ಗೋವಾ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

7

ಗೋವಾ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

Published:
Updated:
ಗೋವಾ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

ಧಾರವಾಡ: ‘ಕರ್ನಾಟಕದವರು ಹರಾಮಿಗಳು’ ಎಂಬ ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ಹೇಳಿಕೆ ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಮಹಾದಾಯಿ ಕಳಸಾ ಬಂಡೂರಿ ಕೇಂದ್ರ ಸಮನ್ವಯ ಸಮಿತಿ ಕಾರ್ಯಕರ್ತರು ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ವಿನೋದ ಪಾಲ್ಯೇಕರ್‌ ಪ್ರತಿಕೃತಿ ದಹಿಸಿದ ಕಾರ್ಯಕರ್ತರು, ಗೋವಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡಿಗರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದು ತೀವ್ರ ಖಂಡನೀಯ. ಸಚಿವ ಪಾಲ್ಯೇಕರ ಕೂಡಲೇ ಕನ್ನಡಿಗರನ್ನು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

ಸಲೀಂ ಸಂಗನಮುಲ್ಲ ಮಾತನಾಡಿ, ‘ಮಹದಾಯಿ, ಕಳಸಾ ಹಾಗೂ ಬಂಡೂರಿ ಹೋರಾಟವನ್ನು ಸುಮಾರು 3 ವರ್ಷಗಳಿಂದ ನಡೆಯುತ್ತಿದೆ. ಹೀಗಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ಮಾಡುತ್ತಾ ಕಾಲ ಹರಣ ಮಾಡುತ್ತಿವೆ. ವಿವಾದ ಬಗೆಹರಿಸಲು ಎರಡೂ ಸರ್ಕಾರಗಳು ತಮ್ಮ ಇಚ್ಛಾಶಕ್ತಿ ಕಳೆದುಕೊಂಡಿವೆ. ಚುನಾವಣೆ ನೆಪದಲ್ಲಿ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಆರೋಪ ಮಾಡಿದರು.

‘ಕನ್ನಡಿಗರಿಗೆ ಅವಮಾನ ಮಾಡುವ ರೀತಿಯಲ್ಲಿ ಗೋವಾ ಸರ್ಕಾರದ ಸಚಿವ ಹೇಳಿಕೆ ನೀಡಿರುವುದು ಇಡೀ ರಾಜ್ಯಕ್ಕೆ ಮಾಡಿರುವ ಅವಮಾನ. ಗೋವಾದವರಿಗೆ ತಕ್ಕ ಪಾಠ ಕಲಿಸಬೇಕೆಂದರೆ ಅಲ್ಲಿಗೆ ಹೋಗುತ್ತಿರುವ ಪದಾರ್ಥಗಳನ್ನು ಸ್ಥಗಿತಗೊಳಿಸಬೇಕು. ಆ ಮೂಲಕ ತಾವಾಡಿದ ಹೇಳಿಕೆಯ ಪರಿಣಾಮವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ. ಇವೆಲ್ಲ ಆಗಬಾರದು ಎಂದಿದ್ದರೆ ಗೋವಾ ಮುಖ್ಯಮಂತ್ರಿ ಮನೋಹರ ಪರ್ರೀಕರ್‌ ವಿವಾದ ಬಗೆಹರಿಸಲು ಪ್ರಯತ್ನ ನಡೆಸಬೇಕು’ ಎಂದು ಆಗ್ರಹಿಸಿದರು.

‘ಒಂದೊಮ್ಮೆ ಪ್ರಧಾನಿ ಹಾಗೂ ಮನೋಹರ ಪರ್ರೀಕರ್‌ ವಿವಾದ ಬಗೆಹರಿಸಲು ಮುಂದಾಗದಿದ್ದಲ್ಲಿ ಫೆಬ್ರುವರಿ ಮೊದಲ ವಾರದಿಂದ ಗೋವಾ ರಸ್ತೆಯನ್ನು ಬಂದ್‌ ಮಾಡಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು ಮುಖಂಡರಾದ ಗಿರೀಶ ಪೂಜಾರಿ, ಬಾಲಚಂದ್ರ ಸುರಪುರ, ಮಹೇಶ ನೇಕಾರ, ಶರೀಫ ಅಮ್ಮಿನಭಾವಿ ಇದ್ದರು.

ಹುಬ್ಬಳ್ಳಿ: ಕರ್ನಾಟಕದವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿರುವ ಗೋವಾದ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕುಎಂದು ನವಲಗುಂದ ಶಾಸಕ ಎನ್‌.ಎಚ್‌. ಕೋನರಡ್ಡಿ ಆಗ್ರಹಿಸಿದ್ದಾರೆ.

‘ಉತ್ತರ ಕರ್ನಾಟಕದ ಜನರ ಪಾಲಿಗೆ ಮಹದಾಯಿ ತಾಯಿ ಇದ್ದಂತೆ. ಇದಕ್ಕಾಗಿ ಹೋರಾಟ ಮಾಡುತ್ತಿರುವ ನಮ್ಮವರನ್ನು ಕೆಟ್ಟ ಭಾಷೆಗಳಿಂದ ನಿಂದಿಸಿ ಪಾಲ್ಯೇಕರ ಅವಮಾನ ಮಾಡಿದ್ದಾರೆ. ಗೋವಾ ಉದ್ಧಟತನ ಮೀತಿಮಿರಿದ್ದು, ರಾಜ್ಯದ ಜನರ ಸಹನೆ ಪರೀಕ್ಷೆ ಮಾಡುತ್ತಿದೆ. ಇದೇ ರೀತಿ ಮುಂದುವರಿದರೆ ಉಗ್ರಹೋರಾಟ ಮಾಡಬೇಕಾಗುತ್ತದೆ’ ಎಂದು ಪತ್ರಿಕಾ ಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಮಹದಾಯಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿದೆ ಎಂದು ಅವರು ಹೇಳಿದ್ದರಲ್ಲಿ ಯಾವುದೇ ಹುರುಳಿಲ್ಲ. ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಕರ್ನಾಟಕದಲ್ಲಿರುವ ಬಿಜೆಪಿ ನಾಯಕರೇ ನೀರಿನ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕು. ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಜ. 11ರಂದೇ ಅವರಿಗೆ ಪತ್ರಬರೆದರೂ ಪ್ರಯೋಜನವಾಗಿಲ್ಲ. ಸಿದ್ದರಾಮಯ್ಯ ಕೂಡಲೇ ಪ್ರಧಾನಿ ಮೋದಿ ಬಳಿ ನಿಯೋಗ ಕರೆದುಕೊಂಡು ಹೋಗಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry