ಮಲ್ಲಯ್ಯನ ಜಾತ್ರೆಯಲ್ಲಿ ಖರೀದಿ ಜೋರು

7

ಮಲ್ಲಯ್ಯನ ಜಾತ್ರೆಯಲ್ಲಿ ಖರೀದಿ ಜೋರು

Published:
Updated:
ಮಲ್ಲಯ್ಯನ ಜಾತ್ರೆಯಲ್ಲಿ ಖರೀದಿ ಜೋರು

ಯಾದಗಿರಿ: ‘ಅಣ್ಣಾರ ಹೊಸ ಮಾಡೆಲ್ ಬಳೆ ಅದಾವ್ ಏನ್ರಿ... ಚಲೋ ಮಾಡೆಲ್‌ ತೋರ್‌ಸಿ.. ಹಂಗ ಕಿವಿಯೋಲೆ ಅದಾವೇನ್ರಿ.. ಹೊಸ ಮಾಡೆಲ್ಲ ಆಗ್ಬೇಕ್ರಿ..’ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಎರಡನೇ ದಿನ ಸೋಮವಾರ ಭಕ್ತರು ಭರ್ಜರಿ ಖರೀದಿ ನಡೆಸಿದ ಪರಿ ಇದು.

ಈ ಬಾರಿ ದೇಗುಲಕ್ಕೆ ಸಂಬಂಧಿಸಿದ ಗ್ರಾಮ ಹೊರವಲಯದಲ್ಲಿನ ವಿಶಾಲ ಆವರಣದಲ್ಲಿ ತಾಲ್ಲೂಕು ಆಡಳಿತ ಅಂಗಡಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಕಾರಮಂಡಕ್ಕಿ, ಬೆಂಡುಬತ್ತಾಸ್, ಸಿಹಿ ತಿನಿಸು; ಮಕ್ಕಳಾಟಿಕೆ, ಮಹಿಳೆಯರ ಅಲಂಕಾರಿಕ ವಸ್ತು ಮಾರಾಟ, ವಿಭೂತಿ, ಉಡುದಾರ, ತಾಯತ, ರಸ್ತೆಯುದ್ದಕ್ಕೂ ಸಾಲುಸಾಲು ಕುಂಕುಮ, ಭಂಡಾರ ಅಂಗಡಿಗಳು ತಾತ್ಕಾಲಿಕ ಟೆಂಟ್‌ಗಳಲ್ಲಿ ತೆರೆದುಕೊಂಡಿದ್ದವು. ಮತ್ತೊಂದು ಸಾಲಿನಲ್ಲಿ ರೈತರ ಒಡನಾಡಿ ಎತ್ತುಗಳ ಅಲಂಕಾರಿಗಳ ವಸ್ತುಗಳ ಮಾರಾಟ, ಅವುಗಳ ಪಕ್ಕದಲ್ಲಿ ಕಂಚಿನ ದೇವರ ವಿಗ್ರಹಗಳ ಮಾರಾಟ ಅಂಗಡಿಗಳಿದ್ದವು. ಒಂದು ಪುಟ್ಟ ಮಾರಾಟ ಮೇಳ ಅಲ್ಲಿ ನೆರೆದಿತ್ತು.

ಯುವತಿಯರು ಬಳೆ ಅಂಗಡಿಗಳಿಗೆ ಮುಗಿಬಿದ್ದಿದ್ದರು. ಕೆಲವರು ಕಾರ ಮಂಡಕ್ಕಿ, ಬೆಂಡು ಬತ್ತಾಸ್ ಖರೀದಿಸುವಲ್ಲಿ ನಿರತರಾಗಿದ್ದರು. ಹಲವರು ಮಕ್ಕಳ ಕೈಹಿಡಿದು ಅಂಗಡಿ ಗಳನ್ನು ತೋರಿಸುತ್ತಾ ಸಾಗಿದ್ದರು. ಕೆಲವೊಂದು ಮಕ್ಕಳಾಟಿಕೆಗಾಗಿ ರಚ್ಚೆ ಹಿಡಿದಿದ್ದವು. ರೈತರ ಒಡನಾಡಿಗಳಾದ ಎತ್ತುಗಳ ಕೋಡುಗಳಿಗೆ, ಕಾಲುಗಳಿಗೆ, ಕೊರಳಿಗೆ ಬೇಕಾಗಿರುವ ಅಲಂಕಾರಿಕ ಸಾಮಗ್ರಿ ಖರೀದಿಸುತ್ತಿದ್ದರು. ಕೆಲವರು ಬಾರ್‌ಕೋಲು ಹಿಡಿದೆಳೆದು ಅದರ ಗುಣಮಟ್ಟ ವೀಕ್ಷಿಸುತ್ತಿದ್ದರು. ಕಬ್ಬು ಜಗಿಯುತ್ತಿದ್ದ ಯುವಕರ ಗುಂಪು ಯುವತಿಯರ ಬೆಂಗಾವಲು ರಕ್ಷಕರಂತೆ ನಿಂತಿದ್ದರು.

‘ಈ ಬಾರಿ ಜಾತ್ರಾ ಖರೀದಿಯಲ್ಲಿ ಬೆಲೆ ಸ್ಥಿರವಾಗಿದೆ. ಅಷ್ಟೇನೂ ಹೆಚ್ಚಿಲ್ಲ’ ಎಂಬುದಾಗಿ ಸಿಹಿ ಪದಾರ್ಥಗಳ ಅಂಗಡಿ ಮಾಲೀಕ ಕಲಬುರ್ಗಿಯ ಬಾಬು ಖಂಡೇರಾವ್ ಅಭಿಪ್ರಾಯ ವ್ಯಕ್ತಪಡಿಸಿದರೆ, ‘ಹೌದು, ₹20ಕ್ಕೆ ಒಂದು ಜೋಡಿ ಕಬ್ಬು ಖರೀದಿಸಿದೆ. ಇದೇ ಕಬ್ಬು ಕಳೆದ ಬಾರಿ ₹40 ಕೊಟ್ಟಿದ್ದೆ..’ ಎಂದು ದೇವದುರ್ಗದ ರಾಮು ಹೇಳಿದರು.

‘ದುಬಾರಿ ದರ ಇಲ್ಲ. ಹಾಗಾಗಿ, ಖರೀದಿ ಸ್ವಲ್ಪ ಜೋರಾಗಿಯೇ ನಡೆದಿದೆ. ಈ ಸಲ ಒಂದು ಸೇರು ಮಂಡಾಳ್‌ ಗೆ ₹5 ಇದೆ. ₹120ಕ್ಕೆ ಒಂದು ಕೆಜಿಗೆ ಕಾರ, ಮೈಸೂರು ಪಾಕ್‌ ಕೆಜಿಗೆ ₹160, ₹100ಕ್ಕೆ ಒಂದು ಕೆ.ಜಿ. ಬೆಂಡುಬತ್ತಾಸ್, ಜಿಲೇಬಿ ಕೆ.ಜಿಗೆ ₹60 ಇದೆ. ದರ ಕುಸಿದಿರುವುದರಿಂದ ಜನರು ಖರೀದಿಯತ್ತ ಮುಖಮಾಡಿದ್ದಾರೆ’ ಎಂದು ಕೊಪ್ಪಳದ ಮಂಡಕ್ಕಿ ವ್ಯಾಪಾರಿ ವೆಂಕಟೇಶ್‌ ತಿಳಿಸಿದರು.

ಜಾತ್ರೆಗೆ ಕಳೆತಂದ ತೊಟ್ಟಿಲು

ಜಾತ್ರಾ ಮಹೋತ್ಸವದ ಅಂಗವಾಗಿ ಅಳವಡಿಸಿರುವ ತೊಟ್ಟಿಲುಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕುಳಿತುಕೊಳ್ಳುವ ಮೂಲಕ ಜಾತ್ರಾ ಸಂಭ್ರಮಕ್ಕೆ ಸಾಕ್ಷಿಯಾದರು. ತೊಟ್ಟಿಲು ಸುತ್ತಲು ಆರಂಭಿಸುತ್ತಿದ್ದಂತೆ ಯುವತಿಯರೂ ಕೂಡ ಹೋ ಎಂದು ಸಂಭ್ರಮಿಸಿದರು. ಕೆಲ ಮಹಿಳೆಯರು ಮಕ್ಕಳ ನೆಪದಲ್ಲಿ ತೊಟ್ಟಿಲು ಏರಿ ಬಾಲ್ಯವನ್ನು ಸ್ಮರಿಸಿಕೊಂಡರು. ತೊಟ್ಟಿಲು ಇಡೀ ಜಾತ್ರೆಗೆ ವಿಶೇಷ ಕಳೆ ತಂದಿತ್ತು.

ಸ್ವಚ್ಛತೆಗೆ ಆದ್ಯತೆ

ಭಾನುವಾರ ಮಲ್ಲಯ್ಯನ ಪಲ್ಲಕ್ಕಿ ಮಹೋತ್ಸವ ನಡೆದ ತರುವಾಯ ತಾಲ್ಲೂಕು ಆಡಳಿತ ಸೋಮವಾರ ಗ್ರಾಮ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಕಂಡುಬಂತು. 25ಕ್ಕೂ ಹೆಚ್ಚು ಪೌರಕಾರ್ಮಿಕರು ಮಲ್ಲಯ್ಯನ ದೇಗುಲ ಪ್ರವೇಶದ್ವಾರದಿಂದ ಹಿಡಿದು ಗ್ರಾಮದ ಬೀದಿಗಳಲ್ಲಿ ಕಸಗುಡಿಸಿ ಸ್ವಚ್ಛಗೊಳಿಸಿದರು. ಜಾತ್ರೆಯ ಮರುದಿನವೇ ಗ್ರಾಮದ ರಸ್ತೆಗಳು ಸ್ವಚ್ಛಗೊಂಡಿದ್ದು, ಭಕ್ತರಿಗೂ, ಗ್ರಾಮಸ್ಥರಿಗೂ ಖುಷಿ ನೀಡಿತು.

₹11 ಲಕ್ಷಕ್ಕೆ ಹರಾಜು

‘ಮೈಲಾಪುರ ಜಾತ್ರೆಯಲ್ಲಿ ವಶಪಡಿಸಿಕೊಂಡಿದ್ದ 1,162 ಕುರಿಮರಿಗಳನ್ನು ಯಾದಗಿರಿಯ ಪಶುಸಂಗೋಪನಾ ಕಚೇರಿ ಆವರಣದಲ್ಲಿ ಸೋಮವಾರ ₹11 ಲಕ್ಷಕ್ಕೆ ಹರಾಜು ಹಾಕಲಾಯಿತು’ ಎಂದು ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ತಿಳಿಸಿದ್ದಾರೆ.

* * 

ಈ ಬಾರಿ ಜಾತ್ರೆಗೆ ವ್ಯವಸ್ಥಿತ ಸೌಲಭ್ಯ ಕಲ್ಪಿಸಿದ್ದಾರೆ. ಶೌಚಾಲಯ ಸಮಸ್ಯೆಯೊಂದನ್ನು ಬಗೆಹರಿಸಿದರೆ ಜಾತ್ರೆಯ ಸಂಭ್ರಮ ಮತ್ತಷ್ಟೂ ಇಮ್ಮಡಿಗೊಳ್ಳಲಿದೆ. ಬಸವರಾಜಪ್ಪಗ್ರಾಮದ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry