ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಆಗ್ರಹ ನಂದಾಪುರ ಗ್ರಾಮ

Last Updated 16 ಜನವರಿ 2018, 9:55 IST
ಅಕ್ಷರ ಗಾತ್ರ

ತಾವರಗೇರಾ: ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಕೊಠಡಿ ಕೊರತೆ, ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಸಿಗುತ್ತಿಲ್ಲ, ದುರಸ್ತಿ ಕಾಣದ ಮುಖ್ಯ ರಸ್ತೆ, ಓಣಿಯಲ್ಲಿ ಸಿ.ಸಿ ರಸ್ತೆ ಕೊರತೆ, ಶುದ್ಧ ಕುಡಿವ ನೀರಿನ ಅಭಾವ. ಹೀಗೆ ವಿವಿಧ ಸಮಸ್ಯೆಗಳ ಆಗರ ನಂದಾಪುರ ಗ್ರಾಮ.

ತಾವರಗೇರಾ ಪಟ್ಟಣಕ್ಕೆ ಸುಮಾರು 7 ಕಿ ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕಾಣುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವಲ್ಲಿ ವಿಫಲವಾಗಿದೆ. ದುಡಿದ ಕೂಲಿಕಾರರಿಗೆ ಎರಡು ವರ್ಷ ಕಳೆದರು ಕೂಲಿ ಹಣ ಪಾವತಿಸಿಲ್ಲ. ಮಳೆ ಕೊರತೆಯಿಂದ ರೈತರ ಬೆಳೆ ನಷ್ಟವಾಗಿದೆ. ಕುಟುಂಬ ನಿರ್ವಹಣೆಗೆ ದೂರದ ಪಟ್ಟಣಗಳಿಗೆ ರೈತರು ಗುಳೆ ಹೋಗುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಕುಡಿಯುವ ನೀರಿಗೆ ಪರದಾಟ: ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಪ್ಲೋರೈಡ್ ನೀರನ್ನು ಬಳಸುತ್ತಿದ್ದು, ಅನಾರೋಗ್ಯ ಕಾಡುತ್ತಿದೆ. ಬೇಸಿಗೆಯಲ್ಲಿ ನೀರಿಗಾಗಿ ಪರದಾಡಬೇಕಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹ ಇಲ್ಲ. ಮೂವರು ಗ್ರಾಮದ ಪಂಚಾಯತಿ ಸದಸ್ಯರಿದ್ದು, ಗ್ರಾಮಕ್ಕೆ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನಗೆ ಒತ್ತು ನೀಡಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದು ಫಕೀರಪ್ಪ ಬಾರಿಗಿಡ ತಿಳಿಸಿದರು.

ಮೂರು ಅಂಗನವಾಡಿ ಕೇಂದ್ರ ಮಂಜೂರು: ಒಂದು ಅಂಗನವಾಡಿ ಕೊಠಡಿ ಪೂರ್ಣಗೊಂಡು ನಾಲ್ಕು ವರ್ಷವಾದರೂ ಸಹ ಕೊಠಡಿಯಲ್ಲಿ ಕೇಂದ್ರ ಪ್ರಾರಂಭವಾಗಿಲ್ಲ. ಸುತ್ತಲೂ ಜಾಲಿಮುಳ್ಳಿನ ಗಿಡಗಳು, ಕಸಹಾಕಲಾಗಿದೆ ಮಕ್ಕಳಿಗೆ ಅನಾರೋಗ್ಯ ತರುವಂತಹ ವಾತಾವರಣ ನಿರ್ಮಾಣವಾಗಿದೆ. ಇನ್ನೊಂದು ಕೇಂದ್ರದ ಕಟ್ಟಡ ಮುಗಿಯುವ ಹಂತದಲ್ಲಿದೆ. ಅಂಗನವಾಡಿ ಶಾಲೆಯ ಮನೆಯಲ್ಲಿ ನಡೆಸಲಾಗುತ್ತಿದೆ. ಸದ್ಯ ಮೂರು ಕೇಂದ್ರಗಳ ಪೈಕಿ ಒಂದರಲ್ಲಿ ಮಾತ್ರ ವ್ಯವಸ್ಥಿತವಾಗಿ ಕೇಂದ್ರ ಕಾರ್ಯಗಳು ನಡೆಯುತ್ತವೆ ಎಂದು ಗ್ರಾಮದ ಹನಮಂತಪ್ಪ ಸುಣಗಾರ ತಿಳಿಸಿದರು.

ಗ್ರಾಮದಿಂದ ತಾವರಗೇರಾ ಸಂಪರ್ಕಿಸುವ ಒಳರಸ್ತೆ ಹಾಳಾಗಿದ್ದು, ಸಾರ್ವಜನಿಕರು ಪಟ್ಟಣ ತಲುಪಲು ಹರಸಾಹಸ ಪಡಬೇಕಿದೆ. ನಂದಾಪುರದಿಂದ ಕುಷ್ಟಗಿ ಮುಖ್ಯ ರಸ್ತೆ ಸೇರುವ ರಸ್ತೆಯ ಹಳ್ಳಕ್ಕೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. 6 ತಿಂಗಳಿಂದ ಕೆಲಸ ನಡೆಯುತ್ತಿದ್ದು. ಈ ರಸ್ತೆ ಪ್ರತಿದಿನ ಓಡಾಟಕ್ಕೆ ಮುಖ್ಯವಾಗಿದೆ. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದರೆ ಅನುಕೂಲ ವಾಗುತ್ತದೆ. ಹೀಗೆ ವಿಳಂಬವಾದರೆ ಹೋರಾಟ ಮಾಡಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ನಾಗರಾಜ ಹೊಸಮನಿ ದೂರಿದರು.

* * 

ಗ್ರಾಮದಲ್ಲಿ ಸ್ವಚ್ಛತೆಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿಲ್ಲ, ರಸ್ತೆಯಲ್ಲಿ ಕಲುಷಿತ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿವೆ
ನಿರ್ಮಲ ಸಜ್ಜನ ನಂದಾಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT