ಕೋಟೆನಾಡಿನ ರಕ್ಷಕ ದೇವತೆಗಳಿಗೆ ವಿಶೇಷಾಲಂಕಾರ

7

ಕೋಟೆನಾಡಿನ ರಕ್ಷಕ ದೇವತೆಗಳಿಗೆ ವಿಶೇಷಾಲಂಕಾರ

Published:
Updated:
ಕೋಟೆನಾಡಿನ ರಕ್ಷಕ ದೇವತೆಗಳಿಗೆ ವಿಶೇಷಾಲಂಕಾರ

ಚಿತ್ರದುರ್ಗ: ಸುಗ್ಗಿಯ ಸಂಭ್ರಮದ ಹಬ್ಬ ಮಕರ ಸಂಕ್ರಾಂತಿಯ ಅಂಗವಾಗಿ ಐತಿಹಾಸಿಕ ಕೋಟೆನಾಡಿನ ರಕ್ಷಕ ದೇವತೆಗಳಾದ ನವದುರ್ಗೆಯರ ದೇಗುಲಗಳಲ್ಲಿ ಸೋಮವಾರ ವಿಶೇಷ ಪೂಜೆಗಳು ನಡೆದವು.  ವಿಗ್ರಹಗಳಿಗೆ ಬಗೆ ಬಗೆಯ ವಿಶೇಷಾಲಂಕಾರ ಆಕರ್ಷಕವಾಗಿತ್ತು.

ಬರಗೇರಮ್ಮ ದೇಗುಲ: ಇಲ್ಲಿನ ಹೊಳಲ್ಕೆರೆ ರಸ್ತೆಯಲ್ಲಿನ ಬರಗೇರಮ್ಮ ದೇಗುಲದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ದೇವಿಗೆ ಇದೇ ಪ್ರಥಮ ಬಾರಿ ವಿವಿಧ ಬಗೆಯ ಸಿಹಿ ತಿಂಡಿಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ನಂತರ ಬೆಳಿಗ್ಗೆ 5.30ಕ್ಕೆ ಮಹಾಮಂಗಳಾರತಿ ನೆರವೇರಿತು.

ದೇಗುಲದ ಆವರಣ ಕೂಡ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ದೇಗುಲದ ಮುಂಭಾಗದ ಕಂಬವನ್ನು ಬೆಲ್ಲದ ಅಚ್ಚುಗಳಿಂದ ಸಿಂಗರಿಸಲಾಗಿತ್ತು. ಅಲ್ಲದೆ, ದೇಗುಲದ ಸುತ್ತಲೂ ಕಬ್ಬಿನ ಜಲ್ಲೆಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು.

ದೇವಿಯ ದರ್ಶನ ಪಡೆದ ಭಕ್ತರು ಪ್ರಸಾದ ಸ್ವೀಕರಿಸಿದರು. ಬೆಳಿಗ್ಗೆಯಿಂದ ರಾತ್ರಿವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಏಕನಾಥೇಶ್ವರಿ ದೇಗುಲ: ಕೋಟೆಯೊಳಗಿರುವ ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿ ದೇಗುಲದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ವಿಶೇಷ ಪೂಜೆ ನಡೆಯಿತು. ಭಕ್ತರು ಚಳಿಯನ್ನೂ ಲೆಕ್ಕಿಸದೇ ಕೋಟೆಯನ್ನೇರಿ ದೇವತೆಗೆ ಪೂಜೆ ಸಲ್ಲಿಸಿದರು.

ಮೇಲುದುರ್ಗದಲ್ಲಿರುವ ಹಿಂಡಬೇಶ್ವರ, ಸಂಪಿಗೆ ಸಿದ್ದೇಶ್ವರ, ಕಾಶಿ ವಿಶ್ವೇಶ್ವರ, ವೇಣುಗೋಪಾಲ ಸ್ವಾಮಿ, ಬೆಟ್ಟದ ಗಣಪತಿ, ಆಂಜನೇಯ ಸೇರಿದಂತೆ ವಿವಿಧ ದೇವರಿಗೆ ವಿಶೇಷ ಪೂಜೆಗಳು ನೆರವೇರಿದವು.

ಉಚ್ಚಂಗಿ ಯಲ್ಲಮ್ಮ ದೇಗುಲ: ಇಲ್ಲಿನ ಪಾಳೆಗಾರರ ಆರಾಧ್ಯ ದೈವ ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಬೆಳಿಗ್ಗೆ ದೇವಿಗೆ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೆ, ದೇಗುಲದ ಆವರಣ, ಹೊರಾಂಗಣದಲ್ಲಿಯೂ ಬಗೆ, ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ಬೆಳಿಗ್ಗೆ 5.30ಕ್ಕೆ ವಿಶೇಷ ಪೂಜೆ ನೆರವೇರಿತು. ಅಲ್ಲಿಂದ ರಾತ್ರಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದರು. ನಂತರ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಭಕ್ತರಿಗಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇಲ್ಲಿನ ಹೊಳಲ್ಕೆರೆ ರಸ್ತೆಯಲ್ಲಿನ ಗೌರಸಂದ್ರ ಮಾರಮ್ಮ, ಜೋಗಿಮಟ್ಟಿ ರಸ್ತೆಯಲ್ಲಿನ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಬುಡ್ಡಮ್ಮ ದೇವಿ, ಕೆಳಗೋಟೆಯ ಕೊಲ್ಲಾಪುರದ ಲಕ್ಷ್ಮೀ, ಸಂತೆ ಹೊಂಡದ ಸಮೀಪವಿರುವ ಬನ್ನಿ ಮಹಾಕಾಳಿ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಭಕ್ತಿ ಸಮರ್ಪಿಸಿದರು.

ಮಕರ ಸಂಕ್ರಾಂತಿ ಅಂಗವಾಗಿ ಅನೇಕ ದೇವಿ ದೇಗುಲಗಳಲ್ಲಿ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ, ಪೂಜೆ ನಡೆಯಿತು. ನಂತರ ಪ್ರಸಾದ ವಿನಿಯೋಗಿಸಲಾಯಿತು. ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಮಕರ ಸಂಕ್ರಮಣದ ನಿಮಿತ್ತ ಈಶ್ವರ, ಪಾರ್ವತಿ, ಗಣಪತಿ, ವೀರಭದ್ರ ಸ್ವಾಮಿ ವಿಗ್ರಹಗಳಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು.

ಹೊರವಲಯದ ವೆಂಕಟರಮಣ, ಜೆಸಿಆರ್ ಬಡಾವಣೆಯ ಗಣಪತಿ ದೇಗುಲ, ಬುರುಜನಹಟ್ಟಿಯಲ್ಲಿನ ತಗ್ಗಿನ ಆಂಜನೇಯ ಸ್ವಾಮಿ, ಕಣಿವೆ ಮಾರಮ್ಮ ದೇಗುಲ, ಅಂತರಘಟ್ಟಮ್ಮ, ಅನ್ನಪೂರ್ಣೇಶ್ವರಿ ದೇವಿ ದೇಗುಲ ಸೇರಿದಂತೆ ವಿವಿಧೆಡೆ ಪೂಜೆಗಳು ನೆರವೇರಿದವು. ಕೆಳಗೋಟೆಯ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಮತ್ತು ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಚಂದ್ರವಳ್ಳಿಯಲ್ಲಿ ದೇವಿಗೆ ಗಂಗಾಪೂಜೆ, ಪಂಚಾಮೃತ ಅಭಿಷೇಕ ಪೂಜೆ, ಮಹಾಭಿಷೇಕ, ವಿಶೇಷ ಅಲಂಕಾರದೊಂದಿಗೆ ಭವ್ಯ

ಮೆರವಣಿಗೆ ಹಾಗೂ ಸಂಜೆ ದೀಪೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ವಿವಿಧಡೆ ಸಂಕ್ರಾಂತಿ ಸಂಭ್ರಮ

ಮಕರ ಸಂಕ್ರಾಂತಿ ಹಬ್ಬವನ್ನೂ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಸಂಜೆ ನಾಲ್ಕು ಗಂಟೆಯಿಂದಲೇ ಮನೆ ಮನೆಗೆ ತೆರಳಿ ಎಳ್ಳು ಬೀರುವ ಸಂಭ್ರಮ ಆರಂಭವಾಯಿತು.

ಹೊಸ ಬಟ್ಟೆ ತೊಟ್ಟ ಪುಟಾಣಿ ಮಕ್ಕಳು ಎಳ್ಳು ಬೆಲ್ಲ, ಕಬ್ಬನ್ನು ತಟ್ಟೆಯಲ್ಲಿಟ್ಟುಕೊಂಡು ಗೆಳೆಯ, ಗೆಳತಿಯರು, ಸಂಬಂಧಿಕರ ಮನೆಗೆ ತೆರಳಿ, ಎಳ್ಳು ಬೀರಿ, ಶುಭಾಶಯ ಕೋರಿದರು.

ನವದಂಪತಿಗೆ ಹೊಸ ಸಂಕ್ರಾಂತಿ ಸಂಭ್ರಮ. ಅಂಥ ಜೋಡಿಗಳು ದೇಗುಲದಲ್ಲಿ ಪೂಜೆ ಸಲ್ಲಿಸಿ, ಆಪ್ತೇಷ್ಟರ ಮನೆಗೆ ಫಲಪುಷ್ಪ ಎಳ್ಳು ಬೀರಿ ಹಿರಿಯರಿಂದ ಆಶೀರ್ವಾದ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry