ನೆಲೆ ನಿಂತು ಅನಕ್ಷರಸ್ಥ ರೈತರಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ಮಾಡಿ ರೈತ ಕೃಷಿ ವಿಜ್ಞಾನಿಯಾಗುವಂತೆ ನೋಡಿಕೊಂಡರೆ ರೈತರು ಸಾವಿನ ದವಡೆಯಿಂದ ಹೊರಬರಲು ಸಾಧ್ಯ’ ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ. ಮಾಹಿತಿಗೆ ಮಲ್ಲಿಕಾರ್ಜುನ ಪಡದಳ್ಳಿ ಮೊ:70220 79274 ಸಂಪರ್ಕಿಸಬಹುದು.

ಸಾಸಿವೆ ಸಿಗ್ನಲ್ ಗಮನಿಸಿ!

‘ಶೇಂಗಾ ಹಾಗೂ ಇನ್ನಿತರ ಬೆಳೆಯ ಜತೆಯಲ್ಲಿ ಸಾಸಿವೆ ಬೀಜಗಳನ್ನು ಅಲ್ಲಲ್ಲಿ ಹಾಕಬೇಕು. ಬೆಳೆಗೆ ನೀರು ಅಗತ್ಯವೆನಿಸಿದಾಗ ಸಾಸಿವೆ ಎಲೆ ಮುದುಡುತ್ತವೆ. ಬೆಳೆಗೆ ರೋಗ ಕಾಣಿಸಿಕೊಂಡರೆ ಸಾಸಿವೆ ಗಿಡಕ್ಕೆ ಹುಳು ಅಂಟಿಕೊಂಡಿರುತ್ತವೆ. ಸಾಸಿವೆ ಗಿಡದ ಕಡೆ ಸದಾ ನಮ್ಮ ಹದ್ದಿನ ಕಣ್ಣು ಇರಬೇಕು. ಇದು ವಾಹನದ ಸಿಗ್ನಲ್ ಇದ್ದಂತೆ’ ಎನ್ನುತ್ತಾರೆ ಕೃಷಿ ಪದವೀಧರ ಮಲ್ಲಿಕಾರ್ಜುನ ಪಡದಳ್ಳಿ.

* * 

ಸಮಗ್ರ ಕೃಷಿ ಪದ್ಧತಿಯಲ್ಲಿ ಒಂದು ಬೆಳೆ ನಷ್ಟವಾದರೆ ಇನ್ನೊಂದು ಬೆಳೆಯ ಲಾಭ ಬರುತ್ತದೆ. ಕಾಲೇಜಿನ ವಿದ್ಯಾರ್ಥಿ ಪಡದಳ್ಳಿ ಯಶಸ್ವಿಯಾಗಿದ್ದಾರೆ.

ಡಾ.ಸುರೇಶ ಪಾಟೀಲ ಡೀನ್, ಕೃಷಿ ಮಹಾವಿದ್ಯಾಲಯ, ಭೀಮರಾಯನಗುಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry