ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಫ್‌ಎಂಸಿ ಕಾಲೇಜಿನಲ್ಲಿ ಬೆಳ್ಯಪ್ಪ ಪುತ್ಥಳಿ’

Last Updated 16 ಜನವರಿ 2018, 9:46 IST
ಅಕ್ಷರ ಗಾತ್ರ

ಮಡಿಕೇರಿ: ‘ಸ್ವಾತಂತ್ರ್ಯ ಹೋರಾಟಗಾರರ ಪ್ರತಿಫಲವನ್ನು ನಾವಿಂದು ಅನುಭವಿಸುತ್ತಿದ್ದು ಅವರ ಸೇವೆಯನ್ನು ಎಂದಿಗೂ ಮರೆಯಬಾರದು’ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅಭಿಪ್ರಾಯಪಟ್ಟರು.

ಕೊಡವ ಮಕ್ಕಡ ಕೂಟ ಹಾಗೂ ಅಮ್ಮತ್ತಿ ಕೊಡವ ಸಮಾಜದ ಆಶ್ರಯದಲ್ಲಿ ಸೋಮವಾರ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ರಚಿಸಿದ ‘ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ’ ಅಧ್ಯಯನ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಕೊಡಗಿನಲ್ಲಿ ರಾಷ್ಟ್ರಾಭಿಮಾನ ಬೆಳೆಸುವ ಚಳವಳಿಯಲ್ಲಿ ಬೆಳ್ಯಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಈ ಕೃತಿಯ ಮೂಲಕ ತಿಳಿಯಲಿದೆ. ಅವರಂತಹ ಮಹಾನ್‌ ಹೋರಾಟಗಾರರ ತ್ಯಾಗದಿಂದ ನಾವು ಸ್ವಾತಂತ್ರ್ಯರಾಗಿದ್ದೇವೆ. ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ಕಾಣುವ ಮನೋಭಾವ ಬದಲಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಕೃತಿಗಳು ಮಾಹಿತಿಯ ಕಣಜವಿದ್ದಂತೆ. ಕೃತಿಗಳ ಮೂಲಕ ಮುಂದಿನ ಜನಾಂಗಕ್ಕೆ ಇತಿಹಾಸ ತಿಳಿಸಲು ಸಾಧ್ಯವಾಗಲಿದೆ. ಬೆಳ್ಯಪ್ಪ ಅವರು ಕೊಡಗಿನ ಅಭ್ಯುದಯಕ್ಕೆ ಸಾಕಷ್ಟು ಶ್ರಮಿಸಿದ್ದರು ಎಂಬುದು ಈ ಕೃತಿಯಲ್ಲಿ ಉಲ್ಲೇಖವಾಗಿದೆ’ ಎಂದು ತಿಳಿಸಿದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ. ನಾವು ಮಾಡುವ ಕೆಲಸ ಮಾತ್ರ ಶಾಶ್ವತವಾಗಿ ಉಳಿಯಲಿದೆ; ಅಕಾಡೆಮಿಯಲ್ಲಿ ಗೊಂದಲವಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಅಂತಹ ಗೊಂದಲಕ್ಕೆ ಆಸ್ಪದವಿಲ್ಲ. ನಾನೂ ಚಿಕ್ಕಂದಿನಲ್ಲೇ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದೆ. ಉಪಾಧ್ಯಕ್ಷರ ಜತೆಗೂಡಿ ಕೊಡಗಿನ ಆಚಾರ– ವಿಚಾರ ಉಳಿಸುವ ಕೆಲಸ ಮಾಡುತ್ತೇನೆ. ಈ ಸಂಬಂಧ ಮೊದಲ ಸಭೆಯಲ್ಲೇ ಚರ್ಚೆಯೂ ನಡೆದಿದೆ. ಜಿಲ್ಲೆಯ ಇತಿಹಾಸದ ದಾಖಲೀಕರಣ ಆಗಬೇಕಿದೆ’ ಎಂದು ತಿಳಿಸಿದರು.

ಪತ್ರಕರ್ತ ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ‘ಜಿಲ್ಲೆಯಲ್ಲಿ ಸಮಸ್ಯೆಗಳು ಎದುರಾದರೆ ಮೊದಲು ಧ್ವನಿ ಎತ್ತುವುದೇ ಅಮ್ಮತ್ತಿಯ ಕೊಡವ ಸಮಾಜ. ಸಮಾಜಗಳು ಹುತ್ತರಿ, ಕೈಲ್‌ಪೊಳ್ದ್‌ ಆಚರಣೆಗೆ ಸೀಮಿತಗೊಳ್ಳದೇ ಕೊಡವರ ಕಷ್ಟ– ಸುಖಗಳಿಗೆ ಸ್ಪಂದಿಸಬೇಕು’ ಎಂದು ಕೋರಿದರು.

‘ಪಂದ್ಯಂಡ ಬೆಳ್ಯಪ್ಪ ಅವರು ತತ್ವ, ಆದರ್ಶ, ಪ್ರಾಮಾಣಿಕತೆ ನಂಬಿ ಬದುಕಿದ್ದವರು. ಹೊಂದಾಣಿಕೆ ಮಾಡಿಕೊಂಡಿದ್ದರೆ ದೊಡ್ಡಹುದ್ದೆಗೆ ಏರುತ್ತಿದ್ದರು. ಅಂತಹ ಕೆಲಸಕ್ಕೆ ಮುಂದಾಗಲಿಲ್ಲ. ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡೋಣ’ ಎಂದು ಕರೆ ನೀಡಿದರು.

ಕೃತಿ ಕುರಿತು ಗೋಣಿಕೊಪ್ಪಲು ಕಾವೇರಿ ಕಾಲೇಜು ಉಪನ್ಯಾಸಕಿ ಆಂಗೀರ ಕುಸುಮಾ ಮಾತನಾಡಿ, ‘ಕೊಡಗಿಗೆ ಮಹಾತ್ಮ ಗಾಂಧೀಜಿ ಅವರನ್ನು ಕರೆತಂದಿದ್ದು ಇದೇ ಬೆಳ್ಯಪ್ಪ. ಕಾಲಗರ್ಭದಲ್ಲಿ ಹುದುಗಿದ್ದ ಇತಿಹಾಸವನ್ನು ತೆಗೆದು ಕೃತಿ ರಚಿಸುವುದು ಸಾಧನೆ. ಲೇಖಕರು ಸತತ ಪರಿಶ್ರಮಪಟ್ಟು ಕೊಡಗಿನ ಗಾಂಧಿಯ ಬಗ್ಗೆ ಕುತೂಹಲಕಾರಿ ಅಂಶಗಳನ್ನು ದಾಖಲಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಹಾತ್ಮ ಗಾಂಧೀಜಿ ಅವರಂತೆಯೇ ಅಹಿಂಸಾವಾದಿಯಾಗಿ, ಅವರ ಒಡನಾಡಿಯಾಗಿ ಬೆಳ್ಯಪ್ಪ ಜೀವಿಸಿದ್ದವರು. ದೂರದೃಷ್ಟಿಯಿತ್ತು. ಕೊಡಗು ಜಿಲ್ಲೆಯನ್ನೇ ಮಾದರಿಯಾಗಿ ರೂಪಿಸಬೇಕು ಎನ್ನುವ ಹಂಬಲವಿತ್ತು. ಜಿಲ್ಲೆ ಕಂಡ ಅಪರೂಪದ ವ್ಯಕ್ತಿ ಅವರು’ ಎಂದು ಬಣ್ಣಿಸಿದರು.

‘ಸಮಾಜಕ್ಕಾಗಿ ಸೇವೆ ಸಲ್ಲಿಸಿದ್ದರೂ ಮರೆತಿರುವುದು ದುರದೃಷ್ಟಕರ. ಮಡಿಕೇರಿಗೆ ಪದವಿ ಕಾಲೇಜು ಬೇಕೆಂದು ಸಾಕಷ್ಟು ಪರಿಶ್ರಮ ಹಾಕಿದ್ದರು. ಆದರೆ, ಅದೇ ಎಫ್‌ಎಂಸಿ ಕಾಲೇಜಿನಲ್ಲಿ ಅವರ ಹೆಸರು ನಮೂದಿಸದಿರುವುದು ದುರದೃಷ್ಟಕರ’ ಎಂದು ವಿಷಾದಿಸಿದರು.

ಲೇಖಕ ಐತಿಚಂಡ ರಮೇಶ್‌ ಉತ್ತಪ್ಪ ಮಾತನಾಡಿ, ‘ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರಷ್ಟೇ ತೂಕದ ವ್ಯಕ್ತಿ ಬೆಳ್ಯಪ್ಪ. ಜಿಲ್ಲೆಯಲ್ಲಿ ಸಾರಾಯಿ ನಿಷೇಧದ ಹೋರಾಟವು ಬೆಳ್ಯಪ್ಪ ನೇತೃತ್ವದಲ್ಲಿಯೇ ನಡೆದಿತ್ತು. ಅವರ ನೆನಪು ಕಾರ್ಯಕ್ರಮ ಮಾಡುವ ಆಲೋಚನೆಯಿದೆ. ಜತೆಗೆ, ಮಡಿಕೇರಿಯ ಎಫ್‌ಎಂಸಿ ಕಾಲೇಜಿನಲ್ಲಿ ಬೆಳ್ಯಪ್ಪ ಪುತ್ಥಳಿ ನಿರ್ಮಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ‘ಕೊಡವರು ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಎನ್ನುವ ಆರೋಪವಿದೆ. ಕೊಡವರು ಸ್ವಾತಂತ್ರ್ಯ ಹೋರಾಟ ನಡೆಸಿದ್ದರೂ ಅದರ ಬಗ್ಗೆ ದಾಖಲಿಸುವ ಪ್ರಯತ್ನ ನಡೆದಿರಲಿಲ್ಲ. ಬೆಳ್ಯಪ್ಪ ಅವರ ಕುರಿತೂ ಕೃತಿಗಳಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಕೊಡಗಿನ ಸಾಕಷ್ಟು ಮಂದಿ ಜೈಲುವಾಸ ಅನುಭವಿಸಿದ್ದರು’ ಎಂದು ಮಾಹಿತಿ ನೀಡಿದರು. ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್‌ ದೇವಯ್ಯ, ಪಂದ್ಯಂಡ ವಿಜಯ್‌ ಬೆಳ್ಯಪ್ಪ ಹಾಜರಿದ್ದರು.

* * 

ಮಹಾತ್ಮ ಗಾಂಧೀಜಿ ಅವರಂತೆಯೇ ಅಹಿಂಸಾವಾದಿಯಾಗಿ ಬೆಳ್ಯಪ್ಪ ಬದುಕಿದ್ದರು. ಅವರಿಗೆ ಅಭಿವೃದ್ಧಿ ದೂರದೃಷ್ಟಿಯೂ ಇತ್ತು
ಆಂಗೀರ ಕುಸುಮಾ, ಉಪನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT