ಎಲ್ಲೆಡೆ ಎಳ್ಳು ಬೆಲ್ಲದ ಸವಿ...

7

ಎಲ್ಲೆಡೆ ಎಳ್ಳು ಬೆಲ್ಲದ ಸವಿ...

Published:
Updated:
ಎಲ್ಲೆಡೆ ಎಳ್ಳು ಬೆಲ್ಲದ ಸವಿ...

ಬಳ್ಳಾರಿ: ಈ ಬಾರಿಯ ಸಂಕ್ರಾಂತಿ ಸಂಭ್ರಮದಲ್ಲಿ ಜಿಲ್ಲೆಯ ಜನತೆ ಯಾವ ದೊಡ್ಡ ತೊಡಕೂ ಇಲ್ಲದೇ ಪಾಲ್ಗೊಂಡರು. ಮಳೆ ಕೊರತೆ, ಸೊರಗಿದ ಬೆಳೆಗಳು, ತುಂಗಭದ್ರಾ ಜಲಾಶಯದಲ್ಲಿ ನೀರಿಲ್ಲದ ಸಂದರ್ಭದಲ್ಲಿ ಹಿಂದಿನ ವರ್ಷ ಹಬ್ಬದ ಆಚರಣೆಯು ಮಂಕಾಗಿತ್ತು. ಆದರೆ ಈ ಬಾರಿ ಸಂಭ್ರಮ ಹೊಳೆದಿತ್ತು. ಎಲ್ಲೆಡೆ ಮನೆಗಳ ಮುಂದೆ ವರ್ಣರಂಜಿತ ರಂಗೋಲಿಗಳು ದಾರಿಹೋಕರನ್ನು ಸಂಭ್ರಮಿಸುವಂತೆ ಮಾಡಿದವು.

ಪಾಂಡವರು ಹಾಗೂ ಪುಟ್ಟಗೌರಿಯ ಮೂರ್ತಿಗಳಿಗೆ ಪೂಜೆ ಸಲೀಸಾಗಿ ನಡೆಯಿತು. ಜನ ಎಳ್ಳು–ಬೆಲ್ಲ ಹಂಚಿ ಸಂಭ್ರಮಿಸಿದರು.ನೆರೆಹೊರೆಯರವನ್ನು, ಬಂಧು ಮಿತ್ರರನ್ನು ಆಹ್ವಾನಿಸಿ ಹಬ್ಬದಡುಗೆಯನ್ನು ಬಡಿಸಿ ಖುಷಿಪಟ್ಟರು. ಗ್ರಾಮೀಣ ಪ್ರದೇಶಗಳಲ್ಲೂ ಇವೇ ದೃಶ್ಯಗಳು ಕಂಡುಬಂದವು.

‘ಈ ಬಾರಿ ಹಬ್ಬ ಎರಡು ದಿನವಿದೆ. ನಮ್ಮ ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಸಂಭ್ರಮ ಹೆಚ್ಚಿತ್ತು. ಎರಡೂ ದಿನ ಮನೆಮುಂದೆ ವೈವಿಧ್ಯಮಯ ರಂಗೋಲಿ ಬಿಡಿಸಿದ್ದರು. ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಎಳ್ಳು–ಬೆಲ್ಲ ಹಂಚಿದರು’ ಎಂದು ಗಾಂಧಿನಗರದ ವಿರೂಪಾಕ್ಷಪ್ಪ ತಿಳಿಸಿದರು.

ಬರ್ತದ ಸವಿ: ಎಲ್ಲ ಬಗೆಯ ತರಕಾರಿ, ಪಲ್ಲೆಗಳನ್ನು ಬೆಲ್ಲದೊಡನೆ ಸೇರಿಸಿ ತಯಾರಿಸುವ ಸಿಹಿ ಪದಾರ್ಥ ಬರ್ತ, ಕಾಯಿ ಪಲ್ಲೆಗಳು ಮತ್ತು ಕಾಳಿನ ಪಲ್ಯಗಳು, ಸಜ್ಜೆ ರೊಟ್ಟಿ ಮತ್ತು ಜೋಳದ ರೊಟ್ಟಿ ಊಟದ ರುಚಿ ಎಲ್ಲರ ಮನೆಗಳ ಸಂಭ್ರಮವನ್ನು ಹೆಚ್ಚಿಸಿತ್ತು.

‘ವರ್ಷಕ್ಕೊಮ್ಮೆ ಮಾತ್ರ ಈ ಬಗೆಯ ವಿಶೇಷ ಖಾದ್ಯಗಳುಳ್ಳ ಊಟವನ್ನು ಸಿದ್ಧಪಡಿಸುವುದು ಈ ಭಾಗದ ಸಂಕ್ರಾಂತಿ ಹಬ್ಬದ ವಿಶೇಷ’ ಎಂದು ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ತಿಳಿಸಿದರು.

ರಂಗೋಲಿ ಸ್ಪರ್ಧೆ: ಹಬ್ಬದ ಪ್ರಯುಕ್ತ ನಗರದ ಸಂಜಯ್ ಗಾಂಧೀ ನಗರ ಬಡಾವಣೆಯ ಉದ್ಯಾನದಲ್ಲಿ ಭಾನುವಾರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಶ್ರಾವಣಿ ಮೊದಲ ಬಹುಮಾನ ಗಳಿಸಿದರು. ರೇಷ್ಮ ಮತ್ತು ಮೋನಿಕಾ ಕ್ರಮವಾಗಿ ಎರಡು ಹಾಗೂ ಮೂರನೇ ಬಹುಮಾನ ಗಳಿಸಿದರು. ಅನುರಾಧಾ ತೀರ್ಪುಗಾರರಾಗಿದ್ದರು.

ಬಸವರಾಜ್ ಗೌಡ ಮತ್ತು ಮರೆನ್ನ ಬಹುಮಾನ ವಿತರಿಸಿದರು. ಮುಖಂಡರಾದ ಡಾ.ಎ.ಎಸ್.ದಾನಿ, ಕೆ.ವಿಜಯಕುಮಾರ್, ವಿ.ಈ ಗಂಗಾಧರ, ಗೌಡ, ಶಿವಕುಮಾರ್ ಸ್ವಾಮಿ, ಹನುಮಂತ ರೆಡ್ಡಿ, ನರಸಿಂಹುಲು, ಸುನೀತ ಹಾಗೂ ಪ್ರಾಣಲಿಂಗಪ್ಪ, ಜಕ್ರಿಯಾ, ರಂಗನಾಥ್, ಲೋಕನಾಥ್ ಪಾಟೀಲ್,ನರಸಿಂಹರೆಡ್ಡಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry