ಜಾತ್ರೆ, ಸಂಕ್ರಾಂತಿಗೂ ನೀರಿನ ಸಂಕಷ್ಟ

7

ಜಾತ್ರೆ, ಸಂಕ್ರಾಂತಿಗೂ ನೀರಿನ ಸಂಕಷ್ಟ

Published:
Updated:
ಜಾತ್ರೆ, ಸಂಕ್ರಾಂತಿಗೂ ನೀರಿನ ಸಂಕಷ್ಟ

ಹಾವೇರಿ/ಗುತ್ತಲ: ನಾಡಿನಾದ್ಯಂತ ಜನತೆ ಸಂಕ್ರಾಂತಿ ಸಂಭ್ರಮದಲ್ಲಿ ಮುಳುಗಿದರೆ, ಜಿಲ್ಲೆಯ ನದಿ, ಬಾಂದಾರು, ಕರೆ ಕಟ್ಟೆಗಳಲ್ಲಿ ನೀರಿನ ಕೊರತೆಯಿದ್ದು, ಆತಂಕ ಮನೆ ಮಾಡುತ್ತಿದೆ.

ಹಾವೇರಿ ಹುಕ್ಕೇರಿ ಮಠದ ಜಾತ್ರೆಯ ಬಳಿಕ ಸರಣಿ ಜಾತ್ರೆಗಳು ಆರಂಭಗೊಳ್ಳುತ್ತವೆ. ಈ ಪೈಕಿ ಹಲವಾರು ದೊಡ್ಡ ಜಾತ್ರೆಗಳು ನದಿ ತೀರದ ಹಳ್ಳಿಗಳಲ್ಲಿ ನಡೆಯುತ್ತವೆ. ಅಲ್ಲದೇ, ಮಕರ ಸಂಕ್ರಾಂತಿಯ ಪುಣ್ಯ ಸ್ನಾನಕ್ಕೂ ನದಿಯನ್ನು ಅವಲಂಬಿಸುವ ಸಂಪ್ರದಾಯ ಜಿಲ್ಲೆಯಲ್ಲಿದೆ.

ಈ ಬಾರಿ ಭಾನುವಾರ ಮತ್ತು ಸೋಮವಾರ ಮಕರ ಸಂಕ್ರಾಂತಿ ಆಚರಿಸಿದರು. ಈ ಪೈಕಿ ರೈತಾಪಿ ವರ್ಗವು ಹಿಂದಿನ ದಿನವೇ ನದಿ ತೀರಕ್ಕೆ ಎತ್ತಿನ ಚಕ್ಕಡಿಯಲ್ಲಿ ಹೋಗಿ, ನೆಲೆ ನಿಂತು ಭೋಜನ, ಸ್ನಾನ, ಪೂಜೆ ಇತ್ಯಾದಿ ಮುಗಿಸಿಕೊಂಡು ವಾಪಾಸ್ಸಾಗುವುದು ವಾಡಿಕೆ. ನದಿ ನೀರನ್ನು ಅವಲಂಬಿಸುವ ಅವರು, ಈಗ ಬಾಂದಾರುಗಳಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಆದರೆ, ಈ ಬಾರಿ ಬಾಂದಾರುಗಳಲ್ಲೂ ನೀರಿನ ಕೊರತೆ ಕಾಡಿದೆ.

ಜಿಲ್ಲೆಯಲ್ಲಿ ವರದಾ–16, ಕುಮುದ್ವತಿ –10, ಧರ್ಮಾ–12, ಹಳ್ಳಗಳು–12 ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಬಾಂದಾರು (ಬ್ರಿಡ್ಜ್‌ ಕಂ ಬ್ಯಾರೇಜ್‌)ಗಳಿವೆ. ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿಗೆ ಸೇರಿದ 1,400ಕ್ಕೂ ಹೆಚ್ಚು ಕೆರೆಗಳಿವೆ. ಆದರೆ, ತುಂಗಾ ಮೇಲ್ದಂಡೆ ಯೋಜನೆ ಹಾಗೂ ಶಿಗ್ಗಾವಿ, ಹಾನಗಲ್, ಕಾಗಿನೆಲೆ ಏತ ನೀರಾವರಿ ಮತ್ತಿತರ ಯೋಜನೆಗಳ ಸಂಪರ್ಕ ಹೊಂದಿದ ಕೆರೆಗಳಲ್ಲಿ ಮಾತ್ರ ನೀರಿವೆ. ಉಳಿದಂತೆ ಕೆರೆಗಳೂ ಭಣಗುಟ್ಟುತ್ತಿವೆ.

ನದಿಗಳು: ವರದಾ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡು ತಿಂಗಳುಗಳು ಉರುಳಿವೆ. ತುಂಗಭದ್ರಾ ನದಿಯೂ ಬತ್ತುತ್ತಿದೆ. ಕೃಷಿಗೆ ನೀರಿನ ಕೊರತೆ ಇದೆ. ಇನ್ನೊಂದೆಡೆ ಜನ–ಜಾನುವಾರುಗಳ ಬಳಕೆಗೂ ನೀರಿನ ತತ್ವಾರ ಉಂಟಾಗಿದೆ.

ಈ ನದಿ ಅವಲಂಬಿಸಿ ಗುತ್ತಲ, ಕಂಚಾರಗಟ್ಟಿ, ಹಾವನೂರ, ಹೊಳಲು, ಹಾಂವಶಿ, ಶಾಕಾರ, ಹುರಳಿಹಾಳ, ಗಳಗನಾಥ, ಬೆಳವಗಿ, ನೀರಲಗಿ, ಗೂಯಿಲಗೂಂದಿ, ಮೇವುಂಡಿ, ತೇರದಹಳ್ಳಿ ಮತ್ತಿತರೆಡೆ ರೈತರು ಬೆಳೆದ ಗೋವಿನ ಜೋಳ, ಶೇಂಗಾ, ಬಾಳೆ, ಕಬ್ಬು, ಭತ್ತ, ಅಲಸಂಡೆ ಬೆಳೆಗಳು ಒಣಗಿ ಹೋಗುತ್ತಿವೆ.

ಕುಡಿಯುವ ನೀರಿಗೂ ತತ್ವಾರ: ಅವಧಿಗೂ ಮೊದಲೇ ತುಂಗಭದ್ರೆ ಬತ್ತಿದ ಕಾರಣ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗುತ್ತಲ ಪಟ್ಟಣದಲ್ಲಿ 15 ರಿಂದ 20 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಹಾವೇರಿಗೆ ನೀರು ಪೂರೈಸುವ ಇಲ್ಲಿಗೆ ಸಮೀಪದ ಕೆಂಚಾರಗಟ್ಟಿ ಜಾಕ್‌ವೆಲ್‌ಗಳಲ್ಲಿ ಮುಂದಿನ ಸುಮಾರು ಒಂದು ವಾರಕ್ಕೆ ಬೇಕಾದ ನೀರು ಮಾತ್ರ ಲಭ್ಯವಿದೆ ಎನ್ನುತ್ತಾರೆ ಸ್ಥಳೀಯ ರೈತರು.

ಜಾತ್ರೆಗಳ ಸರಣಿ: ಜನವರಿ 23 ಮತ್ತು 24 ರಂದು ಹಾವನೂರ ಜಾತ್ರೆ, ಫೆಬ್ರುವರಿ 3 ರಂದು ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ, ಫೆಬ್ರುವರಿ 15 ರಂದು ಕುರವತ್ತಿ ಗ್ರಾಮದ ಕುರವತ್ತಿ ಬಸವೇಶ್ವರನ ರಥೋತ್ಸವಗಳು ನಡೆಯಲಿವೆ. ಪ್ರತಿ ಜಾತ್ರೆಗಳಲ್ಲೂ ಲಕ್ಷಕ್ಕಿಂತ ಹೆಚ್ಚು ಭಕ್ತರು ಬರುತ್ತಾರೆ. ಮೈಲಾರ ಜಾತ್ರೆಗೆ 10 ಲಕ್ಷಕ್ಕೂ ಹೆಚ್ಚು ಜನರ ನಿರೀಕ್ಷೆ ಇದೆ.

ಅಲ್ಲದೇ, ಈ ಜಾತ್ರೆಗಳಿಗೆ ಬರುವ ಭಕ್ತರು ಕನಿಷ್ಠ 2ರಿಂದ 3 ದಿನ ಟೆಂಟ್ ಹಾಕಿ ತಂಗುವುದು ವಾಡಿಕೆ. ಹೀಗಾಗಿ ಅವರೆಲ್ಲ ನದಿ ನೀರನ್ನು ಅವಲಂಬಿಸುತ್ತಾರೆ. ಆದರೆ, ಈ ಬಾರಿ ನದಿಯಲ್ಲಿ ನೀರಿನ ಕೊರತೆಯು ಕಾಡುತ್ತಿದೆ. ಭದ್ರಾ ಜಲಾಶಯದಿಂದ ಕೂಡಲೇ ನೀರು ಹರಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

* * 

ಸತತ ಮೂರ್‍ನಾಲ್ಕು ವರ್ಷಗಳಿಂದ ನದಿಯಲ್ಲಿ ನೀರಿನ ಕೊರತೆ ಕಾಡುತ್ತಿದೆ. ಭದ್ರಾ ಜಲಾಶಯದಿಂದ ನೀರು ಬಿಡಿಸಲು ಈಗಲೇ ಕ್ರಮಕೈಗೊಳ್ಳಬೇಕು

ಶಿವಾನಂದ 

ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry