ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕಾರಟಗಿಗೆ ತಾಲ್ಲೂಕು ಮುಕುಟ

Last Updated 16 ಜನವರಿ 2018, 9:58 IST
ಅಕ್ಷರ ಗಾತ್ರ

ಕಾರಟಗಿ: ಕಚೇರಿ ಕೆಲಸಕ್ಕೆ ಇಡೀ ದಿನ ಮೀಸಲಿಡಬೇಕಾದ ಪರಿಸ್ಥಿತಿ. ಸಮಯ, ಹಣ, ಶ್ರಮ ಹಾಳಾಗುತ್ತಿರುವುದರಿಂದ ಬೇಸತ್ತ ಕಾರಟಗಿ ಹಾಗೂ ಮತ್ತಿತರ ಗ್ರಾಮಗಳ ಜನರು ತಾಲ್ಲೂಕಿಗಾಗಿ ಆಗ್ರಹಿಸಲಾರಂಭಿಸಿದರು.

ಚಳ್ಳೂರ ತಿಮ್ಮನಗೌಡರ ಅಧ್ಯಕ್ಷತೆಯಲ್ಲಿ 1974ರಲ್ಲಿ, 2001ರಲ್ಲಿ ಎಸ್‌.ಇ. ಪ್ರಹ್ಲಾದಶ್ರೇಷ್ಠಿ ಅಧ್ಯಕ್ಷತೆಯ ತಾಲ್ಲೂಕು ರಚನಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದು, ಸರ್ಕಾರ ನೇಮಿಸಿದ್ದ ಎಂ.ವಾಸುದೇವರಾವ್, ಟಿ.ಎಂ.ಹುಂಡೇಕಾರ, ಪಿ.ಸಿ. ಗದ್ದಿಗೌಡರ ಸಮಿತಿ ಹಾಗೂ ಎಂ.ಬಿ. ಪ್ರಕಾಶ ಸಮಿತಿಗೆ ತಾಲ್ಲೂಕು ಕೇಂದ್ರಕ್ಕಾಗಿ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಇದು ತಾಲ್ಲೂಕು ರಚನೆಗಾಗಿ ಆಗ್ರಹಿಸಿದ ಆರಂಭದ ದಿನಗಳು.

ಎಂ.ಬಿ.ಪ್ರಕಾಶ ಸಮಿತಿ ಹೊರತುಪಡಿಸಿ ಉಳಿದ ಮೂರು ಸಮಿತಿಗಳು ಕಾರಟಗಿಯನ್ನು ತಾಲ್ಲೂಕು ಕೇಂದ್ರಕ್ಕೆ ಶಿಫಾರಸು ಮಾಡಿದ್ದವು. ಎಂ.ಬಿ. ಪ್ರಕಾಶ ಸಮಿತಿ ವರದಿ ವಿರುದ್ಧ ಭಾರಿ ಪ್ರಮಾಣದ ಪ್ರತಿಭಟನೆ, ಆಕ್ರೋಶ, 47 ದಿನಗಳ ನಿರಂತರ ಧರಣಿ ನಡೆದು ಸರ್ಕಾರದ ಗಮನ ಸೆಳೆಯಲಾಯಿತು.

ಧಾರ್ಮಿಕ, ಔದ್ಯೋಗಿಕ, ಆರ್ಥಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಹೊಂದಿರುವ ಕಾರಟಗಿಯನ್ನು ತಾಲ್ಲೂಕು ಕೇಂದ್ರವೆಂದು ಮಾಡಲೇಬೇಕು ಎಂಬ ಛಲದೊಂದಿಗೆ ಜಾಗೃತ ಯುವಕ ಸಂಘದ ಯುವಕರು ವಿವಿಧ ಗ್ರಾಮಸ್ಥರನ್ನೊಳಗೊಂಡವರ ಸಭೆ ನಡೆಸಿ ’ಕಾರಟಗಿ ತಾಲ್ಲೂಕು ರಚನಾ ಹೋರಾಟ ಸಮಿತಿ’ಯನ್ನು 2001ರ ಆಗಸ್ಟ್‌ 26ರಂದು ರಚಿಸಿದರು. ನೂತನ ಸಮಿತಿ ರಚನೆ ಹಿಂದೆ ಪ್ರಹ್ಲಾದ ಜೋಷಿ, ಕೆ.ಮಲ್ಲಿಕಾರ್ಜುನ, ಹಣವಾಳ ವೀರಣ್ಣ, ಅಮೀನಪ್ಪ ಮಾಳಗೊಂಡ ಮತ್ತವರ ಸ್ನೇಹಿತರು ಹಗಲಿರುಳು ಶ್ರಮಿಸಿದರು.

ಕಲ್ಯಾಣ ಕಾರಟಗಿಗೆ ಈಗ ತಾಲ್ಲೂಕು ಎನ್ನುವ ಮುಕುಟ 2018ರ ಜನವರಿ ಕೊನೆಯ ವಾರದಲ್ಲಿ ಒಲಿಯಲಿದೆ. ಕಾರಟಗಿ ತಾಲ್ಲೂಕು ಎಂದು ಘೋಷಣೆ ಯಾಗುತ್ತಿರುವುದು 2ನೇ ಬಾರಿ. ಹಿಂದಿನ ಬಿಜೆಪಿ 2013ರಲ್ಲಿ, ಈಗಿನ ಕಾಂಗ್ರೆಸ್ ಸರ್ಕಾರ 2017ರಲ್ಲಿ ತಾಲ್ಲೂಕು ಎಂದು ಘೋಷಿಸಿವೆ. ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನವಲಿ ಹೋಬಳಿಯನ್ನು ಹೋಬಳಿ ವಿಂಗಡಿಸಲಾಗದು ಎಂಬ ಕಾರಣದಿಂದ ಕಾರಟಗಿ ತಾಲ್ಲೂಕು ಕೇಂದ್ರದಿಂದ ಕೈಬಿಟ್ಟು ಅಧಿಸೂಚನೆ ಹೊರಡಿಸಲಾಗಿದೆ. ಪಕ್ಕದ ಜಿಲ್ಲೆಗಳಲ್ಲಿ ಹೋಬಳಿ ವಿಂಗಡಿಸಿರುವುದನ್ನು ಈ ಭಾಗದ ಜನಪ್ರತಿನಿಧಿಗಳು ಗಮನಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಅಧಿಸೂಚನೆ ಬಳಿಕ ಆಕ್ಷೇಪಣೆಗೆ ಜ. 11ರವರೆಗೆ ಕಾಲಾವಕಾಶವಿದೆ. ನವಲಿ ಭಾಗದವರು ಕಾನೂನಾತ್ಮಕ ಹೋರಾಟದಲ್ಲಿದ್ದಾರೆ.

ಕಾರಟಗಿ ತಾಲ್ಲೂಕಿಗೆ ಕಾರಟಗಿ ಹಾಗೂ ಸಿದ್ದಾಪುರ ಹೋಬಳಿಯನ್ನು ಇದೀಗ ಸೇರಿಸಲಾಗಿದೆ. ಈಗಿನ ಪ್ರಕಾರ ತಾಲ್ಲೂಕಿನ ಬೌಗೋಳಿಕ ವಿಸ್ತೀರ್ಣ 96,475.20 ಎಕರೆ, ಜನಸಂಖ್ಯೆ 1,26,397 ಇದೆ.

ತಾಲ್ಲೂಕು ಕೇಂದ್ರಕ್ಕಾಗಿ ಕಳೆದ ನಾಲ್ಕೂವರೆ ದಶಕಗಳಿಂದ ಕೂಗು, ಒತ್ತಾಯ ಇದೆ. ಮನವಿ ಸಲ್ಲಿಕೆ, ಬಂದ್, ಪ್ರತಿಭಟನಾ ಮೆರವಣಿಗೆ, ನಿರಂತರ ಧರಣಿ, ರಾಜಧಾನಿಗೆ ನಿಯೋಗ ಸೇರಿದಂತೆ ಅನೇಕ ಮಜಲುಗಳಲ್ಲಿ ನಿರಂತರವಾದ ಹೋರಾಟ ನಡೆದಿತ್ತು.

ಜನರ ಹೋರಾಟದ ಫಲ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಪರಿಣಾಮವಾಗಿ ಅಂತೂ ತಾಲ್ಲೂಕು ಘೋಷಣೆಯಾಗಿದೆ. ಆದರೆ ಹೋರಾಟ ದೊಂದಿಗೆ ಸಕ್ರಿಯರಾಗಿದ್ದ ನವಲಿ ಹೋಬಳಿಯನ್ನು ಕೈಬಿಟ್ಟಿದ್ದಕ್ಕೆ ಅಸಮಾಧಾನವೂ ಉಳಿದಿದೆ.

ಈಗ ಘೋಷಣೆಯಾಗಿರುವ ಕಾರಟಗಿ ತಾಲ್ಲೂಕು ಕೇಂದ್ರಕ್ಕೆ ಸರ್ಕಾರ ಅನುದಾನ ಮೀಸಲಿಡದೇ, ಹಂತ, ಹಂತವಾಗಿ ಆರ್ಥಿಕ ಇಲಾಖೆಯ ಸಹಮತದೊಂದಿಗೆ ಅನುದಾನ ಒದಗಿಸಿ ತಾಲ್ಲೂಕು ಕಚೇರಿ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಿದೆ (2017 ಸೆ. 6ರ ಆದೇಶ). ಶೀಘ್ರವೇ ಪೂರ್ಣ ಪ್ರಮಾಣದ ತಾಲ್ಲೂಕು ಮಾಡಲು ಸರ್ಕಾರ ಮುಂದಾಗಿ ಜನರ ಭಾವನೆಗೆ ಸ್ಪಂದಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಕೊಪ್ಪಳ ಜಿಲ್ಲೆಯ ಶ್ರೀಮಂತ ಪಟ್ಟಣ ಎಂಬ ಖ್ಯಾತಿ ಹೊತ್ತ ಭತ್ತದ ಕಣಜ ಕಾರಟಗಿಯಾಗಿದೆ. ಜನರ ಅಭಿಪ್ರಾಯ, ನಿರಂತರವಾದ ಹೋರಾಟ, ಸರ್ಕಾರದ ಬಳಿ ನಿಯೋಗ, ಸತತ ಮನವಿ ಸಲ್ಲಿಕೆ, ಸರ್ಕಾರವೇ ನೇಮಿಸಿದ್ದ ಸಮಿತಿಗಳ ಶಿಫಾರಸು, ಜನಪ್ರತಿನಿಧಿಗಳ ಯತ್ನದ ಫಲವೆನ್ನುವಂತೆ ಕೊನೆಗೂ ಕಾರಟಗಿ ’ತಾಲ್ಲೂಕು’ ಎಂಬ ಕಿರೀಟವನ್ನಿಟ್ಟುಕೊಳ್ಳುವಂತೆ ಆಗಿದೆ.

ಭತ್ತದ ಕಣಜವಾಗಿರುವ ಕಾರಟಗಿ ಭಾಗದ ಸೋನಾ ಮಸೂರಿ ಅಕ್ಕಿ ರಾಜ್ಯ, ಇತರ ರಾಜ್ಯವಲ್ಲದೇ ವಿದೇಶಗಳಿಗೂ ರವಾನೆಯಾಗಿ ಗಮನ ಸೆಳೆದಿದೆ. ಇಲ್ಲಿಯ ಎಪಿಎಂಸಿ ಉಪ ಮಾರುಕಟ್ಟೆ ರಾಜ್ಯದಲ್ಲೇ ಅಧಿಕ ಆದಾಯ ತರುವಲ್ಲಿ ಮೊದಲ ಸ್ಥಾನದಲ್ಲಿದೆ.

ಏಷ್ಯಾ ಖಂಡದಲ್ಲೇ ಮೊದಲನೆಯದಾದ ಮಹತ್ವಾ ಕಾಂಕ್ಷೆಯ ರೈಸ್ ಟೆಕ್ನಾಲಜಿ ಪಾರ್ಕ್‌ನಿಂದಾಗಿ ವಿಶೇಷ ಎಪಿಎಂಸಿಯಾಗಿ ಬಡ್ತಿ ಪಡೆದಿದೆ. ಗ್ರಾಮ ಪಂಚಾಯಿತಿ ಅಧಿಕ ಸದಸ್ಯ(62)ರನ್ನು ಹೊಂದಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದ್ದು, ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಸುತ್ತಮುತ್ತಲಿನ 50ಕ್ಕೂ ಅಧಿಕ ಹಳ್ಳಿಗಳ ವ್ಯಾಪಾರ, ವಹಿವಾಟಿಗೆ ಕೇಂದ್ರಸ್ಥಾನವಾಗಿದೆ. ರಾಷ್ಟ್ರೀಕೃತ, ಸಹಕಾರಿ, ಗ್ರಾಮೀಣ ಬ್ಯಾಂಕ್, ರೈತರ ಸೇವಾ ಸಹಕಾರಿ ಬ್ಯಾಂಕ್, 50ಕ್ಕೂ ಅಧಿಕ ಅಕ್ಕಿ ಗಿರಣಿಗಳು, ವಿದ್ಯುತ್ ಉತ್ಪಾದನಾ ಘಟಕ, ಶಾಲಾ, ಕಾಲೇಜ್‌ಗಳು, ಪಾಲಿಟೆಕ್ನಿಕ್ ಕಾಲೇಜ್, ಉಪ ನೋಂದಣಿ ಕಚೇರಿ, ಜೆಸ್ಕಾಂ ಉಪ ವಿಭಾಗ ಕಚೇರಿ ಹೀಗೆ ಜನಸಂಖ್ಯೆ, ರಾಜಸ್ವ ಸಂಗ್ರಹ ಮೊದಲಾದ ಅಂಶಗಳಲ್ಲಿ ತನ್ನದೇ ಛಾಪು ಹೊಂದಿದೆ.

ಜಾಗೃತ ಯುವಕ ಸಂಘದ ಕಳಕಳಿಯ ಯುವಕರು ಕಾರಟಗಿ ತಾಲ್ಲೂಕು ರಚನೆ ಹೋರಾಟ ಸಮಿತಿ ರಚಿಸಿ, ಮಾಜಿ ಸಚಿವ ನಾಗಪ್ಪ ಸಾಲೋಣಿಯವರನ್ನು ಗೌರವಾಧ್ಯಕ್ಷ ರನ್ನಾಗಿ, ಉದ್ಯಮಿ ಎಸ್‌.ಇ. ಪ್ರಹ್ಲಾದ ಶ್ರೇಷ್ಠಿ ಅಧ್ಯಕ್ಷತೆಯಲ್ಲಿ ರಚಿ ಸಿದ್ದ ಹೋರಾಟ ಸಮಿತಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿ, ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಗಮನಸೆಳೆಯಲು ಕಸರತ್ತು

ತಾಲ್ಲೂಕು ರಚನೆಗಾಗಿ ಸರ್ಕಾರವೇ ನೇಮಿಸಿದ್ದ ವಾಸುದೇವರಾವ್ ಸಮಿತಿ, ಟಿ.ಎಂ.ಹುಂಡೇಕಾರ್ ಹಾಗೂ ಪಿ.ಸಿ.ಗದ್ದಿಗೌಡರ್ ಸಮಿತಿಗಳು ಕಾರಟಗಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಶಿಫಾರಸು ಮಾಡಿದ್ದರೆ, ಎಂ.ಬಿ. ಪ್ರಕಾಶ ಸಮಿತಿ ಕಾರಟಗಿಯನ್ನು ಕೈಬಿಟ್ಟಿತ್ತು. ಪರಿಣಾಮವಾಗಿ ಸರ್ಕಾರವು ಜನರ ತೀವ್ರ ಆಕ್ರೋಶ ಎದುರಿಸಬೇಕಾಯಿತು. ಜನಪ್ರತಿನಿಧಿಗಳು ಮುಜುಗರಕ್ಕೊಳಗಾಗಿದ್ದರು. 2009ರ ಮೇ ತಿಂಗಳಲ್ಲಿ ಎಂ.ಬಿ. ಪ್ರಕಾಶ ವರದಿ ವಿರೋಧಿಸಿ 47 ದಿನಗಳ ನಿರಂತರವಾಗಿ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು.

ಹೋರಾಟದಲ್ಲಿ ಕಾರಟಗಿ ಜನರಲ್ಲದೇ ಸುತ್ತಲಿನ ಗ್ರಾಮದ ವಿವಿಧ ಸಂಘಟನೆಗಳು, ಜಾತಿ ಸಂಘಟನೆಗಳು ಸರದಿ ಪ್ರಕಾರ ಪಾಲ್ಗೊಂಡರು. ಕೊನೆಗೆ ಸರ್ಕಾರ ಕಾರಟಗಿಗೆ ವಿಶೇಷ ತಹಶೀಲ್ದಾರ್‌ ಕಚೇರಿ (2003ರ ಆಗಸ್ಟ್‌ 13ರಂದು) ಮಂಜೂರು ಮಾಡಿತ್ತು.

ಕಲ್ಯಾಣ ಕಾರಟಗಿ
ಕಾರಟಗಿಯ ಮೂರು ದಿಕ್ಕುಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿಸಿದ ಕೆರೆಗಳಿದ್ದವು (ಈಗ ಅಭಿವೃದ್ಧಿ ಹೆಸರಲ್ಲಿ ಮಾಯವಾಗಿವೆ) ’ಕೆರೆ’ ’ಇಟ್ಟಿಗೆ’ ಮುಂದೆ ’ಕಾರಟಗಿ’ ಆಗಿದೆ.
ಕಲ್ಯಾಣದ ಚಾಲುಕ್ಯರ (ಕ್ರಿ.ಶ.973) ಅಂದಿನ ಶಾಸನ, ಸ್ಮಾರಕಗಳು ಹಾಳಾಗಿವೆ. ಇವುಗಳ ಮೇಲೆ ಅಧ್ಯಯನ ನಡೆದರೆ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಬಹುದು.
ಪುರಾತನ ಶಿವ ದೇವಾಲಯವಾದ ಮಹದೇಶ್ವರ, ವೆಂಕಟೇಶ್ವರ ದೇವಾಲಯದ ಮಧ್ಯೆ ಕಣ್ಮನ ಸೆಳೆಯುವ ಪುಷ್ಕರಣಿ (ಸುಂಕ್ಲೀರಪ್ಪ ಬಾವಿ) ಇದೆ. ಶಿಲಾಕೃತಿಗಳು, ಮಂಟಪ ರಾಜರ ಆಸ್ಥಾನದ ಸ್ನಾನಗೃಹದಂತಿತ್ತು. ಒಳ ದಾರಿಯೂ ಇದೆ ಎಂಬ ಮಾತಿದೆ.

ಆದರೀಗ ಇದು ತ್ಯಾಜ್ಯ ಹಾಕಲಾಗಿದೆ. ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಅಂತರ್ಜಲ ಹೆಚ್ಚಳಕ್ಕೆ ತುಂಬಾ ಸಹಕಾರಿಯಾಗಿರುವ ಬಗ್ಗೆ ’ಪ್ರಜಾವಾಣಿ’ ಗಮನ ಸೆಳೆದರೂ ಜನಪ್ರತಿನಿಧಿಗಳು ಕ್ರಿಯಾಶೀಲರಾಗದೇ ನಿರ್ಲಿಪ್ತತೆ ಮುಂದುವರೆಸಿದ್ದಾರೆ.

ಪುಷ್ಕರಣಿಯಲ್ಲಿ ಸ್ನಾನ ಮಾಡಿ ಹೊರಬಂದರೆ, ಉತ್ತರಕ್ಕೆ ಶಿವ ದೇವಾಲಯ, ದಕ್ಷಿಣಕ್ಕೆ ವೆಂಕಟೇಶ್ವರ, ಪೂರ್ವಕ್ಕೆ ವಿನಾಯಕ, ವೀರಭದ್ರೇಶ್ವರ, ಪಶ್ಚಿಮಕ್ಕೆ ಗ್ರಾಮ ದೇವತೆ, ಆಂಜನೇಯಗೆ ನಮಸ್ಕರಿಸುವ ವ್ಯವಸ್ಥೆ ಇತ್ತು. ಜನ, ಜಾನುವಾರುಗಳಿಗೆ ನೀರು ಬಳಕೆಯಾಗುತ್ತಿತ್ತು. ಆದರೀಗ ಇತಿಹಾಸದ ಬುಡಕ್ಕೆ ಸರಿದಿದೆ.

ಗಂಗಾವತಿ ತಾಲ್ಲೂಕಿನ ಆರಾಧ್ಯ ದೈವ ಚನ್ನಬಸವ ತಾತ ಕೆಲ ದಿನ ಇಲ್ಲಿ ವಾಸಿಸಿದ್ದರು. ತೆರಳುವಾಗ ‘ಕಾರಟಗಿ ಕಲ್ಯಾಣ ಆಗುತ್ತೆ, ಗಂಗಾವತಿ ಛೋಟಾ ಬಾಂಬೆ‘ ಆಗುತ್ತೆ ಎಂದಿದ್ದರು. ಅವರ ವಾಣಿಯಂತೆ ಇಲ್ಲಿ ಧಾರ್ಮಿಕ, ಸಾಮಾಜಿಕ, ಸೇವಾ ಕಾರ್ಯಗಳು ಜಾತಿ, ಮತದ ಬೇಧವಿಲ್ಲದೇ, ಭಾವೈಕ್ಯತೆಯ ಉತ್ಸವಗಳಾಗಿ ಆಚರಿಸಲ್ಪಡುತ್ತಿವೆ. ವ್ಯಾಪಾರ, ಉದ್ದಿಮೆಯಲ್ಲಿ ರಾಜ್ಯವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ.

ತಾಲ್ಲೂಕು ವ್ಯಾಪ್ತಿಯ ಗ್ರಾಮಗಳು
ಕಾರಟಗಿ, ಜೂರಟಗಿ, ಮರ್ಲಾನಹಳ್ಳಿ, ಬೂದಗುಂಪಾ, ಚಳ್ಳೂರ, ಹುಳ್ಕಿಹಾಳ, ಮೈಲಾಪುರ, ಹಗೇದಾಳ, ತಿಮ್ಮಾಪುರ, ಹಾಲಸಮುದ್ರ, ತೊಂಡಿಹಾಳ, ಸೋಮನಾಳ, ಗುಡೂರ, ಬೇವಿನಾಳ, ಯರಡೋಣ, ಪನ್ನಾಪುರ, ಸಿದ್ದಾಪುರ, ಕೃಷ್ಣಾಪುರ, ಗುಂಡೂರ, ಬರಗೂರ, ಕುಂಟೋಜಿ, ಈಳಿಗನೂರ, ಮುಷ್ಟೂರ, ಸಿಂಗನಾಳ, ನಂದಿಹಳ್ಳಿ, ಕಕ್ಕರಗೋಳ, ಶಾಲಿಗನೂರ, ಬೆನ್ನೂರ, ಉಳೇನೂರ, ಕೊಟ್ನೇಕಲ್, ಜಮಾಪುರ.

* * 

ತಾತ್ಕಾಲಿಕವಾಗಿ ಇರುವ ಕಟ್ಟಡಗಳನ್ನು ಬಳಸಿಕೊಂಡು ಜನವರಿ ಕೊನೆಯ ವಾರದಲ್ಲಿ ಪೂರ್ಣ ಪ್ರಮಾಣದ ತಾಲ್ಲೂಕು ಆಗಿ ಕಾರ್ಯನಿರ್ವಹಿಸಲಿದೆ.
ಶಿವರಾಜ್ ತಂಗಡಗಿ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT