ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಹಾದಿಯಲ್ಲಿ ಜಿಎಸ್‌ಟಿ

Last Updated 16 ಜನವರಿ 2018, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಜಿಎಸ್‌ಟಿ ಕಾಯ್ದೆ ಜಾರಿಯಾಗಿ ಆರು ತಿಂಗಳು ಕಳೆದಿವೆ. ವರ್ತಕರು ನಿಧಾನವಾಗಿ ಹೊಸ ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ. ವ್ಯಾಪಾರ-ವಹಿವಾಟಿನಲ್ಲಿ ಒಂದು ಹಂತದ ಸ್ಥಿರತೆ ಕಂಡುಬರುತ್ತಿದೆ. ಈ ನಡುವೆ ಜಿಎಸಟಿ ಮಂಡಳಿಯು ಹತ್ತಾರು ಬಾರಿ ಸಭೆ ಸೇರಿ ಅನೇಕ ನಿರ್ಣಯಗಳನ್ನು ತೆಗೆದುಕೊಂಡಿದೆ. ಜಿಎಸ್‌ಟಿ ವ್ಯವಸ್ಥೆಯನ್ನು ಪರಿಣಾಮಕಾರಿ, ಸರಳ ಮತ್ತು ವರ್ತಕ ಸ್ನೇಹಿ ಮಾಡುವ ದಿಸೆಯಲ್ಲಿ ಹಲವಾರು ಬದಲಾವಣೆ ಮಾಡಲಾಗಿದೆ. ಹಾಗೆ ಮಾಡಲಾದ ಇತ್ತೀಚಿನ ಕೆಲವು ಮುಖ್ಯ ಬದಲಾವಣೆಗಳ ಕುರಿತ ಮಾಹಿತಿ ಇಲ್ಲಿದೆ.

ರಾಜಿ ತೆರಿಗೆಯಲ್ಲಿ ಬದಲಾವಣೆ
ವಹಿವಾಟು ಕಡಿಮೆ ಇರುವ ಸಣ್ಣ ವರ್ತಕರನ್ನು ಗಮನದಲ್ಲಿ ಇರಿಸಿಕೊಂಡು ರೂಪಿಸಲಾಗಿದ್ದ ರಾಜಿ ತೆರಿಗೆ (composition scheme) ಯೋಜನೆಯಲ್ಲಿ ಮುಖ್ಯವಾಗಿ ಮೂರು ಬದಲಾವಣೆಗಳಾಗಿವೆ.

ಈ ಮುನ್ನ, ಹಿಂದಿನ ಆರ್ಥಿಕ ವರ್ಷದಲ್ಲಿ ₹ 75 ಲಕ್ಷಕ್ಕಿಂತ ಕಡಿಮೆ ವಹಿವಾಟಿರುವ ವರ್ತಕರಿಗೆ ರಾಜಿ ತೆರಿಗೆ ಯೋಜನೆ ಆಯ್ದುಕೊಳ್ಳುವ ಸೌಲಭ್ಯ ಕಲ್ಪಿಸಲಾಗಿತ್ತು. ವಹಿವಾಟಿನ ಮಿತಿಯನ್ನು ಈಗ ₹ 1.50 ಕೋಟಿಗೆ ಹೆಚ್ಚಿಸಲಾಗಿದೆ. 2016-17 ನೇ ಸಾಲಿನಲ್ಲಿ ಈ ಮೊತ್ತದ ವಹಿವಾಟು ನಡೆಸಿದ ವರ್ತಕರೂ ಈಗ ರಾಜಿ ತೆರಿಗೆ ಯೋಜನೆಯನ್ನು ಆಯ್ದುಕೊಳ್ಳಬಹುದು.

ರಾಜಿ ತೆರಿಗೆ ಯೋಜನೆಯಡಿ ಉತ್ಪಾದಕರು ಶೇ 2 ರಷ್ಟು ತೆರಿಗೆ ಪಾವತಿಸಬೇಕಿತ್ತು. ಅದನ್ನು ಈಗ 2017ರ ನವೆಂಬರ್‌ 15 ರಿಂದ ಜಾರಿಗೆ ಬರುವಂತೆ ಶೇ 1 ಕ್ಕೆ ಇಳಿಸಲಾಗಿದೆ.

ರಾಜಿ ತೆರಿಗೆ ವರ್ತಕರು ಈ ಮೊದಲು ತೆರಿಗೆ ವಿನಾಯ್ತಿ ವಹಿವಾಟು ಒಳಗೊಂಡು ಒಟ್ಟು ವಹಿವಾಟಿನ ಮೇಲೆ ಶೇ 1 ರಷ್ಟು ತೆರಿಗೆ ಪಾವತಿಸಬೇಕಿತ್ತು. ಈ ಯೋಜನೆಯನ್ನು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಈಗ ಮಾಡಿದ ಬದಲಾವಣೆ ಮಾಡಲಾಗಿದೆ. ತೆರಿಗೆಗೆ ಒಳಪಡುವ ವಹಿವಾಟಿನ ಮೇಲೆ ಮಾತ್ರ ಈಗ ಶೇ 1 ರಷ್ಟು ತೆರಿಗೆ ಪಾವತಿಸಿದರೆ ಸಾಕು.

ತೆರಿಗೆ ವಿನಾಯ್ತಿ ವಹಿವಾಟನ್ನು ತೆರಿಗೆಯಿಂದ ವಿನಾಯ್ತಿಗೊಳಿಸಲಾಗಿದೆ. ರಾಜಿ ತೆರಿಗೆ ವರ್ತಕರು ಈಗ ಉಪ್ಪು,ಜೋಳ, ಗೋಧಿಯಂತಹ ತೆರಿಗೆ ವಿನಾಯ್ತಿ ಸರಕುಗಳ ವಹಿವಾಟಿನ ಮೇಲೆ ಈಗ ತೆರಿಗೆ ಪಾವತಿಸುವ ಅವಶ್ಯಕತೆ ಇಲ್ಲ.

ನಮೂನೆ-3ಬಿ ರಿಟರ್ನ್‌ ಸಲ್ಲಿಕೆ 
ಜಿಎಸ್‌ಟಿ ಕಾಯ್ದೆಯಲ್ಲಿದ್ದ ನಮೂನೆ-ಜಿಎಸ್‌ಟಿಆರ್ಜಿ ಎಸ್‌ಟಿಆರ್-2, ಜಿಎಸ್‌ಟಿಆರ್-3 ರಿಟರ್ನ್‌ಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುವಲ್ಲಿ ಎದುರಾದ ವಿಘ್ನಗಳನ್ನು ನಿವಾರಿಸುವ ದಿಸೆಯಲ್ಲಿ ನಮೂನೆ-3ಬಿಯನ್ನು ಪರಿಚಯಿಸಲಾಗಿದೆ.

ಜುಲೈ-17 ನೇ ತಿಂಗಳಿಂದಲೇ ಪ್ರತಿ ತಿಂಗಳು 20 ನೇ ದಿನಾಂದದ ಒಳಗೆ ಇದನ್ನು ಸಲ್ಲಿಸಬೇಕು. ಈಗ -‌‌‌2018 ರ ಮಾರ್ಚ್‌ವರೆಗೆ 3ಬಿ ರಿಟರ್ನ ಸಲ್ಲಿಕೆಯನ್ನು ಮುಂದುವರೆಸಲಾಗಿದೆ. ಜಿಎಸ್‌ಟಿಆರ್-2 ಮತ್ತು ಜಿಎಸ್‌ಟಿಆರ್-3 ರಿಟರ್ನ್‌ ಸಲ್ಲಿಸುವಿಕೆಯ ಕೊನೆಯ ದಿನಾಂಕವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ.

ನಮೂನೆ ಜಿಎಸ್‌ಟಿಆರ್-1 ಸಲ್ಲಿಕೆ 3ಬಿ ರಿಟರ್ನ್‌ ಸಲ್ಲಿಸುವ ವರ್ತಕರೆಲ್ಲರೂ ಜಿಎಸ್‌ಟಿಆರ್-1 ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ವಾರ್ಷಿಕ ವಹಿವಾಟು ₹ 1.5 ಕೋಟಿಗಿಂತ ಕಡಿಮೆ ಇರುವ ವರ್ತಕರು 3 ತಿಂಗಳಿಗೊಮ್ಮೆ ತ್ರೈಮಾಸಿಕ ಕ್ರಮದಲ್ಲಿ ಇದನ್ನು ಸಲ್ಲಿಸಬಹುದು. ₹ 1.5 ಕೋಟಿಗಿಂತ ಹೆಚ್ಚಿನ ವಹಿವಾಟಿನ ವರ್ತಕರು ಮಾಸಿಕ ಕ್ರಮದಲ್ಲಿ ಸಲ್ಲಿಸಬೇಕಾಗಿದೆ. ಜುಲೈ-17 ರಿಂದ ನವೆಂಬರ್‌-17 ರವರೆಗಿನ ಆರ್-1 ಸಲ್ಲಿಸುವ ನಿಗದಿತ ಗಡುವು 2018ರ ಜನವರ 10ಕ್ಕೆ ಕೊನೆಗೊಂಡಿದೆ. ಡಿಸೆಂಬರ್‌-17 ರ
ಆರ್-1 ಸಲ್ಲಿಸಲು ಫೆ. 10,2018 ಕೊನೆಯ ದಿನ. 2017ರ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದ ಆರ್-1 ಸಲ್ಲಿಕೆಯ ಕೊನೆಯ ದಿನ 2018ರ ಫೆ. 15.

ನಮೂನೆ-3ಬಿ ತಿದ್ದುಪಡಿಗೆ ಅವಕಾಶ

ಆರಂಭದಲ್ಲಿ ದೋಷಪೂರ್ಣ 3ಬಿ ರಿಟರ್ನ್‌ಗಳ ತಿದ್ದುಪಡಿಗೆ ಅನುವು ಮಾಡಿಕೊಟ್ಟಿರಲಿಲ್ಲ. ಇದರಿಂದ ಹಲವಾರು ವರ್ತಕರು ಸುಸ್ತಿದಾರರಾಗಿದ್ದರು. ಇದನ್ನು ಮನಗಂಡು ಈಗ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ತಿಂಗಳ 3ಬಿ ದೋಷಗಳನ್ನು ಈ ತಿಂಗಳು ಸಲ್ಲಿಸುವ 3ಬಿಯಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ.

ವಿಳಂಬ ಶುಲ್ಕದಲ್ಲಿ ಇಳಿಕೆ

ಜಿಎಸ್‌ಟಿ ಕಾಯ್ದೆಯಡಿಯಲ್ಲಿ ರಿಟರ್ನ್‌ ಸಲ್ಲಿಕೆ ವಿಳಂಬಕ್ಕೆ ಕಲಂ 47 ರ ಪ್ರಕಾರ ಗರಿಷ್ಠ ಮಿತಿ 10 ಸಾವಿರಕ್ಕೊಳಪಟ್ಟು ಪ್ರತಿದಿನ 200 ರೂಪಾಯಿ ದಂಡ ಪಾವತಿಸಬೇಕಾಗುತ್ತಿತ್ತು. ಇದಕ್ಕೆ ವರ್ತಕ ಸಂಘಗಳಿಂದ ವಿರೋಧ ವ್ಯಕ್ತವಾದ ನಂತರ ಈಚೆಗೆ ಇದನ್ನು ಕಡಿಮೆ ಮಾಡಲಾಗಿದೆ.

ವಹಿವಾಟಿನ 3ಬಿ ರಿಟರ್ನ್‌ದ ಪ್ರತಿದಿನ ವಿಳಂಬಕ್ಕೆ ₹ 50 ಹಾಗೂ ಶೂನ್ಯ ವಹಿವಾಟಿನ 3ಬಿ ರಿಟರ್ನ್‌ದ ಪ್ರತಿದಿನ ವಿಳಂಬಕ್ಕೆ ₹ 20 ದಂಡವನ್ನು ಅಕ್ಟೋಬರ್‌ ತಿಂಗಳಿನಿಂದಲೇ ವಿಧಿಸಲಾಗುತ್ತಿದೆ.ಸಪ್ಟೆಂಬರ್‌ ಮತ್ತು ಹಿಂದಿನ ತಿಂಗಳ 3ಬಿ ವಿಳಂಬ ಸಲ್ಲಿಕೆಯ ದಂಡವನ್ನು ಮನ್ನಾ ಮಾಡಲಾಗಿದೆ. ಈಗಾಗಲೇ ಪಾವತಿಸಿದವರ ದಂಡದ ಮೊತ್ತವನ್ನು ಮರಳಿ ವರ್ತಕರ ನಗದು ಖಾತೆಗೆ (ಕ್ಯಾಷ್‌ ಲೆಡ್ಜರ್‌) ಜಮಾ ಮಾಡಲಾಗುತ್ತದೆ. ಇದನ್ನು ವರ್ತಕರು ತೆರಿಗೆ ಪಾವತಿಸಲು ಬಳಸಬಹುದು.

ನೋಂದಣಿ ತಿದ್ದುಪಡಿ

ಮೊಬೈಲ್ ಸಂಖ್ಯೆ, ಇ–ಮೇಲ್‌, ವ್ಯವಹಾರದ ಹೆಸರು, ವಿಳಾಸ ಇತ್ಯಾದಿಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಈಗ ಅವಕಾಶ ಕಲ್ಪಿಸಲಾಗಿದೆ. ಮೊಬೈಲ್‌ ಸಂಖ್ಯೆ, ಇ–ಮೇಲ್‌ಗಳನ್ನು ಕೋರ್‌ ಅಮೆಂಡಮೆಂಟ್‌ ಮೂಲಕ ವರ್ತಕರೆ ಮಾಡಿಕೊಳ್ಳಬಹುದು. ವಿಳಾಸ ತಿದ್ದುಪಡಿ ಇತ್ಯಾದಿ ನಾನ್‌ಕೋರ್‌ ಅಮೆಂಡಮೆಂಟ್ಸಗಳನ್ನು ಜಿಎಸ್‌ಟಿ ಕಚೇರಿಗಳ ಅಧಿಕಾರಿಗೆ ವಿದ್ಯುನ್ಮಾನದಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು.

ನೋಂದಣಿ ರದ್ದತಿ

ಜಿಎಸ್‌ಟಿ ಕಾಯ್ದೆಯ ಕಲಂ 25 ಉಪಕಲಂ 3 ರ ಪ್ರಕಾರ ಸ್ವ-ಇಚ್ಛೆಯಿಂದ ನೋಂದಣಿ ಪಡೆಯುವ ವರ್ತಕರಿಗೆ ನೋಂದಣಿ ರದ್ದತಿಗಾಗಿ ಅರ್ಜಿ ಸಲ್ಲಿಸುವ ಕುರಿತು ಸ್ಪಷ್ಟತೆ ಇರಲಿಲ್ಲ. ಈಗ 1 ಜುಲೈ,2017 ರಿಂದೀಚೆಗೆ ನೋಂದಣಿ ಮಾಡಿಕೊಂಡಿರುವ ಎಲ್ಲ ವರ್ತಕರು ನೋಂದಣಿ ರದ್ದತಿ ಮಾಡಿಕೊಳ್ಳಬಹುದು.

ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್)

ಕಲಂ 51 ರ ಪ್ರಕಾರ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ, ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡು ಪ್ರತಿಯೊಂದು ಮೂಲದಲ್ಲಿ ತೆರಿಗೆ ಕಡಿತ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಂಡು ಗುತ್ತಿಗೆ ಕಾಮಗಾರಿ ಬಿಲ್‌ನಲ್ಲಿ ಜಿಎಸಟಿ ತೆರಿಗೆ ಕಡಿತ ಮಾಡಬೇಕಿತ್ತು. ಆದರೆ, ಇದನ್ನು ಜಿಎಸ್‌ಟಿ ಮಂಡಳಿಯ ಶಿಫಾರಸ್ಸಿನಂತೆ 2018 ರ ಏಪ್ರಿಲ್‌ವರೆಗೆ
ಮುಂದೂಡಲಾಗಿದೆ. ಅಷ್ಟರ ಒಳಗೆ ಈ ಎಲ್ಲ ಪ್ರಾಧಿಕಾರಗಳು ನೋಂದಣಿ ಪಡೆದುಕೊಂಡು ಸಿದ್ಧವಾಗಿರಬೇಕು. ಈ ಕಾರಣಕ್ಕೆ ಈಗ ಟಿಡಿಎಸ್ ಪ್ರಾಧಿಕಾರಗಳ ನೋಂದಣಿ ಕಾರ್ಯ ಪ್ರಾರಂಭವಾಗಿದೆ.

(ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT